
ಚೆನ್ನೈ/ಮಧುರೆ: ಬೆಳಗ್ಗೆ ರಾಜಿನಾಮೆ ಮಾತು; ಸಂಜೆ ಹಿಂಪಡೆಯುವ ನಾಟಕ. ಅದಕ್ಕೆ ನೆಪ ಕರುಣಾನಿಧಿ ಮಧ್ಯಪ್ರವೇಶ.
- ಇದು ಡಿಎಂಕೆಯಲ್ಲಿ ಭಾನುವಾರ ನಡೆದ ನಾಟಕೀಯ ಬೆಳವಣಿಗೆ. ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಆಘಾತಕಾರಿಯಾದ ಸುದ್ದಿಯೊಂದು ಕಾದಿತ್ತು. ಚುನಾವಣೆಯಲ್ಲಿ ಪಕ್ಷ ವೈಫಲ್ಯ ಅನುಭವಿಸಿದ್ದರಿಂದ ಎಂ.ಕೆ.ಸ್ಟಾಲಿನ್ ತಾವು ಹೊಂದಿರುವ ಎಲ್ಲ ಸ್ಥಾನಗಳಿಗೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಮಧ್ಯಾಹ್ನದ ವರೆಗೆ ಇದು ಬಿಸಿ ಬಿಸಿ ಚರ್ಚೆಗೆ ಆಹಾರವಾಗಿತ್ತು. ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಯತ್ತ ಹಾಗೂ ಕರುಣಾನಿಧಿ ನಿವಾಸದತ್ತ ಡಿಎಂಕೆಯ ವಿವಿಧ ಹಂತದ ನಾಯಕರು ಧಾವಿಸಿದರು. ಸ್ಟಾಲಿನ್ ರಾಜಿನಾಮೆ ನೀಡುವುದು ಬೇಡವೇ ಬೇಡ ಎಂದು ಘೋಷಣೆ ಕೂಗಲಾರಂಭಿಸಿದರು.
ಕರುಣಾ ಮಧ್ಯಪ್ರವೇಶ: ಪಕ್ಷದಲ್ಲಿನ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ಮುಖ್ಯಸ್ಥ ಕರುಣಾನಿಧಿಯವರು ಮಧ್ಯಪ್ರವೇಶಿಸಿದರು. ಚುನಾವಣೆಯಲ್ಲಿನ ಸೋಲಿನ ಕಾರಣಕ್ಕಾಗಿ ಪದತ್ಯಾಗದ ಅಗತ್ಯ ಇಲ್ಲ ಎಂದು ಕರುಣಾನಿಧಿ ಸ್ಟಾಲಿನ್‌ಗೆ ಸಲಹೆ ನೀಡಿದರು. ಜತೆಗೆ ಸೋಲಿಗೆ ಸ್ಟಾಲಿನ್ ಮಾತ್ರ ಹೊಣೆಯಲ್ಲ. ಪಕ್ಷದ ಎಲ್ಲ ಹಂತದ ನಾಯಕರು ಅವರಿಗೆ ನೈತಿಕ ಬೆಂಬಲ ನೀಡುತ್ತಾರೆ. ಹೀಗಾಗಿ ಸ್ಟಾಲಿನ್ ರಾಜಿನಾಮೆ ನೀಡಬೇಕಾದ ಅಗತ್ಯವಿಲ್ಲ. ಸೋಲಿಗೆ ಕಾರಣಗಳನ್ನು ಕಂಡುಕೊಂಡು ಮತ್ತೆ ಪಕ್ಷವನ್ನು ಬಲಪಡಿಸುವ ಬಗ್ಗೆ ಪ್ರಯತ್ನ ನಡೆಸಬೇಕು ಎಂದು ಸ್ಟಾಲಿನ್‌ಗೆ ಕರುಣಾನಿಧಿ ಸಲಹೆ ನೀಡಿದರು ಎಂದು ಡಿಎಂಕೆಯ ಯುವ ವಿಭಾಗದ ಮುಖ್ಯಸ್ಥ ದೊರೈಮುರುಗನ್ ಸುದ್ದಿಗಾರರಿಗೆ ತಿಳಿಸಿದರು. ಸತತ ಮನವೊಲಿಕೆಯಿಂದ ಸ್ಟಾಲಿನ್ ಪಕ್ಷದ ನಾಯಕತ್ವಕ್ಕೆ ವಿದಾಯ ಹೇಳುವ ನಿರ್ಧಾರವನ್ನು ಕೈಬಿಟ್ಟರು ಎಂದು ದೊರೈಮುರುಗನ್ ತಿಳಿಸಿದರು.
ಅಳಗಿರಿ ವ್ಯಂಗ್ಯ: ಸೋಲಿನ ಹೊಣೆ ಹೊತ್ತು ರಾಜಿನಾಮೆ ನೀಡಿ, ಹಿಂಪಡೆಯುವ ಸ್ಟಾಲಿನ್ ನಿರ್ಧಾರದ ಬಗ್ಗೆ ಡಿಎಂಕೆಯ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ ವ್ಯಂಗ್ಯವಾಡಿದ್ದಾರೆ. ಮಧುರೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಇದೊಂದು ನಾಟಕ. ತಂದೆ ಕರುಣಾನಿಧಿ ಎದುರು ಸೋಲಿನ ಹೊಣೆ ಹೊತ್ತು ರಾಜಿನಾಮೆ ನೀಡುವ ನಾಟಕ ಮಾಡುತ್ತಾನೆ. ನಂತರ ಅವರ ಸಲಹೆ ಪಡೆದು ಅದನ್ನು ಹಿಂಪಡೆಯುತ್ತಾನೆ ಎಂದು ಲೇವಡಿ ಮಾಡಿದರು.
Advertisement