
ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ಭಾರತದ ಪ್ರಧಾನಿಯಾಗಿ ತಾವು ತಮ್ಮ ಶಕ್ತ್ಯಾನುಸಾರ ಸೇವೆ ಸಲ್ಲಿಸಿರುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಗೆ ಸಲ್ಲಿಸುವುದಕ್ಕೂ ಮುನ್ನ ದೇಶವನ್ನುದ್ದೇಶಿಸಿ ಮಾಡಿದ ಕೊನೆ ಭಾಷಣದಲ್ಲಿ ಅವರು, ಅಭಿವೃದ್ಧಿಗೊಳ್ಳುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ ಭಾರತ ಪ್ರಮುಖ ರಾಷ್ಟ್ರವನ್ನಾಗುವಂತೆ ಮಾಡಿದ್ದು ಯುಪಿಎ ಸರ್ಕಾರದ ಎಂದೂ ಮರೆಯಲಾಗದ ಸಾಧನೆ ಎಂದು ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡರು.
ಭಾಷಣದ ವೇಳೆ ಅಲ್ಲಲ್ಲಿ ಭಾವುಕರಾದಂತೆ ಮಾತನಾಡಿದ ಸಿಂಗ್, ಎತ್ತರಕ್ಕೆ ಬೆಳೆಯಲು ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದರು.
- ಕೊನೆಯ ಸಂಪುಟ ಸಭೆ
ಔಪಚಾರಿಕವಾಗಿ ಕೊನೆಯ ಸಂಪುಟ ಸಭೆ ನಡೆಸಿದ ಸಿಂಗ್, ಲೋಕಸಭೆ ವಿಸರ್ಜನೆ ಹಾಗೂ ಸಂಪುಟದ ರಾಜಿನಾಮೆ ನಿರ್ಧಾರ ಕೈಗೊಂಡರು. ನಂತರ, ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ, ರಾಜಿನಾಮೆ ಸಲ್ಲಿಸಿ, 15ನೇ ಲೋಕಸಭೆ ವಿಸರ್ಜಿಸಲು ಮನವಿ ಮಾಡಿದರು.
- ಹಂಗಾಮಿ ಸರ್ಕಾರ
ಪ್ರಧಾನಿ ಸಿಂಗ್ ರಾಜಿನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದು, ಹೊಸ ಸರ್ಕಾರ ರಚನೆಯಾಗುವವರೆಗೂ ಸಿಂಗ್ ಅವರು ಹಂಗಾಮಿ ಪ್ರಧಾನಿಯಾಗುವಂತೆ ಮುಖರ್ಜಿ ಸೂಚಿಸಿದ್ದಾರೆಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.
Advertisement