ಪ್ರಚಾರದ ವೇಳೆ ಮೋದಿ ಪರ ಘೋಷಣೆ: ಕುಂದಗೋಳದಲ್ಲಿ ಕೈ-ಕೈ ಮಿಲಾಯಿಸಿದ ಮೋದಿ ಬ್ರಿಗೇಡ್-ಸಿದ್ದು ಸಪೋರ್ಟರ್ಸ್!

ಮಾಜಿ ಸಿಎಂ ಸಿದ್ದರಾಮಯ್ಯ ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುವ ಸಂದರ್ಭದಲ್ಲಿ ಮೋದಿ ಪರ ಘೋಷಣೆ ಕೂಗಿದ್ದರಿಂದ ಕೆಲ ಕಾಲ ಉದ್ವಿಘ್ನ ....
ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಹುಬ್ಬಳ್ಳಿ:  ಮಾಜಿ ಸಿಎಂ ಸಿದ್ದರಾಮಯ್ಯ ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುವ ಸಂದರ್ಭದಲ್ಲಿ ಮೋದಿ ಪರ ಘೋಷಣೆ ಕೂಗಿದ್ದರಿಂದ ಕೆಲ ಕಾಲ ಉದ್ವಿಘ್ನ ವಾತಾವಾರಣ ನಿರ್ಮಾಣವಾಗಿತ್ತು.
ಕುಂದಗೋಳ ತಾಲೂಕಿನ ದೇವನೂರ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿ ಪರ- ವಿರೋಧ ಘೋಷಣೆ ಕೂಗಿದ್ದಲ್ಲದೇ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.
ಮೈತ್ರಿ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದ್ದು, ತೀವ್ರ ಮುಜುಗರ ಅನುಭವಿಸಿದ್ದಾರೆ. 
 ಸಿದ್ದರಾಮಯ್ಯ ಕಮಡೊಳ್ಳಿಯಲ್ಲಿ ಸಮಾವೇಶ, ಶಿರೂರಲ್ಲಿ ರೋಡ್ ಶೋ ಮುಗಿಸಿಕೊಂಡು ದೇವನೂರು ಗ್ರಾಮದಲ್ಲಿ ರೋಡ್ ಶೋ ನಡೆಸಲು ಬಂದಿದ್ದರು. ಈ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತಾದರೂ ಕೆಲ ಕಾರ್ಯಕ್ರಮಗಳನ್ನು ಮುಗಿಸಿ ಬರುವುದು ತಡವಾಗಿತ್ತು. ಆದರೆ, ಸಂಜೆ ಬಿಜೆಪಿಯ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ರೋಡ್ ಶೋ ನಿಗದಿ ಆಗಿತ್ತು. ಹೀಗಾಗಿ ಎರಡೂ ಪಕ್ಷದ ನೂರಾರು ಕಾರ್ಯಕರ್ತರು ಏಕಕಾಲಕ್ಕೆ ಜಮಾಯಿಸಿದ್ದರಿಂದ ಈ ಬೆಳವಣಿಗೆ ನಡೆದಿದೆ. 
ಇದರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಕೊನೆಗೆ ಬಿಗಿ ಬಂದೋಬಸ್ತ್ ಕಲ್ಪಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಸಿದ್ದರಾಮಯ್ಯ ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸುತ್ತಿದ್ದಾಗ ಈಶ್ವರಪ್ಪಗಾಗಿ ಕಾಯುತ್ತಾ ನಿಂತಿದ್ದ ಕಾರ್ಯಕರ್ತರು ಎದುರುಗಡೆ ಸಿದ್ದರಾಮಯ್ಯ ಅವರ ರೋಡ್ ಶೋ ಬರುತ್ತಿದ್ದಂತೆಯೇ ಮೋದಿ ಮೋದಿ ಎಂದು ಘೋಷಣೆ ಶುರು ಮಾಡಿದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಕೂಡ ಕಾಂಗ್ರೆಸ್ ಶಿವಳ್ಳಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪರ ಘೋಷಣೆ ಕೂಗಲು ಆರಂಭಿಸಿದರು. 
ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟವೆಲ್ಲ ನಡೆಯಿತು. ಕೆಲವರು ಕೈ ಕೈ ಕೂಡ ಮಿಲಾಯಿಸಿದ್ದರಿಂದ ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಆಗ ಸ್ಥಳಕ್ಕೆ ಬಂದ ಪೊಲೀಸರು ಉಭಯ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಪಡಿಸಿದ ನಂತರ ಸಿದ್ದರಾಮಯ್ಯ ರೋಡ್ ಶೋ ಮುಂದೆ ತೆರಳಿ ಮುಕ್ತಾಯಗೊಂಡಿತು. 
ಉಭಯ ಪಕ್ಷಗಳ ಕಾರ್ಯಕರ್ತರು ಕೂಗಾಟದಲ್ಲಿ ತೊಡಗಿ ಗಲಾಟೆ ನಡೆದಿದ್ದರಿಂದ ಬುಧವಾರ ಸಂಜೆ ನಡೆಯಬೇಕಿದ್ದ ಕೆ.ಎಸ್. ಈಶ್ವರಪ್ಪ ಅವರ ರೋಡ್ ಶೋ ಅನ್ನು ಚುನಾವಣಾಧಿಕಾರಿಗಳು ರದ್ದುಗೊಳಿಸಿದರು. ಈ ಊರಿಗೆ ಬರುತ್ತಿದ್ದ ಈಶ್ವರಪ್ಪ ಕೂಬಿಹಾಳ ಗ್ರಾಮದಿಂದಲೇ ಹುಬ್ಬಳ್ಳಿಗೆ ತೆರಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com