

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತೀವ್ರ ಪೈಪೋಟಿ ಇದೆ. ಕಳೆದ ಬಾರಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಈ ಬಾರಿ ಮೋದಿ ಅಲೆಯನ್ನು ಬಳಸಿ ಪ್ರಚಾರ ಕೈಗೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ಯುವ ಮುಖ ಎಂದು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಹೊಸ ಮುಖ ನಂದಿನಿ ಆಳ್ವ ಅವರು ತಮ್ಮ ಪತಿ ಜೀವರಾಜ್ ಆಳ್ವ ಹೆಸರಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
- ಜೀವರಾಜ್ ಆಳ್ವ ರಾಜಕೀಯ ಅಭಿಮಾನಿಗಳು, ಕಾರ್ಯಕರ್ತರ ಬೆಂಬಲ ಇದೆಯೇ?
ಖಂಡಿತಾ ಇದೆ. ಜೀವರಾಜ್ ಅವರ ಅಭಿಮಾನಿಗಳು ಅಥವಾ ಕಾರ್ಯಕರ್ತರು ಬೇರೆ ಬೇರೆ ಪಕ್ಷಗಳಲ್ಲಿ ಇದ್ದರೂ ನಾಯಕರೆಲ್ಲ ಜೆಡಿಎಸ್‌ನಲ್ಲೇ ಇದ್ದಾರೆ. ಇಂತಹ ನಾಯಕರೊಂದಿಗೆ ಸ್ನೇಹ ಇದ್ದೇ ಇತ್ತು. ವೈಯಕ್ತಿಕವಾಗಿಯೂ ನನಗೆ ಸಾಕಷ್ಟು ಸ್ನೇಹಿತರಿದ್ದಾರೆ. ಪಕ್ಷದ ಇಮೇಜ್ ಜತೆಗೆ ಇತರರನ್ನು ಸಂಘಟಿಸುವ ಕೆಲಸ ಮಾಡುತ್ತೇನೆ. ಜೀವರಾಜ್ ಆಳ್ವ ಅವರು ಈ ಪಕ್ಷ ಕಟ್ಟಿ ಬೆಳೆಸಿದರು. ಅವರು ಮೂಲ ಧ್ಯೇಯಗಳು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಜೀವಂತವಾಗಿವೆ. ಅದಕ್ಕೇ ಜೆಡಿಎಸ್ ಸೇರಿಕೊಂಡಿದ್ದೇನೆ.
- ನೀವು ಕೊನೆಯ ಕ್ಷಣದ ಅಭ್ಯರ್ಥಿ, ಯಾರು ಇಲ್ಲವೆಂದೇ?
ಹಾಗೆ ಭಾವಿಸಬೇಡಿ. ಯಾವುದೇ ಪಕ್ಷ ತೆಗೆದುಕೊಳ್ಳಿ, 20- 30 ವರ್ಷ ಪಕ್ಷದಲ್ಲಿದ್ದರೂ ಟಿಕೆಟ್ ನೀಡುವಾಗ ಸಾಕಷ್ಟು ಲೆಕ್ಕಾಚಾರಗಳಿರುತ್ತವೆ. ಒಂದು ಕಡೆ ವಿಧಿಯೂ ತನ್ನ ಆಟ ಆಡುತ್ತದೆ. ರಾಜಕೀಯ ಪ್ರಕ್ರಿಯೆಗಳೂ ಇರುತ್ತವೆ. ಐದಾರು ಅಭ್ಯರ್ಥಿಗಳು ಅಂತಿಮಗೊಳಿಸಿರುತ್ತಾರೆ. ಯಾರಿಗೆ ಟಿಕೆಟ್ ಎಂಬುದನ್ನು ಅಂತಿಮವಾಗಿಯೇ ನಿರ್ಧಾರ ಮಾಡಲಾಗುತ್ತದೆ. ಹಾಗೆಯೇ ನಾನು ಜೆಡಿಎಸ್ ಅಭ್ಯರ್ಥಿಯಾಗಿದ್ದೇನೆ.
- ಕಾಂಗ್ರೆಸ್ ಅಥವಾ ಬಿಜೆಪಿ ಯಾರು ನೇರ ಸ್ಪರ್ಧಿ?
ಈ ಕ್ಷೇತ್ರದಲ್ಲಿ ಯಾರೂ ಒಬ್ಬರು ಸ್ಪರ್ಧಿ ಎಂದು ಹೇಳಲು ಸಾಧ್ಯ ಇಲ್ಲ. ನಾನು ಹೊಸಬಳು ಎನ್ನಬಹುದು. ಆದರೆ, ಕಾಂಗ್ರೆಸ್ ಅಭ್ಯರ್ಥಿಯೂ ಚುನಾವಣೆಗೆ ಹೊಸಬರೇ. ಯಾವುದೇ ಚುನಾವಣೆ ಈವರೆಗೆ ಎದುರಿಸಿಲ್ಲ. ಅವರಿಗೂ ವೈಯಕ್ತಿಕ ವರ್ಚಸ್ಸಿಲ್ಲ. ಎಲ್ಲ ಪಕ್ಷದ್ದೇ ಆಗಬೇಕು. ಇನ್ನು ಬಿಜೆಪಿ ಅಭ್ಯರ್ಥಿ ಗಾಂಧಿನಗರದಲ್ಲೇ ಗೆದ್ದಿಲ್ಲ. ಮೋದಿ ಹವಾ ಇಟ್ಟುಕೊಂಡು ಮುಂದೆ ಹೋಗುತ್ತಿದ್ದಾರೆ ಅಷ್ಟೇ. ಹೀಗಾಗಿ, ಇಲ್ಲಿ ಯಾರೂ ಬಲಿಷ್ಠರಲ್ಲ. ಎಲ್ಲರೂ ಸ್ಪರ್ಧಿಗಳು ಅಷ್ಟೇ. ವೈಯಕ್ತಿಕ ವಿಶೇಷತೆಗಳಿಂದ ಗುರಿ ಸಾಧಿಸುವ ಶಕ್ತಿ ನನಗಿದೆ.
- ಅಳಿಯ, ಬಾಲಿವುಡ್ ನಟ ವಿವೇಕ್ ಒಬೇರಾಯ್ ಸಹಕಾರ ಪಡೆಯುತ್ತೀರಾ?
ಅನುಮಾನವೇ ಇಲ್ಲ. ಏಕೆಂದರೆ ನನ್ನಲ್ಲಿ ಹಣದ ಬಲ ಇಲ್ಲ. ಬಾಹುಬಲವೂ ಇಲ್ಲ. ನಮ್ಮ ಕುಟುಂಬದ ಸದಸ್ಯರು ನನ್ನ ಪ್ರಚಾರಕ್ಕೆ ಅನುವಾಗಲಿದ್ದಾರೆ. ವಿವೇಕ್ ಒಬೇರಾಯ್ ಇನ್ನೂ ಮೂರು ದಿನ ಈ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಏ.6, 11, 12ರಂದು ವಿವೇಕ್ ಪ್ರಚಾರ ಮಾಡುತ್ತಾರೆ. ಪಿಪಿಪಿ ಮಾದರಿಯಲ್ಲಿ ನಿರ್ದಿಷ್ಟ ಕಾಲಮಿತಿಯ ಯೋಜನೆ, ಕೇಂದ್ರದಿಂದ ಹೆಚ್ಚಿನ ಹಣ ಒದಗಿಸುವುದು ನನ್ನ ಗುರಿ.
ನನಗೆ ರಾಜಕೀಯ ಹೊಸದಲ್ಲ. ನನ್ನ ಪತಿ ಜೀವರಾಜ್ ಆಳ್ವ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಕೆಲಸ ಮಾಡಿದ್ದರು. ಅವರ ಕೆಲಸವನ್ನು ಮುಂದುವರಿಸುತ್ತೇನೆ.
- ನಂದಿನಿ ಆಳ್ವ
- ಸಂದರ್ಶನ- ಕೆರೆ ಮಂಜು
--
- ವಿಧಾನಸಭೆ ಚುನಾವಣೆ ಗೆಲ್ಲಲಾಗದ ವ್ಯಕ್ತಿ ಎಂಬ ಆರೋಪವಿದೆಯೆಲ್ಲ?
2008ರ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದೆ. ಆ ಬಳಿಕ ಇದೇ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದನಾಗಿದ್ದೇನೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಭಿನ್ನ ವಿಷಯಗಳ ಮೇಲೆ ನಡೆಯುತ್ತವೆ. ಈ ಚುನಾವಣೆಯಲ್ಲಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸುರೇಶ್‌ಕುಮಾರ್ ಹಾಗೂ ಶಾಸಕ ಸಿ.ರಘು ಅವರ ಬೆಂಬಲ ಇನ್ನಷ್ಟು ಶಕ್ತಿ ತುಂಬಲಿದೆ.
- ಐದು ವರ್ಷ ಸಂಸದರಾಗಿ ಕ್ಷೇತ್ರಕ್ಕೆ ಕೆಲಸ ಮಾಡಿಸಿಲ್ಲ ಎನ್ನುತ್ತಿದ್ದಾರಲ್ಲ?
ಸಂಸದನಾಗಿ 5 ವರ್ಷದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಮೆಟ್ರೋ ಕಾಮಗಾರಿಗೆ ಹಣ ಬಿಡುಗಡೆ, ರೇಲ್ವೆ ನಿಲ್ದಾಣ ಮೇಲ್ದರ್ಜೆ, ಶಾಂತಿನಗರ ಹಾಗೂ ದೊಮ್ಮಲೂರಿನಲ್ಲಿ ಬಸ್ ನಿಲ್ದಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನು 5 ವರ್ಷದ ಅವಧಿಯಲ್ಲಿ ಮಾಡಿದ್ದೇನೆ. ನನ್ನ ಸಾಧನೆ ಬಗ್ಗೆ ಮಾತನಾಡುವ ಇಬ್ಬರು ಅಭ್ಯರ್ಥಿಗಳು ಈ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಒಬ್ಬರು ಗಂಡನ ಹೆಸರು ಹೇಳಿಕೊಂಡು ಚುನಾವಣೆಗೆ ನಿಂತಿದ್ದರೆ, ಮತ್ತೊಬ್ಬರು ಚುನಾವಣೆಗೆ ಧರ್ಮದ ಬಣ್ಣ ಬಳಿಯುತ್ತಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಜನರು ಇದಕ್ಕೆ ಆಸ್ಪದ ನೀಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್‌ನ ಒಳ ಒಪ್ಪಂದಕ್ಕೆ ಜನ ತಕ್ಕ ಶಾಸ್ತಿ ಮಾಡುತ್ತಾರೆ.
- ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಗೆಲುವು ಅಸಾಧ್ಯ ಎಂಬ ಮಾತಿದೆ?
ಅಲ್ಪಸಂಖ್ಯಾತ ಮತಪ್ರಾಬಲ್ಯವಿರಬಹುದು. ಆದರೆ ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕೀಯ ಹಾಗೂ ಮತ ವಿಭಜನೆಯ ತಂತ್ರಗಳು ಎಲ್ಲರಿಗೂ ಅರ್ಥವಾಗಿದೆ. ಕಳೆದ ಬಾರಿ 19 ಸಾವಿರಕ್ಕೂ ಅಧಿಕ ಮತಗಳಿಂದ ಗೆಲವು ಸಾಧಿಸಿದ್ದೇನೆ. ಈ ಬಾರಿ ಎಲ್ಲ ವರ್ಗಗಳ ಮತಗಳ ಜತೆ ಮೋದಿ ಅಲೆಯಲ್ಲಿ ಗೆಲವಿನ ಅಂತರ ಇನ್ನಷ್ಟು ಹೆಚ್ಚಲಿದೆ. ಕಾಂಗ್ರೆಸ್‌ನ ಒಡಕು ಕೂಡ ಅಲ್ಪಮಟ್ಟಿಗೆ ನೆರವಾಗುತ್ತದೆ.
- ಮೋದಿ ಮಂತ್ರವಿಲ್ಲದಿದ್ದರೆ ಮೋಹನ್‌ಗೆ ಅಸ್ತಿತ್ವವಿಲ್ಲ ಎನ್ನುತ್ತಾರೆ?
ದೇಶವೇ ಮೋದಿಯನ್ನು ಕರೆಯುತ್ತಿರುವಾಗ ಬೆಂಗಳೂರು ಕೇಂದ್ರ ಇದಕ್ಕೆ ಹೊರತಲ್ಲ. ಆದರೆ ಮೋದಿ ಅಲೆ ಜತೆ 10 ತಿಂಗಳ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಸ್ಥಳೀಯ ಸಚಿವ ದಿನೇಶ್ ಗುಂಡೂರಾವ್ ಅವರ ಇಲಾಖೆಯಲ್ಲಿನ ಅನ್ನಭಾಗ್ಯ ಯೋಜನೆಯಲ್ಲಿನ 120 ಕೋಟಿ ಅಕ್ರಮ, ಬೆಂಗಳೂರು ಅಭಿವೃದ್ಧಿ ಮರೆತಿರುವುದು ಚುನಾವಣೆ ಪ್ರಮುಖ ವಿಷಯಗಳು.
- ಸಂದರ್ಶನ- ರಾಜೀವ್ ಹೆಗಡೆ
ದೇಶದ ಜನತೆ ಮೋದಿ ನಾಯಕತ್ವಕ್ಕೆ ವ್ಯಾಪಕ ಬೆಂಬಲ ತೋರಿಸುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿಯೂ ಮೋದಿ ಅಲೆ ಪ್ರಭಾವ ನನ್ನ ಗೆಲವಿಗೆ ಕಾರಣವಾಗುತ್ತದೆ. ನಾನು ಸಂಸದನಾಗಿ ಕೆಲಸ ಮಾಡಿಲ್ಲ ಎಂದಲ್ಲ. ಆದರೆ ಮೋದಿ ಅನಿವಾರ್ಯತೆಯ ಅರಿವು ಮೂಡಿಸುತ್ತಿರುವೆ.
- ಪಿ.ಸಿ. ಮೋಹನ್
---
- ಇದೇ ಮೊದಲು ಕಣಕ್ಕಿಳಿಯುತ್ತಿರುವ ನಿಮಗೆ ಯುಪಿಎ ವಿರೋಧಿ ಅಲೆ ಅಡ್ಡಿಯಾಗಲ್ಲವೇ?
ನನ್ನ ಪ್ರಕಾರ ಬೆಂಗಳೂರಿನಲ್ಲಿ ವ್ಯಕ್ತಿಯನ್ನು ನೋಡಿ ಜನ ಮತ ನೀಡುತ್ತಾರೆ. ಅಷ್ಟಕ್ಕೂ ಯುಪಿಎ ವಿರೋಧಿ ಅಲೆ ಎಂಬುದು ಬಿಜೆಪಿಯವರ ಸೃಷ್ಟಿ. ನಾವು ಹತ್ತು ವರ್ಷಗಳ ಸಾಧನೆಯ ಪಟ್ಟಿಯೊಂದಿಗೆ ಜನರ ಮುಂದೆ ಹೋಗುತ್ತಿದ್ದೇವೆ. ಬೆಂಗಳೂರು ಕೇಂದ್ರದಲ್ಲಿ ಹಾಲಿ ಸಂಸದ ಪಿ.ಸಿ. ಮೋಹನ್ ವಿರೋಧಿ ಅಲೆ ಇರುವುದು ಎಲ್ಲರಿಗೂ ಗೊತ್ತು. ಬೆಂಗಳೂರು ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ.
- ನಿಮಗೆ ಟಿಕೆಟ್ ನೀಡಿದ್ದಕ್ಕೆ ಸಮುದಾಯದಲ್ಲೇ ವಿರೋಧ ಇದೆಯಲ್ಲ?
ಬಹುಮುಖಿ ಸಂಸ್ಕೃತಿ ಇರುವ ಬೆಂಗಳೂರು ನಗರದಿಂದ ನಾನು ಸ್ಪರ್ಧಿಸುತ್ತಿದ್ದೇನೆ. ಜಾತಿ- ಧರ್ಮದ ರಾಜಕಾರಣ ನಡೆಸಿಲ್ಲ. ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಮತ ಶೇ.10ರಷ್ಟಿದೆ. ನಾನು ಶೇ.51ರಷ್ಟು ಮತಪಡೆದು ಗೆದ್ದಿದ್ದೇನೆ.
- ನಿಮಗೆ ಟಿಕೆಟ್ ನೀಡಿದ್ದರಿಂದ ಹಿರಿಯರು ಮುನಿಸಿಕೊಂಡಿದ್ದಾರಂತೆ?
ಯುವಕರಿಗೆ ಆದ್ಯತೆ ನೀಡಬೇಕೆಂಬ ಸೂತ್ರವನ್ನು ನಮ್ಮ ಪಕ್ಷ ಒಪ್ಪಿಕೊಂಡಿದೆ. ಎಲ್ಲ ಕಡೆ ಹೊಸ ನೀರು ಬರಬೇಕೆಂಬುದು ಪ್ರಕೃತಿ ನಿಯಮ. ಇದು ನನಗೂ ಅನ್ವಯವಾಗುತ್ತದೆ. ಮುಂದೊಮ್ಮೆ ಕಿರಿಯರಿಗೆ ಆದ್ಯತೆ ನೀಡಬೇಕಾದ ಸಂದರ್ಭ ಬಂದಾಗ ಸರಿದು ನಿಂತು ಪ್ರೋತ್ಸಾಹಿಸುವುದು ನನ್ನ ಕರ್ತವ್ಯವಾಗಿರುತ್ತದೆ.
- ನಿಮಗೆ ಮೋದಿ ಅಲೆ ಕಾಣಿಸ್ತಾ ಇಲ್ವಂತೆ ನಿಜಾನಾ?
ರಾಷ್ಟ್ರಾದ್ಯಂತ ಮೋದಿ ಅಲೆ ಇದೆ ಎಂದು ಬಿಜೆಪಿಯವರು ಬಿಂಬಿಸುತ್ತಾ ಇದ್ದಾರೆ. ಅಂತ ಸ್ಥಿತಿ ಇದಿದ್ದರೆ ಮೋದಿಯವರೇಕೆ ಎರಡು ಸುರಕ್ಷಿತ ಕ್ಷೇತ್ರ ಆಯ್ದುಕೊಳ್ಳುತ್ತಿದ್ದರು? ರಾಷ್ಟ್ರವ್ಯಾಪಿ ಅವರ ಪರ ಗಾಳಿ ಬೀಸುತ್ತಿದ್ದರೆ ಅವರು ಕೇರಳ, ಕರ್ನಾಟಕ ಅಥವಾ ತಮಿಳುನಾಡಿನ ಯಾವುದಾದರೊಂದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತಲ್ಲ? ಮೋದಿ ಸೂಪರ್‌ಮ್ಯಾನ್ ಆಗಿದ್ದರೆ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಷ್ಟ್ರ ಪ್ರವಾಸ ಮಾಡಬಹುದಿತ್ತಲ್ಲ.
- ಯಾವ ವಿಚಾರವಿಟ್ಟುಕೊಂಡು ನೀವು ಮತದಾರರ ಮುಂದೆ ಹೋಗುತ್ತೀರಿ?
ನಾನು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಬೆಂಗಳೂರಿನಿಂದ ಆಯ್ಕೆಗೊಂಡಿರುವ ಮೂವರು ಸಂಸದರ ನಿಷ್ಕ್ರಿಯತೆ ವಿರುದ್ಧ ಮಾತನಾಡುತ್ತೇನೆ. ಇವರಿಂದಾಗಿ ಬೆಂ. ನಗರ ಅಭಿವೃದ್ಧಿಯಲ್ಲಿ 25 ವರ್ಷ ಹಿಂದಕ್ಕೆ ಹೋಗಿದೆ.
ನನ್ನದು ಯುವಕರ ಜಾತಿ. ಶೇ.70ರಷ್ಟು ಯುವ ಮತದಾರರಿದ್ದರೂ ನೀತಿ- ನಿರೂಪಣೆ ಸಂದರ್ಭದಲ್ಲಿ ಧ್ವನಿಯಿಲ್ಲ. ಬೆಂಗಳೂರಿನ ಜನತೆ ಆಯ್ಕೆ ಮಾಡುತ್ತಾರೆ. ಯುವಕರಲ್ಲಿ ರಾಜಕೀಯ ಜಾಗೃತಿ ಮೂಡುತ್ತಿದೆ ಎಂಬುದನ್ನು ನನ್ನ ಗೆಲುವು ತೋರಿಸಿಕೊಡುತ್ತದೆ.
- ರಿಜ್ವಾನ್ ಅರ್ಷದ್
ಸಂದರ್ಶನ- ರಾಘವೇಂದ್ರ ಭಟ್
Advertisement