ಯಾರು 'ಹಾಸನ'ಮುಖಿ ಆಗುವರಿಲ್ಲಿ?

ತೃತೀಯರಂಗ ಕಟ್ಟಿ ದೆಹಲಿ ಗದ್ದುಗೆ ಹಿಡಿಯುವ ಯೋಜನೆ, ಯೋಚನೆಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ...
ಯಾರು 'ಹಾಸನ'ಮುಖಿ ಆಗುವರಿಲ್ಲಿ?
Updated on

ತೃತೀಯರಂಗ ಕಟ್ಟಿ ದೆಹಲಿ ಗದ್ದುಗೆ ಹಿಡಿಯುವ ಯೋಜನೆ, ಯೋಚನೆಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಮಾಜಿ ಪ್ರಧಾನಿಯನ್ನು ಸೋಲಿಸುವ ಪಣ ತೊಟ್ಟಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಇಲ್ಲಿ ಕಣಕ್ಕೆ ಇಳಿದಿರುವ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಸ್ಥಳೀಯ ಮುಖಂಡರ ಬೆಂಬಲದಿಂದ ಗೆಲವಿಗೆ ಅವಿರತ ಯತ್ನ ನಡೆಸಿದ್ದಾರೆ.

 ನಿಮಗೆ ಹಾಸನ ಕ್ಷೇತ್ರ ಹೊಸದು, ಗೆಲ್ಲಲು ಏನು ಮಾಡ್ತಾ ಇದ್ದೀರಿ?
    ಹಾಸನ ಹೊಸದು. ಆದರೆ ರಾಜಕೀಯ ಹೊಸದಲ್ಲ. ಹಾಗಾಗಿ ನನಗೆ ಚುನಾವಣೆ ಸಮಸ್ಯೆ ಆಗುತ್ತಿಲ್ಲ. 20 ವರ್ಷಗಳಿಂದ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಹಾಸನಕ್ಕೆ ಬಂದು ಹೋಗಿ ಪರಿಚಿತನಾಗಿದ್ದೇನೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದೇನೆ. ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ನನ್ನ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಜನರ ಬಳಿಗೆ ನನ್ನ ನಡೆ ಹಾಕಿ ಮತ ಭಿಕ್ಷೆ ಬೇಡುತ್ತಿದ್ದೇನೆ.
  ನಿಮ್ಮ ಎದುರಾಳಿ ಯಾರು ?
    ಅದಕ್ಕೆ ನಾನು ಉತ್ತರ ನೀಡುವುದಿಲ್ಲ. ಎಲ್ಲ ಪಕ್ಷದ ಅಭ್ಯರ್ಥಿಗಳೂ ಗೆಲ್ಲಬೇಕೆಂದೇ ಬಯಸಿರುತ್ತಾರೆ. ಹೀಗಾಗಿ ಅವರು ಎದುರಾಳಿ ಇವರು ಎದುರಾಳಿ ಎಂದು ಹೇಳುವುದಕ್ಕೆ ಬರುವುದಿಲ್ಲ. ಎಲ್ಲವನ್ನೂ ಮತದಾರ ಪ್ರಭುಗಳಿಗೆ ಬಿಡುವುದು ಒಳಿತು. ಅವರಿಗೆ ಯಾರು ಸರಿ ಎನಿಸುತ್ತಾರೋ ಅವರನ್ನು ಆಯ್ಕೆ ಮಾಡುತ್ತಾರೆ.
   ಗೆದ್ದರೇ ಏನ್ ಮಾಡ್ತೀರಿ ?
    ಇಡೀ ಕ್ಷೇತ್ರವನ್ನು ಸಮಾನ ದೃಷ್ಟಿಯಲ್ಲಿ ನೋಡಲಾಗುವುದು. ತಾರತಮ್ಯ ಪ್ರಶ್ನೆಯೇ ಇಲ್ಲ. ಪಕ್ಷಭೇದ, ವರ್ಗಭೇದ, ಮೇಲು- ಕೀಳು, ಬಡವ- ಬಲ್ಲಿದ ಎಂಬ ತಾರತಮ್ಯ ಮಾಡದೇ ಸಾಮಾಜಿಕ ಸೇವೆ ಸಲ್ಲಿಸಲಾಗುವುದು.
ಮೋದಿ ಅಲೆ ಫಲಿತಾಂಶ ಈ ಬಾರಿ ಬದಲಾಯಿಸಬಹುದೇ?
    ಯಾರು ಎಷ್ಟೆ ಏನೇ ಹೇಳಿದರೂ ಎಲ್ಲೆಡೆ ಮೋದಿ ಅಲೆ ಇದೆ. ಇದು ನಮಗೆ ಪ್ಲಸ್ ಪಾಯಿಂಟ್. ದೇಶದ ಜನರು ಬದಲಾವಣೆ ಬಯಸಿದಂತೆ ಹಾಸನ ಜನರೂ ಬದಲಾವಣೆ ಬಯಸಿದ್ದಾರೆ. ಜನರು ಪ್ರೀತಿಯಿಂದ ನನ್ನನ್ನು ಬರ ಮಾಡಿಕೊಳ್ಲುತ್ತಿದ್ದಾರೆ. ಗೆಲವು ನಿಶ್ಚಿತ.
 ನಿಮ್ಮ ಪಕ್ಷದ ಕೆಲ ಮುಖಂಡರು ಅಸಮಾಧಾನಗೊಂಡಿದ್ದಾರೆ. ಇದರ ಬಗ್ಗೆ ಏನು ಹೇಳುವಿರಿ?
    ಅದು ಶುದ್ಧ ಸುಳ್ಳು, ಅಪಪ್ರಚಾರ. ಎಲ್ಲಾ ಮುಖಂಡರು, ಕಾರ್ಯಕರ್ತರು ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲೂ ಒಟ್ಟಿಗೆ ಪ್ರಚಾರ ಕಾರ್ಯದಲ್ಲೂ ತೊಡಗಿದ್ದಾರೆ. ಹಾಗೆಯೇ ಕ್ಷೇತ್ರದಲ್ಲೂ ಬಿಜೆಪಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೇರೆ ಪಕ್ಷಗಳಂತೆ ಅಲ್ಲ ಬಿಜೆಪಿ. ಇಲ್ಲಿ ಪಕ್ಷ ಮುಖ್ಯವೇ ಹೊರತು ಅಭ್ಯರ್ಥಿ ಅಲ್ಲ.

ನನಗೆ ಚುನಾವಣೆ ಸಮಸ್ಯೆ ಆಗುತ್ತಿಲ್ಲ. 20 ವರ್ಷಗಳಿಂದ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಹಾಸನಕ್ಕೆ ಬಂದು ಹೋಗಿ ಪರಿಚಿತನಾಗಿದ್ದೇನೆ. ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದು ನನ್ನ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.
 ಸಿ.ಎಚ್. ವಿಜಯಶಂಕರ್

--
ನೀವು ನಿರೀಕ್ಷಿತ ಮಟ್ಟದಲ್ಲಿ ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ಇದರ ಬಗ್ಗೆ ಏನು ಹೇಳುತ್ತೀರಿ?
    ನಾನು ಪಿಎಂ ಆಗಿದ್ದಾಗ ಹಾಸನ- ಬೆಂಗಳೂರು ರೇಲ್ವೆ ಮಾರ್ಗ ಕಾಮಗಾರಿ ಆರಂಭಿಸಲಾಯಿತು. ಈಗ 17 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಹಾಸನ ಜಿಲ್ಲೆಗೆ ಐಐಟಿ, ಕೇಂದ್ರೀಯ ವಿವಿ ತರಬೇಕಾಗಿದೆ.  ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಾನು ಶಂಕುಸ್ಥಾಪನೆ ಮಾಡಿದ ನಂತರ ಕಾಮಗಾರಿ ಆರಂಭಕ್ಕೆ ಅನುಮತಿಯನ್ನು ಇಲ್ಲಿಯವರೆಗೆ ಆಳುವವರು ನೀಡಿಲ್ಲ. ಮೆಡಿಕಲ್, ಎಂಜಿನಿಯರಿಂಗ್, ಕೃಷಿ, ಪಶು ವಿವಿ ಆರಂಭ ಮಾಡಿಲ್ಲವೇ? ಜಿಲ್ಲೆಯ ಪ್ರತಿ ಕುಟುಂಬಕ್ಕೂ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕೃಷಿ ಮತ್ತು ಕೈಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ನಾನೇನು ಮಾಡಿದ್ದೇನೆ ಎಂಬುದನ್ನು ಈಗ ಬಿಡುಗಡೆ ಮಾಡಿರುವ ಪ್ರಣಾಳಿಕೆ ನೋಡಲಿ, ಅದು ಸುಳ್ಳಾಗಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ.
 ಈ ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಹೇಗಿರುತ್ತೆ?
    ಅದು ಮೇ 16 ರಂದು ಗೊತ್ತಾಗುತ್ತೆ. 15 ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವೇ ಬೇಡ. ಉತ್ತರ ಕರ್ನಾಟಕದ ಬಿಜಾಪುರ, ಬೀದರ್, ರಾಯಚೂರು, ಚಿತ್ರದುರ್ಗ ಸೇರಿದಂತೆ ಹಲವಡೆ ಉತ್ತಮ ಫಲಿತಾಂಶ ಬರಲಿದೆ.
   ಮತ್ತೆ ಪ್ರಧಾನಿ ಆಗುವ ಒಳಾಸೆ ಇದೆಯೇ ?
    ಒಳಾಸೆಯೂ ಇಲ್ಲ, ಹೊರಾಸೆಯೂ ಇಲ್ಲ. ಮುಲಾಯಂಸಿಂಗ್ ಪ್ರಧಾನಿ ಆಗುವ ಬಯಕೆ ಹೊಂದಿದ್ದಾರೆ. 2 ರಾಷ್ಟ್ರೀಯ ಪಕ್ಷಗಳ ಮೋಸದಾಟ ಈಗ ನಡೆಯೋಲ್ಲ. 1996 ರಂತೆ ತೃತೀಯರಂಗ ಕಾಮನ್ ಮಿನಿಮಮ್ ಕಾರ್ಯಕ್ರಮದಡಿ ದೇಶಕ್ಕೆ ಶುದ್ಧ ಆಡಳಿತ ನೀಡುತ್ತದೆ.
    ಬಿಜೆಪಿ, ಕಾಂಗ್ರೆಸ್ ಅಧಿಕಾರ ಏಕೆ ಹಿಡಿಯುವುದಿಲ್ಲ ?
    ಇವತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡದೇ ದುರುದ್ದೇಶದಿಂದ ಮುಚ್ಚಿಡಲಾಗುತ್ತಿದೆ. ಕೆಜಿ. ಅಕ್ಕಿ ಬೆಲೆಯನ್ನು 50ರಿಂದ 80 ರು.ಗೆ ಏರಿಸುವವರೂ ಅವರೇ, ಮತ್ತೊಂದು ಕಡೆ 1ರು.ಗೆ 1 ಕೆಜಿ ನೀಡುವವರೂ ಅವರೇ. ಎಲ್ಲ ವರ್ಗದವರಿಗೂ ಅಗತ್ಯ ವಸ್ತುಗಳು ಕಡಿಮೆ ಬೆಲೆಗೆ ಸಿಗುವಂತೆ ಮಾಡಬೇಕೆಂಬ ಅರಿವು ರಾಷ್ಟ್ರೀಯ ಪಕ್ಷಗಳಿಗೆ ಇಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ 15 ಬಾರಿ ಡಿಸೆಲ್ , ಪೆಟ್ರೋಲ್ ಬೆಲೆಯನ್ನು ಏರಿಸಿದೆ. ರೈತರ ರಸಗೊಬ್ಬರಕ್ಕೆ ಸಬ್ಸಿಡಿ ನೀಡಲ್ಲ.

2 ರಾಷ್ಟ್ರೀಯ ಪಕ್ಷಗಳ ಮೋಸದಾಟ ಈಗ ನಡೆಯೋಲ್ಲ. ತೃತೀಯರಂಗ ಕಾಮನ್ ಮಿನಿಮಮ್ ಕಾರ್ಯಕ್ರಮದಡಿ ದೇಶಕ್ಕೆ ಶುದ್ಧ ಆಡಳಿತ ನೀಡುವುದು ಗ್ಯಾರಂಟಿ. ರಾಜ್ಯದಲ್ಲೂ ನಾವು  15 ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನ ಬೇಡ.
-ಎಚ್.ಡಿ. ದೇವೇಗೌಡ

--
  ಜಿಲ್ಲೆಗೆ ಬಂದಿದ್ದ ಸಚಿವ ಎಚ್.ಕೆ. ಪಾಟೀಲ್, ಎಚ್.ಸಿ. ಮಹದೇವಪ್ಪ ಮತ್ತಿತರರು ದೇವೇಗೌಡರನ್ನು ಹೊಗಳುತ್ತಾರೆ. ಹೀಗಾದರೇ ಹೇಗೆ?
    ಗೌಡರನ್ನು ಹೊಗಳಿದ್ದು ಮುಖಂಡರ ವೈಯಕ್ತಿಕ ವಿಚಾರ. ಅವರವರ ಅನುಕೂಲಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಅದು. ಹೊಗಳುವ ನಾಯಕರಿಗೆ ಹಾಸನದಲ್ಲಿ ಮತ ಹಾಕಿಸಲಿಕ್ಕೆ ಆಗಲ್ಲ, ಸಂಘಟನೆ ಮಾಡಲಿಕ್ಕೆ ಆಗಲ್ಲ. ಹಾಗಾಗಿ ಯಾವುದೇ ತೊಂದರೆ ಇಲ್ಲ.
-ನಿಮ್ಮನ್ನು ಹರಕೆ ಕುರಿ ಮಾಡಲಾಗುತ್ತಿದೆಯೇ ?
    ನಾನು ಹರಕೆ ಕುರಿನೂ ಅಲ್ಲ, ಬಲಿಪಶುವೂ ಅಲ್ಲ. ಚುನಾವಣೆ ಫಲಿತಾಂಶ ಬರಲಿ, ಆಗ ಗೊತ್ತಾಗುತ್ತೆ ಯಾರು ಹರಕೆ ಕುರಿ ಎಂದು. ಅಲ್ಲಿಯವರೆಗೆ ಕಾದು ನೋಡಿ. ಬೇರೆ ಮಾತೆಲ್ಲಾ ಏಕೆ.
-  ತಮ್ಮದೇ ಪಕ್ಷದ ಬಿ. ಶಿವರಾಂ, ಸಿಎಂ, ಕೆಪಿಸಿಸಿ ಅಧ್ಯಕ್ಷರನ್ನು ತಮ್ಮನ್ನು ನಡೆಸಿಕೊಂಡ ಬಗ್ಗೆ ಬಹಿರಂಗ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರಲ್ಲಾ ?
    ನಮ್ಮಲ್ಲಿ ಪ್ರಜಾಪ್ರಭುತ್ವ ಇದೆ. ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶವಿದೆ. ಅದನ್ನು ತಪ್ಪಾಗಿ ಗ್ರಹಿಸುವ ಅವಶ್ಯಕತೆ ಇಲ್ಲ.  
-  ಗೆದ್ದರೆ ಏನು ಮಾಡುವಿರಿ? ನಿಮ್ಮ ಎದುರಾಳಿಯ ನಕಾರಾತ್ಮಕ ಅಂಶಗಳ್ಯಾವುವು?
    ನಮ್ಮ ಎದುರಾಳಿ ದೇವೇಗೌಡರು ಬಹಳ ವರ್ಷಗಳಿಂದ ಅಧಿಕಾರ ಅನುಭವಿಸಿದ್ದಾರೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದಲ್ಲಿ ಶ್ರಮಿಸಿಲ್ಲ. ನಾನು ಗೆದ್ದರೆ ಹಾಸನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ರಸ್ತೆಗಳ ಅಭಿವೃದ್ಧಿ, ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕಾರ್ಯಕ್ರಮ ಜಾರಿ, ಆಲೂಗಡ್ಡೆ ಸಂಶೋಧನೆ ಕೇಂದ್ರ ಸ್ಥಾಪನೆ, ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಅನುಷ್ಠಾನಗೊಳಿಸಲಾಗುವುದು.
-    ತಾವು ಪ್ರತಿನಿಧಿಸುವ ಅರಕಲಗೂಡು ವಿಧಾನಸಭೆ ಕ್ಷೇತ್ರದ ರಸ್ತೆಗಳೇ ಅಭಿವೃದ್ಧಿಯಾಗಿಲ್ಲ. ಇನ್ನು ಎಂಪಿಯಾಗಿ ಏನು ಮಾಡ್ತಾರೆ ಅನ್ನೋ ಟೀಕೆಗಳಿಗೆ ನಿಮ್ಮ ಉತ್ತರ?
    ಅರಕಲಗೂಡು ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗುತ್ತದೆ. ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ.

ಗೌಡರನ್ನು ಹೊಗಳುವ ಪಕ್ಷದ ನಾಯಕರಿಗೆ ಹಾಸನದಲ್ಲಿ ಮತ ಹಾಕಿಸಲಿಕ್ಕೆ, ಸಂಘಟನೆ ಮಾಡಲಿಕ್ಕೆ ಆಗಲ್ಲ. ನಾನು ಹರಕೆ ಕುರಿನೂ  ಅಲ್ಲ, ಬಲಿಪಶುವೂ ಅಲ್ಲ. ಚುನಾವಣೆ ಫಲಿತಾಂಶ ಬರಲಿ, ಆಗ ಗೊತ್ತಾಗುತ್ತೆ ಯಾರು ಹರಕೆ ಕುರಿ ಎಂದು.
- ಎ. ಮಂಜು



ದಯಾಶಂಕರ ಮೈಲಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com