

ಕನ್ನಡಪ್ರಭ ವಾರ್ತೆ, ಮೈಸೂರು, ಏ.1-
'ನಮ್ ಮನೆಯವ್ರು ಕೆಲ್ಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಇನ್ನೂ ಹೆಚ್ಚಿಗೆ ಕೆಲ್ಸ ಆಗ್ತವೆ. ಆದ್ರಿಂದ ಕಾಂಗ್ರೆಸ್‌ಗೆ ವೋಟ್ ಹಾಕಿ ಅಂತಾ ಕೇಳ್ತೀನಿ' ಎಂದರು ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ಪತ್ನಿ ಶಾಂತಮ್ಮ.
ಮಂಗಳವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡುವಾಗ ಕೊಂಚ ನಿರಾಳವಾಗಿದ್ದಂತೆ ಕಂಡುಬಂದರು ಅವರು. 'ನಿನ್ನೆ ಯುಗಾದಿ ಹಬ್ಬ. ಇವತ್ತು ವರ್ಷತೊಡಕು. ಹೀಗಾಗಿ ಬುಧವಾರದಿಂದ ಜೋರು ಪ್ರಚಾರ ಮಾಡ್ತೀನಿ' ಎಂದರು. 'ನಾನು ಅವರ್ನ ಮದ್ವೆಯಾಗಿ 40 ವರ್ಷ ಆಯ್ತು. ಮೊದ್ಲು ಲಾಯರ್ ಆಗಿದ್ರು. ಲಾಯರ್ ಆದೋರ್ಗೆ ರಾಜ ಕೀಯ ಆಸೆ ಇರ್ತದೆ. ಹಂಗೇ ಇವ್ರೂ ಬಂದ್ರು. 1978ರಲ್ಲಿ ಎಂಎಲ್‌ಎ ಚುನಾವಣೆಗೆ ನಿಂತ್ರು. ಆಗ್ಲಿಂದಲೂ ಎಂಎಲ್‌ಎ, ಮಿನಿಸ್ಟ್ರು ಆಗಿದ್ರು. ಈಗ ಎಂ.ಪಿ. ಆಗವ್ರೆ. ಅಸೆಂಬ್ಲಿಯಾದ್ರೆ ಇಡೀ ತಾಲೂಕು ಸುತ್ತುತ್ತಾ ಇದ್ದೆ. ಈಗ ಲೋಕಸಭೆಗೆ ಅರ್ಧ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡ್ತಿದ್ದೇನೆ. ಜನ ಬೆಂಬಲದಿಂದ ಮತ್ತೆ ಗೆಲ್ತಾರೆ' ಎಂದು ವಿಶ್ವಾಸದಿಂದಲೇ ಹೇಳಿಕೊಂಡರು.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕೆ.ಆರ್. ನಗರ ಮಂಡ್ಯಕ್ಕೆ ಸೇರಿತು. ಹೀಗಾಗಿ ಕೆ.ಆರ್. ನಗರದಲ್ಲಿ ಪ್ರಚಾರ ಮಾಡಲು ಆಗುತ್ತಿಲ್ಲ ಎನ್ನುವ ಸಣ್ಣ ಬೇಸರ ಅವರಿಗೆ ಇದೆ. 'ಪಕ್ಕದ ಹುಣಸೂರು, ಪಿರಿಯಾಪಟ್ಟಣ ತಾಲೂಕುಗಳಿಗೆ ಬೆಳಗ್ಗೆ ಹೋಗಿ ರಾತ್ರಿವರೆಗೂ ಪ್ರಚಾರ ಮಾಡ್ತೀನಿ. ಕಳೆದ ಬಾರಿಯೂ ಕೊಡಗಿಗೆ ಹೋಗಿದ್ದೆ. ಈ ಬಾರಿಯೂ ಹೋಗಿ ಪ್ರಚಾರ ಮಾಡ್ತೀನಿ. ಆದ್ರೆ ಟೈಮ್ ಇಲ್ಲ. 10 ದಿನಗಳಲ್ಲಿ ಎಷ್ಟು ಆಗುತ್ತೋ ಅಷ್ಟು ಪ್ರಚಾರ ಮಾಡಿ ವೋಟ್ ಕೇಳ್ತೀನಿ' ಎಂದರು.
ಯುಪಿಎ-3 ಬಂದ್ರೆ ಮಿನಿಸ್ಟ್ರು ಆಗ್ತಾರೆ ಅನ್ನೋ ಆಶಾಭಾವ, ಮಂತ್ರಿ ಮಾಡೋದು ಹೈಕಮಾಂಡ್‌ಗೆ ಬಿಟ್ಟಿದ್ದು ಎನ್ನುವ ಕಾಂಗ್ರೆಸ್ ಸಂಸ್ಕೃತಿ ಅರಿವೂ ಶಾಂತಮ್ಮನವರಲ್ಲಿ ಇದೆ.
- ಅಂಶಿ ಪ್ರಸನ್ನಕುಮಾರ್
Advertisement