ಎಚ್.ವಿಶ್ವನಾಥ್
ಕರ್ನಾಟಕ
ಗೆಲುವು ಸಾಧಿಸದಿದ್ದರೆ ರಾಜೀನಾಮೆ ನೀಡಲು ಎಚ್ ವಿಶ್ವನಾಥ್ ನಿರ್ಧಾರ?
ತುಮಕೂರು, ಹಾಸನ, ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಫಲಿತಾಂಶ ಜೆಡಿಎಸ್ ಪರವಾಗಿರುತ್ತದೆ. ಅಕಸ್ಮಾತ್ ಈ ಮೂರರಲ್ಲಿ ಯಾವ ಕ್ಷೇತ್ರದಲ್ಲಿ ಹಿನ್ನಡೆ ಆದರೂ, ..
ಮೈಸೂರು: ತುಮಕೂರು, ಹಾಸನ, ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಫಲಿತಾಂಶ ಜೆಡಿಎಸ್ ಪರವಾಗಿರುತ್ತದೆ. ಅಕಸ್ಮಾತ್ ಈ ಮೂರರಲ್ಲಿ ಯಾವ ಕ್ಷೇತ್ರದಲ್ಲಿ ಹಿನ್ನಡೆ ಆದರೂ, ನೈತಿಕ ಹೊಣೆ ಹೊತ್ತು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಎಚ್ ವಿಶ್ವನಾಥ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಚುನಾವಣೆ ಇದಾಗಿದ್ದು, ಆರೋಗ್ಯದ ದೃಷ್ಟಿಯಿಂದ ಈ ಜವಾಬ್ದಾರಿಯನ್ನು ಬೇರೆ ಯಾರಿಗಾದರೂ ವಹಿಸುವಂತೆ ದೇವೇಗೌಡರಲ್ಲಿ ಮನವಿ ಮಾಡಿದ್ದರು. ಆದರೆ ಈ ಬೇಡಿಕೆಗೆ ಗೌಡರು ಒಪ್ಪಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿನ ತಮ್ಮ ಬೆಂಬಲಿಗರನ್ನು ಖುದ್ದಾಗಿ ಭೇಟಿಯಾಗಿ ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಮನ ಒಲಿಸಿದ್ದರು. ಜೆಡಿಎಸ್ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆದಷ್ಟು ಶ್ರಮ ವಹಿಸಿದ್ದರು.
ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಮತ್ತವರ ಬೆಂಬಲಿಗರ ಹೇಳಿಕೆಗಳಿಗೆ ಮೈತ್ರಿಯ ಭಾಗವಾಗಿ ಪಕ್ಷದ ಪರವಾಗಿ ಬ್ಯಾಟಿಂಗ್ ಮಾಡಿದ್ದಲ್ಲದೇ ಅಂತಹ ಧ್ವನಿಯನ್ನು ಅಡಗೂರು ಅಡಗಿಸಿದರಾದರೂ ಸಿದ್ದರಾಮಯ್ಯ ಮತ್ತು ಬೆಂಬಲಿಗರು ವಿಶ್ವನಾಥ್ ಮೇಲೆ ಕತ್ತಿ ಮಸೆಯುತ್ತಿರುವುದಂತೂ ನಿಜ. ಚುನಾವಣೆ ಫಲಿತಾಂಶದ ನಂತರ ಈ ತೀರ್ಮಾನಕ್ಕೆ ಬದ್ಧರಾಗಲು ವಿಶ್ವನಾಥ್ ನಿರ್ಧರಿಸಿದ್ದು ತಮ್ಮ ಬೆಂಬಲಿಗರೊಂದಿಗೆ ಈ ಕುರಿತು ಮೈಸೂರಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ