
ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯಲ್ಲಿ ರಿಯಲ್ ಎಸ್ಟೇಟ್ ಸಮೂಹ M3M ಗೆ ಸೇರಿದ ಗುರುಗ್ರಾಮ್ ನಲ್ಲಿನ ಸುಮಾರು 300 ಕೋಟಿ ರೂ.ಮೊತ್ತದ ಭೂಮಿಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಹೇಳಿದೆ.
ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೇಂದ್ರಿಯ ತನಿಖಾ ಸಂಸ್ಥೆ ತಾತ್ಕಾಲಿಕ ಆದೇಶವನ್ನು ಹೊರಡಿಸಿದೆ. ದೆಹಲಿಯ ಗಡಿಯಲ್ಲಿರುವ ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಹರ್ಸಾರು ತಹಸಿಲ್‌ನ ಬಶಾರಿಯಾ ಗ್ರಾಮದಲ್ಲಿ 88.29 ಎಕರೆ ಭೂಮಿ ಇದೆ. ಈ ಜಮೀನಿನ ಮೌಲ್ಯ 300.11 ಕೋಟಿ ರೂಪಾಯಿ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಹರಿಯಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹೂಡಾ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ಮಾಜಿ ನಿರ್ದೇಶಕ ತ್ರಿಲೋಕ್ ಚಂದ್ ಗುಪ್ತಾ; ರಿಯಾಲ್ಟಿ ಗ್ರೂಪ್ RS ಇನ್ಫ್ರಾಸ್ಟ್ರಕ್ಚರ್ ಪ್ರೈ. ಲಿಮಿಟೆಡ್ ಮತ್ತಿತರ 14 ಕಂಪನಿಗಳ ವಿರುದ್ಧ ಇಡಿ ಎಫ್ ಐಆರ್ ದಾಖಲಿಸಿದ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತು.
Advertisement