ಮೋದಿ ಹಾರಿಸಿದ್ರಾ? ವಿಜ್ಞಾನಿಗಳ ಕೆಲಸವನ್ನು ತಮ್ಮ ಸಾಧನೆ ಅಂತ ಬಿಂಬಿಸುತ್ತಿದ್ದಾರೆ: ಸಿಎಂ ಕುಮಾರಸ್ವಾಮಿ

ದೇಶದ ವಿಜ್ಞಾನಿಗಳು ಮಾಡಿರುವ ಕೆಲಸವನ್ನು ತಮ್ಮ ಸರ್ಕಾರ ಮಾಡಿರುವ ಸಾಧನೆ ಎಂದು ಬಿಂಬಿಸಿ ...
ಸಿಎಂ ಕುಮಾರಸ್ವಾಮಿ
ಸಿಎಂ ಕುಮಾರಸ್ವಾಮಿ
ಬೆಂಗಳೂರು: ದೇಶದ ವಿಜ್ಞಾನಿಗಳು ಮಾಡಿರುವ ಕೆಲಸವನ್ನು ತಮ್ಮ ಸರ್ಕಾರ ಮಾಡಿರುವ ಸಾಧನೆ ಎಂದು ಬಿಂಬಿಸಿ ಮತಪಡೆಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸದನ್ನು ಪ್ರಯೋಗ ಮಾಡಿ ಕಾರ್ಯರೂಪಕ್ಕೆ ತರಲು ಅದರದ್ದೇ ಆದ ಇಲಾಖೆಗಳಿವೆ. ವಿಜ್ಞಾನಿಗಳ ಪಡೆಯಿರುತ್ತದೆ. ಅವರು ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರ ರೂಟಿನ್ ಕೆಲಸಗಳ ಭಾಗವಾಗಿರುತ್ತದೆ. ಹಲವಾರು ಇಲಾಖೆಗಳಲ್ಲಿ ಸಮರ್ಥ ಅಧಿಕಾರಿಗಳು ಯಾವುದೇ ಸರ್ಕಾರ ಇದ್ದರೂ ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅದನ್ನು ಬಹುದೊಡ್ಡ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಿಂಬಿಸುವುದರಲ್ಲೇನಿದೆ? ಮೋದಿಯವರು ಹೇಳುತ್ತಿರುವುದು 50 ವರ್ಷಗಳಿಂದ ಆರಂಭವಾಗಿರುವ ಕೆಲಸಗಳು. ಆದರೆ ಇದೆಲ್ಲಾ ತಾವು ಪ್ರಧಾನಿಯಾದ ನಂತರ ಆದ ಕೆಲಸಗಳು ಎಂದು ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರೆ, ಈ ಮೂಲಕ ಮತ ಸೆಳೆಯಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿಯವರು ಏನೋ ಮಾತನಾಡುತ್ತಾರಂತೆ,ಏನೋ ಘೋಷಿಸುತ್ತಾರಂತೆ ಎಂದು ಅರ್ಧ ಗಂಟೆಯಿಂದ ಜನ ಅಲ್ಲಲ್ಲಿ ಕಾಯ್ತಾ ಇದ್ದಾರಂತೆ. ವಿರೋಧ ಪಕ್ಷದ ರಾಜಕೀಯ ನಾಯಕರು ಟೆನ್ಷನ್ ನಲ್ಲಿದ್ದಾರೆ ಅಂತೆಲ್ಲ ಸುದ್ದಿಯಾಯಿತು, ಕೊನೆಗೆ ನೋಡಿದರೆ ಅಂತದ್ದೇನು ಇಲ್ಲ, ಸಾಮಾನ್ಯ ವಿಷಯವನ್ನು ಮೋದಿಯವರೇ ದೊಡ್ಡದು ಮಾಡಲು ಹೊರಡುತ್ತಾರೆ ಎಂದರು.
ನಾಲ್ಕು ಜನ ಬಿರುದು ಕೊಟ್ಟರಾಯಿತೇ?: ತಮಗೆ ಡಿ ಬಾಸ್, ಛಾಲೆಂಜಿಂಗ್ ಸ್ಟಾರ್ ಎಂದು ಜನರು ಕೊಟ್ಟ ಬಿರುದು, ಭಿಕ್ಷೆ, ಅದು ಸಿಎಂ ಕುಮಾರಸ್ವಾಮಿ ಕೊಟ್ಟದ್ದಲ್ಲ ಎಂದು ನಟ ದರ್ಶನ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ದೇಶದ ಆರೂವರೆ ಕೋಟಿ ಜನ ಡಿ ಬಾಸ್ ಎಂದು ಬಿರುದು ಕೊಟ್ಟಿದ್ದಾರೆಯೇ? ಯಾರೋ ನಾಲ್ಕು ಜನ ಅಭಿಮಾನಿಗಳು ಕೊಡುತ್ತಾರೆ. ಹಾಗಂತ ಈ ನಾಡಿನ ಜನತೆಗೆ ಬಾಸ್ ಆಗಲು ಸಾಧ್ಯವೇ, ನನ್ನ ಮಗನನ್ನು ಯಾರೋ ನಾಲ್ಕು ಜನ ಯುವರಾಜ ಎಂದು ಕರೆದ ತಕ್ಷಣ ಆತ ಯುವರಾಜನಾಗುತ್ತಾನೆಯೇ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com