

ಮೀಸಲು ಕ್ಷೇತ್ರವಾಗಿರುವ ಚಾಮರಾಜನಗರಕ್ಕೆ 'ಹಿಂದುಳಿದ ಪ್ರದೇಶ' ಎನ್ನುವುದು ಕಾಯಂ ಹಣೆಪಟ್ಟಿಯಾಗಿದೆ. ಹಾಲಿ ಸಂಸದ ಕಾಂಗ್ರೆಸ್ ಪಕ್ಷದ ಧ್ರುವನಾರಾಯಣ, ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ಹಿಂದಿನ ಮೂರು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲೂ ಅವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯಎ.ಆರ್. ಕೃಷ್ಣಮೂರ್ತಿ ಈ ಬಾರಿಯೂ ಅವರ ಪ್ರತಿಸ್ಪರ್ಧಿ. ಜೆಡಿಎಸ್‌ನಿಂದ ಮಾಜಿ ಸಂಸದ ಎಂ. ಶಿವಣ್ಣ ಕಠಿಣ ಸ್ಪರ್ಧೆ ಒಡ್ಡಲು ಅಣಿಯಾಗಿದ್ದಾರೆ.
- ಕ್ಷೇತ್ರದಲ್ಲಿ ಕೆಲಸ ಮಾಡುವುದು ಮೋದಿ ಅಲೆಯೋ, ಯಡಿಯೂರಪ್ಪ ಅವರ ಪ್ರಭಾವವೋ?
ರಾಷ್ಟ್ರಕ್ಕೆ ಸಂಬಂಧಿಸಿದಂತೆ ಮೋದಿ ಅಲೆ ನಮ್ಮ ಕ್ಷೇತ್ರದಲ್ಲೂ ಕೆಲಸ ಮಾಡುತ್ತದೆ. ಅದರಲ್ಲೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂಬ ಹಂಬಲದಲ್ಲಿದ್ದಾರೆ. ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಪ್ರಭಾವ ಹೆಚ್ಚಿನ ಮಟ್ಟದಲ್ಲಿದ್ದು ಅದು ನನಗೆ ಶ್ರೀರಕ್ಷೆಯಾಗಲಿದೆ. ಜೊತೆಗೆ ನಮ್ಮ ತಂದೆ ಮಾಜಿ ರಾಜ್ಯಪಾಲ ಬಿ. ರಾಚಯ್ಯ ಮೇಲಿನ ಗೌರವ ಹಾಗೂ ನನ್ನ ಮೇಲಿನ ವಿಶ್ವಾಸವೂ ಕೆಲಸ ಮಾಡುತ್ತದೆ.
- ಮೂವರು ಪ್ರಭಾವಿ ಸಚಿವರಿರುವ ಕ್ಷೇತ್ರದಲ್ಲಿ ಗೆದ್ದು ಬರಲು ಸಾಧ್ಯವೇ?
ಯಾಕೆ ಹಾಗಲ್ಲ... ದೇವರ ಆರ್ಶೀವಾದ, ಮತದಾರರು ಮನಸ್ಸು ಮಾಡಿದರೆ ಯಾರ ವಿರುದ್ಧ ಬೇಕಾದರೂ ಗೆಲ್ಲಬಹುದು. ಕಳೆದ ಬಾರಿ 8ಕ್ಕೆ 8 ಕಾಂಗ್ರೆಸ್ ಅಭ್ಯರ್ಥಿಗಳು ಇದ್ದಾಗಲೇ ನಾನು ಅಲ್ಪ ಮತಗಳ ಅಂತರದಿಂದ ಸೋತಿದ್ದೇನೆ. ಈ ಬಾರಿ ಜನರು ಬಿಜೆಪಿ ಪರ ಇದ್ದು ನನ್ನ ಗೆಲುವು ನಿಶ್ಚಿತ.
- ಕ್ಷೇತ್ರದಲ್ಲಿ ಬಿಜೆಪಿ ಕೆಜೆಪಿ ಬಿಕ್ಕಟ್ಟು ಇದೆಯಲ್ಲ?
ಬಿಜೆಪಿ ಮತ್ತು ಕೆಜೆಪಿ ಮತ್ತೇ ಒಂದಾದ ಸಂದರ್ಭದಲ್ಲಿ ಸಣ್ಣ ಬಿಕ್ಕಟ್ಟು ಎದುರಾಯಿತು. 8 ಕ್ಷೇತ್ರಗಳ ಪೈಕಿ 6 ಕ್ಷೇತ್ರದಲ್ಲಿ ಈಗಾಗಲೇ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಒಂದೆರಡು ಕ್ಷೇತ್ರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ ಅದೂ ಸರಿಯಾಗುತ್ತದೆ. ಈಗಾಗಲೇ ಎಲ್ಲ ನಾಯಕರನ್ನು ಬೇಟಿ ಮಾಡಿ ಬೆಂಬಲ ಕೋರಿದ್ದೇನೆ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ.
- ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?
ನಾನು 1994 ಮತ್ತು 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ಶಾಸಕರಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. 2004ರಲ್ಲಿ ಒಂದು ಮತದ ಅಂತರದಲ್ಲಿ ಸೋತೆ. 2008ರ ವಿಧಾನಸಭೆ ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿದ್ದೇನೆ. ಆದರೂ, ಮತದರಾರು ನನಗೂ ಗೆದ್ದ ಅಭ್ಯರ್ಥಿಯಷ್ಟೇ ಸಮಾನವಾಗಿ ಮತ ನೀಡುತ್ತಾ ಬಂದಿದ್ದಾರೆ. ಹಿಂದೆ ಶಾಸಕನಾಗಿದ್ದಾಗ ಇಡೀ ಚಾಮರಾಜನಗರ ಲೋಕಸಭಾ ಕ್ಷೇತ್ರ ಸೇರಿ ಜಿಲ್ಲೆಯಾಗಬೇಕು ಎಂದು ಹೋರಾಟ ಮಾಡಿದ್ದೆ.
ನಾನು 2004ರಲ್ಲಿ 1 ಮತದ ಅಂತರದಲ್ಲಿ ಸೋತೆ. ಕಳೆದ ಮೂರು ಚುನಾವಣೆಯಲ್ಲೂ ಸೋಲನ್ನು ಅನುಭವಿಸುತ್ತಾ ಬಂದಿದ್ದೇನೆ. ಈ ಬಾರಿ ಮತದಾರರು ನನ್ನ ಬಗ್ಗೆ ಕರುಣೆ ತೋರಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು.
- ಎ. ಆರ್. ಕೃಷ್ಣಮೂರ್ತಿ
--
- ಮತ್ತೇ ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?
ಕಳೆದ 5 ವರ್ಷದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಒಂದು ತೆರೆದ ಪುಸ್ತಕವಿದ್ದಂತೆ. ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ, ಸಾಕಷ್ಟು ಚರ್ಚೆ ಮಾಡಿದ್ದೇನೆ. ಕೇಂದ್ರದಿಂದ ಹೆಚ್ಚಿನ ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹಿಂದುಳಿದ ಚಾಮರಾಜನಗರ ಮೀಸಲು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮತದಾರರು ಮತ್ತೇ ನನಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡುತ್ತೇನೆ.
- ಯುಪಿಎ ಸರ್ಕಾರದ ಹಗರಣಗಳು ಪರಿಣಾಮ ಬೀರುವುದಿಲ್ಲವೇ?
ಎಲ್ಲ ಸರ್ಕಾರಗಳಲ್ಲೂ ಸಣ್ಣ ಪುಟ್ಟ ತಪ್ಪುಗಳಾಗುತ್ತವೇ. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಎ. ರಾಜಾ ಅವರನ್ನು ವಜಾ ಮಾಡಲಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣದ ರುವಾರಿ ಸುರೇಶ್ ಕಲ್ಮಾಡಿ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ, ಮಹಾರಾಷ್ಟ್ರದಲ್ಲಿ ಆದರ್ಶ ಹಗರಣ ಕೇಳಿ ಬರುತ್ತಿದ್ದಂತೆ ಅಶೋಕ್ ಚೌಹಾಣ್‌ರನ್ನು ಮುಖ್ಯಮಂತ್ರಿ ಸ್ಧಾನದಿಂದ ಕೆಳಗಿಳಿಸಲಾಯಿತು. ಹಾಗಾಗಿ ಕಾಂಗ್ರೆಸ್ ಭ್ರಷ್ಟಾಚಾರ ಆರೋಪ ಕೇಳಿ ಬಂದವರ ಮೇಲೆ ಕ್ರಮ ಕೈಗೊಳ್ಳುತ್ತ ಬಂದಿದೆ. ಕೆಲವರು ಮಾಡಿದ ತಪ್ಪನ್ನು ಇಡೀ ಸರ್ಕಾರದ ಮೇಲೆ ಹೊರಿಸುವುದು ಸರಿಯಲ್ಲ.
- ದಲಿತರನ್ನು ಮುಖ್ಯಮಂತ್ರಿ ಮಾಡದ್ದು ಪರಿಣಾಮ ಬೀರಲ್ವಾ?
ದಲಿತರಿಗೆ ಬೇರೆ ಪಕ್ಷದಲ್ಲಿ ಸ್ಥಾನವೇ ಇಲ್ಲ. ದಲಿತರೊಬ್ಬರು ಮುಖ್ಯಮಂತ್ರಿಯಾಗುವುದಿದ್ದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷ ಸಾಕಷ್ಟು ದಲಿತ ನಾಯಕರನ್ನ ಬೆಳೆಸಿದೆ. ದಲಿತ ನಾಯಕತ್ವಕ್ಕೆ ಹಿಂದಿನಿಂದಲೂ ಉತ್ತೇಜನ ನೀಡುತ್ತ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಈ ವಾತಾವರಣ ಇಲ್ಲ.
- ಈ ಬಾರಿಯೂ ಗೆಲವಿನ ವಿಶ್ವಾಸ ಎಷ್ಟರ ಮಟ್ಟಿಗಿದೆ
ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಅದು 1 ಲಕ್ಷ ಮತಗಳ ಅಂತರದಿಂದ. 10 ತಿಂಗಳಲ್ಲಿ ರಾಜ್ಯ ಸರ್ಕಾರವೂ ನಿರೀಕ್ಷೆ ಮೀರಿ ಕೆಲಸ ಮಾಡಿದೆ. ಮುಖ್ಯಮಂತ್ರಿ ಮತ್ತು ಮೂವರು ಪ್ರಭಾವಿ ಮಂತ್ರಿಗಳು ನಮ್ಮ ಕ್ಷೇತ್ರದವರಾಗಿದ್ದಾರೆ. ಅಭಿವೃದ್ದಿ ಯೋಜನೆಗಳಿಂದಾಗಿ ಮತದಾರರು ನಮ್ಮ ಮೇಲೆ ವಿಶ್ವಾಸ ತೋರುತ್ತಿದ್ದಾರೆ.
ನಾನು ಯಾರನ್ನೂ ಟೀಕೆ ಮಾಡುತ್ತ ಕಾಲಹರಣ ಮಾಡುವುದಿಲ್ಲ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳೊಂದಿಗೆ ಮತದಾರರ ಬಳಿಗೆ ಮತ್ತೆ ತೆರಳಿದ್ದೇನೆ.
- ಆರ್. ಧ್ರುವನಾರಾಯಣ
--
- ಎಂ ಕ್ಷೇತ್ರ ಮತ್ತು ಮೋದಿ ಅಲೆ ಬಗ್ಗೆ ಆಂತಕ ಇದೆಯೇ?
ಕಳೆದ 10 ತಿಂಗಳ ರಾಜ್ಯ ಸರ್ಕಾರದ ನಿರ್ಧಾರಗಳಿಂದ ಜನ ಬೇಸತ್ತಿದ್ದಾರೆ. ಸಿದ್ದರಾಮಯ್ಯ ಅವರು ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ವಿಫಲರಾಗಿದ್ದಾರೆ. ಕೇಂದ್ರದ ಯುಪಿಎ ಸರ್ಕಾರದ ಭಷ್ಟಾಚಾರ ಮತ್ತು ಬೆಲೆ ಏರಿಕೆ ನೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇನ್ನೂ ಈ ಕ್ಷೇತ್ರದಲ್ಲಿ ಮೋದಿ ಅಲೆ ಎಲ್ಲೂ ಕಂಡು ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರ ಪ್ರಭಾವವೂ ಕಡಮೆಯಾಗಿದೆ.
- ಕ್ರಿಯಾಶೀಲ ಸಂಸದ ಧ್ರುವನಾರಾಯಣ ಅವರನ್ನು ಮಣಿಸಲು ಸಾಧ್ಯವೇ?
ಧ್ರುವನಾರಾಯಣ ಅವರು ಹಿಂದೆ ಮಾಡಲಾದ ಅಭಿವೃದ್ಧಿ ಕಾರ್ಯಗಳಿಗೆ ಮತ್ತೇ ಚಾಲನೆ ನೀಡುವ ಮೂಲಕ ಮತ್ತು ಕೇಂದ್ರದಿಂದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂದು ಪ್ರಚಾರಗಿಟ್ಟಿಸಿಕೊಂಡು ಕ್ರಿಯಾಶೀಲರಾಗಿದ್ದಾರೆಯೇ ಹೊರತು. ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವಂತೆ ಯಾವುದೇ ಕೆಲಸವಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದರೂ ತಪ್ಪಿತಸ್ಧರ ವಿರುದ್ಧ ಕ್ರಮ ಕೈಗೊಂಡ ಉದಾಹರಣೆಯೇ ಇಲ್ಲ. ಶಾಸಕರಾಗಿದ್ದಾಗ ಇದ್ದ ಕ್ರಿಯಾಶೀಲತೆ ಸಂಸದರಾದ ಮೇಲೆ ಇಲ್ಲವಾಗಿದೆ.
- ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಅಷ್ಟಾಗಿ ಇಲ್ಲವಲ್ಲ?
ಹಿಂದಿನ ಚುನಾವಣೆಯಲ್ಲಿ ಇರಲಿಲ್ಲ. ಈ ಬಾರಿ ಎಚ್.ಡಿ. ಕೋಟೆಯಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ಟಿ.ನರಸೀಪುರದಲ್ಲಿ ಅಲ್ಪಮತಗಳ ಅಂತರದಿಂದ ಸೋತಿದ್ದಾರೆ. ಹನೂರು ಮತ್ತು ನಂಜನಗೂಡು ಕ್ಷೇತ್ರದಲ್ಲಿ ಎರಡನೇ ಸ್ಧಾನ ಪಡೆದಿದ್ದಾರೆ. ಇದನ್ನು ಗಮನಿಸಿದರೆ ನಮ್ಮ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬುದು ತಿಳಿಯುತ್ತದೆ.
- ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಅವರ ಕಾಲದಲ್ಲಿ ಜಿಲ್ಲೆಯ ಅಭಿವೃದ್ಧಿ ಶಕೆ ಆರಂಭವಾಯಿತು. ಅವರ 20 ತಿಂಗಳ ಆಡಳಿತದಲ್ಲಿ ಜಾರಿಯಾದ ಯೋಜನಗಳು ಮತ್ತು ಬೆಂಗಳೂರು ಚಾಮರಾಜನಗರ ರೈಲು ಯೋಜನೆಗೆ ಮಾಜಿ ಪ್ರಧಾನಿ ದೇವೇಗೌಡರು ಶ್ರಮಿಸಿದ್ದಾರೆ. ಕೇಂದ್ರದ ಮಹತ್ವದ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ನಿಟ್ಟಿನಲ್ಲಿ ನನ್ನನ್ನು ಆಯ್ಕೆ ಮಾಡಬೇಕಿದೆ.
ಈ ಕ್ಷೇತ್ರದಲ್ಲಿ ಮೋದಿ ಅಲೆ ಎಲ್ಲೂ ಕಂಡು ಬರುತ್ತಿಲ್ಲ. ಕಾಂಗ್ರೆಸ್ ಮೇಲೆ ಜನರಿಗೆ ಭ್ರಮನಿರಸನವಾಗಿದೆ. ಹೀಗಾಗಿ ಮತದಾರರು ಜೆಡಿಎಸ್ ಎಡೆಗೆ ಒಲವು ಹೊಂದಿದ್ದು, ನನ್ನ ಗೆಲವು ಖಚಿತ.
- ಎಂ. ಶಿವಣ್ಣ
ದೇವರಾಜು ಕಪ್ಪಸೋಗೆ
Advertisement