ಪ್ರಧಾನಿ ಹೇಳಿಕೆಯನ್ನು ವಿರೋಧಿಸುತ್ತೇನೆ: ಬಿಜೆಪಿ ನಾಯಕ ವಿ.ಶ್ರೀನಿವಾಸ್ ಪ್ರಸಾದ್!
ಕರ್ನಾಟಕ
ಪ್ರಧಾನಿ ಹೇಳಿಕೆಯನ್ನು ವಿರೋಧಿಸುತ್ತೇನೆ: ಬಿಜೆಪಿ ನಾಯಕ ವಿ.ಶ್ರೀನಿವಾಸ್ ಪ್ರಸಾದ್!
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟಾಚಾರಿಯಲ್ಲ, ಅವರು ಮಿಸ್ಟರ್ ಕ್ಲೀನ್ ಎಂತಲೇ ಹೆಸರು ಪಡೆದಿದ್ದರು. ಮೋದಿ ಭ್ರಷ್ಟಾಚಾರಿ ಎಂದು ಆರೋಪಿಸಿರುವುದನ್ನು ವಿರೋಧಿಸುವುದಾಗಿ ಬಿಜೆಪಿ ಹಿರಿಯ ನಾಯಕ
ಮೈಸೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟಾಚಾರಿಯಲ್ಲ, ಅವರು ಮಿಸ್ಟರ್ ಕ್ಲೀನ್ ಎಂತಲೇ ಹೆಸರು ಪಡೆದಿದ್ದರು. ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಿ ಎಂದು ಆರೋಪಿಸಿರುವುದನ್ನು ವಿರೋಧಿಸುವುದಾಗಿ ಮಾಜಿ ಕೇಂದ್ರ ಸಚಿವ , ಬಿಜೆಪಿ ಹಿರಿಯ ನಾಯಕ ವಿ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮೈಸೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ ಮೀಸ್ಟರ್ ಕ್ಲೀನ್ ಎಂಬ ಹೆಸರು ಪಡೆದಿದ್ದವರು. ಅವರನ್ನ ನಾನು ತುಂಬಾ ಹತ್ತಿರದಿಂದ ಬಲ್ಲೆ. ಅವರ ರಾಜಕೀಯ ಜೀವನ ಇತರರಿಗೆ ಒಂದು ಉದಾಹರಣೆ.
ಅಂಥವರ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಾಗ ರಾಜಕೀಯ ಬಿಟ್ಟು ಎಲ್ಲಾದರೂ ಹೋಗುತ್ತೇನೆ ಎಂದಿದ್ದರು. ದೆಹಲಿ ಹೈಕೋರ್ಟ್ ಅವರನ್ನು ಆರೋಪ ಮುಕ್ತ ಮಾಡಿದೆ. ಅಂತವರ ಬಗ್ಗೆ ಮೋದಿ ಲಕ್ನೊದಲ್ಲಿ ಮಾತನಾಡಿರೋದು ಸರಿಯಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ಅವರ ಬಾಯಿಂದ ಅಂತಹ ಮಾತುಗಳು ಬರಬಾರದಿತ್ತು. ರಾಜೀವ್ ಗಾಂಧಿ ರಾಜಕೀಯಕ್ಕೆ ಬಂದಾಗಿಂದಲೇ ಶುದ್ಧ ಹಸ್ತರು ಎಂಬುದನ್ನು ಸಾಬೀತು ಮಾಡಿದ್ದಾರೆ. ಹಣ , ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ ಎಂದು ಹೇಳುತ್ತಿದ್ದರು. ಗಾಂಧಿ ಕುಟುಂಬದ ಬಗ್ಗೆ ದೇಶದ ಜನರು ಇಟ್ಟ ಗೌರವಕ್ಕೆ ಧಕ್ಕೆ ಬಾರದಂತೆ ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ರಾಜೀವ್ ಸ್ಪಷ್ಟವಾಗಿ ಹೇಳಿದ್ದರು.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ರಾಜೀವ್ ಗಾಂಧಿ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದ್ದರು. ಆದರೆ ನರೇಂದ್ರ ಮೋದಿ ಅವರ ಮಾತು ಕೇಳಿ ತಮಗೆ ಬೇಸರವಾಗಿದೆ. ರಾಜೀವ್ ಗಾಂಧಿ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ್ದರು. ಅಂತವರ ತ್ಯಾಗದ ಬಗ್ಗೆ ಭ್ರಷ್ಟಾಚಾರದ ಸಂಬಂಧವನ್ನು ಕಲ್ಪಿಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಮತಗಳು ಬಿಜೆಪಿ ಅಭ್ಯರ್ಥಿಗೆ ಹಾಕಿದ್ದಾರೆಂಬ ಜೆಡಿಎಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡೂ ಪಕ್ಷಗಳ ಒಳ ಜಗಳದಿಂದ ಮತಗಳು ಬಿಜೆಪಿ ಅಭ್ಯರ್ಥಿಗೆ ನೀಡಿರಬಹುದು. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ಸಚಿವ ಜಿ.ಟಿ.ದೇವೇಗೌಡ ಅವರು ಬಿಜೆಪಿ ಮತಗಳು ಮೈತ್ರಿ ಅಭ್ಯರ್ಥಿಗೆ ಹಂಚಿಕೆಯಾಗಿವೆ ಎಂದು ನೇರವಾಗಿ ಹೇಳುತ್ತಾರೆ. ಸಚಿವ ಸಾ.ರಾ.ಮಹೇಶ್ ಚುನಾವಣೆ ಫಲಿತಾಂಶದ ಮುನ್ನವೇ ತೊಂದರೆ ಆಗುತ್ತದೆ ಎನ್ನುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರು ಮೈಸೂರಿನಲ್ಲಿ ಪ್ರಚಾರ ಮಾಡಿದರೂ ಕಾರ್ಯಕರ್ತರು ಒಂದಾಗಿಲ್ಲ. ಮಂಡ್ಯ, ಹಾಸನ, ತುಮಕೂರಿನಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುವ ಭಯ ಇದೆ. ಮೈತ್ರಿ ವಿಚಾರವಾಗಿಯೇ ಕಾಂಗ್ರೆಸ್‌ನಲ್ಲೆ ಇನ್ನೂ ಅಸಮಾಧಾನ ಇದೆ. ಈ ಎಲ್ಲಾ ಗೊಂದಲಗಳನ್ನು ಎರಡೂ ಪಕ್ಷಗಳ ನಾಯಕರೇ ಸೃಷ್ಟಿಸಿರುವುದು ಅದರಲ್ಲಿ ಬಿಜೆಪಿ ಪಾತ್ರವಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ವಿಶ್ಲೇಷಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್ ಪ್ರಸಾದ್, ವಿಶ್ವನಾಥ್ ಅವರು ತಾವೂ 45 ವರ್ಷಗಳಿಂದ ಸ್ನೇಹಿತರು. ರಾಜಕೀಯವೇ ಬೇರೆ, ವಿಶ್ವಾಸವೇ ಬೇರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿರಲಿಲ್ಲ. ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು. ಅದಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಮಾತನಾಡಲಿಲ್ಲ. ಈಗ ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಮೈತ್ರಿ ಸರ್ಕಾರ ಪತನ ಅಥವಾ ಹೊಸ ಸರ್ಕಾರ ರಚನೆಯ ಬಗ್ಗೆ ಚರ್ಚಿಸಿಲ್ಲ . ಅದೆಲ್ಲಾ ಊಹಾಪೋಹ ಎಂದರು.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಅಗುವ ವಿಚಾರದ ಬಗ್ಗೆ ನಾವು ತಲೆ ಕೆಡಸಿಕೊಂಡಿಲ್ಲ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಮೈತ್ರಿ ಪಕ್ಷಗಳ ನಡುವೆ ಅಸಮಾಧಾನ ಇದೆ. ಅದೂ ಸಹ ನಮಗೆ ಸಂಬಂಧಿಸಿದಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗ ಏನು ಮಾತನಾಡಿದ್ದರು ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಅಂತೆಯೇ ದೇಶದಲ್ಲಿ ಎನ್ ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಲಿದ್ದು, ದೇಶಕ್ಕೆ ಸ್ಥಿರ ಸರ್ಕಾರ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

