ಬೆಂ. ಗ್ರಾಮಾಂತರ: ಇಲ್ಲಿ ಜನ ಯಾರ ಪರ?

ರಾಮನಗರ, ಬೆಂಗಳೂರಿನ ಕೆಲವು ಭಾಗ, ತುಮಕೂರಿನ ಕುಣಿಗಲ್ ಸೇರಿ ಆಗಿರುವ ಬೆಂಗಳೂರು..
ಬೆಂ. ಗ್ರಾಮಾಂತರ: ಇಲ್ಲಿ ಜನ ಯಾರ ಪರ?
Updated on

ರಾಮನಗರ, ಬೆಂಗಳೂರಿನ ಕೆಲವು ಭಾಗ, ತುಮಕೂರಿನ ಕುಣಿಗಲ್ ಸೇರಿ ಆಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದೆ. ಕಳೆದ ಬಾರಿಯ ಉಪ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮತ್ತೆ ಕಣದಲ್ಲಿದ್ದಾರೆ. ಅವರಿಗೆ ಪ್ರಬಲ ಎದುರಾಳಿ ಪಕ್ಷ ಜೆಡಿಎಸ್‌ನಿಂದ ಹೊಸ ಮುಖ ಆರ್. ಪ್ರಭಾಕರ ರೆಡ್ಡಿ ಸ್ಪರ್ಧೆಯೊಡ್ಡಿದ್ದಾರೆ. ಬಿಜೆಪಿಯಿಂದ ಪಿ. ಮುನಿರಾಜುಗೌಡ ಕೂಡಾ ಪೈಪೋಟಿಗೆ ಸಜ್ಜಾಗಿದ್ದಾರೆ.

-    ಚಿಕ್ಕಬಳ್ಳಾಪುರಕ್ಕೆಯಿಂದ ಕುಮಾರಸ್ವಾಮಿ ಸ್ಪರ್ಧೆ ನಿಮಗಿಲ್ಲಿ ತೊಡಕಾಗದೆ?
    ಸ್ಪರ್ಧೆಗೆ ಕುಮಾರಸ್ವಾಮಿ ಸುತಾರಾಂ ಸಿದ್ಧರಿರಲಿಲ್ಲ. ಪಕ್ಷದ ತೆಕ್ಕೆಗೆ ಇನ್ನೊಂದು ಕ್ಷೇತ್ರವನ್ನು ಹಾಕಿಕೊಳ್ಳಲು ಅಲ್ಲಿನ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಭಾಕರರೆಡ್ಡಿ ನೆಪಮಾತ್ರ. ಇಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಪ್ರಾಬಲ್ಯ ಸಾಕಷ್ಟಿದ್ದು, ಅವರೇ ಅಭ್ಯರ್ಥಿ ಎನ್ನುವಂತೆ ಚುನಾವಣೆ ನಡೆಸುತ್ತೇವೆ.
-    ಮತದಾರರಿಗೆ ನಿಮ್ಮ ಭರವಸೆಗಳು ಏನು?
    ಕೇಂದ್ರದಲ್ಲಿ ಈ ಬಾರಿ ತೃತೀಯ ರಂಗದ ಸರ್ಕಾರ ರಚನೆ ನಿಶ್ಚಿತವೆಂದು ಮಾಧ್ಯಮಗಳ ಸಮೀಕ್ಷೆಗಳೇ ಹೇಳಿವೆ. ಹೀಗಾಗಿ ದೇವೇಗೌಡರು ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಒಂದೊಮ್ಮೆ ನನಗೆ ಅವಕಾಶ ಸಿಕ್ಕರೆ ಕೇಂದ್ರದಿಂದ ಹೇರಳ ಅನುದಾನ ತಂದು, ಸಮಗ್ರ ಕ್ಷೇತ್ರಾಭಿವೃದ್ಧಿಗೆ ಶ್ರಮಿಸುವೆ. ಸವಲತ್ತುಗಳನ್ನು ಜನತೆಗೆ ಮುಟ್ಟಿಸಿ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಆಶಯದಂತೆ ಜನಪರ ಕೆಲಸ ಮಾಡುವೆ ಎನ್ನುವ ಭರವಸೆ ನೀಡುತ್ತೇನೆ.
-    ಬೆಂ.ಗ್ರಾಮಾಂತರದಲ್ಲಿ ಡಿಕೆಶಿ ಪ್ರಭಾವದ ನಡುವೆಯೂ ನಿಮ್ಮ ಗೆಲುವು ಸಾಧ್ಯವೇ?
    ಯುದ್ಧಕ್ಕೆ ಇಳಿದಾಗಿದೆ. ಶತ್ರು ಸೈನ್ಯಕ್ಕೆ ಬೆನ್ನು ತೋರಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಸರ್ಕಾರ ಮತ್ತು ಡಿಕೆಶಿ ಪ್ರಭಾವ ಇಲ್ಲಿ ನಡೆಯದೆನ್ನುವುದಕ್ಕೆ ಅನೇಕ ನಿದರ್ಶನಗಳಿವೆ. ನಾನು ಸಾವನ್ನು ಸ್ವೀಕರಿಸುತ್ತೇನೆಯೇ ಹೊರತು ಸೋಲನ್ನು ಸಹಿಸೆನು. ಕಳೆದ ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಪಿತೂರಿಯಿಂದ ನಮ್ಮ ಪಕ್ಷಕ್ಕೆ ಸೋಲಾಗಿದೆ. ಈ ಬಾರಿ ಗೆದ್ದು, ಕ್ಷೇತ್ರವು ಜೆಡಿಎಸ್‌ನ ಭದ್ರಕೋಟೆ ಎನ್ನುವುದನ್ನು ಸಾಬೀತುಪಡಿಸುತ್ತೇನೆ.
-    ವಿಧಾನಸಭೆಗೆ ಸ್ಪರ್ಧಿಸಿದ್ದಾಗ ಸ್ವಪಕ್ಷೀಯರೇ ನಿಮ್ಮ ಕಾಲೆಳೆದರು. ಈಗ್ಯಾವ ಲೆಕ್ಕಾಚಾರ?
    ನಮ್ಮ ಪಕ್ಷಕ್ಕೆ ಒಂದಲ್ಲಾ ನಾಲ್ಕು ಶಕ್ತಿಗಳಿವೆ. ಮೊದಲನೆಯದಾಗಿ ಭಗವಂತನ ಶಕ್ತಿ ಮತ್ತು ಅನುಗ್ರಹವಿದೆ. ಇಡೀ ಕ್ಷೇತ್ರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಶಕ್ತಿ, ಸಾಧನೆಗಳು, ಪಕ್ಷನಿಷ್ಟೆ ಕಾರ್ಯಕರ್ತರ ಪಡೆಯ ಬಲ, ಶ್ರೀರಕ್ಷೆಯಿದೆ. ಇನ್ನು, ಬೆಂ.ದಕ್ಷಿಣ ಮತ್ತು ಆನೇಕಲ್ ವಿಧಾನಸಭೆ ಕ್ಷೇತ್ರಗಳಲ್ಲಿ ನನ್ನದೇ ಆದ ಶಕ್ತಿಯೂ ಕೆಲಸ ಮಾಡಲಿದೆ. ಇವಿಷ್ಟು ನನ್ನ ಗೆಲುವಿಗೆ ಸಾಕೆಂದು ಭಾವಿಸಿದ್ದೇನೆ.


ಕನ್ನಡಿಗ ಎಚ್.ಡಿ.ದೇವೇಗೌಡರು ಈಗಾಗಲೇ ಒಮ್ಮೆ ಪ್ರಧಾನಿಯಾಗಿದ್ದಾರೆ. ಇನ್ನೊಮ್ಮೆ ಅವರಿಗೆ ಪ್ರಧಾನಿ ಆಗುವ ಅವಕಾಶವಿದೆ. ಮತದಾರರು ನನಗೆ ನೀಡುವ ಒಂದೊಂದು ಮತವೂ ದೇವೇಗೌಡರಿಗೆ ನೀಡಿದಂತೆಯೇ. ಹೀಗಾಗಿ ನಾನು ಪರಿಚಿತ, ಅಪರಿಚಿತ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
- ಆರ್. ಪ್ರಭಾಕರರೆಡ್ಡಿ
---

-    ಜೆಡಿಎಸ್ ಕಾಂಗ್ರೆಸ್ ಜಿದ್ದಾಜಿದ್ದಿನ ನಡುವೆ ನಿಮಗೆ ಗೆಲುವಿನ ನಿರೀಕ್ಷೆ ಇದೆಯೇ?
    ಇಲ್ಲಿ ಒಮ್ಮೆ ಬಿಜೆಪಿ ಗೆದ್ದಿದ್ದು, ನಾಲ್ಕು ಬಾರಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಪ್ರಮುಖ ಪಕ್ಷವೊಂದರ ಅತ್ಯಂತ ಕಿರಿಯ ಅಭ್ಯರ್ಥಿ ನಾನಾಗಿದ್ದು, ಯುವ ಸಮುದಾಯದ ಅರ್ಹ ಪ್ರತಿನಿಧಿ ಎನಿಸಿಕೊಂಡಿದ್ದೇನೆ. ಇದು, ಯಾವುದೋ ಒಂದು ಕ್ಷೇತ್ರದ ಚುನಾವಣೆ ಎನ್ನುವುದಕ್ಕಿಂತ ದೇಶದ ಕುರುಕ್ಷೇತ್ರ. ಯುವ ಸಮುದಾಯದ ಜತೆಗೆ ನರೇಂದ್ರ ಮೋದಿ ಪ್ರಧಾನಿ ಆಗಬೇಕ್ಕೆನ್ನುವ ಲಕ್ಷಾಂತರ ಮತದಾರರ ಆಶೀರ್ವಾದದಿಂದ ನನ್ನ ಗೆಲುವು ಸಾಧ್ಯ.
-    ಮತದಾರರ ಮನ ಗೆಲ್ಲಲು ನಿಮ್ಮ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳೇನು?
    ನರೇಂದ್ರ ಮೋದಿ ನಮ್ಮ ಪಕ್ಷಕ್ಕೆ ದೊಡ್ಡ ಅಸ್ತ್ರ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ವಂಶಪಾರಂಪರ್ಯ ಮತ್ತು ಕುಟುಂಬ ರಾಜಕಾರಣ, ಡಿಕೆಶಿ ಸಹೋದರರ ದಬ್ಬಾಳಿಕೆ, ಕುಮಾರಸ್ವಾಮಿ ಕ್ಷೇತ್ರಾಂತರ, ಯುಪಿಎ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಕ್ಷೇತ್ರವನ್ನು ಕಾಡುತ್ತಿರುವ ಕುಡಿಯುವ ನೀರು ಸಹಿತ ಜ್ವಲಂತ ಸಮಸ್ಯೆಗಳು ಇನ್ನುಳಿದ ಅಸ್ತ್ರಗಳಾಗಿವೆ. ಅವನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳಲಾಗುವುದು.
-    ನಗರದಲ್ಲಿ ಮೇಲುಗೈ ಆಸೆ ಇದ್ರೂ, ಗ್ರಾಮೀಣದಲ್ಲಿ ಹಿನ್ನಡೆ ಭೀತಿ ಇದೆಯಾ?
    ಬಿಜೆಪಿಗೆ ಗ್ರಾಮೀಣ ಭಾಗದಲ್ಲೂ ಸಾಂಪ್ರದಾಯಿಕ ಮತದಾರರಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕನಕಪುರ, ಮಾಗಡಿ, ಚನ್ನಪಟ್ಟಣದಲ್ಲಿ ಕೋಟ್ಯಂತರ ರೂ. ವೆಚ್ಚದ ಯೋಜನೆಗಳು ಜಾರಿಯಾಗಿವೆ. ಹೇಗೂ ಕುಮಾರಸ್ವಾಮಿ ಕ್ಷೇತ್ರಾಂತರದಿಂದ ಜೆಡಿಎಸ್ ಸೈನಿಕರು ಶಸ್ತ್ರ ತ್ಯಜಿಸಿದ್ದಾರೆ. ಕಾಂಗ್ರೆಸ್ ಕಟ್ಟಾ ವಿರೋಧಿಗಳಾಗಿರುವ ಜೆಡಿಎಸ್ ಮತದಾರರು ಇಲ್ಲಿ ನಮ್ಮನ್ನೇ ಬೆಂಬಲಿಸುತ್ತಾರೆ. ಇದರೊಂದಿಗೆ ಗ್ರಾಮಾಂತರದಲ್ಲೂ ನಮ್ಮದೇ ಮೇಲುಗೈ.
-    ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಿಮ್ಮ ಮುಂದಿರುವ ಯೋಜನೆಗಳೇನು?
    ಬಿಜೆಪಿ ಸರ್ಕಾರ ಬಂದರೆ ಗಂಗಾ-ಕಾವೇರಿ ನದಿಗಳ ಜೋಡಣೆ ಸಾಧ್ಯವಾಗುತ್ತದೆ. ಅದರಿಂದ ಇಲ್ಲಿನ ಜಲಕ್ಷಾಮ ನಿವಾರಿಸಲಾಗುವುದು. ಗುಡಿ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆಯೊಂದಿಗೆ ಔದ್ಯೋಗಿಕ ಕ್ಷೇತ್ರಕ್ಕೆ ಒತ್ತು, ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವುದು, ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಸೌಲಭ್ಯ ನನ್ನ ಮುಂದಿರುವ ಪ್ರಮುಖ ಯೋಜನೆಗಳು.

ನಮ್ಮದು ಸಾಮೂಹಿಕ ನಾಯಕತ್ವದ ಪಕ್ಷ. ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ರಾಮಚಂದ್ರಗೌಡ, ನಾರಾಯಣಸ್ವಾಮಿ, ಎಂ.ಕೃಷ್ಣಪ್ಪ ಪಕ್ಷವನ್ನು ಮುನ್ನಡೆಸಲಿದ್ದಾರೆ. ಬಿಜೆಪಿಯು ಈ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿದ್ದು, ಗೆಲುವಿಗೆ ರಣತಂತ್ರ ರೂಪಿಸಿದೆ.
- ಪಿ. ಮುನಿರಾಜುಗೌಡ
----

-    ನಿಮಗೇ ಏಕೆ ಮತ ನೀಡಬೇಕು?
    ಸಿಕ್ಕಿದ್ದು ಏಳೇ ತಿಂಗಳ ಅವಕಾಶ. ಜನರ ಮಧ್ಯೆ ಇದ್ದು ಸಮಸ್ಯೆಗಳಿಗೆ ಸ್ಪಂದಿಸಿರುವೆ. ನರೇಗಾ ಸಹಿತ ಸವಲತ್ತುಗಳನ್ನು ಜನತೆಗೆ ತಲುಪಿಸಿದ್ದೇನೆ. ಸಂಸದರ ನಿಧಿ ಸಮರ್ಪಕ ಹಂಚಿಕೆ, ಹೇಮಾವತಿ ಮತ್ತು ಶಿಂಷಾದಿಂದ ಕೆರೆಗಳನ್ನು ತುಂಬಿಸುವ ಯೋಜನೆಗೆ ಮಂಜೂರಾತಿ ಸೇರಿದಂತೆ ಅನೇಕ ಸಾಧನೆಗಳಿವೆ.
-    ಮತ್ತೆ ಗೆದ್ದರೆ ನಿಮ್ಮ ಗುರಿ ಮತ್ತು ಆದ್ಯತೆಗಳು ಏನು?
    ಎಲ್ಲ ಕೆರೆಗಳನ್ನು ತುಂಬಿಸಿ, ಅಂತರ್ಜಲ ಹೆಚ್ಚಿಸುವ ಮೂಲಕ ತೀವ್ರವಾಗಿ ಕಾಡುತ್ತಿರುವ ಕುಡಿಯುವ ನೀರಿನ ಬವಣೆ ನಿವಾರಣೆ ನನ್ನ ಗುರಿ. ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಲಾಗುವುದು. ಉದ್ಯೋಗ ಹುಡುಕಿಕೊಂಡು ನಗರಕ್ಕೆ ವಲಸೆ ಹೋಗುವವರ ತಡೆಗೆ ಆದ್ಯತೆ ನೀಡಲಾಗುವುದು.
-    ಉಪ ಚುನಾವಣೆಯಲ್ಲಿ ನೇರ ಸ್ಪರ್ಧೆ ಇತ್ತು. ಈಗ ತ್ರಿಕೋನ ಸ್ಪರ್ಧೆಯಿಂದ ತೊಡಕುಂಟೇ?
    ಖಂಡಿತ ಇಲ್ಲ. ಪಕ್ಷೇತರರು ಸೇರಿದಂತೆ ಎಲ್ಲರನ್ನೂ ಪ್ರತಿಸ್ಪರ್ಧಿಗಳೆಂದೇ ಪರಿಗಣಿಸಿ, ಅವರ ತಂತ್ರ ಮತ್ತು ದೌರ್ಬಲ್ಯಗಳನ್ನು ಅರಿತು ಚುನಾವಣೆ ಮಾಡುವುದು ನಮಗೆ ಗೊತ್ತಿದೆ. ನೇರ, ತ್ರಿಕೋನ, ಚತುಷ್ಕೋನದ ಚಿಂತೆ ನನಗಿಲ್ಲ. ಮತದಾರರು ಕ್ರಿಯಾಶೀಲ ಸಂಸದನನ್ನು ಉಳಿಸಿಕೊಳ್ಳಲು ಈಗಾಗಲೇ ನಿರ್ಧರಿಸಿದ್ದಾರೆ.
-    ನರೇಂದ್ರ ಮೋದಿ ಅಲೆ ಈ ಕ್ಷೇತ್ರದಲ್ಲೂ ಪ್ರಭಾವ ಬೀರಿ, ನಿಮಗೆ ತೊಡಕಾಗುವುದೇ?
     ಗ್ರಾಮೀಣ ಭಾಗದಲ್ಲಿ ಮೋದಿ ಅಲೆ ಇಲ್ಲ. ಅವರ ಆಟ ನಡೆಯೊಲ್ಲ. ಯಾವುದೇ ದೇಶ, ರಾಜ್ಯದ ಪ್ರಗತಿಯನ್ನು ಅಲ್ಲಿನ ಶಿಕ್ಷಣ ಮತ್ತು ಕೃಷಿ ಕ್ಷೇತ್ರದ ಸಾಧನೆಗಳಿಂದ ಅಳೆಯಬೇಕು. ಮೋದಿ ಆಡಳಿತದ ಗುಜರಾತ್ ಅವೆರಡೂ ಕ್ಷೇತ್ರಗಳಲ್ಲಿ ಇನ್ನೂ ಮೊದಲ ಸ್ಥಾನಕ್ಕೆ ಬಂದಿಲ್ಲ. ಹೀಗಾಗಿ ದೇಶದ ಬದಲಾವಣೆ ಅವರಿಂದ ಹೇಗೆ ಸಾಧ್ಯ? ಎನ್ನುವುದನ್ನು ಮತದಾರರಿಗೆ ನಾವಾಗಲೇ ಮನವರಿಕೆ ಮಾಡಿಕೊಟ್ಟಿದ್ದೇವೆ.
-    ಕುಮಾರಸ್ವಾಮಿ ಕ್ಷೇತ್ರಾಂತರ ಕುರಿತು ನಿಮ್ಮ ವ್ಯಾಖ್ಯಾನ ಏನು?
     ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ನನಗೊಂದು ಅವಕಾಶ ಕಲ್ಪಿಸಿದ್ದಕ್ಕೆ ಅವರಿಗೆ ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಈ ಕ್ಷೇತ್ರದಲ್ಲಿ ಇರಲಿ ಅಥವಾ ಹೊರಗೆ ಹೋಗಲಿ ಅದರ ಚಿಂತೆ ನಮಗಿಲ್ಲ. ಅವರು ಎಲ್ಲೇ ಇದ್ರೂ ನಮ್ಮ ವಿರೋಧಿಯೇ. ಹಾಸನದ ಕುಮಾರಸ್ವಾಮಿ ರಾಮನಗರದ ನೇತಾರ ಹೇಗಾಗುತ್ತಾರೆ ಡಿ.ಕೆ.ಶಿವಕುಮಾರ್ ಅವರೇ ಈ ಜಿಲ್ಲೆಯ ನಾಯಕರು.

ನನ್ನ ಮೇಲಿನ ಪ್ರಕರಣಗಳು ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕಿದೆಯೇ ಹೊರತು ವಿಪಕ್ಷಗಳ ನಾಯಕರಿಂದಲ್ಲ. ನಮ್ಮ ವಿರೋಧಿಗಳು ಮೊದಲು ಅವರ ಮನೆ ತೂತು ಮುಚ್ಚಿಕೊಂಡು, ನಂತರ ಬೇರೆಯವರ ಬಗ್ಗೆ ಮಾತನಾಡಲಿ.
- ಡಿ.ಕೆ. ಸುರೇಶ್


ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com