

-ಎಲ್ಲರೊಂದಿಗೂ ಬೆರೆಯುವ ಸೊಗಸುಗಾರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 6
ರಾತ್ರಿ ಮಲಗುವುದು ಎಷ್ಟೇ ಹೊತ್ತಾಗಿರಲಿ, ಬೆಳಗ್ಗೆ 5.30ಕ್ಕೆಲ್ಲ ಎದ್ದುಬಿಡುತ್ತಾರೆ. ಅರ್ಧ ಗಂಟೆ ಪ್ರಾಣಾಯಾಮ,ಧ್ಯಾನ. ಸ್ನಾನ ಮುಗಿಸಿ ಸೂರ್ಯ ಮೂಡುವ ಮುನ್ನ ಕಾರು ಹತ್ತಿದರೆ ಮುಗಿಯಿತು. ಮಾರ್ಗದಲ್ಲಿ ಸಿಗುವ ಯಾವುದಾದರೂ ಹೋಟೆಲ್‌ನಲ್ಲಿ ಅಥವಾ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಊಟ, ತಿಂಡಿ. ಮತ್ತೆ ಹಾಸಿಗೆಗೆ ಮೈ ಒಡ್ಡುವಾಗ ನಡುರಾತ್ರಿ ದಾಟಿರುತ್ತದೆ, ಅದೂ ಹೆಚ್ಚಿನ ದಿನಗಳಲ್ಲಿ ಮುಖಂಡರ ಮನೆಗಳಲ್ಲೇ ವಾಸ್ತವ್ಯ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಸದ್ಯದ ದಿನಚರಿ ಇದು.
'ಕನ್ನಡಪ್ರಭ' ಅವರನ್ನು ಜತೆಯಾದ ದಿನ ಹೊಸಪೇಟೆಯ ಹೋಟೆಲ್‌ನಲ್ಲಿ ತಂಗಿದ್ದರು ಶ್ರೀರಾಮುಲು. ಬೆಳಗ್ಗೆ6.30ಕ್ಕೆ ಪ್ರಚಾರ ಆರಂಭಿಸಿದವರು ಪ್ರಯಾಣ ಮಧ್ಯೆಯೇ ದಿನಪತ್ರಿಕೆಗಳನ್ನು ಓದಿದರು. ಹಮಕುಂದಿ ಸಮೀಪದ ಚಿಕ್ಕ ಹೋಟೆಲ್‌ನಲ್ಲಿ ಇಡ್ಲಿ, ಮಿರ್ಚಿಯ ಲಘು ಉಪಾಹಾರ. ರಾಯಪುರ ಶಿವಣ್ಣ ತಾತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಆರಂಭಿಸಿದಾಗ ಸಮಯ 9.25 ತೋರಿಸುತ್ತಿತ್ತು. ನಿರಂತರ ಓಡಾಟದಿಂದಾಗಿ ಧ್ವನಿ ಒಡೆದಿತ್ತು, ಸರಿಪಡಿಸಿಕೊಳ್ಳಲು ಆಗಾಗ ಔಷಧಿ ಸೇವಿಸುತ್ತ, ದಣಿವರಿಯದೆ 15 ತಾಸು ಪ್ರಚಾರ ಮಾಡಿದರು. ಒಂದೇ ದಿನ 20 ಹಳ್ಳಿ ಸುತ್ತಿದರು.
ಹೊಟ್ಟೆ ಹಸಿದಲ್ಲೇ ಊಟ: ರಾಮುಲು ಅವರದ್ದು ಹೊಟ್ಟೆ ಹಸಿದಲ್ಲಿ ಊಟ. ಇಂಥದ್ದೇ ಬೇಕು ಎಂಬ ಅಪೇಕ್ಷೆ ಇಲ್ಲ. ಮಿರ್ಚಿ ಎಂದರೆ ಪ್ರಾಣ. ಹಳ್ಳಿಗರನ್ನು ಉದ್ದೇಶಿಸಿ ಮಾತನಾಡುವಾಗ, 'ದಿನಕ್ಕೆ ಮೂವತ್ತು ಹಳ್ಳಿಗಳಲ್ಲಿ ಮಾತನಾಡಿ, ಸುಸ್ತಾಗಿದ್ದೇನೆ, ಧ್ವನಿ ಒಡೆದು ಹೋಗಿದೆ, ತಪ್ಪು ತಿಳಿಯಬೇಡಿ' ಎಂದೇ ಮಾತು ಆರಂಭಿಸುತ್ತಿದ್ದ ಅವರು, 'ಮೋದಿ ಪ್ರಧಾನಿಯಾಗಲು ಮತ್ತೆ ಬಿಜೆಪಿಗೆ ಬಂದಿದ್ದೇನೆ. ನನ್ನನ್ನು ಗೆಲ್ಲಿಸಿ' ಎಂದು ಮನವಿ ಮಾಡುತ್ತಿದ್ದರು. ಕೆಲವು ಹಳ್ಳಿಗಳಲ್ಲಿ ಯುವಕರು ತಮ್ಮ ಮನೆಗೆ ಬರುವಂತೆ ದುಂಬಾಲು ಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಪ್ರತಿ ಹಳ್ಳಿಯಲ್ಲಿ ಒಂದೆರಡು ಮನೆಗಳಿಗೆ ಭೇಟಿ ಕೊಡುತ್ತಿದ್ದರು. ಹುರುಳಿಯಾಳ್‌ನಲ್ಲಿ ತಮ್ಮ ಮನೆಗೆ ಬಂದ ಅವರನ್ನು ಮಹಿಳೆಯರು ದೃಷ್ಟಿ ತೆಗೆದರು. ಉಳಿದವರನ್ನು ಆತ್ಮೀಯತೆಯಿಂದ ಮೈದಡವಿ, 'ಚುನಾವಣೆ ಮುಗೀಲಪಾ, ಆಮ್ಯಾಗೆ ಬರ್ತೀನಂತ' ಎಂದು ಸಮಾಧಾನಿಸುತ್ತಿದ್ದರು.
ಬಣವಿಕಲ್‌ನಲ್ಲಿ ಪ್ರಚಾರ ಮುಗಿಸಿ ಎಂಪಿಎಂಸಿ ಅಧ್ಯಕ್ಷ ಕೆ. ನಾಗರಾಜ್ ಮನೆಯಲ್ಲಿ ರೊಟ್ಟಿ, ಚಪಾತಿ, ಪಾಯಸದ ಊಟ. ಭೋಜನದ ತರುವಾಯ ಅದೇ ಊರಲ್ಲಿ ಮುಸ್ಲಿಂ ಮುಖಂಡರೊಂದಿಗೆ ರಸ್ತೆ ಪಕ್ಕದಲ್ಲೇ ನಿಂತು ಮಾತುಕತೆ.
ಹುಡೇಂನಲ್ಲಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಊಟ ಮುಗಿಸಿ, ಮುಖಂಡರೊಂದಿಗೆ ಚುನಾವಣೆ ಬಗ್ಗೆ ಚರ್ಚೆ ಜಿ.ಪಂ. ಮಾಜಿ ಸದಸ್ಯ ಉಮೇಶ್ ಮನೆ ತಲುಪಿದಾಗ ರಾತ್ರಿ 12 ದಾಟಿತ್ತು. ಹಾಸಿಗೆಗೆ ಒರಗಿದ ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರಿದ್ದರು.
ಶ್ರೀರಾಮುಲು ದಿನಚರಿ
ಬೆಳಗ್ಗೆ
5.30 ನಿದ್ರೆಯಿಂದ ಎದ್ದರು
5.45 ಪ್ರಾಣಾಯಾಮ, ಧ್ಯಾನ
6.15 ಸ್ನಾನ
6.30 ಸ್ಥಳೀಯ ಮುಖಂಡರೊಂದಿಗೆ ಚರ್ಚೆ, ಪ್ರಯಾಣ ಆರಂಭ
9.00 ಹಮಕ್ಕುಂದಿ ಹೋಟೆಲ್‌ನಲ್ಲಿ ಇಡ್ಲಿ, ಮಿರ್ಚಿ ಸೇವನೆ
ಬೆಳಗ್ಗೆ 9.25- ರಾತ್ರಿ 10.15- ವಿವಿಧ ಗ್ರಾಮಗಳಲ್ಲಿ ಪ್ರಚಾರ
ರಾತ್ರಿ
10.20 ಹುಡೇಂನಲ್ಲಿ ಕಾರ್ಯಕರ್ತರ ಮನೆಯಲ್ಲಿ ಊಟ
11.00 ಪಕ್ಷದ ಮುಖಂಡರೊಂದಿಗೆ ಚರ್ಚೆ
12.00 ಕೂಡ್ಲಿಗಿಯ ಬಿಜೆಪಿ ಮುಖಂಡ ಉಮೇಶ್ ಮನೆಯಲ್ಲಿ ನಿದ್ರೆ
ವಿಶ್ರಾಂತಿಯೇ ಇಲ್ಲದೆ ಪ್ರಚಾರ
ಆಪ್ತ ಗೆಳೆಯ ಜನಾರ್ದನ ರೆಡ್ಡಿ ಅನುಪಸ್ಥಿತಿ ರಾಮುಲು ಅವರನ್ನು ಕಾಡುತ್ತಿದೆ. ಐದಾರು ದಿನಗಳಿಂದ ನಿತ್ಯ 15 ಗಂಟೆ ಸುತ್ತಾಡುತ್ತಾರೆ. ವಾಹನದಲ್ಲಿಯೂ ನಿದ್ದೆ ಇಲ್ಲ. ಕ್ಷೇತ್ರದ ಎಲ್ಲೆಡೆ ಪ್ರಚಾರ ವೈಖರಿ ಹೇಗಿದೆ ಎಂಬ ಮಾಹಿತಿ ಸ್ಥಳೀಯ ಮುಖಂಡರಿಂದ ದೂರವಾಣಿ ಮೂಲಕವೇ ಪಡೆಯುತ್ತಿದ್ದರು. ಮುಂದೇನು ಮಾಡಬೇಕೆಂಬ ಸಲಹೆ ನೀಡುತ್ತಿದ್ದರು. ಬರುವ ಕರೆಗಳಿಗೆ ಸಮಾಧಾನದಿಂದಲೇ ಉತ್ತರ ನೀಡುತ್ತಿದ್ದರು.
ಶಶಿಧರ ಮೇಟಿ
Advertisement