ಮಹಾಯುದ್ಧದಲ್ಲಿ 'ತಾರಾಬಲ'

ಮಹಾಯುದ್ಧದಲ್ಲಿ ಎಲ್ಲ ಪಾಳೆಯಗಳಲ್ಲೂ ಗಣನೀಯ 'ತಾರಾಬಲ'ವಿದೆ...
ಮಹಾಯುದ್ಧದಲ್ಲಿ 'ತಾರಾಬಲ'
Updated on

ಮಹಾಯುದ್ಧದಲ್ಲಿ ಎಲ್ಲ ಪಾಳೆಯಗಳಲ್ಲೂ ಗಣನೀಯ 'ತಾರಾಬಲ'ವಿದೆ. ಜನರನ್ನು ಸೇರಿಸುವ ಸಿನಿಮಾ ತಾರೆಗಳ ಶಕ್ತಿ ನೆಚ್ಚಿಕೊಂಡು, ಆ ಆಕರ್ಷಣೆ ಮತಗಳಾಗಿಯೂ ಪರಿವರ್ತಿತವಾಗಬಹುದೆಂಬ ಆಸೆಯಿಂದ ಹಲವರಿಗೆ ಟಿಕೆಟ್ ಸಿಕ್ಕಿದೆ. ನಲ್ಲಿ ನೀರಿನ ಪೋಲು ತಪ್ಪಿಸುವುದರಿಂದ ಹಿಡಿದು ಸೆಕ್ಯುಲರಿಸಮ್ ರಕ್ಷಣೆವರೆಗೆ ಹಲವರ ಬದ್ಧತೆಗಳು ವ್ಯಕ್ತಗೊಂಡಿವೆ. ಅವುಗಳ ಝಲಕು ನಿಮಗಾಗಿ...

ಮೋದಿಯೂ ಉಪ್ರಕ್ಕೆ ಹೊಸಬರೇ
ಬಹುಶಃ ಭಾರತೀಯ ಚಿತ್ರರಂಗಗಳಲ್ಲಿನ ಎಲ್ಲಾ ಭಾಷೆಗಳಲ್ಲೂ ನಟಿಸಿದ ಏಕೈಕ ನಟಿಯೆಂದರೆ ನಗ್ಮಾ. ಶಿವರಾಜ್‌ಕುಮಾರ್‌ರಿಂದ ಹಿಡಿದು ಅಮಿತಾಭ್ ಬಚ್ಚನ್, ರಜನೀಕಾಂತ್, ಚಿರಂಜೀವಿ ಮತ್ತು ಮಮ್ಮೂಟಿಯೊಂದಿಗೂ ನಟಿಸಿರುವ ಅವರು, ಹೆಚ್ಚು ಸದ್ದು ಮಾಡಿದ್ದು ಭೋಜ್‌ಪುರಿ ಚಿತ್ರಗಳಿಂದಲೇ. 2003ರಲ್ಲಿ ಕಾಂಗ್ರೆಸ್ ಸೇರಿದ್ದ ನಗ್ಮಾ, ಈ ಬಾರಿ ಉತ್ತರಪ್ರದೇಶದ ಮೀರಟ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರೀಡಿಫ್‌ನಲ್ಲಿ ಪ್ರಕಟವಾದ ಅವರ ಸಂದರ್ಶನದ ಆಯ್ದ ಭಾಗ....
- ಹಿರಿಯ ಕಾಂಗ್ರೆಸ್ಸಿಗರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿಯುತ್ತಿದ್ದಾರೆ, ಆದರೆ ನೀವು...
ಪಕ್ಷಕ್ಕೆ ನಮ್ಮ ಅಗತ್ಯವಿದ್ದಾಗ ನಾವು ಹಿಂದೆ ಸರಿಯಬಾರದು. ದುರ್ಬಲರು ಮಾತ್ರ ಹಿಂದೆ ಸರಿಯುತ್ತಾರೆ.

- ಉತ್ತರಪ್ರದೇಶ ಕಠಿಣ ಅಖಾಡವೆನಿಸುವುದಿಲ್ಲವೇ?
ಉತ್ತರ ಪ್ರದೇಶದಿಂದ ಸ್ಪರ್ಧಿಸಿ ಆಯ್ಕೆಯಾದರೆ, ನೀವು ರಾಷ್ಟ್ರ ರಾಜಕಾರಣವನ್ನು ಎದುರಿಸಲು ಅರ್ಹರಾಗುತ್ತೀರಿ. ನರೇಂದ್ರ ಮೋದಿ ಕೂಡ ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರಲ್ಲವೇ?

- ಒಬ್ಬ ಕಾರ್ಯಕರ್ತನ ಪ್ರತಿ ದಿನದ ಖರ್ಚು 2000 ರುಪಾಯಿ. ಅದನ್ನು ಹೇಗೆ ನಿಭಾಯಿಸುತ್ತೀರಿ?
ಹಣ ಕೊಟ್ಟು ಕಾರ್ಯಕರ್ತರನ್ನು ನೇಮಿಸಿಕೊಳ್ಳುವವರು 'ಹೆಸರಿಲ್ಲದ' ಅಭ್ಯರ್ಥಿಗಳು. ನಾನು ತುಂಬಾ ಪ್ರಸಿದ್ಧ ವ್ಯಕ್ತಿ. ಅದು ಎಲ್ಲರಿಗೂ ಗೊತ್ತು. ನನ್ನ ಮೇಲಿನ ಗೌರವದಿಂದ ಅವರೆಲ್ಲ ಕೆಲಸ ಮಾಡುತ್ತಿದ್ದಾರೆ.

- ನಿಮ್ಮ ಪಕ್ಷದ ಹಗರಣಗಳ ಬಗ್ಗೆ ಏನನ್ನುತ್ತೀರಿ?
ಪ್ರತಿ ಪಕ್ಷದಲ್ಲೂ ಕೆಟ್ಟ ಶಕ್ತಿಗಳು ಇರುತ್ತವೆ. ಕೆಲವರ ತಪ್ಪಿಗೆ ಇಡೀ ಪಕ್ಷದ ಮೇಲೆ ತಪ್ಪು ಹೊರಿಸುವುದು ಸರಿಯೇ? ಕೆಟ್ಟ ಸಮಯದಲ್ಲೂ ದೇಶದ ಅಭಿವೃದ್ಧಿಯಾಗುವಂತೆ ನಾವು ಆಡಳಿತ ನಡೆಸಿದ್ದೇವೆ. ಹಾಗಿದ್ದರೆ ಯಡಿಯೂರಪ್ಪ ಮತ್ತು ಬಳ್ಳಾರಿ ಸಹೋದರರ ಕಥೆಯೇನು? ಎನ್‌ಡಿಎ ಎಂದಿಗೂ ಯುಪಿಎಗೆ ಸಮನಾಗಲಾರದು. ಮೋದಿ ಮಾಡಿದ್ದೇನು? ರೈತರಿಂದ ಕಡಿಮೆ ದರಕ್ಕೆ ಜಾಗ ಪಡೆದು, ತಮ್ಮ ಶ್ರೀಮಂತ ಉದ್ಯಮಿ ಮಿತ್ರರಿಗೆ ಕೊಟ್ಟಿರುವುದು.

- ಮತಗಳನ್ನು ಹೇಗೆ ಗೆಲ್ಲಲಿದ್ದೀರಿ?
ಸೆಕ್ಯುಲರ್ ಮತ್ತು ಸಮಾಜ ಸೇವೆಯ ಅಜೆಂಡಾದ ಮೂಲಕ.

- ರಾಜಕೀಯದಲ್ಲಿ ಪುರುಷರದ್ದೇ ಪಾರುಪತ್ಯವಿದೆಯಲ್ಲ?
ಸಿನೆಮಾ ಇಂಡೆಸ್ಟ್ರಿಯ ಕಥೆಯೂ ಭಿನ್ನವಾಗಿಲ್ಲವಲ್ಲ? ಆದರೂ ನಾನು ಕಷ್ಟ ಪಟ್ಟು ಗಟ್ಟಿಯಾಗಿ ನಿಂತೆ. ಈ ರಂಗದಲ್ಲೂ ಅದನ್ನೇ ಮಾಡಲಿದ್ದೇನೆ.

--
ಬಂಕುರದಲ್ಲಿ ಮೂನ್ ಮೂನ್
80ರ ದಶಕದಲ್ಲಿ ತಮ್ಮ ಬೋಲ್ಡ್ ನಟನೆಯಿಂದ ಬೆಳದಿಂಗಳು ಹರಿಸಿದ ನಟಿಯರಲ್ಲಿ ಮೂನ್ ಮೂನ್ ಸೇನ್ ಒಬ್ಬರು. ತಮ್ಮ ವಿಚಿತ್ರ ಹೆಸರಿನಿಂದಲೂ ಹೆಸರಾದ ಮೂನ್ ಮೂನ್, ಪ್ರಸಿದ್ಧ ಬೆಂಗಾಲಿ ನಟಿ ಸುಚಿತ್ರಾ ಸೇನ್‌ರ ಏಕೈಕ ಪುತ್ರಿ. ಈ ಬಾರಿ ಪಶ್ಚಿಮ ಬಂಗಾಳದ ಬಂಕುರ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಮೂನ್ ಮೂನ್ ರೀಡಿಫ್ ಜಾಲತಾಣಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ...

-ರಾಜಕೀಯಕ್ಕೆ ಬರುತ್ತೇನೆಂದು ಕನಸುಮನಸಿನಲ್ಲಿಯೂ ಯೋಚಿಸಿರಲಿಲ್ಲ. ಆದರೆ ಮಮತಾ ಬ್ಯಾನರ್ಜಿಯವರ ಪರಿಚಯವಿತ್ತು. ಅಮ್ಮ(ಸುಚಿತ್ರಾ ಸೇನ್) ತೀರಿಹೋದ ನಂತರ ಮಮತಾ ಬ್ಯಾನರ್ಜಿ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಹೀಗೇ ಒಮ್ಮೆ ಮಾತನಾಡುತ್ತಾ ನಮ್ಮ ಕುಟುಂಬದಿಂದ ಒಬ್ಬರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲು ಯೋಚಿಸುತ್ತಿರುವುದಾಗಿ ಅವರು ಹೇಳಿದರು. ಅದಾದ ಕೆಲ ದಿನಗಳ ಬಳಿಕ ಗೆಳತಿಯೊಬ್ಬಳಿಂದ, ಬಂಕುರ ಕ್ಷೇತ್ರದ ಟಿಎಮ್‌ಸಿ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆಯಾಗಿದೆ ಎಂದು ತಿಳಿಯಿತು. ಕೂಡಲೇ ನಾನು ಮಮತಾಗೆ ಫೋನ್ ಮಾಡಿ, 'ಇದೇನು ಮಾಡಿದೆ?' ಎಂದು ಕೇಳಿದೆ. ಆಕೆ ನಗುತ್ತಲೇ ಇದ್ದಳು.

- ನನ್ನ ಪ್ರತಿಸ್ಪರ್ಧಿ, ಕಮ್ಯುನಿಸ್ಟ್ ಪಕ್ಷದ ಬಸುದೇವ ಆಚಾರ್ಯ ಬಂಕುರದಿಂದ 9 ಬಾರಿ ಗೆದ್ದಿರಬಹುದು. ಆದರೆ ಇದುವರೆಗೂ ಜನರಿಗೆ ಬೇರೆ ಆಯ್ಕೆಗಳೇ ಇರಲಿಲ್ಲ ಎನ್ನುವುದೇ ಅವರ ಗೆಲುವಿಗೆ ಕಾರಣ. ನನ್ನ ಕ್ಷೇತ್ರದಲ್ಲಿ ಆದಿವಾಸಿಗಳು ಹೆಚ್ಚಿದ್ದಾರೆ ಎನ್ನುವುದು ಗೊತ್ತು. ನನ್ನ ಪತಿಯೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾದ್ದರಿಂದ, ಜನರ ಒಲವು ನನ್ನತ್ತ ವಾಲಲಿದೆ ಎನ್ನುವ ಭರವಸೆಯಿದೆ.

- ನನ್ನನ್ನು ನೋಡಲು, ಮಾತನಾಡಿಸಲು ಸಾವಿರಾರು ಜನರು ಬರುತ್ತಿದ್ದಾರೆ. ಆದರೆ ನಾನೊಬ್ಬ ನಟಿ ಎನ್ನುವ ಕಾರಣಕ್ಕಲ್ಲ. 'ದೀದಿ ಈ ಏರಿಯಾದಲ್ಲಿ ನೀರಿಲ್ಲ, ರಸ್ತೆಗಳು ಸರಿಯಾಗಿಲ್ಲ. ದಯವಿಟ್ಟು ಸರಿಪಡಿಸಿ' ಎಂದು ಅವರು ಹೇಳುತ್ತಿರುವುದರಿಂದ ಅವರು ನನ್ನನ್ನು ಒಬ್ಬ ರಾಜಕಾರಣಿಯಾಗಿ ನೋಡುತ್ತಿದ್ದಾರೆ ಎನ್ನುವುದು ಸ್ಪಷ್ಟ.

-ಬಂಕುರದಲ್ಲಿ ನೀರಿನ ಅಭಾವವಿದೆ. ಜನ ನೀರಿಗಾಗಿ ಗಂಟೆಗಟ್ಟಲೇ ಪಯಣಿಸುತ್ತಾರೆ. ಅವರ ಪರಿಸ್ಥಿತಿ ನೋಡಿದ ನಂತರ, ಪ್ರತಿ ದಿನ ಬೆಳಗ್ಗೆ ಹಲ್ಲುಜ್ಜುವಾಗ ತಪ್ಪದೇ ನಲ್ಲಿಯನ್ನು ಬಂದ್ ಮಾಡುವ ಅಭ್ಯಾಸ ಮಾಡಿಕೊಂಡಿದ್ದೇನೆ. ರಾಜಕೀಯ ಇತರರ ಬಗ್ಗೆ ಯೋಚಿಸುವ ಪಾಠ ಕಲಿಸಿದೆ.  

---
ಮೋದಿ ಪ್ರಧಾನಿಯಾಗಬೇಕು
ಬಾಲಿವುಡ್ ಖ್ಯಾತ ನಟ ಪರೇಶ್ ರಾವಲ್ ಈ ಬಾರಿ ಪೂರ್ವ ಅಹಮದಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ರಾಜಕೀಯ ಪ್ರವೇಶದ ಬಗ್ಗೆ 'ಹಿಂದುಸ್ತಾನ್ ಟೈಮ್ಸ್‌' ಪತ್ರಿಕೆಗೆ ಅವರು ನೀಡಿದ ಸಂದರ್ಶನದ ಝಲಕು...

- ಮುಂಬೈನ ಪರೇಶ್ ರಾವಲ್, ಅಹಮದಾಬಾದ್- ಪೂರ್ವದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಲಾಗುತ್ತಿದೆ. ಏನಂತೀರೀ?
ಸೋನಿಯಾ ಗಾಂಧಿ ಇಟಲಿಯವರು, ಆದರೀಗ ಅವರು ಕಾಂಗ್ರೆಸ್‌ನ ಮುಖ್ಯಸ್ಥೆ! ನಾನು ಗುಜರಾತ್‌ನಲ್ಲಿ ಹುಟ್ಟಿದವ. ನಾನೊಬ್ಬ ಭಾರತೀಯ. ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ನಾನೂ ಕೂಡ!

-ಗೆದ್ದರೆ ಗುಜರಾತ್‌ಗೆ ಮನೆ ಬದಲಿಸುತ್ತೀರೋ?
ಆಗಲೇ ಗುಜರಾತ್‌ನಲ್ಲಿ ನನ್ನ ಮನೆ ಮತ್ತು ಕುಟುಂಬವಿದೆ. ಮಡದಿ ಸ್ವರೂಪ್ ಅನೇಕ ವರ್ಷಗಳಿಂದ ಗುಜರಾತ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ತಿಂಗಳಲ್ಲಿ 7 ದಿನ ಆ ರಾಜ್ಯದಲ್ಲಿರುತ್ತೇನೆ. ನನ್ನ ಕಚೇರಿ ಕೂಡ ಅಲ್ಲಿದೆ.

-ಹಾಗಿದ್ದರೆ ನಟನೆ ಹಿಂದುಳಿಯಿತು ಅಂತಾಯಿತು?
ಎರಡಕ್ಕೂ ನಾನು ಮಹತ್ವ ಕೊಡುತ್ತೇನೆ. ನನ್ನ ಚುನಾವಣಾ ಕ್ಷೇತ್ರ ಮುಂಬೈನಿಂದ ಕೇವಲ 50 ನಿಮಿಷದ ದೂರದಲ್ಲಿದೆ(ವಿಮಾನದ ಮೂಲಕ).

-ಮೋದಿಯವರೊಂದಿಗೆ ಸಾಮಿಪ್ಯವಿರುವುದರಿಂದ ನಿಮಗೆ ಟಿಕೆಟ್ ಸಿಕ್ಕಿದೆ ಎನ್ನಲಾಗುತ್ತಿದೆ. ಆದಾಗ್ಯೂ ನೀವು ಬಿಜೆಪಿಯ ಭಾಗವೂ ಆಗಿದ್ದವರಲ್ಲ...

ನನ್ನ ಮತ್ತು ಬಿಜೆಪಿಯ ಸಿದ್ಧಾಂತ ಒಂದೇ ಆಗಿದೆ. ವೋಟ್ ಬ್ಯಾಂಕ್ ರಾಜಕಾರಣದಲ್ಲಿ ನಮಗೆ ನಂಬಿಕೆಯಿಲ್ಲ. ಇತ್ತ, ಮೋದಿಯವರು ದೇಶಕ್ಕಾಗಿ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುತ್ತಿದ್ದಾರೆ. ನನ್ನ ಉದ್ದೇಶವಿಷ್ಟೆ, ಮೋದಿ ಪ್ರಧಾನಿಯಾಗಬೇಕು.

- ಮೋದಿ ಮತ್ತು ನಿಮ್ಮ ಹಳ್ಳಿ ಅಕ್ಕಪಕ್ಕದಲ್ಲಿವೆ. ಚಿಕ್ಕವಯಸ್ಸಿನಿಂದಲೇ ನಿಮಗೆ ಅವರ ಪರಿಚಯವಿತ್ತೆ.
ಮೋದಿಯವರ ಪರಿಚಯವಾಗಿದ್ದು 2006-2007ರಲ್ಲಿ. ಅವರು ಮುಖ್ಯಮಂತ್ರಿಯಾದ ನಂತರ ಅವರಿಂದ ಪ್ರಭಾವಿತನಾದೆ.

-ಮೋದಿ ಮೇಲೆ ಸಿನೆಮಾ ಮಾಡಲು ಯೋಚಿಸುತ್ತಿದ್ದೀರಿ ಎಂದು ತಿಳಿಯಿತು...

ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ. 10-12 ವರ್ಷಗಳಿಂದ ನಿರ್ದಯವಾಗಿ ಅವರ ಮೇಲೆ ಅಪವಾದ ಹೊರಿಸಲಾಗುತ್ತಿದೆ. ನಿಜವಾದ ಮೋದಿ ಯಾರು ಎನ್ನುವುದನ್ನು ತೋರಿಸುವ ಉದ್ದೇಶದಿಂದ ಈ ಸಿನೆಮಾ ಮಾಡುತ್ತೇವೆ. ಪ್ರಾಮಾಣಿಕ, ಪರಿಶ್ರಮಿ, ಜಾತ್ಯತೀತ ಮತ್ತು ಅಭಿವೃದ್ಧಿ ಪರ ಮೋದಿಯ ಸಿನೆಮಾ ಆಗಲಿದೆ ಅದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com