

-ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಬಿಸಿಲಿನ ಝಳವನ್ನೂ ಲೆಕ್ಕಿಸುತ್ತಿಲ್ಲ. ಅವರೀಗ ಮತ ಲೆಕ್ಕಾಚಾರದಲ್ಲಿದ್ದಾರೆ. ಉತ್ಸಾಹದಿಂದ ಪ್ರಚಾರಕ್ಕಿಳಿದ್ದಾರೆ.
ಹುಬ್ಬಳ್ಳಿ: ಇದುವರೆಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ಸದಸ್ಯರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಗೆ ಈ ಬಾರಿ ಹ್ಯಾಟ್ರಿಕ್ ಸಾಧಿಸುವುದು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರ ಸಾಲಿನಲ್ಲಿ ಕುಳಿತುಕೊಳ್ಳುವ ತವಕ. ಸುಡು ಬಿಸಿಲೂ ಲೆಕ್ಕಿಸದೆ ಒಂದೇ ದಿನದಲ್ಲಿ 23 ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮುಗಿಸುವ ಆತುರ.
ಮೇಲಿಂದ ಮೇಲೆ ನೀರು ಮತ್ತಿತರ ತಂಪು ಪಾನೀಯ ಕುಡಿಯುವ ಮೂಲಕ ಬಿಸಿಲಿನ ದಣಿವು ತಣಿಸಿಕೊಂಡು ಮತದಾರರನ್ನು ಸೆಳೆಯಲು ಮತ್ತೆ ಉತ್ಸಾಹಭರಿತ ಭಾಷಣಕ್ಕೆ ಅಣಿಯಾಗುತ್ತಿದ್ದರು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ.
ಶಿಗ್ಗಾಂವಿ ವಿಧಾನಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಕೈಗೊಂಡಿದ್ದ ಇಡೀ ದಿನದ ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾಗಿದ್ದು 'ಕನ್ನಡಪ್ರಭ'. ಬೆಳಗಿನ ಪೂಜೆ ಮತ್ತಿತರ ಅನುಷ್ಠಾನ ಮುಗಿಸಿ ಪ್ರಚಾರಕ್ಕೆ ಸಿದ್ಧರಾದಾಗ ಸಮಯ ಬೆಳಗ್ಗೆ 8.50. ಮನೆಗೆ ಬಂದ ಕಾರ್ಯಕರ್ತರೊಂದಿಗೆ ತುಸು ಹೊತ್ತು ಚರ್ಚೆ. ಬಳಿಕ ಮನೆ ಸಮೀಪದ ಭವಾನಿನಗರದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ. ಶಿಗ್ಗಾಂವಿ ಮಾರ್ಗ ಮಧ್ಯೆ ಕಾರ್ಯಕರ್ತರನ್ನು ಭೇಟಿ ಮಾಡಿ, ತಡಸ ಗಾಯತ್ರಿ ಮಠಕ್ಕೆ ಭೇಟಿ ನೀಡಿ ಪೂಜೆ, ಮಠದ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ. ತಿಮ್ಮಾಪುರ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವಾಗ 11.40. ನಿಗದಿಗಿಂತ ಎರಡು ತಾಸು ತಡವಾಗಿತ್ತು. ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಮುಂದೆ ಎಲ್ಲ ಕಡೆಯೂ ಪ್ರಚಾರ ಕಾರ್ಯ ಎರಡು ತಾಸು ವಿಳಂಬವಾಗುತ್ತಲೇ ಸಾಗಿತು.
ಮಾಜಿ ಸಚಿವ ಮತ್ತು ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮತ್ತಿತರ ಮುಖಂಡರು, ಕಾರ್ಯಕರ್ತರೊಂದಿಗೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ 23 ಗ್ರಾಮಗಳಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಿದರು. ಮತದಾನಕ್ಕೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಉಳಿದಿರುವುದರಿಂದ ಕ್ಷೇತ್ರದ ಎಲ್ಲ ಗ್ರಾಮ ಹಾಗೂ ಪಟ್ಟಣಗಳಿಗೆ ಭೇಟಿ ನೀಡಬೇಕೆಂಬ ಪ್ರಯತ್ನ ಪ್ರಹ್ಲಾದ ಜೋಶಿ ಅವರದ್ದು. ಹೀಗಾಗಿಯೇ ದಿನಕ್ಕೆ 20ರಿಂದ 30 ಗ್ರಾಮಗಳಿಗೆ ಭೇಟಿ. ಬೆವರಿಳಿಸುತ್ತಾ ಮನೆ-ಮನಗಳ ಕದ ತಟ್ಟುತ್ತಿದ್ದಾರೆ.
ಮಧ್ಯಾಹ್ನದ ಊಟ ಸಂಜೆ
ಮಧ್ಯಾಹ್ನದ ಊಟ ಮುಗಿದಾಗ ಸಂಜೆ ಆರು ಹೊಡೆದಿತ್ತು! ಅದುವರೆಗೂ ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ, ಸೋಮಣ್ಣ ಬೇವಿನಮರದ ಹಾಗೂ ಇತರ ಬೆಂಬಲಿಗರಿಗೆ ನೀರು, ಎಳನೀರು, ತಂಪು ಪಾನೀಯಗಳೇ ಗತಿಯಾಗಿದ್ದವು. ಕತ್ತಲಾವರಿಸುತ್ತಿದ್ದಂತೆ ರೋಡ್ ಶೋ ಪ್ರಚಾರಸಭೆಗಳಾಗಿ ಮಾರ್ಪಟ್ಟಿತು. ಹಳೇ ಮನ್ನಂಗಿ, ಕುಣಿಮೆಳ್ಳಿಹಳ್ಳಿಯಲ್ಲಿ ಸಭೆ ಮುಗಿಸಿ ಕೊನೆಯ ಗ್ರಾಮ ತೆವರಮೆಳ್ಳಿಹಳ್ಳಿಯಿಂದ ಹೊರಡುವಾಗ ರಾತ್ರಿ 10 ದಾಟಿತ್ತು. ಎಲ್ಲೆಡೆ 'ಮೋದಿ ಪ್ರಧಾನಿಯಾಗಲು ನನ್ನನ್ನು ಗೆಲ್ಲಿಸಿ' ಎಂದು ಮನವಿ ಮಾಡುತ್ತಿದ್ದರು. ದೇಹ ದಣಿದಿದ್ದರೂ ಜೋಶಿ ಮುಖದಲ್ಲಿ ತೃಪ್ತಿಯಿತ್ತು. ಮಂದಹಾಸ ಮಿನುಗುತ್ತಿತ್ತು. 10.40ಕ್ಕೆ ಅಲ್ಲಿಂದ ಹೊರಟು, ಹುಬ್ಬಳ್ಳಿಯ ಮನೆ ತಲುಪಿದಾಗ 11.30. ಊಟ ಮುಗಿಸಿದಾಗ ರಾತ್ರಿ 12. ಆಮೇಲೆ ಮನೆ ಮಂದಿಯೊಡನೆ ಒಂದಿಷ್ಟು ಚರ್ಚಿಸಿ ನಿದ್ರೆಗೆ ಜಾರಿದಾಗ 12.30 ದಾಟಿತ್ತು.
ಹೀಗಿತ್ತು ಜೋಶಿ ದಿನಚರಿ
-7.15- 7.45- ದಿನಪತ್ರಿಕೆಗಳ ಮೇಲೆ ಕಣ್ಣೋಟ
- 7.50- 8.20- ಸ್ನಾನ, ಪೂಜೆ, ತಿಂಡಿ
- 8.50- 9.15- ಮನೆಗೆ ಬಂದಿದ್ದ ಕಾರ್ಯಕರ್ತರ ಭೇಟಿ
- 9.20- ಭವಾನಿ ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ
- 11- ತಡಸದ ಗಾಯತ್ರಿ ಮಠದಲ್ಲಿ ಪೂಜೆ
- 11.40ರಿಂದ ರಾತ್ರಿ 10- ವಿವಿಧ ಗ್ರಾಮಗಳಲ್ಲಿ ಪ್ರಚಾರ
- ಆನಂದ ಅಂಗಡಿ
Advertisement