ಆಶೀರ್ವದಿಸಿದ ಮತದಾರರಿಗೆ ಅಭಿನಂದನೆಗಳು...

ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನೂತನ ಸಂಸದರ ಘೋಷಣೆಯೂ ಆಗಿದೆ...
ಆಶೀರ್ವದಿಸಿದ ಮತದಾರರಿಗೆ ಅಭಿನಂದನೆಗಳು...
Updated on

ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನೂತನ ಸಂಸದರ ಘೋಷಣೆಯೂ ಆಗಿದೆ. ನಾವು ಆರಿಸಿ ಕಳುಹಿಸಿದ ಸಂಸದರು ಹೇಗೆ ಗೆದ್ದರು? ಮುಂದಿನ ಐದು ವರ್ಷ ಅವರ ತಲೆಯಲ್ಲಿರುವ ಯೋಜನೆಗಳೇನು? ಯಾವ ವಿಚಾರಕ್ಕೆ, ಸಮಸ್ಯೆಗೆ ಹೆಚ್ಚು ಆದ್ಯತೆ ನೀಡುತ್ತಾರೆ? ಸ್ಥಳೀಯ ಸಮಸ್ಯೆ ನಿವಾರಣೆಗೆ ಅವರು ಏನು ಮಾಡ್ತಾರೆ? ಜವಾಬ್ದಾರಿಯುತ ಮತದಾರನ ತಲೆಯಲ್ಲಿ ಇಂಥ ಪ್ರಶ್ನೆಗಳು ಏಳುವುದು ಸಹಜ. ಈ ಪ್ರಶ್ನೆಗಳನ್ನು ಕನ್ನಡ ಪ್ರಭ ನಮ್ಮ ನೂತನ ಸಂಸದರ ಮುಂದಿಟ್ಟಾಗ ಅವರು ಕೊಟ್ಟ ಉತ್ತರಗಳನ್ನು ಮತದಾರನ ಮುಂದಿಡುವ ಸಣ್ಣ ಪ್ರಯತ್ನ ಇಲ್ಲಿದೆ.

4 ಪ್ರಶ್ನೆಗಳು
1. ನಿಮ್ಮ ಗೆಲವಿಗೆ ಕಾರಣ?
2. ಕ್ಷೇತ್ರದ ಬಗ್ಗೆ ನಿಮ್ಮ ಆದ್ಯತೆ?
3. ಕ್ಷೇತ್ರದ ಬಗ್ಗೆ ನಿಮ್ಮ ಯೋಜನೆಗಳೇನು?
4. ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಏನು ಮಾಡುತ್ತೀರಿ?

ಎತ್ತಿನಹೊಳೆಗೆ ಆದ್ಯತೆ
ಕೋಲಾರ ಕೆ.ಎಚ್.ಮುನಿಯಪ್ಪ
-ಪಾ.ಶ್ರೀ.ಅನಂತರಾಮ್
ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವುದು, ಸಂಸದನಾಗಿ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವುದು, ಗುಣಾತ್ಮಕ ತೀರ್ಮಾನ ನನ್ನ ಗೆಲವಿಗೆ ಕಾರಣವಾಗಿದೆ.
ಕೋಲಾರ ಮೀಸಲು ಕ್ಷೇತ್ರವಾಗಿದ್ದರೂ ಇಲ್ಲಿ ಎಲ್ಲಾ ವರ್ಗಗಳಲ್ಲೂ ಬಡವರಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ನೇರವಾಗಿ ಜನರ ಕೈ ತಲುಪಿಸುವುದು, ಕೃಷಿ, ಹೈನುಗಾರಿಕೆ, ತೋಟಗಾರಿಕೆ ಅವಲಂಬಿತ ರೈತರಿಗೆ ಕೇಂದ್ರದಿಂದ ಹೆಚ್ಚಿನ ನೆರವು ಕಲ್ಪಿಸುವುದು ನನ್ನ ಪ್ರಥಮ ಆದ್ಯತೆ.
ಯುಪಿಎ ಸರ್ಕಾರದಲ್ಲಿ ಭೂ ಸಾರಿಗೆ, ಹೆದ್ದಾರಿ, ರೇಲ್ವೆ ಹಾಗೂ ಸಣ್ಣ ಕೈಗಾರಿಕೆಗಳ ಸಚಿವನಾಗಿದ್ದಾಗ ಸಾಕಷ್ಟು ಯೋಜನೆ ಮಂಜೂರು ಮಾಡಿಸಲಾಗಿದೆ. ರೇಲ್ವೆ ಕೋಚ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿದೆ. ಚಿನ್ನದ ಗಣಿ ಪುನರಾರಂಭಕ್ಕೆ ಹೊಸ ಸರ್ಕಾರದ ಮೇಲೆ ಒತ್ತಡ ತರುತ್ತೇನೆ.
ಎತ್ತಿನಹೊಳೆ ಯೋಜನೆಗೆ 12500 ಕೋಟಿ ಹಣ ನೀಡಲು ಒಪ್ಪಿದೆ. ಬಯಲು ಸೀಮೆ ಜಿಲ್ಲೆಗಳ ಸಂಸದರು ಒಗ್ಗೂಡಿ ಕೆಲಸ ಮಾಡಿದಲ್ಲಿ ಜ್ವಲಂತ ಸಮಸ್ಯೆ ನಿವಾರಣೆ ಆಗುತ್ತದೆ.

ಬಳ್ಳಾರಿ ಶ್ರೀರಾಮುಲು
ಜಲಾಶಯದ ಹೂಳಿಗೆ ಮುಕ್ತಿ
-ಶಶಿಧರ ಮೇಟಿ
ಮೋದಿಯ ಸಹಕಾರ (ಅಲೆ), ಪ್ರಾಮಾಣಿಕತೆ, ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯಗಳೇ ನನಗೆ ಶ್ರೀರಕ್ಷೆ.
ರೈತರ ವ್ಯವಸಾಯಕ್ಕೆ ಆಧಾರವಾಗಿರುವ ನೀರಾವರಿಗೆ ಆದ್ಯತೆ ನೀಡುತ್ತೇನೆ. ಸ್ಪರ್ಧಾತ್ಮಕ ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುವುದು ನನ್ನ ಎರಡನೇ ಆದ್ಯತೆ.
ಸಾಕ್ಷರತೆಯಲ್ಲಿ ಕ್ಷೇತ್ರ ಶೇ.100ರಷ್ಟು ಪ್ರಗತಿ ಸಾಧಿಸಬೇಕೆಂಬ ಮಹಾಸಂಕಲ್ಪ ನನ್ನದು. ವೈ. ಕಗ್ಗಲ್ ಏತನೀರಾವರಿ ಯೋಜನೆ ಪೂರ್ಣಗೊಳಿಸುವ ಜತೆಗೆ ನೆನಗುದಿಗೆ ಬಿದ್ದಿರುವ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು. ಜಲಾಶಯವಿದ್ದರೂ ಕೆರೆಗಳು ನೀರಿಲ್ಲದೆ ಬಿಕೋ ಎನ್ನುತ್ತಿವೆ. ಇಂಥ ಕೆರೆಗಳಿಗೆ ನೀರುಣಿಸುವ ಶಾಶ್ವತ ಯೋಜನೆಯ ಅನುಷ್ಠಾನ ಮಾಡುವ ಮಹದಾಸೆ ನನ್ನದು.
ಟಿಬಿ ಡ್ಯಾಂನಲ್ಲಿ ಹೂಳಿನ ಪ್ರಮಾಣ ಅಧಿಕವಾಗಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರ ದೊಡ್ಡ ಆತಂಕ. ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿ, ನೀರಾವರಿ ಕಲ್ಪಿಸುವ ಜತೆಗೆ, ಸಮಾಂತರ ಜಲಾಶಯ ಅಥವಾ ಪ್ರವಾಹ ಕಾಲುವೆ ನಿರ್ಮಾಣ ಮತ್ತಿತರ ಇತರ ಪರ್ಯಾಯ ವ್ಯವಸ್ಥೆಗೆ ಪ್ರಯತ್ನ.

ಬಿಜಾಪುರ ರಮೇಶ್ ಜಿಗಜಣಗಿ
ಕುಡಿವ ನೀರಿನ ಸಮಸ್ಯೆಗೆ ಪರಿಹಾರ
-ರುದ್ರಪ್ಪ ಅಸಂಗಿ
ಮೋದಿ ಅಲೆ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅಹೋರಾತ್ರಿ ಶ್ರಮಿಸಿದ್ದು. ವಿರೋಧಿಗಳ ಅಪಪ್ರಚಾರಕ್ಕೆ ಮತದಾರರು ಮರುಳಾಗದೇ ನಾನು ಈವರೆಗೆ ಮಾಡಿದ ಅಭಿವೃದ್ಧಿ ಕಾರ್ಯ ಗಣನೆಗೆ ತಗೆದುಕೊಂಡು ಮತ ಚಲಾಯಿಸಿರುವುದು ತನ್ನ ಗೆಲವಿಗೆ ಕಾರಣ.
ಬಿಜಾಪುರ ಬರದ ನಾಡು. ಕುಡಿಯುವ ನೀರಿಗಾಗಿ ಜನರು ಮಳೆಗಾಲದಲ್ಲೂ ಪರಿತಪಿಸುವಂತಹ ಸ್ಥಿತಿ ಇದೆ. ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಒದಗಿಸಲು ಆದ್ಯತೆ.
ಗ್ರಾಮೀಣ ಪ್ರದೇಶದ ಶೇ.90ರಷ್ಟು ಜನರು ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಮಂಗಳೂರು, ಉಡುಪಿ ಮುಂತಾದ ಕಡೆಗಳಿಗೆ ಕೆಲಸ ಅರಸಿ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಬೃಹತ್ ಉದ್ದಿಮೆಗಳನ್ನು ಜಿಲ್ಲೆಗೆ ತರಲಾಗುವುದು. ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಯೋಜನೆ ಇದೆ.
ಸೊಲ್ಲಾಪುರ- ಗದಗ ಡಬಲ್ ರೈಲು ಮಾರ್ಗ ನಿರ್ಮಾಣ, ಮುಂಬೈ, ದಿಲ್ಲಿಗೆ ನೇರ ರೈಲು ಸೌಲಭ್ಯ ಕಲ್ಪಿಸುವುದು, ಬಿಜಾಪುರ  ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವುದು.

ಕೊಪ್ಪಳ ಕರಡಿ ಸಂಗಣ್ಣ
ಜಿಂಕೆ ಹಾವಳಿ ತಪ್ಪಿಸೋದು ಸವಾಲು
-ಸೋಮರಡ್ಡಿ ಅಳವಂಡಿ
ಗುಜರಾತ್ ಮಾದರಿಯಲ್ಲಿ ದೇಶ ಅಭಿವೃದ್ಧಿಯಾಗಲೆಂದು ಎಲ್ಲರೂ ಮೋದಿ ಬೆಂಬಲಕ್ಕೆ ನಿಂತರು. ಯುಪಿಎ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿಯೂ ಮತದಾರರನ್ನು ಭ್ರಮನಿರಸನ ಮಾಡಿತ್ತು. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶ್ರೀರಾಮುಲು ಬಿಜೆಪಿಗೆ ಮರಳಿದ್ದು.
ರೇಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವುದು, ಕ್ಷೇತ್ರಾದ್ಯಂತ ಶುದ್ಧ ಕುಡಿಯುವ ನೀರು ಒದಗಿಸುವುದು.
ನಾನು ಇದೇ ಮೊದಲ ಬಾರಿಗೆ ಸಂಸದನಾಗಿದ್ದೇನೆ. ಕ್ಷೇತ್ರಕ್ಕೆ ಅನುಕೂಲವಾಗುವ, ಕಾರ್ಯಸಾಧುವಾದ ಯೋಜನೆಗಳನ್ನು ತರುತ್ತೇನೆ. ಕುಡಿಯುವ ನೀರು, ನೀರಾವರಿ ಹಾಗೂ ಮೂಲಸೌಲಭ್ಯಕ್ಕೆ ಒತ್ತು ನೀಡುತ್ತೇನೆ. ಯುವಕರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿ ಮಾಡುವ ಹಂಬಲ ಇದೆ.
ಇದೊಂದು ಸಂದಿಗ್ಧ ಸಮಸ್ಯೆ. ನೀಗಿಸಲು ಹೋದರೆ ಮುದ್ದಿನ ಪ್ರಾಣಿ ಜಿಂಕೆಗೆ ಕುತ್ತು ಬರುತ್ತದೆ. ಹಾಗೆಯೇ ಬಿಟ್ಟರೆ, ರೈತರಿಗೆ ಹಾನಿಯಾಗುತ್ತದೆ. ಜಿಂಕೆಗಳಿಗೆ ಅಪಾಯವಾಗದಂತೆ, ರೈತರನ್ನು ಸಮಸ್ಯೆಯಿಂದ ಹೇಗೆ ಪಾರು ಮಾಡುವುದು ಎಂದು ಯೋಚಿಸಿ, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ತುಮಕೂರು ಎಸ್.ಪಿ.ಮುದ್ದಹನುಮೇಗೌಡ
ನೀರಾವರಿ ಯೋಜನೆಗೆ ಹೆಚ್ಚಿನ ಗಮನ
-ಉಗಮ ಶ್ರೀನಿವಾಸ್
ರಾಜ್ಯ ಸರ್ಕಾರದ ಸಾಧನೆ ಸಿಎಂ ಅವರ ಜನಪ್ರಿಯ ಕಾರ್ಯಗಳು ಮತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಆಶೀರ್ವಾದಿಂದ ನನ್ನ ಗೆಲವು.
ತುಮಕೂರು ಲೋಕಸಭಾ ಕ್ಷೇತ್ರದ ಪರಿಚಯ ನನಗೆ ಚೆನ್ನಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇನೆ.
ಈಗ ಸಂಸದನಾಗಿ ನನ್ನ ಜವಾಬ್ದಾರಿ ಹೆಚ್ಚಿದೆ. ಟೀಕೆ ಟಿಪ್ಪಣಿಗಳಿಗಿಂತ ಕೆಲಸವನ್ನು ಮಾಡಿ ತೋರಿಸುವ ಅಗತ್ಯವಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ, ಯಾರೇ ಪ್ರಧಾನ ಮಂತ್ರಿಯಾಗಲೀ ವಿರೋಧ ಪಕ್ಷದಲ್ಲಿದ್ದುಕೊಂಡೇ ಜಿಲ್ಲೆಗೆ ಬರಬೇಕಾಗಿರುವ ಸವಲತ್ತುಗಳನ್ನು ತರಲು ಪ್ರಯತ್ನಿಸುತ್ತೇನೆ.
ಕ್ಷೇತ್ರದ ಸಮಸ್ಯೆಗಳನ್ನು ಅರಿತು ಏನು ಕೆಲಸ ಆಗಬೇಕೆನ್ನುವುದನ್ನು ಗಮನಿಸಿ ಅದನ್ನು ಮಾಡುತ್ತೇನೆ. ನೀರಾವರಿ, ರೇಲ್ವೆ, ಯೋಜನೆಗಳು, ಎಚ್‌ಎಂಟಿ ಕೈ ಗಡಿಯಾರ ಕಾರ್ಖಾನೆ ಪುನಶ್ಚೇತನ, ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಜತೆಗೆ ಕೇಂದ್ರದ ಅನೇಕ ಯೋಜನೆಗಳನ್ನು ರಾಜ್ಯಕ್ಕೆ ತರುವ ಅಗತ್ಯವಿದೆ.

ಮೈಸೂರು- ಕೊಡಗು ಪ್ರತಾಪ ಸಿಂಹ
ಉದ್ಯೋಗ ಸೃಷ್ಟಿಗೆ ಆದ್ಯತೆ
-ಅಂಶಿಪ್ರಸನ್ನಕುಮಾರ್
ಮೋದಿ ಅಲೆ, ಹೊಸಮುಖ, ನಮೋ ಬ್ರಿಗೇಡ್ ಮತ್ತು ಪಕ್ಷದ ದೊಡ್ಡ ಶ್ರಮ. ದೇಶದ ಜನ ಬದಲಾವಣೆ ಬಯಸಿದ್ದು. ನನ್ನ ಅಂಕಣ ಓದುವ ರಾಜ್ಯದ ಬೇರೆ ಬೇರೆ ಕಡೆ ಇರುವ ವರ್ಗವೂ ಸ್ನೇಹಿತರಿಗೆ, ಬಂಧುಗಳಿಗೆ ವೋಟ್ ಮಾಡಲು ಹೇಳಿದ್ದು.
ಮೈಸೂರು- ಕೊಡಗು ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳು. ಹೀಗಾಗಿ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಉತ್ತಮಪಡಿಸಲು ಯತ್ನ. ಸಾಫ್ಟ್‌ವೇರ್ ಕಂಪನಿಗಳ ಮೂಲಕ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಲು ಯತ್ನ.
ಹುಣಸೂರು, ಪಿರಿಯಾಪಟ್ಟಣ ತಾ. ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ, ಉತ್ತಮ ರಸ್ತೆಗಳು, ಚಾಮುಂಡೇಶ್ವರಿ ಕ್ಷೇತ್ರದ ಜನತೆಗೆ ಕುಡಿಯುವ ನೀರು, ಗ್ರಾಮಾಂತರ ಪ್ರದೇಶಗಳಿಗೆ ಮೂಲ ಸೌಕರ್ಯ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನಲ್ಲಿ ಎರಡು ಕಡೆ 1 ರಿಂದ 10ನೇ ತರಗತಿವರೆಗೆ ಉತ್ತಮ ಶಾಲೆ, ಕೊಡಗಿನ ಜನರಿಗೆ ಡಾ. ಕಸ್ತೂರಿರಂಗನ್ ವರದಿ, ಹೈಟೈನ್ಸನ್ ಮಾರ್ಗದಿಂದ ಆಗುವ ತೊಂದರೆ, ಕಾಫಿ ಬೆಳೆಗಾರರ ಸಮಸ್ಯೆ ನಿವಾರಣೆ.
ಜೋಡಿ ರೈಲು ಮಾರ್ಗ, ವಿಮಾನ ನಿಲ್ದಾಣ ವಿಸ್ತರಣಾ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಹೆಚ್ಚು ಹಣ ಕೊಡಿಸಲು ಪ್ರಯತ್ನ.

ಹಾಸನ ಎಚ್.ಡಿ.ದೇವೇಗೌಡ
ವಿಷಯಾಧಾರಿತ ಹೋರಾಟ
-ದಯಾಶಂಕರ ಮೈಲಿ
ಜನ ನನ್ನ ಮೇಲೆಟ್ಟಿರುವ ಪ್ರೀತಿ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಗೊಂಡ ಕ್ರಮಗಳಿಂದಾಗಿಯೇ ಗೆದ್ದಿದ್ದೇನೆ. ಜಾತಿ, ಮತ ಭೇದವೆಣಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.
ಜಿಲ್ಲೆಯ ಶ್ರೇಯೋಭಿವೃದ್ಧಿ ಜತೆಗೆ ರಾಜ್ಯದ ಪರ ಸಂಸತ್ತಿನ ಒಳ- ಹೊರಗೆ ಹೋರಾಡಿದ್ದೇನೆ. ಮುಂದೆಯೂ ಹೋರಾಡುತ್ತೇನೆ. ವಿಷಯಾಧಾರಿತ ಹೋರಾಟವೇ ನನ್ನ ಧ್ಯೇಯ.
ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆದು ಪರಿಹರಿಸಲು ಚಿಂತಿಸಿದ್ದೇನೆ. ಹಾಸನದಲ್ಲಿ ಕೇಂದ್ರಿಯ ವಿವಿ, ಆಲೂಗಡ್ಡೆ ಸಂಶೋಧನೆ ಕೇಂದ್ರ ಸ್ಥಾಪನೆ, ಹಾಸನ- ಬೆಂಗಳೂರು ರೇಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಕಾರ್ಯ ಪೂರ್ಣಗೊಳಿಸಬೇಕಿದೆ. ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಕ್ಕೂ ಕೇಂದ್ರ, ರಾಜ್ಯದ ಮೇಲೆ ಒತ್ತಡ ಹೇರಬೇಕಿದೆ. ರಾಜ್ಯದ ಅನೇಕ ರೇಲ್ವೆ ಯೋಜನೆಗಳಿಗೆ ಕೇಂದ್ರ ತನ್ನ ಪಾಲಿನ ಹಣ ನೀಡಿಲ್ಲ.
ಅರಸೀಕೆರೆ ತಾಲೂಕಿಗೆ ಕುಡಿವ ನೀರೊದಗಿಸುವ ಹಳೇಬೀಡು- ಮಾದಿಹಳ್ಳಿ ಯೋಜನೆ ಕಾರ್ಯಗತಗೊಳಿಸಲು, ಶಿಕ್ಷಣ ಸಂಸ್ಥೆಗಳಲ್ಲಿ ಮೂಲ ಸೌಲಭ್ಯ ಕೊರತೆ ನಿವಾರಣೆಗೆ ಆದ್ಯತೆ ನೀಡಬೇಕಿದೆ.

ರಾಯಚೂರು ಬಿ.ವಿ. ನಾಯಕ  
ನೀರಾವರಿ ಯೋಜನೆಗೆ ಕ್ರಮ
-ಜಗನ್ನಾಥ ದೇಸಾಯಿ
ಕಾಂಗ್ರೆಸ್ ಕಾರ್ಯಕರ್ತರೆಲ್ಲರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದಕ್ಕೆ ಸಿಕ್ಕ ಗೆಲುವು ಇದು. ತಂದೆ ವೆಂಕಟೇಶ ನಾಯಕ ನಾಲ್ಕು ಬಾರಿ ಇದೇ ಕ್ಷೇತ್ರವನ್ನು ಸಂಸದರಾಗಿ ಪ್ರತಿನಿಧಿಸಿದ್ದರು. ಅವರ ವೈಯಕ್ತಿಕ ವರ್ಚಸ್ಸು ಹಾಗೂ ಕೈಗೊಂಡ ಅಭಿವೃದ್ಧಿ ಕಾರ್ಯಗಳೂ ಚುನಾವಣೆ ವೇಳೆ ಮತಗಳಾಗಿ ಪರಿವರ್ತನೆಯಾದವು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿದ್ದರೂ ನನೆಗುದಿಗೆ ಬಿದ್ದ ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಜಾರಿಗೆ ಅಗತ್ಯ ಅನುದಾನ ಬಿಡುಗಡೆಗೆ ಒತ್ತು ನೀಡುವೆ. ನೀರಾವರಿ, ನಿರ್ಮಾಣ ಹಂತದಲ್ಲಿರುವ ರೇಲ್ವೆ ಯೋಜನೆಗಳಿಗೆ ಹಣ ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡುವೆ.
ನೀರಾವರಿಗೆ, ಅದರಲ್ಲೂ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣಕ್ಕೆ ಹಣ ಕಲ್ಪಿಸಲು ಪ್ರಯತ್ನಿಸುವೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೇಂದ್ರದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಜಾರಿ ಗುರಿ ಇದೆ.
ಗುಳೆ ತಡೆಗೆ ಖಾತ್ರಿ ಯೋಜನೆ ಹೆಚ್ಚು ಪರಿಣಾಮಕಾರಿ. ಆದರೆ ಅದರ ಅನುಷ್ಠಾನದಲ್ಲಾದ ವೈಫಲ್ಯದಿಂದಾಗಿ ಗುಳೆ ನಿಂತಿಲ್ಲ. ಖಾತ್ರಿ ದುರ್ಬಳಕೆ ತಡೆಗೆ ಪ್ರಯತ್ನ.

ದಾವಣಗೆರೆ ಜಿ.ಎಂ. ಸಿದ್ದೇಶ್ವರ
ಕೆರೆ ತುಂಬಿಸಲು ಪ್ರಯತ್ನ
-ನಾಗರಾಜ ಬಡದಾಳ್
ನರೇಂದ್ರ ಮೋದಿ ಅಲೆ, ಬಿ.ಎಸ್. ಯಡಿಯೂರಪ್ಪ ವರ್ಚಸ್ಸಿನ ಜೊತೆಗೆ ಕ್ಷೇತ್ರದ ಸಾವಿರಾರು ಹಳ್ಳಿಗಳನ್ನು ಕಳೆದ ಹತ್ತು ವರ್ಷದಲ್ಲಿ ಸುತ್ತಾಡಿ, ಜನರ ಸಮಸ್ಯೆಗೆ ಸ್ಪಂದಿಸಿದ್ದು. ಕಾರ್ಯಕರ್ತರ ಒಗ್ಗಟ್ಟಿನ ಶ್ರಮದಿಂದ ಗೆಲವು ಸಿಕ್ಕಿದೆ.
ನೀರಿನ ಸಾಕಷ್ಟು ಸಂಪನ್ಮೂಲ ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ ಕೃಷಿಗೆ ಪೂರಕವಾಗಿ ನೀರಾವರಿ ಯೋಜನೆ, ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೆರೆಗಳನ್ನು ತುಂಬಿಸಲು ಒತ್ತು ನೀಡುವೆ. ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆ, ಕೈಗಾರಿಕೆಗಳನ್ನು ಜಿಲ್ಲೆಗೆ ತರುವ ಜೊತೆಗೆ ದಾವಣಗೆರೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿಮಾನ ನಿಲ್ದಾಣ ಸ್ಥಾಪನೆಗೆ ಶ್ರಮಿಸುವೆ.
ಚಿತ್ರದುರ್ಗ-ದಾವಣಗೆರೆ ಮಧ್ಯೆ ರಾಷ್ಟ್ರೀಯ ಹೆದ್ದಾರಿ - 4ರ ಸುವರ್ಣ ಚತುಷ್ಪಥ ಮಾರ್ಗವನ್ನು 6 ಪಥದ ರಸ್ತೆಯಾಗಿ ಮಾರ್ಪಡಿಸಿ, ಮೇಲ್ದರ್ಜೆಗೇರಿಸಬೇಕಾಗಿದೆ.
ದಾವಣಗೆರೆ- ಚಿತ್ರದುರ್ಗ- ತುಮಕೂರು ರೈಲು ಮಾರ್ಗ, ಹರಿಹರ- ಶಿವಮೊಗ್ಗ ರೈಲು ಮಾರ್ಗ ಕಾಲ ಮಿತಿಯೊಳಗೆ ಪೂರ್ಣಗೊಳಿಸಲು ಒತ್ತಡ, ಹರಪನಹಳ್ಳಿ- ಜಗಳೂರು- ಚಿತ್ರದುರ್ಗ ರೈಲು ಮಾರ್ಗದ ಸಮೀಕ್ಷೆ ಮುಗಿದಿದ್ದು, ಅದನ್ನು ಅನುಷ್ಠಾನನಕ್ಕೆ ಯತ್ನ.

ಶಿವಮೊಗ್ಗ ಯಡಿಯೂರಪ್ಪ
ಸಮಗ್ರ ಅಭಿವೃದ್ಧಿಗೆ ಶ್ರಮ
-ಶ್ರೀಕಾಂತ ಭಟ್
ಡಿಸಿಎಂ, ಸಿಎಂ ಆಗಿದ್ದ ಸಂದರ್ಭ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿಯನ್ನು ಜನ ಗುರುತಿಸಿ ಮತ ನೀಡಿದ್ದಾರೆ. ಹಾಗೆಯೇ ರಾಷ್ಟ್ರಾದ್ಯಂತ ಬಿಜೆಪಿ ಪರ ಒಲವು ಇತ್ತು. ಒಟ್ಟಾರೆ ನಾನು ಮಾಡಿದ ಅಭಿವೃದ್ಧಿ ಕೆಲಸವನ್ನು ಪ್ರಾಮಾಣಿಕವಾಗಿ ಒಪ್ಪಿ ಜಾತಿ, ಮತ ಗಣನೆಗೆ ತೆಗೆದುಕೊಳ್ಳದೇ ಮತ ನೀಡಿ ಗೆಲ್ಲಿಸಿದ್ದಾರೆ.
ಒಳ್ಳೆಯ ಅಂತರದಲ್ಲಿ ಗೆಲುವು ಸಾಧಿಸಿದ್ದಾಗಿದೆ. ಇದೀಗ ಜನರ ಋಣ ತೀರಿಸಬೇಕು. ಶಿವಮೊಗ್ಗಕ್ಕೆ ಸೀಮಿತವಾಗದೇ ಇಡೀ ರಾಜ್ಯದ ಗಮನದಲ್ಲಿಟ್ಟುಕೊಂಡು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇನೆ. ನಾಡಿನ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತದೆ.
ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾಗಿ ರೇಲ್ವೆ ಯೋಜನೆ ಗಳು ಜಾರಿಗೊಳ್ಳಬೇಕು, ಅರ್ಧಕ್ಕೆ ನಿಂತ ವಿಮಾನ ನಿಲ್ದಾಣ ಪೂರ್ಣಗೊಳ್ಳಬೇಕು. ಸಾಕಷ್ಟು ಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕಾಗಿದೆ. ಶಿವಮೊಗ್ಗ ಔಟರ್ ರಿಂಗ್‌ರೋಡ್ ಅಭಿವೃದ್ಧಿಪಡಿಸಿದರೆ ಮತ್ತಷ್ಟು ಬೆಳವಣಿಗೆಗೆ ಅನುಕೂಲವಾಗುತ್ತದೆ.
ಬಗರ್‌ಹುಕುಂ ಸಾಗುವಳಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕಾನೂನು ತಿದ್ದುಪಡಿ ತರಬೇಕಾದ ಅಗತ್ಯವಿದೆ. ಖಂಡಿತವಾಗಿ ಪ್ರಯತ್ನಿಸುತ್ತೇನೆ.ಅಡಕೆ ಬೆಳೆಗಾರರ ರಕ್ಷಣೆಗೆ ಖಂಡಿತವಾಗಿ ನಿಲ್ಲುತ್ತೇನೆ.

ಗುಲ್ಬರ್ಗ ಮಲ್ಲಿಕಾರ್ಜುನ ಖರ್ಗೆ
ಸರ್ಕಾರದ ನೆರವು ಕೊಡಿಸ್ತೇನೆ
-ಶೇಷಮೂರ್ತಿ ಅವಧಾನಿ
ನನಗೆ ವೈಯಕ್ತಿಕವಾಗಿ ಸಂತಸವಾಗಿದೆ, ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಜನಾದೇಶ ದೊರಕಿಲ್ಲ, ಇದರಿಂದ ನೋವೂ ಸಹ ಆಗಿದೆ. ಇದೊಂದು ರೀತಿಯಲ್ಲಿ ನನಗೆ ಸಿಹಿ- ಕಹಿ ಸಂದರ್ಭ. ದೇಶಾದ್ಯಂತ ಬಿಜೆಪಿ ಗಾಳಿ ಅಂತೆಲ್ಲ ಇದ್ದರೂ ನಾನು ಕಳೆದೈದು ವರ್ಷದಿಂದ ನನ್ನ ಗುಲ್ಬರ್ಗ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳೇ ನನಗೆ ರಕ್ಷೆಯಾದವು. ಮತದಾರರು ನನ್ನ ಹಿಂದೆ ನಿಂತು ಕೈ ಹಿಡಿದು ಬೆಂಬಲಿಸಿದರು.
ಆಸ್ಪತ್ರೆ, ವೈದ್ಯಕೀಯ ಕಾಲೇಜು ಯೋಜನೆಗಳು, ಕಲಂ 371 (ಜೆ) ಅನುಷ್ಠಾನ, ಬಹುಕೋಟಿ ರುಪಾಯಿ ರೇಲ್ವೆ ಯೋಜನೆಗಳು, ಗುಲ್ಬರ್ಗ ರೇಲ್ವೆ ವಿಭಾಗೀಯ ಕಚೇರಿ, ಯಾದಗಿರಿ ಕೋಚ್ ಫ್ಯಾಕ್ಟರಿಯಂತಹ ಯೋಜನೆಗಳಿಂದ ಜನ ನನ್ನ ಬಗ್ಗೆ ಅಪಾರ ಮೆಚ್ಚುಗೆ ತೋರಿಸಿದ್ದೇ ಗೆಲುವಿಗೆ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ. ಕಲಂ 371 (ಜೆ) ಅನುಷ್ಠಾನದಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಕೇಂದ್ರದ ಗಮನ ಸೆಳೆಯುವ ಮೂಲಕ ನಿವಾರಣೆಗೆ ಯತ್ನಿಸುತ್ತೇವೆ.
ರಾಜ್ಯ ಸರ್ಕಾರದ ನೆರವಿನ ಅಗತ್ಯವಿದ್ದರೆ ದೊರಕುವಂತೆ ಮಾಡುತ್ತೇವೆ. ಹಿಂದುಳಿದವರ ಪ್ರಗತಿಗೆ ಕಲಂ 371 (ಜೆಂ) ಪೂರ್ಣ ಪ್ರಮಾಣದಲ್ಲಿ ಉಪಯೋಗವಾಗುವಂತೆ ಮಾಡುತ್ತೇವೆ.

ಬೆಳಗಾವಿ ಸುರೇಶ್ ಅಂಗಡಿ
ಬೆಳಗಾವಿಗೆ ಬುಲೆಟ್ ರೈಲು
- ಶ್ರೀಶೈಲ ಮಠದ
ಮೋದಿ ಅಲೆ, ಪಕ್ಷದ ನಾಯಕರು, ಕಾರ್ಯಕರ್ತರ ಪರಿಶ್ರಮ. ಆರ್‌ಎಸ್‌ಎಸ್ ಹಿರಿಯರ ಮಾರ್ಗದರ್ಶನ. ಯುವ ಜನಾಂಗ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು.
ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಸಲು, ರಸ್ತೆ ಅಭಿವೃದ್ಧಿಗೆ ಆದ್ಯತೆ. ಜೊತೆಗೆ 2ನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊತ್ತಿರುವ ಬೆಳಗಾವಿಯಲ್ಲಿ ಭದ್ರತಾ ವ್ಯವಸ್ಥೆ ಉನ್ನತೀಕರಣ. ಈ ಸಂಬಂಧ ಕೇಂದ್ರ ಗೃಹ ಸಚಿವರ ಗಮನ ಸೆಳೆದು ಆಂತರಿಕ ಭದ್ರತಾ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಆದ್ಯತೆ.
ಬೆಳಗಾವಿ ಶರವೇಗದಲ್ಲಿ ಬೆಳೆಯುತ್ತಿರುವ ನಗರ. ವಾಹನ ದಟ್ಟಣೆ, ಸಂಚಾರ ದಟ್ಟಣೆಯಿಂದ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ನಗರದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು.
ಬೆಳಗಾವಿ-ಬೆಂಗಳೂರು ನಡುವೆ ಬುಲೆಟ್ ರೈಲು ಸಂಚಾರ ಯೋಜನೆ. ಬೆಳಗಾವಿ- ಬಾಗಲಕೋಟೆ ಹೆದ್ದಾರಿಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಿಸುವ ಯೋಜನೆ.

ಮಂಡ್ಯ ಸಿ.ಎಸ್.ಪುಟ್ಟರಾಜು
ಜನರ ಮಧ್ಯೆ ಇರುತ್ತೇನೆ
-ಕೆ.ಎನ್. ರವಿ
ಇದೊಂದು ಪ್ರಯಾಸದ ಗೆಲವು. ಜನ ಅವಕಾಶ ಕೊಟ್ಟಿದ್ದಾರೆ. ಜನರ ಮಧ್ಯೆ ಇದ್ದು ಸೇವೆ ಮಾಡುವ ಆಶಯ, ಸಂಕಲ್ಪ ಮಾಡಿದ್ದೇನೆ.
ಕೇಂದ್ರ ಸ್ಥಾನ ಮಂಡ್ಯದಲ್ಲಿ ಮನೆ ಇದೆ. ಹೆಚ್ಚು ಇಲ್ಲೇ ಇರುತ್ತೇನೆ. ಜನರ ಮಧ್ಯೆಯೇ ಇದ್ದು ರಾಜಕಾರಣ ಮಾಡು ಎಂದು ನಮ್ಮ ಅಪ್ಪಾಜಿ, ದೊಡ್ಡಗೌಡರು ಹೇಳಿದ್ದಾರೆ. ಅದನ್ನು ಶಿರಸಾವಹಿಸಿ ಪಾಲಿಸುತ್ತೇನೆ.  
ಈಗ ನೀರಾವರಿ ಇಲಾಖೆಯಲ್ಲಿರುವ ಎಂಪಿ ಕಚೇರಿಯನ್ನು ಡಿಸಿ ಕಚೇರಿಗೆ ಸ್ಥಳಾಂತರ ಮಾಡುವುದು. ಸಾರ್ವಜನಿಕರಿಗೆ ಸಿಗುವ ಸಮಯದ ಬಗ್ಗೆ ವೇಳಾಪಟ್ಟಿಯನ್ನು ನಿಗದಿ ಮಾಡಿ,  ಜನರ ಸಮಸ್ಯೆಗಳಿಗೆ ಸ್ಪಂದಿಸುವುದು.
ಜಿಲ್ಲೆಯ ಸಮಗ್ರ  ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲು ಚಿಂತನೆ. ಜೊತೆಗೆ ಮಂಡ್ಯದ ಮೈಷುಗರ್, ಪಾಂಡವಪುರ ಪಿಎಸ್‌ಎಸ್‌ಕೆ ಮತ್ತು ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಗಳನ್ನು ಸದೃಢಗೊಳಿಸಲು ವಿಶೇಷ ಆದ್ಯತೆ. ಮಂಡ್ಯ ಜಿಲ್ಲೆಯನ್ನು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಲು ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹ ಯೋಗದೊಂದಿಗೆ ರೂಪಿಸಲು ಆದ್ಯತೆ.

ಉಡುಪಿ- ಚಿಕ್ಕಮಗಳೂರು ಶೋಭಾ ಕರಂದ್ಲಾಜೆ
ಸಮಸ್ಯೆ ನಿವಾರಣೆಗೆ ಸಮಿತಿ
-ಆರ್. ತಾರಾನಾಥ್
ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರಬೇಕೆಂದು ಜನರು ಅಪೇಕ್ಷಿಸಿದ್ದರು. ಯುಪಿಎಗೆ ಮೋದಿ ಪರ್ಯಾಯ ಅಂದುಕೊಂಡಿದ್ದರು. ಜೊತೆಗೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಪರಿಶ್ರಮದ ಫಲದಿಂದಾಗಿ ಗೆಲವು ಸಾಧ್ಯವಾಯಿತು.
ರಾಜ್ಯದಲ್ಲಿ ಕೆಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ರಾಜ್ಯದ ಸಂಸದರಾದ ನಾವುಗಳು ಸಾಮೂಹಿಕವಾಗಿ ಪ್ರಯತ್ನ ಮಾಡಲಿದ್ದೇವೆ.
ಉಡುಪಿ- ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುವುದು. ಅವರಿಂದ ವರದಿ ಬಂದ ನಂತರ ಅವುಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು.
ಜಿಲ್ಲೆಯಲ್ಲಿ ಪ್ರಮುಖವಾಗಿ ಅಡಕೆ, ಕಾಫಿ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ, ಒತ್ತುವರಿ ಗಂಭೀರವಾದ ಸಮಸ್ಯೆಯಾಗಿದೆ. ಅವುಗಳನ್ನು ಜನರು ಚುನಾವಣೆ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದರು. ಉಡುಪಿ ಜಿಲ್ಲೆಯಲ್ಲಿ ಮೀನುಗಾರರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು.

ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ್
ಏತನೀರಾವರಿ ಯೋಜನೆ
- ಮತ್ತೀಕೆರೆ ಜಯರಾಂ
ಹಿಂದಿನ ಸಂಸದರ ವೈಫಲ್ಯ. ಸಿಕ್ಕ ಅಲ್ಪಾವಧಿ ಅವಕಾಶದಲ್ಲಿ ನನ್ನ ಕ್ರಿಯಾಶೀಲತೆ, ಜನಪರ ಕೆಲಸ, ಸಮಸ್ಯೆಗಳಿಗೆ ಸ್ಪಂದನೆ, ಸಹೋದರ ಸಚಿವ ಡಿ.ಕೆ.ಶಿ ಪ್ರಭಾವ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಹಾಗೂ ಕಾಂಗ್ರೆಸ್ಸಿಗರ ಸಂಘಟಿತ ಹೋರಾಟ ನನ್ನ ಗೆಲವಿಗೆ ಶ್ರೀರಕ್ಷೆ.
ಕುಡಿವ ನೀರಿನ ಸಮಸ್ಯೆ ನಿವಾರಣೆಗಾಗಿ ಶಿಂಷಾ, ಕಾವೇರಿ, ಹೇಮಾವತಿಯಿಂದ ಏತ ನೀರಾವರಿ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸುವುದು, ಅಂತರ್ಜಲ ಮರುಪೂರಣ. ನರೇಗಾ ಯೋಜನೆಯಡಿ ಕೃಷಿ ಸಂಬಂಧಿತ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನ, ಲಭ್ಯವಿರುವ ಅನುದಾನ ಬಳಸಿಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ.
ಈಗಾಗಲೇ ಹೇಮಾವತಿಯಿಂದ ಕುಣಿಗಲ್ ಮತ್ತು ಮಾಗಡಿ ತಾಲೂಕುಗಳ ಕೆರೆಗಳನ್ನು ತುಂಬಿಸುವ 280 ಕೋಟಿ ವೆಚ್ಚದ ಶ್ರೀರಂಗ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ.
ಕುಡಿವ ನೀರಿನ ಸಮಸ್ಯೆ ನಿವಾರಣೆ, ಅಂತರ್ಜಲ ವೃದ್ಧಿಗೆ ಪೂರಕವಾದ ಜಲಾನಯನ ಯೋಜನೆಗಳನ್ನು ಜಾರಿಗೊಳಿಸಿ ಅಲ್ಲಲ್ಲಿ ಚೆಕ್ ಡ್ಯಾಂ, ಇಂಗು ಗುಂಡಿಗಳ ನಿರ್ಮಾಣಕ್ಕೆ ಒತ್ತು.

 ಬೀದರ್ ಭಗವಂತ ಖೂಬಾ
ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸ್ತೇನೆ
-ಅಪ್ಪಾರಾವ್ ಸೌದಿ
ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂಬ ಜನರಲ್ಲಿದ್ದ ತವಕ, ಅಭಿಲಾಷೆ ನನ್ನ ಜಯಕ್ಕೆ ದಾರಿಯಾಗಿದ್ದಂತೂ ಹೌದು. ಇನ್ನು ಕಾರ್ಯಕರ್ತರ ಸತತ ಪರಿಶ್ರಮ, ನಮ್ಮ ಮುಖಂಡರ ಸತತ ಪ್ರಯತ್ನ, ಮಾರ್ಗದರ್ಶನ ನನ್ನ ಅಭೂತಪೂರ್ವ ವಿಜಯಕ್ಕೆ ಕಾರಣ.
ದೇಶದ ಪ್ರಧಾನಿಯನ್ನಾಗಿ ಮೋದಿ ಅವರನ್ನು ಆಯ್ಕೆ ಮಾಡಿಸಿ ಕಳುಹಿಸುವುದು ನಮ್ಮೆಲ್ಲರ ಮೊದಲ ಆದ್ಯತೆ ಆಗಿತ್ತು. ಅದು ಈಡೇರಿದೆ. ಇದೀಗ ಕ್ಷೇತ್ರದ ಜನರ ಋಣ ತೀರಿಸುವ ಕಾಲ. ಭವ್ಯ ಭಾರತದ ಕನಸುಗಳನ್ನು ಸಾಕಾರಗೊಳಿಸುವ ಮೋದಿ ಅವರ ಯೋಜನೆಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿಯೂ ಸೇರಿರುತ್ತದೆ ಎಂದು ಭಾವಿಸುತ್ತೇನೆ.
ಈವರೆಗೆ ಬೀದರ್ ಕ್ಷೇತ್ರ ಅಭಿವೃದ್ಧಿಯಲ್ಲಿ ಶೂನ್ಯವಾಗಿತ್ತು. ಇನ್ಮುಂದೆ ಇದರ ಚಿತ್ರಣ ಬದಲಾಯಿಸುವ ಪ್ರಯತ್ನ ಮಾಡುತ್ತೇನೆ. ಇಂಥದ್ದೆ ಸಮಸ್ಯೆ ಮುಂದಿಟ್ಟುಕೊಂಡು ಅದರ ಅಭಿವೃದ್ಧಿಗಾಗಿ ಯೋಜಿಸುವ ಚಿಂತನೆ ನನ್ನ ಮುಂದಿಲ್ಲ.
ಮೋದಿ ಅವರ ಭವ್ಯ ಭಾರತದ ಕನಸಿನ ಯೋಜನೆಗಳಲ್ಲಿ ಹೆಚ್ಚಿನ ಪ್ರಾಧ್ಯಾನ್ಯತೆಯೊಂದಿಗೆ ಈ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ತರುವ ಯತ್ನ ಮಾಡ್ತೇನೆ.

ಹಾವೇರಿ ಶಿವಕುಮಾರ್ ಉದಾಸಿ
ಹೆಚ್ಚಿನ ಆರ್ಥಿಕ ನೆರವು
- ನಾರಾಯಣ ಹೆಗಡೆ
ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿದ್ದ ಜನತೆ ಮೋದಿ ಅವರಿಂದ ಬದಲಾವಣೆ ಬಯಸಿದ್ದರು. ಮೋದಿ ಅಲೆಯ ಜತೆಗೆ ಕಳೆದ ಅವಧಿಯಲ್ಲಿ ಸಂಸದನಾಗಿ ನಾನು ಮಾಡಿದ ಕಾರ್ಯಗಳೇ ಗೆಲವಿಗೆ ಕಾರಣ.
ಹಾವೇರಿ- ಗದಗ ಕ್ಷೇತ್ರದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವುದು ಹಾಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ಪ್ರಯತ್ನ.
ಉದ್ಯೋಗಾವಕಾಶ ಸೃಷ್ಟಿಗೆ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕೆ ಸ್ಥಾಪನೆ. ಶಿಕ್ಷಣ, ಆರೋಗ್ಯ ಸೇವೆ ಸುಧಾರಣೆ. ಧಾರವಾಡ- ಶಿವಮೊಗ್ಗ, ಮುಂಡರಗಿ ರೈಲು ಮಾರ್ಗ ಪ್ರಾರಂಭಕ್ಕೆ ಒತ್ತು. ಅತಿ ಹಿಂದುಳಿದ ಮುಂಡರಗಿ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರದಿಂದ ಹೆಚ್ಚಿನ ನೆರವನ್ನು ತರುವುದು.
ಕ್ಷೇತ್ರದಲ್ಲಿ ರೈತರು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಬೆಳೆ ವಿಮೆ, ಹತ್ತಿ ನಷ್ಟಕ್ಕೆ ಪರಿಹಾರ, ಕಬ್ಬು ಬೆಳೆಗಾರರಿಗೆ ಶೀಘ್ರ ಹಣ ಪಾವತಿ, ಬೀಜ, ಗೊಬ್ಬರಕ್ಕೆ ರೈತರಿಗೆ ತೊಂದರೆಯಾಗದಂತೆ ಕ್ರಮ.

ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ
ರೈತರ ಸಮಸ್ಯೆ ಪರಿಹಾರಕ್ಕೆ ಒತ್ತು
- ರಾಯಣ್ಣ ಆರ್.ಸಿ.
ಕ್ಷೇತ್ರದಲ್ಲಿ ಮಾಡಿರುವ ಪ್ರಾಮಾಣಿಕ ಜನಸೇವೆ, ಜನಪರ ಕಾರ್ಯಗಳೇ ನನ್ನ ಗೆಲವಿಗೆ ಶ್ರೀರಕ್ಷೆ. ಮೋದಿ ಅಲೆಯ ನಡುವೆಯೂ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಗೆಲವಿನ ದಡ ಸೇರಿಸಿದ್ದಾರೆ. ಕ್ಷೇತ್ರದ ಮುಖಂಡರ ಪಾತ್ರವೂ ಹಿರಿದು.
ಕೃಷ್ಣಾ ನದಿ ತೀರದ ಪ್ರದೇಶದಲ್ಲಿ ಸಹಸ್ರಾರು ಎಕರೆ ಭೂಮಿ ಸವಳು-ಜವುಳು ಆಗಿದ್ದು, ನಿರುಪಯುಕ್ತವಾಗಿದೆ. ಹಾಳಾಗಿರುವ ಬಂಜರು ಭೂಮಿಯನ್ನು ಮರಳಿ ಫಲವತ್ತತೆ ಆಗುವಂತೆ ಅಭಿವೃದ್ಧಿಪಡಿಸಿ, ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ್ನಿಸುವೆ.
ರಾಜ್ಯದಲ್ಲಿ ಸಕ್ಕರೆ ಸಚಿವನಾದ ಬಳಿಕ ಪ್ರಾಮಾಣಿಕ ಪ್ರಯತ್ನ್ನ ಮಾಡಿರುವೆ. ಕಬ್ಬು ಬೆಳೆಗಾರರಿಗೆ ಸಿಎಂ ಸಿದ್ಧರಾಮಯ್ಯ ಅವರು 400 ಕೋಟಿ ನೀಡಿದ್ದಾರೆ. ಮುಂದೆ ಈ ರೀತಿಯ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲಾಗುವುದು.
ಕ್ಷೇತ್ರದಲ್ಲಿ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಯೋಗ್ಯ ದರ ಸಿಗುವಂತೆ ಪ್ರಯತ್ನಿಸುತ್ತೇನೆ.

ಮಂಗಳೂರು ನಳಿನ್ ಕುಮಾರ್ ಕಟೀಲ್
ಮಂಗಳೂರಿಗೆ ಪ್ರತ್ಯೇಕ ರೇಲ್ವೆ ವಿಭಾಗ
- ಜಿತೇಂದ್ರ ಕುಂದೇಶ್ವರ
ಕಾರ್ಯಕರ್ತರ ಪರಿಶ್ರಮ, ಮೋದಿ ಅಲೆ, ಐದು ವರ್ಷದಲ್ಲಿ ಸಂಸದನಾಗಿ ನಾನು ನಡೆಸಿದ ಅಭಿವೃದ್ಧಿ ಕಾರ್ಯಗಳು, ಹಿಂದಿನ ಬಿಜೆಪಿ ರಾಜ್ಯ ಸರ್ಕಾರದ ಅಮೂಲ್ಯ ಅಭಿವೃದ್ಧಿ ಕಾರ್ಯಗಳು. ಕೇಂದ್ರದ ಯುಪಿಎ ಮತ್ತು ರಾಜ್ಯದ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫಲ್ಯ.
ಮೂಲ ಸೌಕರ್ಯಕ್ಕೆ ಆದ್ಯತೆ, ಕುಡಿಯುವ ನೀರು ಒದಗಿಸುವುದು ಮತ್ತು ಗ್ರಾಮೀಣ ಭಾಗದಲ್ಲಿ ಕೆಟ್ಟು ಹೋದ ರಸ್ತೆಗಳ ದುರಸ್ತಿ, ರಸ್ತೆಗಳ ನಿರ್ಮಾಣ
ಮಂಗಳೂರಿಗೆ ಪ್ರತ್ಯೇಕ ರೇಲ್ವೆ ವಿಭಾಗ ತೆರೆಯುವುದು. ಬಂದರು ಉನ್ನತೀಕರಣ, ಮಂಗಳೂರು ವಿಮಾನ  ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ, ಪರಿಸರಕ್ಕೆ ಹಾನಿಯಾಗದಂತೆ ಐಟಿ ಪಾರ್ಕ್, ವಿಶೇಷ ವಿತ್ತ ವಲಯ ಸ್ಥಾಪನೆ.
ಧಾರಣಾ ಸಾಮರ್ಥ್ಯ ಅಧ್ಯಯನ ಮಾಡದೆ ಕೈಗಾರಿಕೆ ಹೇರಲಾಗುತ್ತಿದೆ. ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಎತ್ತಿನಹೊಳೆ ಯೋಜನೆ ಹೆಸರಲ್ಲಿ ನೇತ್ರಾವತಿ ನದಿ ತಿರುಗಿಸಲಾಗುತ್ತಿದೆ. ಇದಕ್ಕೆ ನಾನು ಬಿಡುವುದಿಲ್ಲ. ಜಿಲ್ಲೆ ಜನರ ಭಾವನೆಗಳಿಗೆ ಧಕ್ಕೆಯಾಗುವ ಯೋಜನೆಗಳಿಗೆ ವಿರೋಧ. ಉಷ್ಣ ವಿದ್ಯುತ್ ಸ್ಥಾವರ ಬದಲು ಜಲವಿದ್ಯುತ್ ಯೋಜನೆ ಸಹಿತ ಪರ್ಯಾಯ ಯೋಜನೆಗಳನ್ನು ಚಿಂತಿಸಬೇಕು.

ಉತ್ತರಕನ್ನಡ  ಅನಂತಕುಮಾರ್ ಹೆಗಡೆ
ಜಿಲ್ಲೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ತರುವೆ
- ವಸಂತಕುಮಾರ್ ಕತಗಾಲ
ಜನತೆಯೊಂದಿಗೆ ಸತತ ಸಂಪರ್ಕ, ಅಭಿವೃದ್ಧಿ, ವ್ಯವಸ್ಥಿತ ಪ್ರಚಾರ, ಕಾರ್ಯಕರ್ತರ ಪ್ರಯತ್ನ ಗೆಲವಿಗೆ ಮುಖ್ಯ ಕಾರಣ. ಇದರ ಜೊತೆಗೆ ಮೋದಿ ಅಲೆಯೂ ಪ್ರಭಾವ ಬೀರಿತು.
ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಇಲ್ಲಿ ಅಭಿವೃದ್ಧಿ ಸಾಧಿಸುವುದು ಮತ್ತು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ತರುವ ಪ್ರಯತ್ನ ಮಾಡುತ್ತೇನೆ.
ಕಿತ್ತೂರು, ಖಾನಾಪುರದಲ್ಲಿ ನೀರಾವರಿ ಯೋಜನೆ, ಅಂಕೋಲಾ-ಹುಬ್ಬಳ್ಳಿ ರೇಲ್ವೆ ಯೋಜನೆ, ನಿರಾಶ್ರಿತರ ಸಮಸ್ಯೆಗೆ ಪರಿಹಾರ, ಉದ್ಯೋಗಾವಕಾಶ ಕಲ್ಪಿಸುವುದು, ರಸ್ತೆ, ಸಂಪರ್ಕ, ಮೂಲ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ಹಾಕಿಕೊಂಡಿದ್ದೇನೆ.
ಈ ಮೂರೂ ಉತ್ತರ ಕನ್ನಡ ಜಿಲ್ಲೆಯ ಜೀವನಾಡಿ ಎಂದರೆ ತಪ್ಪಲ್ಲ. ಈ ಮೂರೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಹಣ ತಂದು ಅಭಿವೃದ್ಧಿ ಸಾಧಿಸುತ್ತೇನೆ. ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ.

ಧಾರವಾಡ ಪ್ರಹ್ಲಾದ್ ಜೋಶಿ
ರಸ್ತೆ, ರೈಲು ಸೇವೆಗೆ ಆದ್ಯತೆ
- ಬಸವರಾಜ ಹಿರೇಮಠ
ನರೇಂದ್ರ ಮೋದಿ ನಾಯಕತ್ವ, ಕ್ಷೇತ್ರದ ಜನರೊಂದಿಗೆ 10 ವರ್ಷಗಳಿಂದ ನಿರಂತರ ಸಂಪರ್ಕ, ಪಕ್ಷದ ನಾಯಕರ-ಕಾರ್ಯಕರ್ತರ ಬಿಡುವಿಲ್ಲದ ಶ್ರಮ ಹಾಗೂ ಗೆಲ್ಲುವ ಆತ್ಮವಿಶ್ವಾಸ.
ಹುಬ್ಬಳ್ಳಿ-ಧಾರವಾಡ ಅವಳಿನಗರ ಶೇ.50ರಷ್ಟು ಮತದಾರರನ್ನು ಹೊಂದಿದ್ದು, ಕೇಂದ್ರದ ನಗರಾಭಿವೃದ್ಧಿ ಇಲಾಖೆ ಮೂಲಕ ಇಲ್ಲಿನ ಚಿತ್ರಣವನ್ನೇ ಬದಲಿಸುವ ಚಿಂತನೆ ಇದೆ. ಪಾಲಿಕೆಗೆ ಇನ್ನಷ್ಟು ಶಕ್ತಿ ಒದಗಿಸುತ್ತೇನೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಬಳಸಿಕೊಂಡು ಗ್ರಾಮೀಣ ಪ್ರದೇಶಗಳಿಗೆ ಉತ್ತಮ ರಸ್ತೆ, ರೈತರ ಹೊಲಗಳಿಗೆ ಸಂಪರ್ಕ ರಸ್ತೆ ಹಾಗೂ ಶುದ್ಧ ಕುಡಿಯುವ ನೀರು ಕೊಡುವುದು.
ಹು-ಧಾ ಮಧ್ಯೆ ಉತ್ತಮ ರೈಲು ಸಂಪರ್ಕ ಕಲ್ಪಿಸುವ ಜತೆಗೆ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಮರುಜೀವ ನೀಡುವುದು, ರೈತರಿಗೆ ಸೂಕ್ತ ಸಮಯದಲ್ಲಿ ಬೆಳೆ ವಿಮೆ ಸಿಗುವಂತೆ ಮಾಡುವುದು, ರೈತ ಸಂಪರ್ಕ ಕೇಂದ್ರಗಳನ್ನು ರೈತ ಸ್ನೇಹಿಯಾಗಿಸುವುದು.
ಅವಳಿನಗರಕ್ಕೆ ಕುಡಿವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆ ನ್ಯಾಯಾಧಿಕರಣದಲ್ಲಿದೆ.ನ್ಯಾಯಯುತ ಅಫಿಡವಿಟ್ ಸಲ್ಲಿಸಿ ನಮ್ಮ ಪಾಲಿನ ನೀರು ದೊರೆಯುವಂತೆ ಮಾಡುತ್ತೇನೆ.

ಚಾಮರಾಜನಗರ ಆರ್. ಧ್ರುವನಾರಾಯಣ
ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣಕ್ಕೆ ಒತ್ತು
- ದೇವರಾಜು ಕಪ್ಪಸೋಗೆ
ಕ್ಷೇತ್ರದ ಅಭಿವೃದ್ಧಿಗೆ ಶ್ರಮ, ಮತದಾರರೊಂದಿಗಿನ ನಿರಂತರ ಸಂಪರ್ಕ ಮತ್ತು ಸೌಜನ್ಯಯುತ ನಡವಳಿಕೆ ಮೈಗೂಡಿಕೊಳ್ಳುವ ಮೂಲಕ ನಿತ್ಯ ಕ್ಷೇತ್ರದ ಒಂದಲ್ಲ ಒಂದು ಕಡೆಗೆ ಭೇಟಿ ನೀಡುವ ಮೂಲಕ ಇಡೀ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದ ಮೂಲೆ ಮೂಲೆಗೂ ಭೇಟಿ ನೀಡಿ ಜನರ ವಿಶ್ವಾಸ ಗಳಿಸಿದ್ದು.
ಕ್ಷೇತ್ರ ವ್ಯಾಪ್ತಿಯಲ್ಲಿ ಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ, ಬಿಳಿಗಿರಿರಂಗಬೆಟ್ಟ  ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಬಿಆರ್‌ಟಿ, ಮಲೆಮಹದೇಶ್ವರ ವನ್ಯಧಾಮ ಮತ್ತು ಭರಚುಕ್ಕಿ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದು.
ಈಗಾಗಲೇ ಮಂಜೂರಾಗಿರುವ 209 ಮತ್ತು 212 ರಾಷ್ಟ್ರೀಯ ಹೆದ್ದಾರಿ ಜೊತೆ ಚಾಮರಾಜನಗರದಿಂದ ಬೀದರ್‌ವರೆಗಿನ ಹೆದ್ದಾರಿಯನ್ನು ಪೂರ್ಣಗೊಳಿಸುವುದು. ಬೆಂಗಳೂರು- ಚಾಮರಾಜನಗರ ಹೊಸ ರೈಲು ಮಾರ್ಗಕ್ಕೆ ಚಾಲನೆ.
ಗುಳೆ ತಪ್ಪಿಸಲು ಅಂತರ್ಜಲ ಅಭಿವೃದ್ಧಿ ಮಾಡಿ ಕೃಷಿಗೆ ಅನುಕೂಲ ಕಲ್ಪಿಸುವುದು ಮತ್ತು ಈಗಾಗಲೇ ಕೈಗಾರಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಸ್ಧಳೀಯವಾಗಿ ಹೆಚ್ಚಿನ ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ ಕಲ್ಪಿಸಲಾಗುವುದು.

ಬಾಗಲಕೋಟೆ ಪಿ.ಸಿ. ಗದ್ದಿಗೌಡರ್
ಹಿನ್ನೀರು ಸಮಸ್ಯೆಗೆ ಪರಿಹಾರ
- ಚಿಕ್ಕಪ್ಪನಹಳ್ಳಿ ಷಣ್ಮುಖ
ನನ್ನ ಗೆಲವಿಗೆ ಪ್ರಮುಖವಾಗಿ ಕಾರಣವಾಗಿದ್ದು ಮೋದಿ ಅಲೆ. ಜೊತೆಗೆ ನನ್ನ ವೈಯಕ್ತಿಕ ವರ್ಚಸ್ಸು, ನಾನು ಕಳೆದ 10 ವರ್ಷಗಳಲ್ಲಿ ಕ್ಷೇತ್ರದ ಜನತೆಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ಎಲ್ಲ ಸಹಾಯ ಸೌಲಭ್ಯವನ್ನು ಜಿಲ್ಲೆಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರ ಜನರ ಆಶೀರ್ವಾದ ನನ್ನ ಗೆಲವಿಗೆ ಕಾರಣ
ಜಿಲ್ಲೆಗೆ ಹೆಚ್ಚು ಹೆಚ್ಚು ಕೈಗಾರಿಕೆ ಸ್ಥಾಪನೆ ಹಾಗೂ ಕೇಂದ್ರದ ಯೋಜನೆಗಳನ್ನು ಜಿಲ್ಲೆಗೆ ತಂದು ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಲು ಆದ್ಯತೆ ನೀಡುತ್ತೇನೆ.
ಬಾಗಲಕೋಟೆ ಮುಳುಗಡೆ ಜಿಲ್ಲೆಯಾಗಿದ್ದು, ಇಲ್ಲಿ ಅಪಾರ ಪ್ರಮಾಣದಲ್ಲಿ ಹಿನ್ನೀರು ಆವರಿಸುತ್ತೆ. ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತೆ. ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳಿದ್ದು, ಐಹೊಳೆ ಸ್ಥಳಾಂತರ, ಮುಳುಗಡೆ ನಗರಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com