ಕೆಸಿಆರ್ ಚಿತ್ತ ಕಾಂಗ್ರೆಸ್ ನತ್ತ; ಸಂಧಾನಕ್ಕೆ ಜೆಡಿಎಸ್?

ಲೋಕಸಭೆ ಚುನಾವಣೆ ಪ್ರಕ್ರಿಯೆಯ ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದ್ದು ಫಲಿತಾಂಶ ...
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ , ಸಿಎಂ ಹೆಚ್ ಡಿ ಕುಮಾರಸ್ವಾಮಿ
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ , ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಲೋಕಸಭೆ ಚುನಾವಣೆ ಪ್ರಕ್ರಿಯೆಯ ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದ್ದು ಫಲಿತಾಂಶ ಘೋಷಣೆಗೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇದೆ.
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಸ್ಥಳೀಯ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಎಲ್ಲಾ ಸ್ಥಳೀಯ ಪಕ್ಷಗಳ ನಾಯಕರನ್ನು ಒಗ್ಗೂಡಿಸಿ ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಸರ್ಕಾರ ರಚನೆಯಲ್ಲಿ ಮುನ್ನಲೆಗೆ ಬರುವುದು ಅವರ ಉದ್ದೇಶವಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರನ್ನು ಕೂಡ ಭೇಟಿ ಮಾಡಲು ಹೋಗಿದ್ದರು. ಆದರೆ ಅವರೊಂದಿಗೆ ಮಾತುಕತೆ ಯಶಸ್ವಿಯಾಗಲಿಲ್ಲ ಎನ್ನಲಾಗುತ್ತಿದೆ. ಇನ್ನೂ ಹೆಚ್ಚು ಆಸಕ್ತಿಕರ ವಿಷಯವೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷ ಜೆಡಿಎಸ್ ನ್ನು ಚಂದ್ರಶೇಖರ್ ರಾವ್ ಸಂಧಾನಕಾರನಾಗಿ ಮಾಡಿಕೊಳ್ಳಲು ನೋಡುತ್ತಿದ್ದಾರೆ.
ತೆಲಂಗಾಣದ ಕೆಲ ಜಿಲ್ಲೆಗಳಿಗೆ ರಾಜ್ಯದ ಆಲಮಟ್ಟಿ ಜಲಾಶಯದಿಂದ ನೀರು ಹರಿಸುವ ವಿಚಾರದಲ್ಲಿ ಕಳೆದ ಭಾನುವಾರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಜೊತೆ ಮಾತುಕತೆಯಾಗಿತ್ತು. ಅದಾದ ಬಳಿಕ ಮರುದಿನ ಸೋಮವಾರ ಕೂಡ ಇಬ್ಬರೂ ನಾಯಕರು ದೂರವಾಣಿ ಮಾತುಕತೆ ನಡೆಸಿದ್ದರು, ಅದು ಮೇ 23ರ ಫಲಿತಾಂಶದ ನಂತರದ ರಾಜಕೀಯ ಸ್ಥಿತಿಗತಿ ಬಗ್ಗೆಯಾಗಿತ್ತು. ಚಂದ್ರಶೇಖರ್ ರಾವ್ ಕಾಂಗ್ರೆಸ್ ಜೊತೆ ಸಖ್ಯ ಬೆಳೆಸಲು ಯತ್ನಿಸುತ್ತಿದ್ದು ಅದಕ್ಕಾಗಿ ಜೆಡಿಎಸ್ ನ ಸಹಾಯವನ್ನು ಕೋರುತ್ತಿದ್ದಾರೆ ಎನ್ನಲಾಗುತ್ತಿದೆ.
ಚಂದ್ರಶೇಖರ್ ರಾವ್ ಅವರಿಗೆ ಕಾಂಗ್ರೆಸ್ ನ್ನು ನೇರವಾಗಿ ಹೋಗಿ ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ. ತೆಲಂಗಾಣದಲ್ಲಿ ಅವರಿಗೆ ಕಾಂಗ್ರೆಸ್ ವಿರೋಧಿ ಎಂಬ ಇಮೇಜ್ ಬೇರೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿಯಿಂದಾಗಿ ಜೆಡಿಎಸ್ ನ್ನು ಸಂಧಾನಕಾರನಾಗಿ ಮಾಡಿಕೊಳ್ಳಬಹುದು ಎಂಬ ಯೋಚನೆ ಕೆಸಿಆರ್ ರದ್ದು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲು ಮುಂದಾಗಿರುವ ಕೆಸಿಆರ್ ಇದೇ ವಿಷಯವನ್ನು ದೂರವಾಣಿ ಸಂಭಾಷಣೆ ವೇಳೆ ಕುಮಾರಸ್ವಾಮಿ ಜೊತೆ ಚರ್ಚಿಸಿದ್ದಾರೆ ಎಂದು ಜೆಡಿಎಸ್ ನ ಉನ್ನತ ಮೂಲಗಳು ಹೇಳುತ್ತಿವೆ. ಇತ್ತ ಕರ್ನಾಟಕದಲ್ಲಿ ಕೂಡ ಮೈತ್ರಿ ಸರ್ಕಾರಕ್ಕೆ ಅಸ್ಥಿರತೆ ಉಂಟಾಗಿದ್ದು ಕೆಸಿಆರ್ ಪ್ರಸ್ತಾವನೆಯನ್ನು ಸಿಎಂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com