

ಹರಿಯಾಣದ ಹತ್ತು ಲೋಕಸಭೆ ಕ್ಷೇತ್ರಗಳಿಗೆ ಇಂದು ಚುನಾವಣೆ. 2009ರಲ್ಲಿ ಇಲ್ಲಿನ ಒಂಬತ್ತು ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ವಿಕ್ರಮವನ್ನೇ ಮೆರೆದಿತ್ತು. ಉಳಿದ ಒಂದು ಸ್ಥಾನ ಹರಿಯಾಣ ಜನಹಿತ ಕಾಂಗ್ರೆಸ್‌ನ ಪಾಲಾಗಿತ್ತು. ಸಮೀಕ್ಷೆ ಹಾಗೂ ಪತ್ರಿಕೆಗಳ ಜನಮತ ಸಂಗ್ರಹವನ್ನೇ ನಂಬುವುದಾದರೆ ಈ ಬಾರಿ ಅಲ್ಲಿನ ಪರಿಸ್ಥಿತಿ ಸರಿಯಾಗಿ ಉಲ್ಟಾ ಹೊಡೆಯಲಿದೆ. ಹಿಂದಿನ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಬಿಜೆಪಿ ಈ ಬಾರಿ ಹರಿಯಾಣದ ಫೆವರಿಟ್! ಕಾಂಗ್ರೆಸ್ ಅಲ್ಲಿ ಅತಿ ಕಳಪೆ ಪ್ರದರ್ಶನ ತೋರಲಿದೆ ಅನ್ನೋದು ಸಮೀಕ್ಷೆಗಳ ಮಾತು.
ಬಿಜೆಪಿ ಮತ್ತು ಹರ್ಯಾಣ ಜನಹಿತ ಕಾಂಗ್ರೆಸ್‌ನ ಮೈತ್ರಿ ಹತ್ತರಲ್ಲಿ ಐದು ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದಿರುವ ಎನ್‌ಡಿಟಿವಿ ಸಮೀಕ್ಷೆ, ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ನೀಡಿದೆ. ಚೌತಾಲಾ ಕುಟುಂಬ ಹಿಡಿತದ ಪಕ್ಷ ಇಂಡಿಯನ್ ನ್ಯಾಷನಲ್ ಲೋಕದಳ ಇನ್ನೆರಡು ಸ್ಥಾನಗಳನ್ನು ಬಾಚಿಕೊಳ್ಳಬಹುದು ಎನ್ನಲಾಗಿದೆ. ದೆಹಲಿ ಸನಿಹದಲ್ಲೇ ಇರುವ ಈ ರಾಜ್ಯದಲ್ಲಿ ತನ್ನ ಜಾದೂ ಮಾಡಲು ಬಯಸಿರುವ ಆಪ್‌ನ ಕತೆಯೇನು? ಆಮ್‌ಆದ್ಮಿಯ 'ದೆಹಲಿ ದರ್ಬಾರ್'ನ ನಂತರ ಅದರ ಜನಪ್ರಿಯತೆ ಕುಸಿದಿದ್ದು, ಹರಿಯಾಣದಲ್ಲಿ ಖಾತೆ ತೆರೆಯುವ ಸಾಧ್ಯತೆಗಳು ಕ್ಷೀಣ ಎಂಬ ಅಭಿಪ್ರಾಯವಿದೆ. ಲೋಕ್‌ನೀತಿ, ಸಿಎಸ್‌ಡಿಎಸ್-ಐಬಿಎನ್‌ಗಳ ಜನವರಿ- ಮಾರ್ಚ್ ಅವಧಿಯ ಸಮೀಕ್ಷೆಯಲ್ಲಿ ಬಿಜೆಪಿ ಮೈತ್ರಿಗೆ ಶೇಕಡವಾರು ಮತಪ್ರಮಾಣ ಹೆಚ್ಚಿರುವುದನ್ನು ಸಾರಲಾಗಿದೆ. ಈ ಸಮೀಕ್ಷೆ ಪ್ರಕಾರ ಹರಿಯಾಣದಲ್ಲಿ ನಾನಾ ಪಕ್ಷಗಳು ಈ ಬಾರಿ ಗಳಿಸಬಹುದಾದ ಶೇಕಡ ಮತಪ್ರಮಾಣ ಹೀಗಿದೆ- ಬಿಜೆಪಿ ಹಾಗೂ ಎಚ್‌ಜೆಸಿ: 36, ಕಾಂಗ್ರೆಸ್ 30, ರಾಷ್ಟ್ರೀಯ ಲೋಕದಳ 16, ಇತರರು 11, ಆಪ್ 7. (ಎಲ್ಲವೂ ಶೇಕಡಗಳಲ್ಲಿ)
ಈ ಸಮೀಕ್ಷೆಗಳ ವಿಷಯ ಹಾಗಿರಲಿ. ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಎಲ್ಲವೂ ತಿರುವುಮುರುವಾಗಿ ಬಿಜೆಪಿ ಮೈತ್ರಿ ಲಾಭ ಮಾಡಿಕೊಳ್ಳುವಂತೆ ಸೂಚನೆಗಳು ಕಾಣುತ್ತಿರುವುದರ ಹಿಂದೆ ಹಲವು ಸರ್ಕಸ್ಸುಗಳಿವೆ. ಚುನಾವಣೆಯ ಕಣದಲ್ಲಿ ಬಿಜೆಪಿ ತನ್ನ ಸಾಧ್ಯತೆಗಳನ್ನು ಪ್ರಖರವಾಗಿರಿಸಿಕೊಂಡಿರುವುದಕ್ಕೆ ಮೊದಲ ಶ್ರೇಯಸ್ಸು ಸಲ್ಲಬೇಕಿರುವುದು 'ಮರಕೋತಿ'ಯಾಟಕ್ಕೆ! ಬಹುಶಃ ಮೋದಿ ಅಲೆಯೂ ನಂತರದಲ್ಲಿ ಬರುತ್ತದೆ. ಹತ್ತು ಸ್ಥಾನಗಳಲ್ಲಿ ಎಂಟರಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ, ಉಳಿದೆರಡನ್ನು ತನ್ನ ಮೈತ್ರಿ ಎಚ್‌ಜೆಸಿಗೆ ನೀಡಿದೆ. ತಮಾಷೆ ಎಂದರೆ ಬಿಜೆಪಿ ಸ್ಪರ್ಧಿಸಿರುವ ಎಂಟು ಸ್ಥಾನಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಸ್ಥಾನ ಗಿಟ್ಟಿಸಿರುವವರು ಕಾಂಗ್ರೆಸ್‌ನಿಂದ ಬಂಡೆದ್ದು ಬಂದವರು. ಇನ್ನು, ಎಚ್‌ಜೆಸಿ ಸ್ಪರ್ಧಿಸುತ್ತಿರುವ ಎರಡು ಸ್ಥಾನದಲ್ಲಿ ಒಂದರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಮಾರ್ಚ್‌ನಲ್ಲಷ್ಟೇ ಕಾಂಗ್ರೆಸ್ ಬಿಟ್ಟವರು. ಬಿಜೆಪಿಯಲ್ಲಿ ಪ್ರಬಲ ವಿರೋಧಗಳಿದ್ದರೂ ಹೀಗೆ ಮರಕೋತಿ ಆಟಕ್ಕೆ ಪ್ರಾಮುಖ್ಯ ನೀಡಿರುವುದು ಜಾಟ್ ಸಮುದಾಯಕ್ಕೆ ಹೊರತಾದ ಮತಗಳನ್ನು ಸೆಳೆಯುವುದಕ್ಕೆ ಎನ್ನುತ್ತಿದ್ದಾರೆ ವಿಶ್ಲೇಷಕರು. ಜಾಟರನ್ನು ಇತರೆ ಹಿಂದುಳಿದ ವರ್ಗಗಳ ಸಾಲಲ್ಲಿ ಸೇರಿಸುವ ಕೇಂದ್ರದ ನಿರ್ಧಾರದಿಂದ ಬೇಸರಗೊಂಡಿರುವ ಮತಗಳನ್ನೆಲ್ಲ ತಾನು ಆಯ್ದುಕೊಳ್ಳುವುದಕ್ಕೆ ಬಿಜೆಪಿ ಮೈತ್ರಿಯ ಹೊಂಚು.
್ಡಹಾಗಾದರೆ ಜಾಟ್ ಸಮುದಾಯದ ಮತಗಳೆಲ್ಲ ಖುಷಿಖುಷಿಯಾಗಿ ಕಾಂಗ್ರೆಸ್‌ಗೆ ಹೋಗಬಹುದಲ್ಲ ಅಂದುಕೊಂಡರೆ, ಆ ಲೆಕ್ಕಾಚಾರವನ್ನು ಕೆಡವಲೆಂದೇ ರಂಗದಲ್ಲಿದೆ ರಾಷ್ಟ್ರೀಯ ಲೋಕದಳ. ಜಾಟ್ ಮತಗಳ ಮೇಲೆ ಬಿಗಿ ಹಿಡಿತವನ್ನೇ ಹೊಂದಿರುವ ಈ ಪಕ್ಷದ ಕತೆಯೂ ಆಸಕ್ತಿಕರವೇ. ಹರಿಯಾಣದಲ್ಲಿ ದಶಕಗಳಿಂದ ಅಧಿಕಾರದ ರುಚಿಯಿಂದ ದೂರವಾಗಿರುವ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ), ಯಾವ ಪ್ರಕಾರದಲ್ಲಾದರೂ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಬೇಕೆಂಬ ಇರಾದೆಯಲ್ಲಿದೆ. ಇದರ ಅಗ್ರಗಣ್ಯ ನಾಯಕ, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಹಾಗೂ ಒಂದೊಮ್ಮೆ ಸಂಸದನಾಗಿದ್ದ ಅವರ ಮಗ ಅಜಯ್ ಚೌತಾಲಾ ಜೈಲಿನಲ್ಲಿದ್ದಾರೆ. ಶಿಕ್ಷಕರ ನೇಮಕ ಹಗರಣದಲ್ಲಿ ತಪ್ಪಿತಸ್ಥರಾಗಿ ಹತ್ತು ವರ್ಷಗಳ ಜೈಲುಶಿಕ್ಷೆಗೆ ಒಳಾಗಾಗಿದ್ದಾರೆ. ಚುನಾವಣೆಯ ಪ್ರಚಾರ ಕಾರ್ಯಗಳೆಲ್ಲ ನೆರವೇರಿದ್ದು ಅಭಯ್ ಚೌತಾಲಾ ನೇತೃತ್ವದಲ್ಲಿ. ಜತೆಗೆ ಓಂ ಪ್ರಕಾಶ್ ಚೌತಾಲರ ಮೊಮ್ಮಗ ದುಶ್ಯಂತ ಚೌತಾಲಾ ಯುವಮತಗಳನ್ನು ಸೆಳೆಯುವುದಕ್ಕೆ ಒಂದಿಷ್ಟು ಸಾಹಸಪಟ್ಟಿದ್ದಾರೆ. 'ಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಿಕೊಂಡು ಉದ್ಯೋಗ ಸೃಷ್ಟಿಸುವುದಕ್ಕೆ ಹೋಗಿದ್ದೇ ನನ್ನ ಅಜ್ಜ ಮತ್ತು ಅಪ್ಪ ಮಾಡಿದ ಅಪರಾಧವೇ' ಎನ್ನುತ್ತ ಮತದಾರರ ಮನಕರಗಿಸುವುದಕ್ಕೆ ಪ್ರಯತ್ನಿಸಿದ್ದಾರೆ.
ಐಎನ್‌ಎಸ್‌ಡಿ ವಿಷಯದಲ್ಲಿ ಇವೆಲ್ಲವಕ್ಕಿಂತ ಕುತೂಹಲಕರವಾಗಿ ಕಾಣುವುದು ಬಿಜೆಪಿ ಜತೆಗಿನ ಅದರ ರೋಮ್ಯಾನ್ಸ್! ರಾಜ್ಯದಲ್ಲಿ ಐಎನ್‌ಎಲ್‌ಡಿಗೆ ಪ್ರಬಲ ವಿರೋಧಿಯಾಗಿರುವ ಎಚ್‌ಜೆಸಿ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆಯಾದ್ದರಿಂದ ಐಎನ್‌ಎಲ್‌ಡಿಯನ್ನು ದೂರವೇ ಇರಿಸಿದೆ. ಆದರೆ, ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ನಮ್ಮ ಬೆಂಬಲದ ಅವಶ್ಯ ಬಿದ್ದರೆ ಚುನಾವಣೆ ನಂತರದಲ್ಲಿ ಅಗತ್ಯವಾಗಿ ನೀಡುತ್ತೇವೆ ಅಂತ ಘೋಷಿಸಿಬಿಟ್ಟಿರುವ ಐಎನ್‌ಎಲ್‌ಡಿ, ಮೋದಿ ಅಲೆಯಲ್ಲಿ ತಾನೂ ಪಾಲುದಾರನಾಗುವ ಯೋಜನೆಯಲ್ಲಿದೆ. ಮೋದಿಯೇ ರ್ಯಾಲಿಯೊಂದರಲ್ಲಿ ಇದನ್ನು ವಿರೋಧಿಸುತ್ತ, 'ಯಾರದೋ ಬೆನ್ನಮೇಲೆ ಸವಾರಿ ಮಾಡುವುದಕ್ಕೆ ಪ್ರಯತ್ನಿಸುತ್ತಿರುವಿರೇಕೆ? ಬಿಜೆಪಿ ಪರ ಇರುವ ಮತದಾರರು ಐಎನ್‌ಎಲ್‌ಡಿಗೆ ಮತ ನೀಡಿ ವ್ಯರ್ಥವಾಗಿಸದಿರಿ' ಎಂದಿದ್ದಾರೆ. ಮಜಾ ನೋಡಿ, ಚುನಾವಣೆ ಕಣದಲ್ಲಿ ಬಿಜೆಪಿ ಮೈತ್ರಿಯ ವಿರುದ್ಧ ಸೆಣೆಸುತ್ತಿದ್ದರೂ ಮೋದಿಜಪ ಐಎನ್‌ಎಲ್‌ಡಿಗೆ ಮುಜುಗರವಾಗಿಯೇ ಇಲ್ಲ. ಇದಕ್ಕೆ ಸಾಥ್ ಕೊಡುವಂತೆ ಪಕ್ಕದ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳದ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‌ರದ್ದು ಐಎನ್ ಎಲ್‌ಡಿ ಪರ ಬ್ಯಾಟಿಂಗ್! ಬಿಜೆಪಿ ಜತೆ ಪಂಜಾಬ್‌ನಲ್ಲಿ ಮೈತ್ರಿ ಹೊಂದಿರುವ ಬಾದಲ್, ಚೌತಾಲಾಗಳ ಪರ ಸಾಕಷ್ಟು ಪ್ರಚಾರ ಮಾಡಿದ್ದಾರೆ. 'ಹಿಸ್ಸಾರ್‌ನಿಂದ ದುಶ್ಯಂತ ಚೌತಾಲರನ್ನು ಗೆಲ್ಲಿಸಿಕೊಟ್ಟಿದ್ದೇ ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅವರನ್ನು ಮಂತ್ರಿಯಾಗಿಸುವ ಹೊಣೆ ನನ್ನದು' ಎಂದಿದ್ದಾರೆ ಬಾದಲ್. ಬಿಜೆಪಿ ಮೈತ್ರಿಯು ಕಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಿದರೆ ಸಾಕು, ಐಎನ್‌ಎಲ್‌ಡಿ ವಿರುದ್ಧ ಕೆಲ ಸ್ಥಾನಗಳನ್ನು ಕಳೆದುಕೊಂಡರೂ ಕೊನೆಗವರ ಬೆಂಬಲ ತನಗೇ ಅಂತ ಸಮಾಧಾನ ಪಟ್ಟುಕೊಳ್ಳಬಹುದಾ? 1999ರಲ್ಲಿ ಬಿಜೆಪಿ-ಐಎನ್‌ಎಲ್‌ಡಿ ಮೈತ್ರಿ ಐದು-ಐದು ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್‌ಗೆ ಶೂನ್ಯ ನೀಡಿತ್ತು.
ಅಕ್ಟೋಬರ್‌ನಲ್ಲಿ ಹರಿಯಾಣ ವಿಧಾನಸಭೆ ಚುನಾವಣೆ ಎದುರಿಸಲಿದೆ. ಲೋಕಸಭೆ ಫಲಿತಾಂಶ ಅದರ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಯಾರೂ ಅಲ್ಲಗಳೆಯುತ್ತಿಲ್ಲ.
-ಚೈತನ್ಯ ಹೆಗಡೆ
Advertisement