ಚಿನ್ನದ ಬೇಟೆಗಾಗಿ ತುರುಸಿನ ಸೆಣಸು

ಕೋಲಾರ ಪ್ರತಿ ಬಾರಿಯೂ ಕಾಂಗ್ರೆಸ್‌ಗೆ ಒಲಿಯುತ್ತ ಬಂದಿದ್ದು, ಭದ್ರ ಕೋಟೆ ಎನಿಸಿದೆ. 6 ...
ಚಿನ್ನದ ಬೇಟೆಗಾಗಿ ತುರುಸಿನ ಸೆಣಸು
Updated on

ಕೋಲಾರ ಪ್ರತಿ ಬಾರಿಯೂ ಕಾಂಗ್ರೆಸ್‌ಗೆ ಒಲಿಯುತ್ತ ಬಂದಿದ್ದು, ಭದ್ರ ಕೋಟೆ ಎನಿಸಿದೆ. 6 ಬಾರಿ ಗೆದ್ದು ಡಬಲ್ ಹ್ಯಾಟ್ರಿಕ್ ಸಾಧಿಸಿರುವ ಕೇಂದ್ರ ಸಚಿವ, ಹಾಲಿ ಸಂಸದ ಕೆ.ಎಚ್. ಮುನಿಯಪ್ಪ ಮರು ಆಯ್ಕೆ ಬಯಸಿದ್ದಾರೆ. ಈ ಗೆಲುವಿನ ಸರಪಳಿಯನ್ನು ತುಂಡರಿಸಲು ಬಿಜೆಪಿಯಿಂದ ಎಂ. ನಾರಾಯಣಸ್ವಾಮಿ ಕಣದಲಿದ್ದಾರೆ. ಜೆಡಿಎಸ್ ಈ ಬಾರಿ ಉದ್ಯಮಿಗೆ ಮಣೆ ಹಾಕಿದ್ದು, ಕೆ. ಕೇಶವ ಅಭ್ಯರ್ಥಿಯಾಗಿದ್ದಾರೆ.


-    ರಾಜ್ಯ ರಾಜಕಾರಣದಿಂದ ದೂರ ಸರಿಯುತ್ತಿರುವುದಕ್ಕೆ ಕಾರಣವೇನು?
    ರಾಜ್ಯ ರಾಜಕಾರಣದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ, ನಾಲ್ಕು ಬಾರಿ ಶಾಸಕನಾಗಿದ್ದೇನೆ. 30 ವರ್ಷಗಳಿಂದ ಕೋಲಾರ ಲೋಕಸಭೆ ಕ್ಷೇತ್ರವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಜನತೆಯ ಅಭಿವೃದ್ಧಿಗೆ ಬದಲಾಗಿ ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಕೆ.ಎಚ್.ಮುನಿಯಪ್ಪ ಅವರಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.
   ಮುನಿಯಪ್ಪನವರ ಬಗ್ಗೆ ನಿಮಗೆ ಏಕ್ಕಿಷ್ಟು ಕೋಪ?
    ಮುನಿಯಪ್ಪನವರೊಂದಿಗೆ ಯಾವುದೇ ವೈಯುಕ್ತಿಕ ದ್ವೇಷವಿಲ್ಲ. ಆದರೆ, ತಮ್ಮ ಸ್ವಾರ್ಥಕ್ಕಾಗಿ ಬೇರೆಯವನ್ನು ರಾಜಕೀಯವಾಗಿ ತುಳಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ತೊರೆಯಲು ಅವರೇ ಕಾರಣ.
-    2008 ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಗೆಲ್ಲಿಸಿರುವಾಗ 'ಅಪರೇಷನ್ ಕಮಲ'ಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದು ಸರಿಯೇ?
    ನಿಜ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕನಾಗಿದ್ದೆ. ಆದರೆ, ಮುನಿಯಪ್ಪ ಕ್ಷೇತ್ರದಲ್ಲಿ ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಕಿರುಕುಳ ನೀಡಿದ್ದರಿಂದ ಪಕ್ಷ ಬಿಡಬೇಕಾಯಿತು. ಬಿಜೆಪಿಯವರು ನನಗೆ ರಾಜಕೀಯ ಶಕ್ತಿ ತುಂಬಿದರು.1
-    ಬಿಜೆಪಿ ಸೇರಲು 19.80 ಕೋಟಿ ಕಿಕ್‌ಬ್ಯಾಕ್ ಪಡೆದಿರುವುದಾಗಿ ಮಾಲೂರು ಮಾಜಿ  ಶಾಸಕ ಕೃಷ್ಣಯ್ಯ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರಲ್ಲ?
    ಉಪ ಚುನಾವಣೆ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ ಮುಖಂಡರು 30 ಕೋಟಿ ಪಡೆದಿದ್ದಾರೆಂದು ಆರೋಪಿಸಿದ್ದರು. ನಾನು ಭ್ರಷ್ಟನಾಗಿದ್ದರೆ ಜನ ಏಕೆ ನನ್ನನ್ನು ಗೆಲ್ಲಿಸುತ್ತಿದ್ದರು. ಈಗ 19.80 ಕೋಟಿ ಅಂತ ಹೇಳುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಆರೋಪ ಮಾಡುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ.
-    ಮುನಿಯಪ್ಪ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತಿರಾ?
    ಹೌದು. ಶಾಶ್ವತವಾದ ಯಾವುದೇ ಕೆಲಸ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿ ವಾಜಪೇಯಿ ಅವರ ಕಾಲದ್ದು. ರೇಲ್ವೆ ಯೋಜನೆ ಜಾಫರ್ ಷರೀಫ್ ಕೊಡುಗೆ, ರೇಲ್ವೆ ಕೋಚ್‌ಗೆ ಇನ್ನೂ ಭೂಮಿ ಮಂಜೂರು ಆಗಿಲ್ಲ. ಚುನಾವಣೆಗಾಗಿ ಆತುರಾತುರವಾಗಿ ಶಂಕುಸ್ಥಾಪನೆ ಮಾಡಿಸಿದ್ದಾರೆ. ಎತ್ತಿನಹೊಳೆಗೆ ವಿರೋಧವಿಲ್ಲ. ಆದರೆ ನಮ್ಮ ಸರ್ಕಾರವಿದ್ದಾಗ ರೂಪಿಸಿದ ಯೋಜನೆಯ ಸ್ವರೂಪವನ್ನು ಹಾಳು ಮಾಡಿದ್ದಾರೆ.

ಮುನಿಯಪ್ಪನವರು ಆರು ಬಾರಿ ಸಂಸದರಾಗಿದ್ದವರು, ಕುತಂತ್ರ ರಾಜಕಾರಣದಿಂದ ಗೆದ್ದಿದ್ದಾರೆ. ಆದರೆ, ಕ್ಷೇತ್ರಕ್ಕೆ ಅವರಿಂದ ಏನಾದರೂ ಪ್ರಯೋಜನವಾಗಿದೆಯೇ?
ಅವರಿಗೆ ಈ ಬಾರಿ ಕಾಂಗ್ರೆಸ್‌ನವರೇ ಕೈ ಕೊಡಲಿದ್ದಾರೆ.
- ಎಂ. ನಾರಾಯಣ ಸ್ವಾಮಿ

---
-    7ನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ, ಮತದಾರರ ಪ್ರತಿಕ್ರಿಯೆ ಹೇಗಿದೆ?
    ಈ ಬಾರಿ ನಾನು ಸ್ಪರ್ಧಿಸಲು ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರ ಒತ್ತಾಯವೇ ಕಾರಣ. ಕ್ಷೇತ್ರದ ಸ್ಥಿತಿಗತಿ, ಜನರ ನಾಡಿ ಮಿಡಿತ ಚೆನ್ನಾಗಿ ಗೊತ್ತಿದೆ. ಮತದಾರರು ನನ್ನನ್ನು ಮತ್ತೊಮ್ಮೆ ಸಂಸತ್ತಿಗೆ ಆಯ್ಕೆ ಮಾಡಲು ಕಾತುರರಾಗಿದ್ದಾರೆ.
-    ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿರುವ ನೀವು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು?
    30 ವರ್ಷಗಳ ಅವಧಿಯಲ್ಲಿ ನನ್ನ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಸಾಕಷ್ಟು ಕೆಲಸ ಮಾಡಿಸಿದ್ದೇನೆ. ಅನುದಾನ ಸದ್ಬಳಕೆಯಲ್ಲಿ ಮುಂಚೂಣಿಯಲ್ಲಿದ್ದೇನೆ. ಯುಪಿಎ 1 ಮತ್ತು 2ರಲ್ಲಿ ಸಚಿವನಾಗಿ ಬೆಂಗಳೂರಿನಿಂದ ಮುಳಬಾಗಿಲುವರೆಗೆ ರಾಷ್ಟ್ರೀಯ ಹೆದ್ದಾರಿ, ಕೋಲಾರ-ಚಿಕ್ಕಬಳ್ಳಾಪುರ ನಡುವೆ ರೈಲು ಮಾರ್ಗ, ಚಿನ್ನದ ಗಣಿ ಪುನರಾರಂಭಕ್ಕೆ ಪ್ರಯತ್ನ, ಶ್ರೀನಿವಾಸಪುರದಲ್ಲಿ ರೇಲ್ವೆ ಕೋಚ್, ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ, ಉದ್ಯೋಗ ಮೇಳದ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ, ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಾಯ ಹೀಗೆ ಹತ್ತಾರು ಶಾಶ್ವತವಾದ ಕಾರ್ಯಗಳಾಗಿವೆ.0
-    ಪ್ರತಿಸ್ಪರ್ಧಿಗಳನ್ನು ಎದುರಿಸಲು ಸಾಧ್ಯವಿಲ್ಲದೆ ಮ್ಯಾಚ್‌ಫಿಕ್ಸಿಂಗ್ ಮೂಲಕ ಸಮಯ ಸಾಧಕ ರಾಜಕಾರಣ ಮಾಡುತ್ತಿದ್ದಾರೆಂಬ ಆರೋಪವಿದೆಯಲ್ಲ?
    ಇದು ಶುದ್ಧ ಸುಳ್ಳು, ಕೈಲಾಗದವರು ಮೈ ಪರಚಿಕೊಂಡರೆಂಬಂತೆ ಮತದಾರರ ವಿಶ್ವಾಸ, ಆಶೀರ್ವಾದ ಗಳಿಸಲಾಗದವರು ಈ ರೀತಿ ಆರೋಪ ಮಾಡುತ್ತ ಬರುತ್ತಿದ್ದಾರೆ. ಆದರೆ, ಪ್ರತಿ ಬಾರಿಯೂ ಧರ್ಮಕ್ಕೆ ಜಯ ಸಿಗುತ್ತಲ್ಲೇ ಇದೆ.
-    ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ?
    ಪಕ್ಷಕ್ಕೆ ನನ್ನ ಕೊಡುಗೆ ಇರುವುದರಿಂದಲೇ ಹೈಕಮಾಂಡ್ ಮತ್ತೆ ಅಭ್ಯರ್ಥಿಯನ್ನಾಗಿ ಮಾಡಿದೆ. 10 ವರ್ಷ ಮಂತ್ರಿಯಾಗಿದ್ದೇನೆ. ಪಕ್ಷಕ್ಕೆ ವಲಸೆ ಬಂದು ತಮ್ಮ ಬೇಳೆ ಬೇಯಲಿಲ್ಲವೆಂದು ಹೊರ ಹೋಗಿರುವವರಿಂದ ಪಾಠ ಕಲಿಯಬೇಕಾಗಿಲ್ಲ.
-    ಈ ಬಾರಿ ನಿಮ್ಮ ಮುಂದಿರುವ ಸವಾಲುಗಳು ಏನು?
    ಸಂಸದನಾಗಿ, ಸಚಿವನಾಗಿ ನನ್ನ ಇತಿ ಮಿತಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿರುವುದರಿಂದ ಸವಾಲುಗಳು ಏನೇ ಎದುರಾದರೂ ನಿಭಾಯಿಸುತ್ತೇನೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ನನಗೆ ಎದುರಾಳಿಗಳೇ. ಪ್ರತಿ ಚುನಾವಣೆಯಲ್ಲೂ ನನ್ನನ್ನು ಸೋಲಿಸಲು ಹರಸಾಹಸ ಮಾಡಿರುವ ಜನರಿಗೆ ಮತದಾರರು ಬುದ್ಧಿ ಕಲಿಸಿದ್ದಾರೆ.

ಯುಪಿಎ ಅಧಿಕಾರಕ್ಕೆ ಬರಲ್ಲ ಎಂಬುದು ಕೇವಲ ಊಹಾಪೋಹವಷ್ಟೇ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಕೇಂದ್ರದ ಮೂಲಕ ಹೆಚ್ಚಿನ ಸಹಾಯ ಪಡೆಯುತ್ತೇನೆ, ಕುಡಿಯುವ ನೀರು, ಉದ್ಯೋಗಕ್ಕೆ ಹೆಚ್ಚಿನ ಅದ್ಯತೆ ನೀಡುವೆ.
- ಕೆ. ಎಚ್. ಮುನಿಯಪ್ಪ

---
-     ಉದ್ಯಮಿಯಾಗಿರುವ ನೀವು ರಾಜಕಾರಣಕ್ಕೆ ಎಂಟ್ರಿ ನೀಡಲು ಕಾರಣ?
    ಹಣ ಮತ್ತು ಅಧಿಕಾರಕ್ಕಾಗಿ ರಾಜಕೀಯ ಪ್ರವೇಶ ಮಾಡಿಲ್ಲ. 30 ವರ್ಷಗಳಿಂದ ಕೋಲಾರ ಕ್ಷೇತ್ರ ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಯಾವುದೇ ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡದಿರುವುದರಿಂದ ಬೇಸತ್ತು ಚುನಾವಣೆಗೆ ಸ್ಪರ್ಧಿಸಿದ್ದೇನೆ.
-     ಯಾವ ಮಾನದಂಡದ ಮೇಲೆ ನಿಮಗೆ ಟಿಕೆಟ್ ನೀಡಲಾಗಿದೆ?
    ಚುನಾವಣೆಯಲ್ಲಿ ಗೆಲ್ಲಬೇಕಾದರೆ ವ್ಯಕ್ತಿಯ ವರ್ಚಸ್ಸು ಮಾತ್ರವಲ್ಲದೆ, ಹಣದ ಅವಶ್ಯಕತೆಯೂ ಮುಖ್ಯ. ಈವರೆಗೆ ನನ್ನಂತಹ ಅಭ್ಯರ್ಥಿ ಸಿಕ್ಕಿರಲಿಲ್ಲ. ಮುನಿಯಪ್ಪನವರನ್ನು ಸೋಲಿಸುವ ಧೈರ್ಯ, ಆರ್ಥಿಕ ಶಕ್ತಿ ನನ್ನಲ್ಲಿ ಇದೆ.
-     ನಾನು ಕೋಲಾರ ಕೇಶವ ಅಂತ ಹೇಳಿಕೊಂಡಿದ್ದೀರಿ, ಜಿಲ್ಲೆಗೆ ನಿಮ್ಮ ಕೊಡುಗೆ ಏನು?
    ನಿಜ. ನಾನು ಕೋಲಾರದವನಾಗಿ ಈವರೆಗೆ ಹೆಚ್ಚಿನ ಸಹಾಯ ಮಾಡಲಾಗಿಲ್ಲ. ಉದ್ಯಮಿಯಾಗಿ ಕೆಲವರಿಗೆ ಕೆಲಸ ನೀಡಿದ್ದೇನೆ. ಅಧಿಕಾರ ಇದ್ದರೆ ಏನಾದರೂ ಗುರುತರವಾದ ಸಾಧನೆ ಮಾಡಬಹುದೆಂಬ ಆಸೆ ನನ್ನದು. ಈ ಚುನಾವಣೆಯಲ್ಲಿ ಗೆದ್ದರೆ ಪ್ರತಿಯೊಂದು ಕುಟುಂಬ ಆರ್ಥಿಕವಾಗಿ ಸದೃಡಗೊಳ್ಳುವಂಥ ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತೇನೆ.
-     ನಿಮ್ಮ ಸಂಸ್ಥೆಯ ಮೂಲಕ ನಡೆದಿರುವ ಕೆಲವು ಅಕ್ರಮಗಳನ್ನು ಮುಚ್ಚಿ ಹಾಕಲು ಎಂಪಿ ಆಗಲು ಬಯಸುತ್ತಿದ್ದೀರಿ ಎಂಬ ಆರೋಪ ಇದೆಯಲ್ಲ?
    ಸುಳ್ಳು. ನಾನು ಉದ್ಯಮಿಯಾಗಿ ರಾಜ್ಯದ ಅನೇಕ ಕಡೆ ಭೂಮಿ ಖರೀದಿ ಮಾಡಿರುವುದು ನಿಜ. ಸಂಸ್ಥೆಯಿಂದ ನೀಡಿರುವ ಕೆಲವು ಚೆಕ್‌ಗಳು ಬೌನ್ಸ್ ಆಗಿರುವ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾಪಮತ್ರದೊಂದಿಗೆ ಸಲ್ಲಿಸಿರುವ ಅಫಿಡಿವಿಟ್‌ನಲ್ಲಿ ನನ್ನ ಮೇಲೆ ಇರುವ ಪ್ರಕರಣಗಳನ್ನು ಉಲ್ಲೇಖಿಸಿದ್ದೇನೆ.
-     ನಿಮ್ಮ ಬಳಿ ಹಣ ಇರುವುದಕ್ಕೆ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಿದ್ದಾರೆ?
    ನಿಜ. ನನ್ನ ಬಳಿ ಹಣವಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಶಕ್ತಿ ಇರುವುದರಿಂದಲೇ ನನಗೆ ಟಿಕೆಟ್ ನೀಡಿದ್ದಾರೆ. ಚುನಾವಣಾ ಆಯೋಗ ನಿಗದಿಪಡಿಸಿರುವ 70 ಲಕ್ಷ ಖರ್ಚು ಮಾಡುವ ಧೈರ್ಯ, ಸಾಮರ್ಥ್ಯ ಇರುವುದರಿಂದ ಟಿಕೆಟ್ ನೀಡಲಾಗಿದೆ. ಹಣ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟ.

ಮುನಿಯಪ್ಪರನ್ನು ನಾನು ಸೋಲಿಸಲ್ಲ. ಮತದಾರರೇ ಸೋಲಿಸುತ್ತಾರೆ.   ಯಾವ  ರೈತರಿಗೂ ನಾನು ಮೋಸ ಮಾಡಿಲ್ಲ. ಬದಲಾವಣೆಗಾಗಿ  ಮತದಾರರು ಈ ಬಾರಿ ಜೆಡಿಎಸ್ ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ. ಬಿಜೆಪಿ ಆಟ ನಡೆಯಲ್ಲ.
- ಕೆ. ಕೇಶವ


ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com