ನವದೆಹಲಿ: ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೇರಲಿದ್ದು ಈ ಹಂತದಲ್ಲಿ ಎರಡು ಇದೇ ಪ್ರಥಮ ಎನ್ನುವ ವಿಚಾರಗಳು ಇತಿಹಾಸದ ಪುಟದಲ್ಲಿ ದಾಖಲಾಗಲಿವೆ. ಮೊದಲನೆಯದ್ದು ಚಹಾ ಮಾರುವ ವ್ಯಕ್ತಿಯೊಬ್ಬ ಪ್ರಧಾನಿ ಹುದ್ದೆಗೆ ಏರುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇಂಥ ಚಾರಿತ್ರಿಕ ಸಾಧನೆಯಾದದ್ದು ಇದೇ ಮೊದಲು. ಇದೊಂದು ರೀತಿಯಲ್ಲಿ ಸಾಧನೆಯಾದರೆ ಮತ್ತೊಂದು ವಿಶೇಷವೂ ಇದೆ. ಈ ಹಿಂದಿನ ಪ್ರಧಾನಿಗಳು ಬ್ರಿಟಿಷ್ ಭಾರತದಲ್ಲಿ ಜನಿಸಿದವರಾಗಿದ್ದರು. ಆದರೆ ನರೇಂದ್ರ ಮೋದಿಯವರು ಸ್ವತಂತ್ರ ಭಾರತದಲ್ಲೇ ಜನಿಸಿದವರಾಗಿದ್ದಾರೆ. ಹಿಂದುಳಿದ ವರ್ಗದಿಂದ ಪ್ರಧಾನಮಂತ್ರಿಯಂಥ ಅತ್ಯುನ್ನತ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಮೋದಿ. ಪಕ್ಷದ ವರ್ಚಸ್ಸಿಗಿಂತ ವೈಯಕ್ತಿಕ ವರ್ಚಸ್ಸಿನಿಂದಲೇ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನಂತರ ದೇಶದ ಪ್ರಧಾನಿ ಹುದ್ದೆಗೆ ಏರಿದ ಮೊದಲ ನಾಯಕ ನರೇಂದ್ರ ಮೋದಿಯಾಗಿದ್ದಾರೆ. ಇದರ ಜತೆಗೆ 1984ರ ಬಳಿಕ ಇದೇ ಮೊದಲ ಬಾರಿಗೆ ಒಂದೇ ಪಕ್ಷಕ್ಕೆ ಬಹುಮತ ಲಭಿಸಿದೆ. ಇದರ ಜತೆಗೆ ಐದು ರಾಜ್ಯಗಳಲ್ಲಿ ಬಿಜೆಪಿ ಶೇ.100 ಫಲಿತಾಂಶ ದಾಖಲಿಸಿದೆ.
ವಾಜಪೇಯಿ ಗೆಲವಿನ ಅಂತರ ದಾಟಿದ ರಾಜನಾಥ್‌ಸಿಂಗ್
ಲಖನೌ: ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಅತಿ ಹೆಚ್ಚು ಗೆಲವಿನ ಅಂತರ ಪಡೆದಿದ್ದ ಅಟಲ್ ಬಿಹಾರಿ ವಾಜಪೇಯಿಯವರ ದಾಖಲೆಯನ್ನು ಮುರಿದಿದ್ದಾರೆ. ಒಟ್ಟು 10,06,483 ಮತಗಳಲ್ಲಿ 4,596 ಮತಗಳು ನೋಟಾ ಆಯ್ಕೆಯಡಿಯಿದ್ದವು. ಶೇ. 55.7ರಷ್ಟು ಮತಗಳನ್ನು ರಾಜನಾಥ್ ಸಿಂಗ್ ಬಾಚಿಕೊಂಡರು. 2004ರಲ್ಲಿ 2.72 ಲಕ್ಷ ಮತಗಳ ಅಂತರದಿಂದ ಸಮಾಜವಾದಿ ಪಕ್ಷದ ಮಧು ಗುಪ್ತಾರವರನ್ನು ವಾಜಪೇಯಿ ಸೋಲಿಸಿದ್ದರು. ಶೇ. 56.12, ಎಂದರೆ 2.18 ಲಕ್ಷ ಮತಗಳನ್ನು ವಾಜಪೇಯಿ ಪಡೆದಿದ್ದರು. 1951ರಿಂದ 8 ಬಾರಿ ಲಖನೌನಲ್ಲಿ ಕಣಕ್ಕಿಳಿದ ವಾಜಪೇಯಿ 5 ಬಾರಿ ಗೆಲವು ಸಾಧಿಸಿದ್ದರು. 1998ರಲ್ಲಿ ಶೇ. 57.82 ಮತಗಳನ್ನು ಪಡೆದು ದಾಖಲೆ ಮಾಡಿದ್ದರು ವಾಜಪೇಯಿ. ಈ ದಾಖಲೆಯನ್ನು ರಾಜನಾಥ್ ಇನ್ನೂ ಮುರಿದಿಲ್ಲ. ಶೇಕಡವಾರು ಮತಗಳನ್ನು ಪರಿಗಣಿಸಿದರೆ ಅತಿ ಹೆಚ್ಚು ಮತ ಪಡೆದವರು ಹೇಮಾವತಿ ನಂದನ್ ಬಹುಗುಣ. 1977ರಲ್ಲಿ ಭಾರತೀಯ ಲೋಕ ದಳದ ಟಿಕೆಟ್‌ನೊಂದಿಗೆ ಹೇಮಾವತಿ ಶೇ. 72.99ರಷ್ಟು ಮತ ಪಡೆದಿದ್ದರು.
ಚಾಮ್ಲಿಂಗ್ 5ನೇ ಬಾರಿ ಸಿಎಂ
ಗ್ಯಾಂಗ್ಟೋಕ್: ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಸತತ ಐದನೇ ಬಾರಿ ತಮ್ಮ ಆಡಳಿತಾವಧಿ ಮುಂದುವರಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಮಾಡಿದ್ದ ದಾಖಲೆಯನ್ನು ಪವನ್ ಮುರಿಯಲಿದ್ದಾರೆ. 1977ರ ಜೂನ್ 21ರಿಂದ 2000ರ ನವಂಬರ್ 5ರ ತನಕ ಮುಖ್ಯಮಂತ್ರಿಯಾಗಿದ್ದರು ಬಸು. 32 ಸ್ಥಾನಗಳಲ್ಲಿ 22ರನ್ನು ಗೆದ್ದ ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್ ಶೇ. 55ರಷ್ಟು ಮತ ಪಡೆದಿದೆ. ಪವನ್, ರಂಗಂಗ್-ಯಂಗಂಗ್ ಮತ್ತು ನಾಮ್ಚಿ-ಸಿಂಘಿತಾಂಗ್ ಕ್ಷೇತ್ರಗಳಿಂದ ಗೆಲವು ಸಾಧಿಸಿದ್ದಾರೆ. 1994ರ ಡಿಸೆಂಬರ್ 12ರಂದು ಅಧಿಕಾರ ಸ್ವೀಕರಿಸಿದ್ದ ಪವನ್ ಹೊಸ ದಾಖಲೆ ಮಾಡಲಿದ್ದಾರೆ. ಈ ಮಧ್ಯೆ, ಪಕ್ಷದ ಲೋಕಸಭಾ ಅಭ್ಯರ್ಥಿ ಪಿ.ಡಿ. ರಾಯ್ ವಿಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಟೆಕ್ ನಾಥ್ ಢಾಕಲ್‌ರವರನ್ನು 42,000 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪೂರ್ವ ಮೈತ್ರಿ ತಂದಿತು ಲಾಭ
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎಗೆ ಹೆಚ್ಚಿನ ಸ್ಥಾನಗಳು ಲಭ್ಯವಾಗದಿದ್ದರೆ ತಮ್ಮ ತಮ್ಮ ರಾಜ್ಯಗಳ ಬೇಡಿಕೆ ಮುಂದಿಟ್ಟುಕೊಂಡು 'ಚೌಕಾಶಿ' ಮಾಡಲು ಕೆಲ ಪಕ್ಷಗಳು ಮುಂದಾಗಿದ್ದು ಹಳೆಯ ಕತೆ. ಆದರೆ ಕೆಲ ಪ್ರಾದೇಶಿಕ ಪಕ್ಷಗಳು ಚುನಾವಣೆಗಿಂತ ಮೊದಲೇ ಎನ್‌ಡಿಎ ಸೇರಿಕೊಂಡು ಹೆಚ್ಚಿನ ಶೇಕಡವಾರು ಮತ ಮತ್ತು ಹೆಚ್ಚಿನ ಸ್ಥಾನಗಳನ್ನು ಗಳಿಸಿವೆ. ಕಳೆದ ಚುನಾವಣೆಯಲ್ಲಿ ಸೋತು ಮೂಲೆ ಸೇರಿದ್ದ ರಾಮ್‌ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಮೋದಿ ನಾಯಕತ್ವ ಒಪ್ಪಿಕೊಂಡು ಎನ್‌ಡಿಎಗೆ ಸೇರ್ಪಡೆಯಾಯಿತು. 12 ವರ್ಷಗಳ ಹಿಂದೆ ಬಿಜೆಪಿ ಮೈತ್ರಿಯಿಂದ ದೂರ ಸರಿದಿದ್ದ ಟಿಡಿಪಿ ಮತ್ತೆ ಮೈತ್ರಿ ಬಯಸಿತು. ಇದರಿಂದಾಗಿಯೇ ತೆಲಂಗಾಣದಲ್ಲಿ ತೃಪ್ತಿ ಎನಿಸಬಹುದಾದ ಸ್ಥಾನಗಳನ್ನು ಗೆದ್ದಿತು ಮತ್ತು ಸೀಮಾಂಧ್ರದಲ್ಲಿ ಚಂದ್ರಬಾಬು ನಾಯ್ಡು ಗದ್ದುಗೆ ಹಿಡಿಯುವಂತಾಯಿತು. ಮಹಾರಾಷ್ಟ್ರದಲ್ಲಿ ಬಿಜೆಪಿ ಕರ್ನಾಟಕ ಮೂಲದ ರಾಜು ಶೆಟ್ಟಿ ಅವರ ಸ್ವಾಭಿಮಾನಿ ಶೇತ್ಕಾರಿ ಸಂಘಟನೆ ಜತೆಗೆ, ಉತ್ತರಪ್ರದೇಶದಲ್ಲಿ ಅಪ್ನಾದಳ, ಉಪೇಂದ್ರ ಖುಶ್ವಾಹ ಅವರ ಆರ್‌ಎಲ್‌ಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಇದರಿಂದಾಗಿ ಬಿಜೆಪಿಗೆ ಹೆಚ್ಚುವರಿ ಸ್ಥಾನವೂ ಲಭ್ಯವಾಯಿತು. ತಮಿಳುನಾಡಿನಲ್ಲಿ ನಟ ವಿಜಯಕಾಂತ್ ಅವರ ಎಂಡಿಎಂಕೆ ಮತ್ತು ಪಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ಪಿಎಂಕೆಗೆ ಒಂದು ಸ್ಥಾನ ಲಭ್ಯವಾಗಿದೆ.
ಸೋತರೂ ಸರ್ಕಾರಕ್ಕೆ ಜೇಟ್ಲಿ
ನವದೆಹಲಿ: ಅಮೃತಸರದಿಂದ ಲೋಕಸಭೆಗೆ ಸ್ಪರ್ಧಿಸಲು ಹೋಗಿ ಬಿಜೆಪಿ ನಾಯಕ ಅರುಣ್ ಜೇಟ್ಲಿ ಸೋತಿರಬಹುದು. ಆದರೂ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಪ್ರಮುಖ ಖಾತೆಯನ್ನು ವಹಿಸಲಿದ್ದಾರೆ. ಮೂಲಗಳ ಪ್ರಕಾರ ಮೋದಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ಜೇಟ್ಲಿ ಅವರಿಗೇ ನೀಡುವ ಸಾಧ್ಯತೆ ಹೆಚ್ಚಾಗಿದೆ. ಚುನಾವಣೆಯಲ್ಲಿ ಸೋತರೂ ಗೆದ್ದರೂ ಜೇಟ್ಲಿ ಅವರ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪಕ್ಷ ಮುಂದಾಗಿದೆ ಎಂದಿದ್ದಾರೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್. ಇದೇ ಅಭಿಪ್ರಾಯವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ವ್ಯಕ್ತಪಡಿಸಿದ್ದಾರೆ. ಅಮೃತಸರದಿಂದ ಚುನಾವಣೆಯಲ್ಲಿ ಸೋತರು ಎಂಬ ಕಾರಣಕ್ಕೆ ಜೇಟ್ಲಿ ಸೇವೆಯನ್ನು ಪಡೆದುಕೊಳ್ಳದೇ ಇರುವುದಕ್ಕಾಗದು ಎಂದು ಹೇಳಿದ್ದಾರೆ.
Advertisement