

ಬಿಜೆಪಿಯವರು ನರೇಂದ್ರ ಮೋದಿ ಪರವಾಗಿ ಮತ ಕೇಳುತ್ತಿದ್ದಾರೆ, ಅಭ್ಯರ್ಥಿ ನಳಿನ್ ಕುಮಾರ್ ಪರ ಮತ ಕೇಳುತ್ತಿಲ್ಲ. ಹೀಗಾಗಿ ಸ್ಪರ್ಧೆ ಇರುವುದು ಮೋದಿ ಮತ್ತು ನನ್ನ ನಡುವೆ. ಅದಕ್ಕಾಗಿಯೇ ಮೋದಿ ನನ್ನೆದುರು ನೇರವಾಗಿ ಸ್ಪರ್ಧಿಸುವಂತೆ ಸವಾಲು ಹಾಕುತ್ತೇನೆ.
-ಮೋದಿ ಕುರಿತು ನಾನೆಲ್ಲಿಯೂ ವೈಯಕ್ತಿಕ ಟೀಕೆ ಮಾಡಿಲ್ಲ, ಮಾಡುವುದಿಲ್ಲ. ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳುವವರು ನಾಮಪತ್ರ ಸಲ್ಲಿಸುವಾಗ ಪತ್ನಿ ಹೆಸರು, ಪತ್ನಿ ಆದಾಯ ಕೂಡ ಬರೆಯಬೇಕು. ಜನರ ಮುಂದೆ ಎಲ್ಲ ಹೇಳಬೇಕು. ಆದರೆ ಮೋದಿ ಮದುವೆ ಆಗಿದ್ದರೂ ಪತ್ನಿ ಹೆಸರು ಏಕೆ ಹೇಳುವುದಿಲ್ಲ? ಮೋದಿ ಪತ್ನಿ ಯಶೋದಾ ಬೆನ್ ಒಂಟಿ ಕೋಣೆಯಲ್ಲಿ ಒಬ್ಬಂಟಿಯಾಗಿ ಕಷ್ಟದಿಂದ ಬದುಕುತ್ತಿದ್ದಾರೆ. ಯಾರ ಮನೆಯಲ್ಲಿ ಹೆಣ್ಣು ಕಣ್ಣೀರಿಡುತ್ತಾಳೋ ಆ ಮನೆ ಉದ್ದಾರ ಆಗುವುದಿಲ್ಲ. ಮೋದಿಗೆ ತನ್ನ ಪತ್ನಿಗೆ ರಕ್ಷಣೆ ಕೊಡಲು ಆಗಿಲ್ಲ. ಇನ್ನು ದೇಶದ ರಕ್ಷಣೆ ಹೇಗೆ ಮಾಡುತ್ತಾರೆ? ಅದಕ್ಕಾಗಿ ನಾನು ಇದನ್ನು ಜನರ ಮುಂದೆ ಇಡುತ್ತಿದ್ದೇನೆ. ಮಹಿಳೆ ಮೇಲೆ ಗೌರವ ಇಲ್ಲದವರು ಆಡಳಿತ ನಡೆಸಬಾರದು. ನನ್ನ ತಾಯಿಗೆ ಮನೆ ಪಕ್ಕದಲ್ಲಿ ದೇವಸ್ಥಾನ ಕಟ್ಟಿದ್ದೇನೆ. ತಾಯಿ ಮೂರ್ತಿಗೆ ಪ್ರತಿದಿನ ಕೈಮುಗಿದು ಪೂಜಿಸಿಯೇ ಮುಂದುವರಿಯುತ್ತೇನೆ.
- ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆ ನನಗೆ ಗೊತ್ತಿದೆ. ನಾನು ಹಿಂದೆ ಗುಜರಾತ್ ಉಸ್ತುವಾರಿಯಾಗಿದ್ದೆ. ಗುಜರಾತ್ ಹಿಂದೆಯೇ ಅಭಿವೃದ್ಧಿಯಾಗಿತ್ತು. ಮೋದಿ ಕಾಲದಲ್ಲಿ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾದರು. ಮಹಿಳೆಯರು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಅಮುಲ್ ಸಂಸ್ಥೆಯನ್ನು ಜಗದ್ವಿಖ್ಯಾತ ಮಾಡಿದ್ದು ಕಾಂಗ್ರೆಸ್. ಸಹಕಾರಿ ಕ್ಷೇತ್ರ ಪ್ರಗತಿಯ ಸಾಧನೆ ಕಾಂಗ್ರೆಸ್‌ನದ್ದು. ದಿಲ್ಲಿ, ಕರ್ನಾಟಕ, ಮುಂಬೈ, ಹೈದರಾಬಾದ್‌ನಲ್ಲಿ ಮೆಟ್ರೋ, ಮೋನೊ ರೈಲಿದೆ. ಗುಜರಾತ್‌ನಲ್ಲಿ ಎಲ್ಲಿದೆ?
- ನಾವು ಬಿಜೆಪಿ, ಸಂಘ ಪರಿವಾರವನ್ನು ಸೋಲಿಸುತ್ತೇವೆ ಎಂದು ಹೇಳುತ್ತೇವೆ. ಆದರೆ ಕಿತ್ತೊಗೆಯುವ ಮಾತು ಆಡುವುದಿಲ್ಲ. ಮೋದಿ ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಿದ್ದಾರೆ. ಇದು ಸರಿ ಅಲ್ಲ. ಮೋದಿ ಸಮಾವೇಶಕ್ಕೆ ಜನ ಬಂದಿರಬಹುದು. ಅವರೆಲ್ಲ ಏಳು ಜಿಲ್ಲೆಗಳಿಂದ ಬಂದವರು. ಸಂಘಪರಿವಾರಕ್ಕೆ ಅಪಪ್ರಚಾರವೇ ಅಸ್ತ್ರ. ಅದನ್ನು ಎದುರಿಸಲು ಈ ಬಾರಿ ಸಿದ್ಧನಾಗಿದ್ದೇನೆ.
- ನನ್ನ ರಾಜಕೀಯ ಬದುಕು ತೆರೆದ ಪುಸ್ತಕ. ಭ್ರಷ್ಟಾಚಾರ ಮಾಡಿಲ್ಲ. ಚುನಾವಣೆ ವೆಚ್ಚ ಎಐಸಿಸಿ, ಕೆಪಿಸಿಸಿಯಿಂದ ಬರುತ್ತದೆ. ಪ್ರೈಮರೀಸ್ ಚುನಾವಣೆ ನಡೆದಾಗ ಅಲ್ಲಿ ಕಾಫಿ ವ್ಯವಸ್ಥೆ ಕೂಡ ನಾನು ಮಾಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ದುಂದುವೆಚ್ಚ, ಆಮಿಷ ಇರಕೂಡದು ಎಂದು ಇಲ್ಲಿಯೂ ಜಾಗೃತಿ ಮೂಡಿಸುತ್ತಿದ್ದೇನೆ. ನನಗೆ 50 ಸಾವಿರ ಪಿಂಚಣಿ ಸಿಗುತ್ತಿದೆ. 25 ಸಾವಿರವನ್ನು ಎಲ್ಲ ಧರ್ಮದ ಆರು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ನೀಡುತ್ತಿದ್ದೇನೆ. ನನ್ನ ಕ್ಷೇತ್ರವಲ್ಲದ ಉಡುಪಿಯ ಆಶ್ರಮಕ್ಕೂ ಪ್ರತಿ ತಿಂಗಳು ಹಣಕಾಸು ನೆರವು ನೀಡುತ್ತೇನೆ. ಉಳಿದ 25 ಸಾವಿರವನ್ನು ಬಡವರಿಗೆ, ನೆರವು ಕೇಳಿ ಬಂದವರಿಗೆ ಹಂಚುತ್ತೇನೆ. ಮನೆ ಖರ್ಚಿಗೆ ನಾನು ವಕೀಲನಾಗಿದ್ದಾಗ ದುಡಿದು ಖರೀದಿಸಿದ ಜಾಗದಲ್ಲಿ ತೋಟ ಮಾಡಿದ್ದೇನೆ. ಅದರ ಉತ್ಪನ್ನದಲ್ಲಿ ಮನೆ ಖರ್ಚು ಸಾಗುತ್ತದೆ. ಹೆಚ್ಚಿಗೆ ಬೇಕಿದ್ದರೆ ಇಬ್ಬರು ಮಕ್ಕಳಿದ್ದಾರೆ ಅವರು ನೀಡುತ್ತಾರೆ.
-ಭ್ರಷ್ಟಾಚಾರ ವಿಚಾರಗಳನ್ನು ಕೂಡ ಜನರ ಮುಂದಿಡುತ್ತೇವೆ. ಕೋಲ್‌ಗೇಟ್‌ನ ಬಗ್ಗೆ ವಿವರಿಸುತ್ತೇವೆ. ಒಂದೂ ಕಲ್ಲಿದ್ದಲು ತುಂಡು ಹೊರಗೆ ಹೋಗಿಲ್ಲ. ಎಲ್ಲಿಯೂ ನಷ್ಟ ಆಗಿಲ್ಲ. ಹಗರಣದಲ್ಲಿ ಭಾಗಿಯಾದವರನ್ನು ಕಾಂಗ್ರೆಸ್ ಶಿಕ್ಷೆಗೆ ಗುರಿಪಡಿಸಿದೆ ಎಂಬ ಸತ್ಯವನ್ನು ಜನರ ಮುಂದೆ ಇಟ್ಟು ಮನವರಿಕೆ ಮಾಡಿಕೊಡುತ್ತೇನೆ.
-ನಾನು ನಾಲ್ಕು ಸಾರಿ ಸೋತಿರಬಹುದು. ರಾಜಕೀಯದಲ್ಲಿ ಸೋಲು ಗೆಲವು ಇದ್ದದ್ದೇ. ಇಂದಿರಾ ಗಾಂಧಿ, ವಾಜಪೇಯಿ, ಆಡ್ವಾಣಿ ಕೂಡ ಸೋತಿದ್ದಾರೆ. ನಾನು ಸೋತರೂ ನಿಷ್ಠೆಯಿಂದ ಜನಸೇವೆ ಮಾಡುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. 2009ಕ್ಕಿಂತ ಪೂರ್ವದಲ್ಲಿ 13 ವರ್ಷ ಲೋಕಸಭೆಗೆ ನಾನು ಸ್ಪರ್ಧಿಸಿಲ್ಲ. ಕಳೆದ ಲೋಕಸಭೆಯಲ್ಲಿ ಎಲ್ಲರೂ ಪೂಜಾರಿ ಗೆಲ್ಲುತ್ತಾರೆ ಎಂದು ಭಾವಿಸಿದ್ದರು. ಆದರೆ ಬಿಜೆಪಿಯವರ ಜತೆ ಸ್ವಲ್ಪ ನಮ್ಮವರೂ ಆಟ ಆಡಿದರು. ಬಿಜೆಪಿ ಮತ್ತು ಸಂಘಪರಿವಾರವನ್ನು ಎದುರಿಸಲು ಸಂಪೂರ್ಣ ಸಿದ್ಧನಾಗಿದ್ದೇನೆ. ಅದಕ್ಕೆ ದಿಲ್ಲಿಗೆ ಹೋಗುವುದು ಕಡಿಮೆ ಮಾಡಿದ್ದೇನೆ. ಈಗಿನ ಸಂಸದರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ದಕ್ಷಿಣ ಕನ್ನಡದ ಜನತೆಗೆ ಗೊತ್ತಿದೆ. ನಾನು ನನ್ನ ಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದೇನೆ. ಅವರ ವಿಚಾರದಲ್ಲಿ ಮಾತನಾಡಿಲ್ಲ, ಮಾತನಾಡುವುದಿಲ್ಲ.
-ವಿಮಾನ ದುರಂತದಲ್ಲಿ 158 ಮಂದಿ ಸತ್ತಾಗ ಅಲ್ಲಿ ಹೋಗಿ ನೂರಕ್ಕೂ ಹೆಚ್ಚು ಶವಗಳನ್ನು ಮೇಲೆತ್ತಿ ನಾನು ಸಾಗಿಸಿದ್ದೆ. ಉಳಿದಂತೆ ಕಾಂಗ್ರೆಸ್, ಬಿಜೆಪಿ ನಾಯಕರು ಬಂದು ನೋಡಿ ಹೇಳಿಕೆಕೊಟ್ಟರು. ನೋವಿಗೆ ಸ್ಪಂದಿಸಿಲ್ಲ. ದುರಂತದಲ್ಲಿ ಮಡಿದ ಎರಡು ಜಿಲ್ಲೆಯ ಸಂತ್ರಸ್ತರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಪಡೆಯಲು ಸಹಕರಿಸಿದೆ. ಸಂಘಪರಿವಾರ ಮತ್ತು ಬಿಜೆಪಿಯ ಕೊರತೆಗಳನ್ನು ಜನರ ಮುಂದಿಟ್ಟೆ. ಪಾದಯಾತ್ರೆ ಮಾಡಿದೆ, ಮಹಾನಗರ ಪಾಲಿಕೆ, ವಿಧಾನಸಭೆ ಚುನಾವಣೆಯಲ್ಲಿ ಉಸ್ತುವಾರಿ ಮಾಡಿದರು. ಅಲ್ಲಿಯೂ ಒಗ್ಗಟ್ಟಿನಲ್ಲಿ ಕೆಲಸ ಮಾಡಿ ಜಯಭೇರಿ ಬಾರಿಸಿದೆವು. ವಿಧಾನಸಭೆ ಚುನಾವಣೆಯಲ್ಲಿಯೂ 8 ರಲ್ಲಿ 7 ಶಾಸಕರು ಗೆದ್ದರು. ನಾವು ಜನರ ಮನ ಗೆದ್ದಿದ್ದೇವೆ. ಪ್ರೈಮರೀಸ್ ಚುನಾವಣೆ ಮೊದಲು ಸ್ವಾಗತಿಸಿದ್ದು ನಾನೇ. ಹೈಕಮಾಂಡ್ ಅಧಿಕಾರ ವಿಕೇಂದ್ರೀಕರಣದ ದಿಟ್ಟ ಕಾರ್ಯ ಮಾಡಿದೆ. ಯಾರು ಪ್ರಾಮಾಣಿಕರು, ಕಾರ್ಯಕರ್ತರ ಜತೆ ಇದ್ದಾರೆ, ಯಾರು ಜನರನ್ನು ಪ್ರೀತಿ ಮಾಡುತ್ತಾರೆ ಎಂದು ಹೇಳುವವರು ಕಾರ್ಯಕರ್ತರೇ ತಾನೆ? ಹಿಂದೆಲ್ಲ ಕೇಂದ್ರ ಆಯ್ಕೆ ಸಮಿತಿ ಕೆಪಿಸಿಸಿ ಘಟಕಗಳ ಅಧ್ಯಕ್ಷರ ಅಭಿಪ್ರಾಯ ಪಡೆದು ಆಯ್ಕೆ ಮಾಡುತ್ತಿತ್ತು. ಆದರೆ ಈಗ ತೀರ್ಮಾನ ಕಾರ್ಯಕರ್ತರೇ ನೀಡುತ್ತಾರೆ. ಈಗ ಟಿಕೆಟ್ ನೀಡುವ 'ಯಜಮಾನ' ಕಾರ್ಯಕರ್ತನೇ.
-ಎಲ್ಲ ಧರ್ಮ, ಜಾತಿವರಿಗೆ ಮೀಸಲು ಇದೆ. ಗೌಡ ಸಾರಸ್ವತ ಮತ್ತು ಬ್ರಾಹ್ಮಣರಿಗೆ ಮಾತ್ರ ಮೀಸಲು ಇಲ್ಲ. ನಾನು ಭೇದಭಾವ ಮಾಡಿಲ್ಲ. ಎಲ್ಲ ಜಾತಿಯ ಬಡವರಿಗೆ ನೆರವು ನೀಡುತ್ತೇನೆ. ಏನೇ ಆದರೂ ಬ್ರಾಹ್ಮಣರಿಗೆ ಮೀಸಲು ಸೌಲಭ್ಯ ಕಲ್ಪಸದೆ ಬಿಡುವುದಿಲ್ಲ. ಉಡುಪಿ ಕೃಷ್ಣ ಮಠ ಖಾಸಗೀಕರಣ ವಿಚಾರ ಬಂದಾಗ ನಾನೇ ಸ್ವರ ಎತ್ತಿದ್ದು, ಮೂಢನಂಬಿಕೆ ವಿರೋಧಿ ಕಾನೂನು ಮಾಡುವಾಗ ಅದನ್ನು ತಡೆದದ್ದು ನಾನೇ. ನನ್ನ ಧ್ವನಿ ಸ್ವಲ್ಪ ಹೆಚ್ಚು, ವಕೀಲನಾಗಿದ್ದಾಗ ಕೋರ್ಟ್‌ನಲ್ಲಿಯೂ ಅದೇ ಸ್ವರ, ಪಾರ್ಲಿಮೆಂಟ್‌ನಲ್ಲಿ ಅದೇ ಸ್ವರ. ಪ್ರೀತಿ ಇಲ್ಲದೆ ನಾನೆಂದೂ ಗದರುವುದಿಲ್ಲ. ಹೀಗಾಗಿ ಪೂಜಾರಿ ನಮಗೆ ಜೋರು ಮಾಡಬೇಕು, ಆಗ ಏನಾದರೂ ಒಳ್ಳೆಯದು ಮಾಡುತ್ತಾರೆ ಎಂಬ ಭಾವನೆ ನಮ್ಮ ಕಾರ್ಯಕರ್ತರಲ್ಲಿದೆ. ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ನನ್ನ ಸ್ಪಷ್ಟ ನಿಲುವು. ಸ್ವಾರ್ಥಕ್ಕೂ ಒಂದು ಮಿತಿ ಇದೆ. ನಾನು ಇರುವವರೆಗೆ ಎತ್ತಿನಹೊಳೆ ಯೋಜನೆ ಜಾರಿಯಾಗಲು ಬಿಡುವುದಿಲ್ಲ.
- ಜಿತೇಂದ್ರ ಕುಂದೇಶ್ವರ
Advertisement