

ಹುಬ್ಬಳ್ಳಿ: ಮನೆಯವರ (ಪತಿ) ಎಲೆಕ್ಷನ್, ಮಕ್ಕಳ ಪರೀಕ್ಷೆ ಒಟ್ಟೊಟ್ಟಿಗೆ ಬಂದಿದೆ ನೋಡ್ರಿ. ಎರಡೆರಡು ಜವಾಬ್ದಾರಿ, ಎರಡನ್ನೂ ಸರಿಯಾಗಿ ನಿಭಾಯಿಸ್ತಾ ಇದ್ದೀನಿ. ಮನೆಯವ್ರು ಹಾಗೂ ಮಕ್ಕಳು ಪಾಸಾಗ್ತಾರೆ. ನೋ ಡೌಟ್.
ಹೀಗೆಂದವರು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿಯವರ ಪತ್ನಿ ಜ್ಯೋತಿ ಜೋಶಿ. ಜ್ಯೋತಿ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ. ಆದರೆ ಈ ಬಾರಿ ಜ್ಯೋತಿ ಜೋಶ್ನಿಂದ ಪ್ರಚಾರ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆಯಿಂದ: ಈ ಹಿಂದೆಯೂ ಪ್ರಚಾರಕ್ಕೆ ಹೋಗಿದ್ದೆ. ಆದರೆ ಅಷ್ಟು ಸಕ್ರಿಯವಾಗಿರಲಿಲ್ಲ. ಪತಿಯನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಪ್ರಚಾರ ಶುರುವಾಗಿದ್ದು ಮಾ. 8, ಮಹಿಳಾ ದಿನಾಚರಣೆಯಂದು. ಬಿಜೆಪಿ ಮಹಿಳಾ ಮೋರ್ಚಾ ಜತೆಗೆ ನನ್ನದೇ ಗೆಳತಿಯರ ಬಳಗ ಹೊಂದಿದ್ದೇನೆ. ಈ ತಂಡ ಕಟ್ಟಿಕೊಂಡು ಬೆಳಗ್ಗೆ 9 ಗಂಟೆಗೆ ಪ್ರಚಾರಕ್ಕೆ ಹೊರಟು ನಿಲ್ಲುತ್ತೇನೆ. ಒಂದು ದಿನ ಹಳ್ಳಿ, ಮತ್ತೊಂದು ದಿನ ಪಟ್ಟಣ, ಹೀಗೆ ಬಹುತೇಕ ಕಡೆ ಪ್ರಚಾರ ಮುಗಿಸಿದ್ದೇನೆ. ಧಾರವಾಡ ವ್ಯಾಪ್ತಿಯ ಬಹುತೇಕ ಮಹಿಳಾ ಮಂಡಳ ಸದಸ್ಯೆಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮನವಿ ಮಾಡಿದ್ದೇನೆ. ಉತ್ತಮ ಪ್ರತಿಕ್ರಿಯೆ ಬಂದಿದೆ.
ಈಗ ಅರ್ಥ ಆಯ್ತು: ನಮ್ಮ ಮನೆ ಮುಂದೆ ಯಾವಾಗ್ಲೂ ಜನ, ಕಾರ್ಯಕರ್ತರು ತುಂಬಿಕೊಂಡಿರ್ತಾರೆ. ಒಂದೊಂದು ಬಾರಿ, ನಮ್ಮ ಮನೆಯವರು ನಮಗಾಗಿ ಟೈಮ್ ಕೊಡೋದಿಲ್ಲ ಅಂತ ಬೇಜಾರೂ ಆಗ್ತಿತ್ತು. ಆದರೆ ಜನರೊಂದಿಗೆ ಬೆರೆಯುವ ಖುಷಿ, ಅವರ ಸೇವೆ ಮಾಡೋ ತೃಪ್ತಿ ಏನು ಅನ್ನೋದು ನನಗೆ ಈಗ ಅರ್ಥ ಆಯ್ತು. ನಾನು ಪ್ರಚಾರಕ್ಕೆ ಹೋದಾಗ ಜನ ಪ್ರೀತಿ, ಆದರದಿಂದ ಮನೆಗೆ ಬರ ಮಾಡಿಕೊಳ್ತಾರೆ. ಮನೆ ಮಗಳಂತೆ ಕಾಣುತ್ತಾರೆ. ನಾನು ಮತ ಕೇಳುವಾಗ ಎರಡು ಬಾರಿ ಪತಿಯನ್ನು ಆರಿಸಿದ್ದಕ್ಕೆ ಅಭಿನಂದಿಸುತ್ತೇನೆ. ಜತೆಗೆ ಅವರು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ತಿಳಿಸುತ್ತೇನೆ. ದೇಶಕ್ಕೆ ಸಮರ್ಥ ನಾಯಕತ್ವ ನೀಡಲು ಮೋದಿ, ಕ್ಷೇತ್ರಕ್ಕೆ ಜೋಶಿ ಎಂದು ಮತ ಯಾಚಿಸುತ್ತಿದ್ದೇನೆ. ಪತಿ ಮಾಡಿದ ಅಭಿವೃದ್ಧಿ ಕಾರ್ಯದ ಬಗ್ಗೆ ಮೊದಲು ನನಗೆ, ಅದೇ ರೀತಿ ಜನಕ್ಕೂ ತೃಪ್ತಿ ತಂದಿದೆ. ಕೆಲ್ಸ ನೋಡಿ ಮತ ಕೊಡಿ ಎಂದು ಕೇಳಿದ್ದೇನೆ. ಜನರ ಪ್ರತಿಕ್ರಿಯೆ ಕೂಡ ಉತ್ತಮವಾಗಿದೆ ಹ್ಯಾಟ್ರಿಕ್ ಗೆಲವು ಸಾಧಿಸಿಯೇ ತೀರುತ್ತೇವೆ.
- ಪ್ರಕಾಶ ಎಸ್. ಶೇಟ್
Advertisement