

ರಾಜಕಾರಣಿಗಳು ದೇಶರಕ್ಷಣೆಯ ಮಾತನಾಡುತ್ತಾರೆ. ಆದರೆ, ಯೋಧರ ಹಿತಾಸಕ್ತಿಗಳು ಚುನಾವಣೆಯ ಚರ್ಚೆಯ ವಿಷಯವಾಗುವುದೇ ಇಲ್ಲ ಎಂಬ ಅಳಲೊಂದಿದೆ. ಜಾತಿ- ಧರ್ಮಗಳ ಕುರಿತು ಮಾತನಾಡಿ ಮತ ಗಳಿಸುವಂತೆ ಸೈನಿಕರ ಕಲ್ಯಾಣದ ಬಗ್ಗೆ ಮಾತನಾಡುವುದು ಯಾವುದೇ ವರ್ಗವನ್ನು ಆಕರ್ಷಿಸಲಾರದು ಎಂಬ ಪರಿಸ್ಥಿತಿ ಇದೆ. ಈ ಬಾರಿ ಗಾಜಿಯಾಬಾದ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿರುವವರು ಭೂಸೇನೆಯ ನಿವೃತ್ತ ಜನರಲ್ ವಿ. ಕೆ. ಸಿಂಗ್ ಅವರು. ಇವರೇನಾದರೂ ಗೆದ್ದರೆ ಸೇನೆಯ ಮುಖ್ಯಸ್ಥರಾಗಿದ್ದವರು ಮತ ಸಮರದಲ್ಲಿ ಗೆದ್ದ ಮೊದಲ ಉದಾಹರಣೆಯಾಗಿ ನಿಲ್ಲುತ್ತಾರೆ. ಈ ಹಿಂದೆ ಹೀಗೆ ಚುನಾವಣೆಗೆ ಸ್ಪರ್ಧಿಸಿದ್ದ ನಿವೃತ್ತ ಸೇನಾ ಮುಖ್ಯಸ್ಥರೆಂದರೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ. 1971ರಲ್ಲಿ ಬಾಂಬೆ ವಾಯವ್ಯ ಕ್ಷೇತ್ರದಿಂದ ಶಿವಸೇನೆ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸೆಣೆಸಿದ್ದರಾದರೂ ಗೆಲವು ಸಾಧಿಸಲಾಗಿರಲಿಲ್ಲ. ಅವರಂತೆಯೇ ರಜಪೂತ ರೆಜಿಮೆಂಟ್ ಪ್ರತಿನಿಧಿಸಿದ್ದ ಜನರಲ್ ವಿ. ಕೆ. ಸಿಂಗ್, ಈಗ ಕಣದಲ್ಲಿ ನಿಂತು ಭದ್ರತೆ- ದೇಶರಕ್ಷಣೆಗಳ ಬಗ್ಗೆ ಮಾತನಾಡುತ್ತಿದ್ದಾರೆ. 'ಪಯೋನೀರ್', 'ರೀಡಿಫ್ ಡಾಟ್ಕಾಂ' ಸೇರಿದಂತೆ ಹಲವು ಮಾಧ್ಯಮಕ್ಕೆ ಅವರು ನೀಡಿರುವ ಸಂದರ್ಶನಗಳ ಸಾರ ಸಂಗ್ರಹ ಇಲ್ಲಿದೆ.
ನಿಮ್ಮ ಪ್ರತಿಸ್ಪರ್ಧಿ ಎಂದು ಯಾರನ್ನು ಗುರುತಿಸುವಿರಿ?
ಕೇಂದ್ರ ಸರ್ಕಾರದಿಂದ ದಶಕಗಳ ಕಾಲ ನಡೆದ ತಾರತಮ್ಯದಿಂದಾಗಿ ಈ ಪ್ರದೇಶದಲ್ಲಿ ನೆಲೆಯಾಗಿರುವ ಬಡತನ, ಸಾಮಾಜಿಕ ಅಸಮಾನತೆಗಳೇ ನನ್ನ ಎದುರಾಳಿಗಳು ಅಷ್ಟೆ. ಯಾರೂ ನನ್ನ ಎದುರಾಳಿಗಳಲ್ಲ ಎಂಬುದು ಚುನಾವಣೆ ಫಲಿತಾಂಶ ಬಂದ ನಂತರ ದೃಢವಾಗಲಿದೆ. ಕಾಂಗ್ರೆಸ್ ಮತ್ತು ಆಮ್ಆದ್ಮಿ ಪಕ್ಷಗಳನ್ನು ಇಲ್ಲಿ ಗಂಭೀರವಾಗಿ ಪರಿಗಣಿಸಿಲ್ಲ. ಆಪ್ನಂಥ ರಾಷ್ಟ್ರವಿರೋಧಿ ಪಕ್ಷವನ್ನು ಈ ದೇಶ ಬೆಂಬಲಿಸುತ್ತದೆಯೇ? ಲೈನ್ ಆಫ್ ಕಂಟ್ರೋಲ್ ಅನ್ನೇ ಅಂತಾರಾಷ್ಟ್ರೀಯ ಗಡಿರೇಖೆ ಮಾಡೋಣ ಎನ್ನುತ್ತಾರಿವರು. ಕಾಶ್ಮೀರದ ಕುರಿತ ಅವರ ನಿಲವೂ ಖಂಡನೀಯ.
ಕಾಂಗ್ರೆಸ್ ಕುರಿತು..
ಕಾಂಗ್ರೆಸ್ ಸರ್ಕಾರಗಳ ಆಳ್ವಿಕೆಯಲ್ಲಿ ಆಡಳಿತ ಎನ್ನುವುದು ಹದಗೆಟ್ಟುಹೋಗಿದೆ. ಮಿಲಿಟರಿ ಬಗ್ಗೆಯಂತೂ ಯುಪಿಎ ಸರ್ಕಾರ ಯಾವ ಆದ್ಯತೆಯನ್ನೂ ತೋರಿಲ್ಲ. ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಭದ್ರತೆ ಬಗ್ಗೆ ಅಕಾರವೂ ಗೊತ್ತಿರದ ರಾಜ್ ಬಬ್ಬರ್ ಅಂಥವರು ಕಾಂಗ್ರೆಸ್ನಿಂದ ಸದಸ್ಯರಾಗಿರುವುದು ಆಘಾತಕಾರಿ. ದೇಶದ ಗೌರವವನ್ನು ಕಾಪಾಡುವ ರಾಷ್ಟ್ರೀಯ ಚಿಂತನೆ ಹೊಂದಿರುವ ಪಕ್ಷವೆಂದರೆ ಬಿಜೆಪಿ ಮಾತ್ರ.
ಭಾರತದ ರಾಷ್ಟ್ರೀಯ ಭದ್ರತೆಗಿರುವ ಸವಾಲನ್ನು ಹೇಗೆ ವಿವರಿಸುವಿರಿ?
ರಾಷ್ಟ್ರೀಯ ಭದ್ರತೆ ಎಂದರೆ ಹೊರಗಿನ ಸವಾಲುಗಳು ಮಾತ್ರ ಎಂದಲ್ಲ. ಆಂತರಿಕ ಭದ್ರತೆ, ಪರಿಸರ, ಅರ್ಥ ವ್ಯವಸ್ಥೆ ಇವೆಲ್ಲವೂ ರಾಷ್ಟ್ರೀಯ ಭದ್ರತೆಯ ಮೇಲೆ ಪ್ರಭಾವ ಬೀರುವ ವಿಷಯಗಳೇ ಆಗಿರುತ್ತವೆ.
ಪಾಕಿಸ್ತಾನದ ವಿರುದ್ಧ ಗುಪ್ತ ಕಾರ್ಯಾಚರಣೆಗಳು ಅವಶ್ಯ ಎಂಬುದು ನಿಮ್ಮ ಇಂಗಿತವೇ?
ಹಾಗೇನೂ ಇಲ್ಲ. ಪಾಕಿಸ್ತಾನದ ಜತೆ ವ್ಯವಹರಿಸುವುದಕ್ಕೆ ನಮಗೆ ಬೇಕಿರುವುದು ಒಂದು ಸ್ಥಿರವಾದ ನೀತಿ. ಏನನ್ನು ನಿರೀಕ್ಷಿಸಬೇಕು, ಮತ್ತೇನನ್ನು ಅಪೇಕ್ಷಿಸಬಾರದು ಎಂಬುದರ ಕುರಿತ ಸ್ಪಷ್ಟ ರೂಪುರೇಷೆ. ಪ್ರತಿಕ್ರಿಯಾತ್ಮಕ ನೀತಿಯೊಂದನ್ನು ನಾವು ಹೊಂದಿದ್ದೇ ಆದರೆ ನಮ್ಮ ಮೇಲೆ ಆಕ್ರಮಣ ಮಾಡುವ ಯಾರೇ ಆದರೂ ನೂರು ಬಾರಿ ಯೋಚಿಸುವಂತಾಗುತ್ತದೆ.
ಚೀನಾ ಸೇನೆಯನ್ನು ಎದುರಿಸುವುದರ ಬಗ್ಗೆ ಏನು ಹೇಳ್ತೀರಿ?
ನೆರೆಯವರ ಬಗ್ಗೆ ಕೇವಲ ಮಿಲಿಟರಿ ಯೋಚನೆಯನ್ನು ಹೊಂದುವುದಕ್ಕಾಗುವುದಿಲ್ಲ. ಮಿಲಿಟರಿ- ರಾಜತಾಂತ್ರಿಕ-ರಾಜಕೀಯ ಆಲೋಚನೆಗಳ ಮಿಳಿತ ಅಲ್ಲಿರಬೇಕು. ನಿರ್ಣಯ ತೆಗೆದುಕೊಳ್ಳುವ ಮೇಜಿನಿಂದ ನಮ್ಮ ಸಶಸ್ತ್ರ ಪಡೆಗಳನ್ನು ದೂರ ಇರಿಸಿರುವುದೇ ಎಲ್ಲ ಸಮಸ್ಯೆಗಳಿಗೆ ಮೂಲ.
ರಕ್ಷಣಾ ಖಾತೆಯನ್ನು ನಿಭಾಯಿಸಿರುವ ರೀತಿಗೆ ಎ. ಕೆ. ಆ್ಯಂಟನಿ ಭಾರೀ ಟೀಕೆಗೆ ಒಳಗಾಗಿದ್ದಾರೆ. ನಿಮ್ಮ ಅಭಿಪ್ರಾಯವೇನು?
ಆ್ಯಂಟನಿ ಒಳ್ಳೆಯ ವ್ಯಕ್ತಿ, ಪ್ರಾಮಾಣಿಕರು ಹಾಗೂ ಸೇನೆಯ ಬಗ್ಗೆ ಕಾಳಜಿ ಹೊಂದಿರುವವರು ಎಂಬ ಕುರಿತೇನೂ ಆಕ್ಷೇಪವಿಲ್ಲ. ಆದರೆ ಸಚಿವಾಲಯದಲ್ಲಿರುವ ಅಧಿಕಾರಿವರ್ಗವನ್ನು ನಿಭಾಯಿಸುವ ಬಗೆ ಅವರಿಗೆ ಗೊತ್ತಿಲ್ಲ. ಕಡತಗಳು ಮುಂದೆ ಸಾಗುವುದೇ ಇಲ್ಲ. 'ಸರ್ ಈ ವಿಷಯದಲ್ಲಿ ಹಗರಣವಾಗುವ ಸಾಧ್ಯತೆ ಇದೆ' ಅಂತ ಸ್ವಹಿತಾಸಕ್ತಿಯ ಅಧಿಕಾರಿವರ್ಗ ಇವರ ಕಿವಿ ಊದಿಬಿಡುತ್ತದೆ. ಬಹಳ ಪ್ರಾಮಾಣಿಕರೆಂಬ ಇಮೇಜ್ ಪಡೆದಿರುವ ಆ್ಯಂಟನಿ ಇದರ ಸಹವಾಸವೇ ಬೇಡ ಎಂದು ನಿರ್ಣಯ ತೆಗೆದುಕೊಳ್ಳುವುದಕ್ಕೇ ಹೆದರುತ್ತಾರೆ. ನೌಕಾಸೇನೆಯ ಅಡ್ಮಿರಲ್ ಜೋಶಿ ರಾಜಿನಾಮೆ ನೀಡಿ ತಿಂಗಳುಗಳಾದರೂ ಅವರ ಸ್ಥಾನಕ್ಕೆ ಯಾರೂ ಇಲ್ಲದಿರುವುದು ಕೆಟ್ಟದ್ದೆನಿಸುತ್ತದೆ. ಅಗತ್ಯ ಸಲಕರಣೆಗಳನ್ನು ಒದಗಿಸದೇ, ಆಗುವ ಅನಾಹುತಕ್ಕೆಲ್ಲ ತಮ್ಮನ್ನು ಗುರಿ ಮಾಡುತ್ತಿರುವುದರಿಂದ ಬೇಸತ್ತ ಜೋಶಿ ರಾಜಿನಾಮೆ ನೀಡಿದರು. ಅವರ ನೇರವಂತಿಕೆ ಮೆಚ್ಚಬೇಕು. ಆದರೆ ಅವರ ಜಾಗವನ್ನು ಸರ್ಕಾರ ಇನ್ನೂ ತುಂಬಿಲ್ಲ ಎಂಬುದು ಖೇದಕರ.
ಅಣ್ಣಾ ಹಜಾರೆ ಕುರಿತು ಏನು ಹೇಳುವಿರಿ?
ಬಹಳ ಸರಳ ವ್ಯಕ್ತಿ. ನಾನವರ ಹಳ್ಳಿಗೂ ಭೇಟಿ ಕೊಟ್ಟಿದ್ದೆ. ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೂ ಒಂದು ಕಾಲದಲ್ಲಿ ಸೇನೆಯಲ್ಲಿದ್ದವರು. ಇಂಥವರಿಂದ ಆಕರ್ಷಿತರಾಗುವುದಕ್ಕೆ ಇನ್ನೇನು ಕಾರಣ ಬೇಕು? ಆದರೆ ಒಂದು ಗುಂಪು ತನ್ನ ವೈಯಕ್ತಿಕ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಅಣ್ಣಾ ಹಜಾರೆಯವರನ್ನು ಬಳಸಿಕೊಂಡು ನಂತರ ತೊರೆಯಿತು. ಬಿಜೆಪಿ ಸೇರಿದಂತೆ ಯಾವುದೇ ಪಕ್ಷವನ್ನು ಬೆಂಬಲಿಸುವವರಲ್ಲ ಹಜಾರೆ. ತಮ್ಮ ಸ್ವಾತಂತ್ರವನ್ನು ಕಾಯ್ದುಕೊಳ್ಳುವುದಕ್ಕೆ ಇಷ್ಟಪಡುವವರು. ಅವರ ಯೋಚನೆ ಭಿನ್ನ.
ಮೋದಿ ಸರ್ವಾಧಿಕಾರಿ ವ್ಯಕ್ತಿ ಅಂತಾರಲ್ಲ? ಅಂಥವರಿಂದ ದೇಶಕ್ಕೆ ಒಳಿತಾಗುತ್ತೆ ಅಂತೀರಾ?
ಇಂದಿರಾ ಗಾಂಧಿ ತ್ವರಿತ ನಿರ್ಣಯಗಳನ್ನು ಕೈಗೊಳ್ಳುವ ನಾಯಕಿ ಆಗಿದ್ದರು. ಅವರನ್ನೂ ಸರ್ವಾಧಿಕಾರಿ ಧೋರಣೆಯವರೆಂದು ಕರೆಯಲಾಗುತ್ತದೆ. ಆದರೆ ಗಮನಿಸ ಬೇಕಾದದ್ದು, ಅವರು ಉದ್ದೇಶಗಳನ್ನು ಸಾಧಿಸಲು ಸಫಲರಾದರಾ ಎಂಬುದನ್ನು. ಇಷ್ಟಕ್ಕೂ ನಮಗೆ ಬೇಕಿರುವುದೇನು? ಜವಾಬ್ದಾರಿ ತನ್ನದೆನ್ನುವ ದಾಢಸಿ ನಾಯಕತ್ವ. ಅವನು ಮೃದು, ಇವನು ಸರ್ವಾಧಿಕಾರಿ ಎಂಬ ಪದಗಳನ್ನು ಹೆಣೆಯುತ್ತ ಮಾಡಲಿಕ್ಕೇನಿದೆ? ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಿಕೊಂಡಿರುವ ದುರ್ಬಲ ನಾಯಕ ಬೇಕಾ? ಅಂಥವರಿಂದ ಈವರೆಗೆ ತೊಂದರೆಗೊಳಗಾಗಿದ್ದು ಸಾಲದೇನು?
Advertisement