

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಮೂರೂ ಪಕ್ಷಗಳಿಂದ ಘಟಾನುಘಟಿಗಳು ಸ್ಪರ್ಧೆಗಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಕೇಂದ್ರ ಸಚಿವ, ಹಾಲಿ ಸಂಸದ ವೀರಪ್ಪ ಮೊಯ್ಲಿ ಮರುಆಯ್ಕೆ ಬಯಸಿದ್ದಾರೆ. ಮಾಜಿ ಮುಖ್ಯಮಂತ್ರಿ, ರಾಮನಗರ ಶಾಸಕ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಕಣದಲ್ಲಿದ್ದಾರೆ. ಮೂವರೂ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಸಿದ್ಧತೆ ಏನು?
ಕುಡಿಯುವ ನೀರು ಒದಗಿಸುವುದು. ಅಂತರ್ಜಲ ಮಟ್ಟ ಹೆಚ್ಚಿಸುವುದರ ಜತೆಗೆ ಕೆರೆಗಳಿಗೆ ನೀರು ತುಂಬಿಸುವುದು. ಕೈಗಾರಿಕೆಗಳ ಸ್ಥಾಪನೆಯ ಮೂಲಕ ಉದ್ಯೋಗಾವಕಾಶ ಹೆಚ್ಚಿಸುವುದು. ಇಲ್ಲಿ ರೇಷ್ಮೆ, ಹೈನುಗಾರಿಕೆ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಣಾಳಿಕೆಯನ್ನು ಪಕ್ಷದಿಂದ ಬಿಡುಗಡೆ ಮಾಡಿದ್ದು, ಗೆದ್ದರೆ ಪ್ರಾಮಾಣಿಕವಾಗಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ.
ಬಿಜೆಪಿ ಕೂಡ ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆಯಲ್ಲ?
ಡಾ. ಪರಮಶಿವಯ್ಯ ಮತ್ತು ಎತ್ತಿನಹೊಳೆ ಸೇರಿದಂತೆ ಎರಡೂ ಯೋಜನೆಗಳ ಜಾರಿಗೆ ಬಿಜೆಪಿ ಬದ್ಧವಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರೇ ಮೊದಲು ಈ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದು. ಆದರೆ, ಈಗ ಕಾಂಗ್ರೆಸ್ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಜನರಿಗೆ ಮೋಸ ಮಾಡುತ್ತಿದೆ. ಅದಕ್ಕೆ ವಿರೋಧ ವ್ಯಕ್ತವಾಗಿದೆ.
ಮೋದಿ ಅಲೆ ಯಾವ ಮಟ್ಟಕ್ಕಿದೆ?
ದೇಶದೆಲ್ಲೆಡೆ ನರೇಂದ್ರ ಮೋದಿ ಅಲೆ ಎದ್ದಿದೆ. ಇಲ್ಲೂ ಸಹ ಇದೆ. ಮೋದಿಯನ್ನು ಪ್ರಧಾನಿಯನ್ನಾಗಿಸಲು ಜನ ಬಿಜೆಪಿಗೆ ಮತವನ್ನು ಹೆಚ್ಚಿಗೆ ನೀಡಲಿದ್ದಾರೆ. ನಾನು ರಾಜ್ಯದಲ್ಲಿ ನಾನಾ ಇಲಾಖೆಗಳ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಒಟ್ಟಾರೆ ನನ್ನ ಗೆಲವು ಖಚಿತ.
ನಿಮ್ಮ ಎದುರಾಳಿ ಯಾರು ?
ಎದುರಾಳಿ ಅಂತ ಯಾರನ್ನು ಹೇಳುವುದು. ಒಬ್ಬರು ಕೇಂದ್ರ ಸಚಿವರು ಆದರೆ ಈ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಇನ್ನೊಬ್ಬರು ಕಣ್ಣೀರಾಕಿ ಜಾತಿಯ ಹೆಸರಿನಲ್ಲೇ ಲಾಭ ಮಾಡಿಕೊಳ್ಳಲು ಹೋರಟಿದ್ದಾರೆ. ಆದರೆ ಇದ್ಯಾವುದೂ ಈ ಬಾರಿ ನಡೆಯುವುದಿಲ್ಲ.
ಕಳೆದ ಬಾರಿ ಹೊಸಕೋಟೆ ವಿಧಾನಸಭೆ ಕ್ಷೇತ್ರದಲ್ಲೇ ಸೋತಿದ್ದೀರಿ?
ಸೋಲು, ಗೆಲುವು ಸಾಮಾನ್ಯ. ಆಗ ಬಿಜೆಪಿಯಲ್ಲಿನ ಒಡಕು, ಗಲಾಟೆ ನನ್ನ ಸೋಲಿಗೆ ಪ್ರಮುಖ ಕಾರಣವಾಯಿತು. ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಹುಟ್ಟಿಕೊಂಡವು. ಈಗ ನಾವೆಲ್ಲರೂ ಒಂದಾಗಿದ್ದೇವೆ.
ದೇಶದೆಲ್ಲೆಡೆ ನರೇಂದ್ರ ಮೋದಿ ಅಲೆ ಎದ್ದಿದೆ. ಇಲ್ಲೂ ಇದೆ. ಮೋದಿಯನ್ನು ಪ್ರಧಾನಿಯನ್ನಾಗಿಸಲು ಜನ ಬಿಜೆಪಿಗೆ ಹೆಚ್ಚಿಗೆ ನೀಡಿದ್ದಾರೆ. ನಮ್ಮವರೆಲ್ಲರೂ ಒಗ್ಗೂಡಿದ್ದೇವೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ನೂರಕ್ಕೆ ನೂರು ಸತ್ಯ.
ಬಿ. ಎನ್. ಬಚ್ಚೇಗೌಡ
---
ಮತದಾರರು ಜೆಡಿಎಸ್‌ಗೆ ಏಕೆ ಮತ ಹಾಕಬೇಕು?
ಚಿಕ್ಕಬಳ್ಳಾಪುರ ಜಿಲ್ಲೆಯಾದರೂ ಅಭಿವೃದ್ಧಿ ಕಂಡಿಲ್ಲ. ಈಗಾಗಲೇ ಚುನಾವಣೆ ಬಂದಾಗ ಭರವಸೆಗಳನ್ನು ಕೇಳುವುದು, ಆ ನಂತರ ಜನಪ್ರತಿನಿಧಿಗಳು ಮರೆತು ಹೋಗುವಂಥದ್ದನ್ನು ಜನ ಕಂಡಿದ್ದಾರೆ. ಆದರೆ, ಈ ಭಾಗದಲ್ಲಿ ಹೆಚ್ಚಿಗೆ ಅಭಿವೃದ್ಧಿ ಕೆಲಸಗಳು ನಡೆಯಬೇಕು. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಾನು ಮಾಡಿದ ಸಾಧನೆಯನ್ನು ನೋಡಿಕೊಂಡು ಜನ ಇಲ್ಲಿ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟೆ ಕೊಡುತ್ತಾರೆ.
ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಪ್ರಭಾವಿ ಅಭ್ಯರ್ಥಿಗಳೇ ಇಲ್ಲ. ವಿಧಿಯಿಲ್ಲದೇ ನೀವು ಸ್ಪರ್ಧಿಸಿದ್ದೀರಿ?
ಕ್ಷೇತ್ರದಲ್ಲಿ ಪಕ್ಷದಿಂದ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಪ್ರಭಾವಿಗಳು ಅನೇಕರಿದ್ದರು. ಆದರೆ, ಈ ಭಾಗದ ಜನರ ಆಶಯದಂತೆ ಕುಮಾರಸ್ವಾಮಿಯೇ ಚುನಾವಣೆಗೆ ನಿಂತುಕೊಳ್ಳಬೇಕೆಂದು ಕಾರ್ಯಕರ್ತರು ತೀವ್ರ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ನಾನು ಸ್ಪರ್ಧಿಸಿದ್ದೇನೆ.
ಕ್ಷೇತ್ರದಲ್ಲಿ ಮೊಯ್ಲಿ ಪ್ರಭಾವ ಜೋರಾಗಿದೆಯಲ್ಲ?
ಚಿಕ್ಕಬಳ್ಳಾಪುರ ಜಿಲ್ಲೆ ರಚನೆ ಮಾಡಿದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಮಧ್ಯೆ ಉದ್ಭವವಾಗಿದ್ದ ಜಕ್ಕಲಮಡಗು ಜಲಾಶಯದ ನೀರಿನ ಹಂಚಿಕೆ ವಿವಾದವನ್ನು ಬಗೆಹರಿಸಿದೆ. ಅಲ್ಲದೇ ಜಿಲ್ಲೆಯೊಂದಿಗೆ ಅವಿನಾವಭಾವ ಸಂಬಂಧ ಹೊಂದಿದ್ದೇನೆ. ಇಲ್ಲಿ ನಾನು ಪ್ರಚಾರಕ್ಕೆ ಬಾರದಿದ್ದರೂ ಜನ ನನ್ನನ್ನು ಗೆಲ್ಲಿಸುತ್ತಾರೆ. ಮೊಯ್ಲಿ ಪ್ರಭಾವ ಅಷ್ಟೇನೂ ಜೋರಾಗಿಲ್ಲ.
ಯಾವ ಮೂಲದಿಂದ ನೀರು ತರುತ್ತೀರಿ?
ಎತ್ತಿನಹೊಳೆ ಯಾವುದೇ ಪೂರ್ವ ಸಿದ್ಧತೆಯಿಲ್ಲದ ತರಾತುರಿ ಯೋಜನೆ. ಇದರಿಂದ ನೀರು ಬರೋದಿಲ್ಲ. ಪರಮಶಿವಯ್ಯನವರ ವರದಿ ಅನುಷ್ಠಾನವೂ ದೀರ್ಘಾವಧಿ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೋಲಾರ ಭಾಗದ ಗಂಭೀರ ಸಮಸ್ಯೆಯನ್ನು ಅರಿತು ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಯೋಚನೆ ಮಾಡಿದೆ. ಮೇಕೆದಾಟುವಿನ ಬಳಿ ಅಣೆಕಟ್ಟು ನಿರ್ಮಿಸಿ ಈ ಭಾಗಕ್ಕೆ 50 ಅಥವಾ 60 ಟಿಎಂಸಿ ನೀರನ್ನು ತರಬಹುದು.
ಚುನಾವಣೆಗೆ ನಿಂತುಕೊಳ್ಳಬೇಕೆಂದು ಕಾರ್ಯಕರ್ತರು ತೀವ್ರ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ನಾನು ಸ್ಪರ್ಧಿಸಿದ್ದೇನೆ. ಇಲ್ಲಿ ನಾನು ಪ್ರಚಾರಕ್ಕೆ ಬಾರದಿದ್ದರೂ ಜನ ನನ್ನನ್ನು ಗೆಲ್ಲಿಸುತ್ತಾರೆ. ಮೊಯ್ಲಿ ಪ್ರಭಾವ ಅಷ್ಟೇನೂ ಜೋರಾಗಿಲ್ಲ.
ಎಚ್.ಡಿ. ಕುಮಾರಸ್ವಾಮಿ
---
ಈ ಭಾಗದ ಸಂಸದರಾಗಿ ಮಾಡಿದ ಕೆಲಸಗಳೇನು?
ಈ ಭಾಗದ ಸಂಸದನಾಗಿ ಕಳೆದ ಐದು ವರ್ಷಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ. ಇಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಗಳನ್ನು ಬಗೆಹರಿಸಬೇಕು. ಇನ್ನೂ ಅಂದುಕೊಂಡಿರುವ, ಈಗಾಗಲೇ ಜನರಿಗೆ ತಿಳಿಸಿರುವ ಕೆಲಸವನ್ನು ಮಾಡಬೇಕು. ನೀರಾವರಿ ಸೌಲಭ್ಯ ಒದಗಿಸುವುದು ಸೇರಿದಂತೆ ಮಾದರಿ ಕ್ಷೇತ್ರವನ್ನಾಗಿಸುವ ಕನಸು ಹೊಂದಿದ್ದೇನೆ.
ಕಳೆದ ಬಾರಿಯ ಪ್ರತ್ಯೇಕ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿದೆಯೇ?
ಹೌದು, 2009ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಣಾಳಿಕೆ ಡುಗಡೆ ಮಾಡಿದ್ದೆ. ಅದರಲ್ಲಿ ಶೇ.100ರಷ್ಟು ಭರವಸೆಗಳನ್ನು ಈಡೇರಿಸಿದ್ದೇನೆ. ಪ್ರಮುಖವಾಗಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿದೆ. ಆದರೆ, ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎನ್ನುತ್ತಿದ್ದಾರೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ.
ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ವಿರೋಧಿ ಅಲೆ ಇದೆಯಂತೆ?
ದೇಶದಲ್ಲಿ ಖಂಡಿತವಾಗಿ ನರೇಂದ್ರ ಮೋದಿ ಅಲೆ ಇಲ್ಲ. ಇನ್ನು ಎಲ್ಲಿ ಹುಡುಕಿಕೊಂಡು ಹೋದರೆ ಸಿಗುತ್ತೆ ಹೇಳಿ? ಆದರೆ, ಕೆಲವರು ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ. ಮೊಯ್ಲಿ ವಿರೋಧಿ ಅಲೆಯಿದೆ ಎನ್ನುವುದು ಸಹ ಜನರ ಮಾತಲ್ಲ. ನಮ್ಮ ವಿರೋಧಿಗಳು ಹೇಳುವಂಥದ್ದು. ಇಲ್ಲಿ ನನ್ನ ಸಾಧನೆ ಹೆಗ್ಗುರುತಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ತರಾತರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆಯೇ?
ಯಾರೇ ಆಗಲಿ ಮೊದಲು ಇತಿಹಾಸವನ್ನು ತಿಳಿದುಕೊಳ್ಳಬೇಕು. ನಾನು ಈ ಭಾಗದ ಸಂಸದನಾಗಿ ಆಯ್ಕೆಯಾದಾಗಿನಿಂದಲೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಶ್ರಮಿಸುತ್ತಾ ಬಂದಿರುವುದು ಸತ್ಯ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಎತ್ತಿನಹೊಳೆ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿರಿಸುವಂತೆ ಮಾಡಿದೆ. ಆನಂತರ ಸದಾನಂದಗೌಡ, ಜಗದೀಶ ಶೆಟ್ಟರ್ ಅವಧಿಯಲ್ಲೂ ಸರ್ವಪಕ್ಷಗಳ ಸಭೆ ನಡೆಸಿ ಚರ್ಚಿಸಲಾಯಿತು. ಆದರೆ, ಅವರು ಕೊಟ್ಟ ಹಣ ಸಾಕಾಗುತ್ತಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕೆಲಸಗಳು ತ್ವರಿಗತಿಯಲ್ಲಿ ನಡೆದವು. ಯೋಜನೆಗೆ ಶಂಕುಸ್ಥಾಪನೆ ಸಹ ನೆರವೇರಿತು.
ಸಂಸದನಾಗಿ ಕಳೆದ ಐದು ವರ್ಷಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮುಂದಿನ ದಿನಗಳಲ್ಲಿ ನೀರಾವರಿ ಸೌಲಭ್ಯ ಒದಗಿಸುವುದು ಸೇರಿದಂತೆ ಮಾದರಿ ಕ್ಷೇತ್ರವನ್ನಾಗಿಸುವ ಕನಸು ಹೊಂದಿದ್ದೇನೆ.
- ಎಂ. ವೀರಪ್ಪ ಮೊಯ್ಲಿ
ಎನ್. ವೆಂಕಟೇಶ
Advertisement