

ಸಾಮಾಜಿಕ ಕಾರ್ಯಕರ್ತೆ ರಾಜಕಾರಣಿ ಆಗಿದ್ದೇಕೆ?
ಸಾಮಾಜಿಕ ಕಾರ್ಯಕರ್ತರಾದವರು ರಾಜಕೀಯಕ್ಕೆ ಬರಲೇಬೇಕು. ಇಲ್ಲದಿದ್ದರೆ ರಾಜಕಾರಣ 'ಕ್ಲೀನ್' ಆಗೊಲ್ಲ. ರಾಜಕೀಯ ಹಾಗೂ ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರು ರಾಜಕೀಯಕ್ಕೆ ಬರಬೇಕು. ಸಾಮಾಜಿಕ ಕಾರ್ಯ ಹಾಗೂ ರಾಜಕೀಯ ಒಂದಂಕ್ಕೊಂದಕ್ಕೆ ಸಂಬಂಧ ಇದೆ. ಇವೆರಡು ಬೇರೆ ಆಗುವುದಕ್ಕೆ ಸಾಧ್ಯವೇ ಇಲ್ಲ. ಸಮಾಜದಲ್ಲಿರುವ ಎಲ್ಲ ಸಮಸ್ಯೆಗಳಿಗೂ ರಾಜಕಾರಣದಲ್ಲೇ ಉತ್ತರ ದೊರೆಯಬೇಕಿದೆ.
ನೀವು ಕೇವಲ ಹೆಸರಿಗಾಗಿ ಅಭ್ಯರ್ಥಿಯಂತೆ ಹೌದೇ?
ಇಲ್ಲ, ಹೀಗೆಂದು ಯಾರೂ ಪರಿಗಣಿಸಬಾರದು. ರಾಷ್ಟ್ರೀಯ ಪಕ್ಷದವಾದ ಜೆಡಿಎಸ್ ನನ್ನನ್ನು ಗುರುತಿಸಿದೆ. ಪರ್ಯಾಯ ನೋಬೆಲ್ ಪ್ರಶಸ್ತಿ ಪಡೆದುಕೊಂಡಿರುವ ನಾನು ಸಾಮಾಜಿಕವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ನಮ್ಮ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರು ನನ್ನನ್ನು ಗುರುತಿಸಿ, ಮಹಿಳೆ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ಟಿಕೆಟ್ ನೀಡಬೇಕು ಎಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ವಿಶ್ವಾಸಾರ್ಹತೆಗೆ ದೊರೆತ
ಮನ್ನಣೆ ಇದು.
ಕ್ಷೇತ್ರದ ಜನತೆಗೆ ನಿಮ್ಮ ಭರವಸೆ ಏನು?
ಬೆಂಗಳೂರಿನಲ್ಲಿ ಕಳೆದ 35 ವರ್ಷಗಳಿಂದ ಇದ್ದೇನೆ. ಇಲ್ಲಿನ ಮೂಲಸಮಸ್ಯೆಗಳನ್ನೆಲ್ಲ ಅರಿತುಕೊಂಡಿದ್ದೇನೆ. ಮುಖ್ಯವಾಗಿ ನೀರು, ಕಸ ಇಲ್ಲಿನ ಸಮಸ್ಯೆ. ನನಗೆ ಗೊತ್ತು, ಇದನ್ನು ನಿರ್ವಹಿಸಬೇಕಾದ್ದು ಕಾರ್ಪೊರೇಷನ್, ಕಾರ್ಪೊರೇಟರ್. ನಗರದಲ್ಲಿ ಸಾಕಷ್ಟು ನಿರುದ್ಯೋಗ ಇದೆ. ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸಗಳಾಗಬೇಕಿದೆ. ಅದಕ್ಕೆ ಸಂಸತ್ತಿನಲ್ಲಿ ದನಿಯಾಗಬೇಕು. ದೊಡ್ಡ ವ್ಯಕ್ತಿಗಳು ಇಲ್ಲಿಂದ ಆಯ್ಕೆಯಾಗಿ ಹೋಗಿದ್ದರೂ ಅವರಿಂದ ಏನೂ ಕೆಲಸ ಆಗಿಲ್ಲ. ನನ್ನ ಕ್ಷೇತ್ರದಲ್ಲಿ ಇದೀಗ ನಮ್ಮಪಕ್ಷದ ಶಾಸಕರಿಲ್ಲ. ಆದರೆ, ನಮ್ಮ ರಾಷ್ಟ್ರೀಯ ಪಕ್ಷದ ಧ್ಯೇಯೋದ್ದೇಶಗಳನ್ನು ಜನರ ಮುಂದಿಟ್ಟು ಮತ ಕೇಳುತ್ತೇನೆ.
ನಿಮಗೆ ಪ್ರತಿಸ್ಪರ್ಧಿಗಳು ಯಾರು?
ನೋಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪ್ರಮುಖ ಪ್ರತಿಸ್ಪರ್ಧಿಗಳು. ಎರಡೂ ಪಕ್ಷಗಳನ್ನೂ ಎದುರಿಸಲು ನಾನು ಸಜ್ಜಾಗಿದ್ದೇನೆ. ಹೊಸಬಳು ಎಂಬ ಹಣೆಪಟ್ಟಿಕಟ್ಟಿದ್ದಾರೆ. ಪ್ರಥಮ ಚುನಾವಣೆ ಎದುರಿಸುವವರೆಲ್ಲ ಪ್ರಥಮರೇ. ಒಂದೆರಡು ಬಾರಿ ಗೆದ್ದವರು ಮೊದಲು ಸ್ಪರ್ಧಿಸಿದ್ದಾಗ ಆದ ಅನುಭವವೇ ನನ್ನದು. ನಾನು ಸ್ಥಳೀಯಳಾಗಿ ಜನರೊಂದಿಗೆ ಸಾಕಷ್ಟು ವರ್ಷದಿಂದ ಬೆರೆತಿದ್ದೇನೆ. ಜನರು ನನ್ನನ್ನು ಗುರುತಿಸುತ್ತಾರೆ. ಆದ್ದರಿಂದ, ಪ್ರತಿಸ್ಪರ್ಧಿಗಳು ನನ್ನನ್ನು ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ.
ಜೆಡಿಎಸ್ ಆಯ್ಕೆಯೇ ಏಕೆ?
ಮೊದಲೇ ಹೇಳಿದಂತೆ ಸಾಮಾಜಿಕ ಕಾರ್ಯಗಳು ರಾಜಕಾರಣದಿಂದಲೇ ನಡೆಯಬೇಕು. ಅದಕ್ಕೆ ಶಕ್ತಿಯೇ ರಾಜಕಾರಣ. ರಾಜಕಾರಣದಿಂದ ಸಮಾಜ ಕ್ಲೀನ್ ಮಾಡುವ ಪ್ರಯತ್ನವಾಗುತ್ತದೆ ಎಂಬುದನ್ನು ಆಪ್ ಸಾಬೀತುಪಡಿಸಿದೆ. ನಾನು ರಾಜಕಾರಣಕ್ಕೆ ಬರಬೇಕು ಎಂದು ನಿರ್ಧರಿಸಿದ್ದೆ. ಆಪ್ ಆಯ್ಕೆಯ ಬಗ್ಗೆಯೂ ಯೋಜಿಸಿದ್ದೆ. ಆದರೆ, ರಾಷ್ಟ್ರೀಯ ಪಕ್ಷಕ್ಕೆ ಸೇರಿಕೊಳ್ಳಲು ಇಚ್ಚಿಸಿ ಜೆಡಿಎಸ್‌ಗೆ ಸೇರಿಕೊಂಡೆ. ವರಿಷ್ಠ ಎಚ್.ಡಿ. ದೇವೇಗೌಡ ಅವರ ಅಭಿಲಾಷೆಯಂತೆ ನಾನು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ. ನನ್ನನ್ನು ಕರೆದು ಹಣ ಕೇಳಲಿಲ್ಲ. ನನ್ನ ಸಾಧನೆಯನ್ನು ದೇವೇಗೌಡರು ಗುರುತಿಸಿದರು. ಅಭ್ಯರ್ಥಿಯಾಗಿ ಇಲ್ಲಿಂದ ಗೆಲ್ಲಬೇಕು ಎಂದು ಬೆನ್ನುತಟ್ಟಿದ್ದಾರೆ.
Advertisement