ಮೋದಿ ಹಿಂದಿನ ಶಕ್ತಿಗಳು

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಗ ಪ್ರಧಾನಿ ಹುದ್ದೆಯನ್ನು ಅಲಂಕರಿಸುವ...
ಮೋದಿ ಹಿಂದಿನ ಶಕ್ತಿಗಳು
Updated on

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಗ ಪ್ರಧಾನಿ ಹುದ್ದೆಯನ್ನು ಅಲಂಕರಿಸುವ ಮಟ್ಟಿಗೆ  ಬೆಳೆಯಬೇಕಾದರೆ ಅದರ ಹಿಂದೆ ಅನೇಕ ಮಂದಿಯ ಅವಿರತ ಶ್ರಮವಿದೆ. ಈ ಟೀಂ ಇಲ್ಲದೆ ಮೋದಿ ಈ ಮಟ್ಟಿಗಿನ ಸಾಧನೆ ಮಾಡಲು ಸಾಧ್ಯವೇ ಇಲ್ಲ. ಮೋದಿಯ ಬೆನ್ನೆಲುಬೇ ಆಗಿರುವ ಈ ಟೀಂ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
 ಅಮಿತ್ ಶಾ
ಗುಜರಾತ್‌ನ ಮಾಜಿ ಗೃಹ ಸಚಿವ. ರಾಜಕೀಯ ವಿಚಾರಕ್ಕೆ ಸಂಬಂಧಿಸಿ ಮೋದಿ ಅವರ ನಂಬಿಕಾರ್ಹ ಗೆಳೆಯ, ತಂತ್ರಗಾರಿಕೆ ನಿಪುಣ. ಪ್ಲ್ಯಾಸ್ಟಿಕ್ ಹಾಗೂ ಮುದ್ರಣ ವ್ಯವಹಾರ ನಡೆಸುತ್ತಿದ್ದ ಶಾ ಅವರು ಮೋದಿಯನ್ನು ಭೇಟಿಯಾದದ್ದು 1980ರಲ್ಲಿ. ಅಲ್ಲಿಂದ ಇಲ್ಲಿವರೆಗೆ ಈ ಜೋಡಿ ಜತೆಯಾಗಿಯೇ ಕೆಲಸ ಮಾಡುತ್ತಿದೆ. ಶಾ ಅವರು ರಾಜ್ಯ ಚುನಾವಣೆಗೆ ವ್ಯೂಹತಂತ್ರ ರಚಿಸುವುದಷ್ಟೇ ಅಲ್ಲ, ಕೋ-ಆಪರೇಟಿವ್ ಮತ್ತು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಲ್ಲೂ ಪಕ್ಷಕ್ಕೆ ಗೆಲುವಾಗುವಂತೆ ನೋಡಿಕೊಂಡವರು. ಉತ್ತರಪ್ರದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರವನ್ನು ನಿಭಾಯಿಸಿದ ರೀತಿಯನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಅವರಿಗೆ ಗೌರವಾನ್ವಿತ ಪಾತ್ರ ಸಿಗುವುದು ಖಚಿತ. ಸದ್ಯ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಶಾ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಮೋದಿ ವಾರಾಣಸಿ ಕ್ಷೇತ್ರವನ್ನು ಉಳಿಸಿಕೊಂಡರೆ ವಡೋದರಾಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಶಾ ಅವರೇ ಸ್ಪರ್ಧಿಸಲಿದ್ದಾರೆ.
ಮುಂದೇನು?: ಮೋದಿ ಸರ್ಕಾರವನ್ನು ಸೇರುವುದಕ್ಕಿಂತ ಪಕ್ಷದಲ್ಲಿ ದೊಡ್ಡ ಪಾತ್ರ ನಿರ್ವಹಿಸಲು ಶಾ ಹೆಚ್ಚು ಉತ್ಸುಕರಾಗಿದ್ದಾರೆ ಎನ್ನುತ್ತಾರೆ ಅವರ ಆಪ್ತರು. ಬಿಜೆಪಿಯ ಮಹತ್ವಾಕಾಂಕ್ಷೆಯ 'ಗಂಗಾ ಶುದ್ಧಿ'ಯಂಥ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಸರ್ಕಾರದಲ್ಲಿ ಇರಲಿ, ಬಿಡಲಿ ಪಕ್ಷದಲ್ಲಿ ಶಾಗೊಂದು ಪ್ರಮುಖ ಪಾತ್ರ ಇದ್ದೇ ಇದೆ.
 ಕೈಲಾಸನಾಥನ್
ತಮಿಳುನಾಡು ಮೂಲದ ಸಿ. ಕೈಲಾಸನಾಥನ್ ಮೋದಿ ಅವರ ನಂಬಿಕಸ್ಥ, ಗುಜರಾತ್‌ನ ಅತೀ ಪ್ರಭಾವಶಾಲಿ ಅಧಿಕಾರಿ. ಗುಜರಾತ್‌ನಲ್ಲಿ ಮೋದಿ ಸರ್ಕಾರದ ಕೆಲಸ ಕಾರ್ಯಗಳಿಗೆ ಸಂಬಂಧಿಸಿ ಮಹತ್ವದ ನಿರ್ಧಾರ ಇವರದ್ದೆ. ಸಹೋದ್ಯೋಗಿಗಳ ನಡುವೆ ಕೆ.ಕೆ. ಎಂದೇ ಪ್ರಸಿದ್ಧಿಯಾಗಿರುವ ಕೈಲಾಸನಾಥನ್ ಸದ್ಯ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ. ಈ ಹುದ್ದೆಯನ್ನು ಕೆ.ಕೆ. ಅವರಿಗಾಗಿಯೇ ಸೃಷ್ಟಿಸಲಾಗಿದೆ. ಕೆ.ಕೆ. ಅವರು ಮೋದಿ ಹಾಗೂ ಇತರೆ ಅಧಿಕಾರಿಗಳ ನಡುವಿನ ಬೆಸುಗೆಯಾಗಿ ಕೆಲಸ ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ಸಣ್ಣಪುಟ್ಟ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಸಾಧಿಸುವಲ್ಲಿ ಕೆ.ಕೆ. ಪಾತ್ರ ಪ್ರಮುಖ.
ಮುಂದೇನು?: ಕೆ.ಕೆ. ಅವರನ್ನು ಮೋದಿ ಗುಜರಾತ್‌ನಲ್ಲೇ ಉಳಿಸಿಕೊಳ್ಳಲಿದ್ದಾರೆ. ಮುಂದಿನ ಮುಖ್ಯಮಂತ್ರಿಗೆ ಸಲಹೆ, ಸಹಕಾರ ನೀಡುವಂತೆ ಕೇಳಿಕೊಳ್ಳಲಿದ್ದಾರೆ ಎನ್ನುತ್ತಾರೆ ಕೆಲವರು.
 ಪ್ರಶಾಂತ್ ಕಿಶೋರ್
ಅಮೆರಿಕದಲ್ಲಿ ಶಿಕ್ಷಣ ಪಡೆದ ಪ್ರಶಾಂತ್ ಕಿಶೋರ್ ಮೋದಿ ಜತೆಗೆ ಕೆಲಸ ಮಾಡುತ್ತಿರುವ ಯುವ ಉತ್ಸಾಹಿ. ಮೋದಿ ಮುಖ್ಯಮಂತ್ರಿ ಕಚೇರಿಯ ಬ್ಯಾಕ್‌ರೂಂ ಬಾಯ್. 2014ರ ಚುನಾವಣೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೂಪ ನೀಡುವಲ್ಲಿ ಕಿಶೋರ್ ಪಾತ್ರ ಅಪಾರ. ಪ್ರಮುಖ ನೀತಿಗಳಿಗೆ ಸಂಬಂಧಿಸಿ
ಮೋದಿ ಅವರಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಾರೆ ಕಿಶೋರ್. ಇವರಿಂದಾಗಿ ಐಐಟಿ ಶಿಕ್ಷಣ ಪಡೆದ ಅನೇಕ ಯುವಕರು ತಮ್ಮ ಕೆಲಸ ಬಿಟ್ಟು ಮೋದಿ ಟೀಂ ಸೇರಿದ್ದಾರೆ. ಚುನಾವಣೆ ವೇಳೆ ಕೆಲಸ ಮಾಡಿದ್ದಾರೆ.  
ಮುಂದೇನು?: ಬ್ರ್ಯಾಂಡ್ ಮೋದಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
 ತ್ರಿಮೂರ್ತಿಗಳು
ಹಿರೇನ್ ಜೋಶಿ, ರಾಜೇಶ್ ಜೈನ್ ಮತ್ತು ಬಿ.ಜಿ. ಮಹೇಶ್
ಈ ತ್ರಿಮೂರ್ತಿಗಳು ಮೋದಿ ಪ್ರಚಾರಕ್ಕೆ ತಾಂತ್ರಿಕ ಬೆಂಬಲ ನೀಡಿದವರು. ಗುಜರಾತ್ ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಜೋಶಿ ಸ್ಪೆಷನ್ ಡ್ಯೂಟಿ(ಐಟಿ) ಅಧಿಕಾರಿ. ತ್ರೀಡಿ ಪ್ರಚಾರ ಇವರ ಕಲ್ಪನೆಯ ಕೂಸು. ರಾಜೇಶ್ ಜೈನ್ ಮುಂಬೈ ಮತ್ತು ಬಿ.ಜಿ. ಮಹೇಶ್ ಬೆಂಗಳೂರಿನ ಐಟಿ ಉದ್ಯಮಿಗಳು. ಜೋಶಿ ಜತೆಗೂಡಿ ಕೆಲಸ ಮಾಡುವವರು.
ಮುಂದೇನು?: ಜೋಶಿ ಅವರು ಪ್ರಧಾನಿ ಜತೆಗೆ ದೆಹಲಿಗೆ ಹೋಗುವುದು ಖಚಿತ. ಜೈನ್ ಮತ್ತು ಮಹೇಶ್ ಮೋದಿ ಅವರ ಮುಂದಿನ ಕಾರ್ಯಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
 ಕಾನೂನು ಸಲಹೆ ಗಿರೀಶ್ ಸಿ. ಮುರ್ಮು
1985ನೇ ಬ್ಯಾಚ್‌ನ ಐಎಎಸ್ ಅಧಿಕಾರಿ, ಮೋದಿ ಅವರ ಪ್ರಧಾನ ಕಾರ್ಯದರ್ಶಿ ಗುಜರಾತ್ ಸರ್ಕಾರಕ್ಕೆ ಎದುರಾಗುವ ಕಾನೂನು ಅಡೆತಡೆಗಳನ್ನು ನಿವಾರಿಸುವ ಹೊಣೆಗಾರಿಕೆ ಇವರದು. ಮುರ್ಮು ಅವರು ಗಲಭೆಯಿಂದ ಲೋಕಾಯುಕ್ತದ ವರೆಗೆ ಎಲ್ಲ ಸೂಕ್ಷ್ಮ ಕಾನೂನು ವಿಚಾರಗಳ ಮೇಲ್ವಿಚಾರಣೆ ನಡೆಸುತ್ತಾರೆ. ಮುಖ್ಯಮಂತ್ರಿ ಕಚೇರಿಯಲ್ಲಿ ಗೃಹ ಇಲಾಖೆಯ ಮುಖ್ಯಸ್ಥರಾಗಿ ನಗರ ಅಭಿವೃದ್ಧಿ ಮತ್ತು ಆದಾಯಕ್ಕೆ ಸಂಬಂಧಿಸಿದ ವಿಚಾರವನ್ನೂ ನೋಡಿಕೊಳ್ಳುತ್ತಾರೆ.
ಮುಂದೇನು?: ದೆಹಲಿಯಲ್ಲಿ ಮೋದಿ ಅವರನ್ನು ಹಿಂಬಾಲಿಸಬಹುದು.
 ನಿಧಿ ಸಂಗ್ರಹಕಾರ ಸುರೇಶ್ ಪಟೇಲ್
ಗುಜರಾತ್‌ನಲ್ಲಿ ಕಾಕಾ ಆಗಿಯೇ ಹೆಚ್ಚು ಪ್ರಸಿದ್ಧಿ. ಎರಡು ದಶಕಗಳಿಂದ ಕಾಕಾ ಬಿಜೆಪಿಯ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಕಾ ಅವರೇನಾದರೂ ಪಕ್ಷಕ್ಕೆ ನಿಧಿ ನೀಡುವಂತೆ ಕೇಳಿದರೆ ಗುಜರಾತ್‌ನ ಯಾವೊಬ್ಬ ಶ್ರೀಮಂತ ಉದ್ಯಮಿಯೂ ಇಲ್ಲ ಅನ್ನುವುದಿಲ್ಲ. ಕಾಕಾ ಆಡ್ವಾಣಿಗೂ ಆಪ್ತ. ಹಣಕಾಸು ವಿಚಾರಕ್ಕೆ ಸಂಬಂಧಿಸಿ ಮೋದಿ ಅವರು ಸಂಪೂರ್ಣ ವಿಶ್ವಾಸ ಇಟ್ಟುಕೊಂಡಿದ್ದಾರೆ.
 ಸಲಹೆಗಾರ ವಿಜಯ್ ಚೈತೇವಾಲೆ
ಗುಜರಾತ್ ಮೂಲದ ಟೊರೆಂಟ್ ಗ್ರೂಪ್ ಕಂಪನಿಯ ಉಪಾಧ್ಯಕ್ಷ. ನಾಗ್ಪುರದ ಆರೆಸ್ಸೆಸ್ ಕುಟುಂಬ ಮೂಲದವರು. ಮೋದಿ ಅವರು ಅನೇಕ ವಿಚಾರಗಳಿಗೆ ಸಂಬಂಧಿಸಿ ವಿಜಯ್ ಸಲಹೆ ಕೇಳುತ್ತಾರೆ. ಪ್ರಚಾರಾಂದೋಲದ ಅವಧಿಯಲ್ಲಿ ಕೆಲಸ ತ್ಯಜಿಸಿ ದೆಹಲಿಗೆ ಆಗಮಿಸುವಂತೆ ಮೋದಿ ವಿಜಯ್‌ಗೆ ಮನವಿ ಮಾಡಿದ್ದರು.
ಮುಂದೇನು?: ಮೋದಿಗೆ ಹಿಂಬಾಗಿಲ ಸಲಹೆ ಮುಂದುವರಿಸಬಹುದು.
 ಭರತ್‌ಲಾಲ್
ದೆಹಲಿಯಲ್ಲಿರುವ ಗುಜರಾತ್‌ನ ಸ್ಥಾನೀಯ ಆಯುಕ್ತ. ಭರತ್‌ಲಾಲ್ ಅವರು ಕಳೆದ ನಾಲ್ಕು ವರ್ಷಗಳಿಂದ ದೆಹಲಿಯಲ್ಲಿ ಮೋದಿ ಅವರ ಕಣ್ಣು ಮತ್ತು ಕಿವಿಯಾಗಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳ ಜತೆಗೆ ಉತ್ತಮ ಸಂಬಂಧ ಹೊಂದಿರುವ ಭರತ್‌ಲಾಲ್ ಮೋದಿ ಅವರಿಗೆ ಗಂಭೀರ ವಿಚಾರಗಳ ಕುರಿತು ಮಾಹಿತಿ ನೀಡುತ್ತಿರುತ್ತಾರೆ.
ಮುಂದೇನು?: ಪ್ರಧಾನಿ ಕಾರ್ಯಾಲಯ ಸೇರಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com