

ಮಂಡ್ಯ: ರಮ್ಯಾಳನ್ನು ಮಂಡ್ಯ ಜನರ ಮಡಿಲಿಗೆ ಹಾಕಿದ್ದೇನೆ. ಭರವಸೆ ಇದೆ. ಹಿಂದೆ ಜೋಪಾನವಾಗಿ ಗೆಲವಿನ ದಡ ಸೇರಿಸಿದ್ದಾರೆ. ಈಗಲೂ ಗೆದ್ದೇ ಗೆಲ್ಲಿಸುತ್ತಾರೆಂಬ ಅದಮ್ಯ ವಿಶ್ವಾಸ ಇದೆ. ಈಗ ಆಕೆಯ ಪಾಲಿನ ತಂದೆ, ತಾಯಿ, ಬಂಧು, ಬಳಗ ಎಲ್ಲವೂ ಕ್ಷೇತ್ರದ ಜನರೇ ಆಗಿದ್ದಾರೆ.
- ಇದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ (ದಿವ್ಯ ಸ್ಪಂದನ) ತಾಯಿ ರಂಜಿತಾ ಮನದಾಳದ ಮಾತು. ಅವರು ಮಹಿಳೆಯರನ್ನು ಸೇರಿಸಿ ಪ್ರಚಾರಕ್ಕೆ ಹೊರಡುವ ಭರದಲ್ಲಿ ಇದ್ದರು.
'ಬೆಂಗಳೂರಿನ ಮನೆ ತೊರೆದು ಬಂದಿದ್ದೇನೆ. ಮಗಳ ಭವಿಷ್ಯ, ಬದುಕು ಮುಖ್ಯ. ಮಂಡ್ಯದಲ್ಲೇ ವಾಸ, ರಾಜಕೀಯ ಕೃಷಿಯಿಂದ ಸಂಪರ್ಕ ಬೆಳಸಿದ್ದೇನೆ'.
ಅತಿ ವಿಶ್ವಾಸ ಇಲ್ಲ: 'ಕಳೆದ ಉಪ ಚುನಾವಣೆಗೂ, ಈಗಿನ ಮಾಹಾ ಸಮರಕ್ಕೂ ಹೋಲಿಸಿದರೆ ಗೆಲವಿನ ಅತಿ ವಿಶ್ವಾಸ ತಪ್ಪಾಗುತ್ತದೆ. ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಹಾಗೂ ಕ್ಷೇತ್ರದ ಪ್ರತಿ ಮತದಾರರ ಮನಸ್ಸನ್ನು ಗೆದ್ದಾಗ ಮಾತ್ರ ಗೆಲವು ಸಾಧ್ಯ. ಆ ನಿಟ್ಟಿನಲ್ಲಿ ಪ್ರಚಾರ, ಪ್ರಯತ್ನ ಸಾಗಿದೆ. ರಾಜ್ಯ ಮತ್ತು ಜಿಲ್ಲಾ ನಾಯಕರು ರಮ್ಯಾಳ ಗೆಲವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಹಿರಿಯರಾದ ಕೃಷ್ಣ ಹಾಗೂ ಅಂಬರೀಷ್ ಅಣ್ಣ, ಮಾದೇಗೌಡರೂ ಸೇರಿ ಅನೇಕರ ಶ್ರಮದಿಂದರಮ್ಯಾ ಗೆಲವು ಸಾಧಿಸುತ್ತಾಳೆ'.
ಮಾದರಿ ಮಂಡ್ಯ: 'ಮಂಡ್ಯದ ಜನರು ಕಳೆದ 7 ತಿಂಗಳ ಹಿಂದೆ ರಮ್ಯಾಳಿಗೆ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿದ ನಂತರ ಆಕೆಗೆ ಸಿಕ್ಕ ಪುಟ್ಟ ಅವಕಾಶದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾಳೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಈಗಲೂ ಸಾಕಷ್ಟು ಕನಸುಗಳನ್ನು ಹೊಂದಿದ್ದಾಳೆ. ಸಮಾಜ ಸೇವೆ ಮಾಡುವ ಆಶಯದಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ರಮ್ಯಾ, ಜನರ ಆಶೀರ್ವಾದದಿಂದ ಈ ಬಾರಿಯೂ ಲೋಕಸಭೆಗೆ ಆಯ್ಕೆಯಾಗಿ ಹೋದರೆ ಭವಿಷ್ಯದಲ್ಲಿ ಎಲ್ಲರ ಸಹಕಾರದೊಂದಿಗೆ ಮಾದರಿ ಮಂಡ್ಯ ಮಾಡಲಿದ್ದಾಳೆ.'
ತಾಳ್ಮೆ ಬೇಕು: 'ನಂಗೆ ಅಥವಾ ರಮ್ಯಾಳಿಗೆ ರಾಜಕೀಯದ ಒಳ ಜಗಳ, ಬಣಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಮಂಡ್ಯ ಕ್ಷೇತ್ರದ ಕಾಂಗ್ರೆಸ್ ನಾಯಕರ ಮಾರ್ಗದರ್ಶನ, ಸಹಕಾರ ಬೇಕು. ನಾವಿಬ್ಬರೂ ಅದೊಂದನ್ನೇ ಬೇಡುತ್ತೇವೆ. ರಮ್ಯಾ, ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ ಸಂದರ್ಭದಲ್ಲಿ ಹಿರಿಯರು, ನಾಯಕರು ತಿದ್ದಿ ಹೇಳಿದರೆ, ಸರಿ ಮಾಡಿಕೊಳ್ಳುವ ತಾಳ್ಮೆಯೂ ಆಕೆಗೆ ಇರಬೇಕು. ನಾನು ಈ ಮಾತುಗಳನ್ನು ಹೇಳುತ್ತಲೇ ಬಂದಿದ್ದೇನೆ. ಈಗೀಗ ಕೆಲವು ಅನುಭವಗಳು ಆದ ನಂತರ ಸಾಕಷ್ಟು ಬದಲಾಗಿದ್ದಾಳೆ. ಕಲಿಯುತ್ತಿದ್ದಾಳೆ. ಅದೇ ಸಮಾಧಾನ. ಜಿಲ್ಲೆಯ ಜನರೇ ಆಕೆಯ ಕೈ ಹಿಡಿದು ರಾಜಕೀಯ ಪಯಣಕ್ಕೆ ಸುಗಮ ದಾರಿ ಮಾಡಿಕೊಡಬೇಕು. ಅದೊಂದೇ ನನ್ನ ಪ್ರಾರ್ಥನೆ'.
- ಕೆ.ಎನ್. ರವಿ
Advertisement