

ಎನ್ಸಿಪಿ ನಾಯಕ ಶರದ್ ಪವಾರ್ 'ಹಿಂದುಸ್ತಾನ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿರುವುದಿಷ್ಟು...
ಕೇಂದ್ರದಲ್ಲಿ ಮೋದಿ ನಾಯಕತ್ವದ ಸರ್ಕಾರವೇ ಅಧಿಕಾರಕ್ಕೆ ಬರುವಂತಿದೆಯಲ್ಲ? ಹಾಗಾದಲ್ಲಿ ಏನು ಮಾಡುವಿರಿ?
ಮೋದಿಯವರಿಗೆ ಸ್ವೀಕಾರಾರ್ಹತೆ ಇಲ್ಲ. ಅವರ ನಿರ್ಣಯ ತೆಗೆದುಕೊಳ್ಳುವಿಕೆ ಮತ್ತು ಕಾರ್ಯಶೈಲಿಗಳ ಬಗ್ಗೆ ನನಗೆ ಆಕ್ಷೇಪಗಳಿವೆ. ಗುಜರಾತ್ ಸರ್ಕಾರದಲ್ಲಿ ಮೋದಿ ಹೊರತುಪಡಿಸಿದರೆ ಹೆಸರು ಮಾಡಿರುವ ಒಬ್ಬೇ ಒಬ್ಬ ಮಂತ್ರಿಯ ಹೆಸರು ಹೇಳಿ ನೋಡೋಣ? ಹಾಗೆಂದು ಮೋದಿ ಸರ್ವಾಧಿಕಾರದಲ್ಲಿ ನಂಬಿಕೆ ಇರಿಸಿರುವವರು ಎಂದೆಲ್ಲ ಹೇಳುವುದಿಲ್ಲ. ಆದರೆ ವಾಜಪೇಯಿ ಅವರು ಬಹಳ ಉದಾರ ಮತ್ತು ಗೌರವಾರ್ಹ ನಾಯಕರಾಗಿದ್ದರು. ಜನರಲ್ಲಿ ಮತ್ತು ಮೈತ್ರಿಪಕ್ಷಗಳಲ್ಲಿ ಸ್ವೀಕಾರಾರ್ಹತೆ ಹೊಂದಿದ್ದರು.
ಲೋಕಸಭೆ ಚುನಾವಣೆ ಬಳಿಕ ಕೇಂದ್ರದ ಚಿತ್ರಣ ಹೇಗಿರುತ್ತದೆ ಎನ್ನುವಿರಿ?
ಬಿಜೆಪಿಯೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅವರಿಗೆ ಬಹುಮತಕ್ಕೆ 50-100 ಸ್ಥಾನಗಳು ಕಡಿಮೆ ಬೀಳಲಿವೆ. ಪ್ರಾದೇಶಿಕ ಹಾಗೂ ಸಣ್ಣ ಪಕ್ಷಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಮಮತಾ ಬ್ಯಾನರ್ಜಿ, ಜಯಲಲಿತಾ ಇವರೆಲ್ಲ ಪ್ರಮುಖರಾಗುತ್ತಾರೆ. ಆದರೆ ಅವರು ಕೋಮುವಾದಿ ಶಕ್ತಿಗಳೊಂದಿಗೆ ಹೋಗುತ್ತಾರೆಂದು ನನಗನಿಸುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಶೇ. 21ರಷ್ಟು ಮುಸ್ಲಿಮರಿದ್ದಾರೆ. ಹಾಗೆಯೇ ಮಾಯಾವತಿಯವರು ಮೋದಿಯವರನ್ನು ಬೆಂಬಲಿಸಿದರೂ ಮುಸ್ಲಿಮರು ಮತ್ತು ದಲಿತರ ಮತ ಕಳೆದುಕೊಳ್ಳಬೇಕಾಗುತ್ತದೆ.
ಯುಪಿಎ ಸರ್ಕಾರದ ಎರಡು ಅವಧಿಗಳಿಗಿಂತ ವಾಜಪೇಯಿ ಸರ್ಕಾರವೇ ಚೆನ್ನಾಗಿತ್ತು ಎಂದು ನೀವು ಹೇಳಿದ್ದಿರಿ.
ವಾಜಪೇಯಿ ನಿಜಾರ್ಥದಲ್ಲಿ ಮುತ್ಸದ್ಧಿಯಾಗಿದ್ದರು. ಅವರ ನಿರ್ಣಯ ತೆಗೆದುಕೊಳ್ಳುವಿಕೆ ಸರ್ವಸಮ್ಮತವಾಗಿರುತ್ತಿತ್ತು. ತಮ್ಮ ಶ್ರೀಮಂತ ವ್ಯಕ್ತಿತ್ವದಿಂದ ಅವರು ದೇಶವನ್ನು ಉನ್ನತಿಗೆ ಒಯ್ದರು.
ರಾಹುಲ್ ಗಾಂಧಿ ಮೂಲಕ ಸಮಾನಾಂತರ ಅಧಿಕಾರ ಕೇಂದ್ರವೊಂದು ಕಾಂಗ್ರೆಸ್ನಲ್ಲಿದೆಯೇ?
ಸುಗ್ರೀವಾಜ್ಞೆ ವಿಚಾರದಲ್ಲಿ ಆದ ಗೊಂದಲವನ್ನು ನೀವು ಉದಾಹರಿಸುತ್ತಿದ್ದೀರಾದರೆ ಅದು ಅವರ ಪಕ್ಷದ ಆಂತರಿಕ ವಿಚಾರ ಎನ್ನುತ್ತೇನೆ. ಪ್ರಸ್ತಾವಕ್ಕಿಂತಲೂ ಮೊದಲು ಆಂತರಿಕವಾಗಿ ಹೆಚ್ಚಿನ ಚರ್ಚೆ ನಡೆದಿದ್ದರೆ ಅಂಥ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿತ್ತು.
Advertisement