

ಬಿಜೆಪಿಯ ಪ್ರಮುಖ ಚಹರೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ಅರುಣ್ ಜೇಟ್ಲಿಯವರು, ತಮ್ಮ 35 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ "ಹಿಂದುಸ್ಥಾನ್ ಟೈಮ್ಸ್" ಪತ್ರಿಕೆಗೆ ಅವರು ನೀಡಿದ ಸಂದರ್ಶನ ಇಲ್ಲಿದೆ...
- ಏಕೆ ಈ ಬಾರಿ ಲೋಕಸಭೆ ಚುನಾವಣೆಗಳನ್ನು ಎದುರಿಸಲು ತೀರ್ಮಾನಿಸಿದಿರಿ?
ಪೂರ್ಣಾವಧಿಗೆ ರಾಜಕೀಯದಲ್ಲಿ ತೊಡಗಬೇಕು ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ದೆಹಲಿಯ ವಿದ್ಯಾರ್ಥಿ ಮಟ್ಟದ ರಾಜಕೀಯದಲ್ಲಿ ಬೆಳೆದು, ನಂತರ ವಕೀಲನಾಗಿ ಸ್ಥಿರಗೊಂಡೆ. ಜೊತೆ ಜೊತೆಗೇ ಚುನಾವಣೆಗಳಲ್ಲಿ ಸ್ಪರ್ಧಿಸದೇ ಬಿಜೆಪಿಗಾಗಿ ಕೆಲಸ ಮಾಡಿದೆ. ನಾನು ಯಾವುದೇ ಚುನಾವಣೆಗಳನ್ನು ಎದುರಿಸದಿದ್ದರೂ 1999ರಲ್ಲಿ ನಾನು ಸಚಿವನಾಗುವ ಸನ್ನಿವೇಶ ನಿರ್ಮಾಣವಾಯಿತು(ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರದಲ್ಲಿ). 2004 ಮತ್ತು 2009 ಚುನಾವಣೆಗಳ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ದೊರಕಿತು. ಹಾಗಾಗೇ ಆಗ ಕೂಡ ನಾನು ಸ್ಪರ್ಧಿಸಲಿಲ್ಲ. ಸ್ಪರ್ಧಿಸುವ ಅವಕಾಶವನ್ನು ಈ ಬಾರಿ ಕೊಟ್ಟಿರುವ ಪಕ್ಷಕ್ಕೆ ನಾನು ಋಣಿಯಾಗಿದ್ದೇನೆ. ಅದರಲ್ಲೂ ಮುಖ್ಯವಾಗಿ ನನ್ನ ಮನಸ್ಸು ಬದಲಿಸಿದ ನವಜೋತ್ ಸಿಂಗ್ ಸಿಧು( ಅಮೃತಸರದ ಸಂಸದ) ಅವರಿಗೆ ಧನ್ಯವಾದಗಳನ್ನರ್ಪಿಸುತ್ತೇನೆ.
- ಅಮೃತಸರವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?
ಅಮೃತಸರದಿಂದ ಸ್ಪರ್ಧಿಸುತ್ತಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ನನ್ನ ಕುಟುಂಬಕ್ಕೆ ಆ ಮಹಾನ್ ನಗರದೊಂದಿಗೆ ಹತ್ತಿರದ ನಂಟಿದೆ. ಚಿಕ್ಕವನಿದ್ದಾಗಿಂದ ಆ ಸಂಬಂಧವನ್ನು ನಾನು ಸಾಕ್ಷಿಯಾಗಿದ್ದೇನೆ. ನನ್ನ ತಂದೆ ಲಾಹೋರಿನವರು, ಆದರೆ ನನ್ನ ತಾಯಿ ಮತ್ತು ಅಜ್ಜ-ಅಜ್ಜಿ ಅಮೃತಸರದವರು. ಇನ್ನು ನನ್ನ ತಂದೆಯ ಬಹುತೇಕ ಸಂಬಂಧಿಕರು ಅಲ್ಲಿನವರೇ.ನನ್ನ ಮಡದಿ ಜಮ್ಮುದವಳಾದರೂ ಹುಟ್ಟಿದ್ದು ಅಮೃತಸರದಲ್ಲಿ.
- ನಿಮ್ಮ ನಿರ್ಧಾರ, ತಮ್ಮ ಟೀಕಾಕಾರರನ್ನು ಸುಮ್ಮನಾಗಿಸಲು ಪ್ರಣಬ್ ಮುಖರ್ಜಿ 2009ರಲ್ಲಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಂತೆಯೇ ಇದೆಯಲ್ಲ?
ನನ್ನ ವಿಷಯದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ನಾನು ಒಬ್ಬ ರಾಜಕಾರಣಿಯಾಗಿ ಮತ್ತು ವೃತ್ತಿಪರ ವಕೀಲನಾಗಿಯೂ ರೂಪುಗೊಂಡವನು. ನಂತರ, ಪೂರ್ಣಾವಧಿ ರಾಜಕಾರಣಿಯಾಗಬೇಕಾಯಿತು. ಹಲವು ರಾಜ್ಯಗಳ ಪ್ರಭಾರಿಯಾಗಿ ನೇತೃತ್ವ ವಹಿಸಿಕೊಂಡ ನಂತರವಂತೂ ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ಈ ಪರಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎನ್ನುವುದನ್ನು ಯಾರೂ ಊಹಿಸಿರಲಿಲ್ಲ.
-ಒಂದು ವೇಳೆ ಮೋದಿ ನೇತೃತ್ವದ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕ ಸ್ಥಾನಗಳನ್ನು ಗೆಲ್ಲಲು ವಿಫಲವಾದರೆ, ಮಿತ್ರಪಕ್ಷಗಳನ್ನು ಸೆಳೆಯಲು ನೀವು ಸಂಭಾವ್ಯ ಪ್ರಧಾನಿಯಾಗಲು ಸಿದ್ಧರಿದ್ದೀರಾ?
ಸಾಧ್ಯವೇ ಇಲ್ಲ. ಬಿಜೆಪಿಯಲ್ಲಿ "ಪ್ಲ್ಯಾನ್-ಬಿ" ಇಲ್ಲವೇ ಇಲ್ಲ. ನರೇಂದ್ರ ಮೋದಿ ಗೆದ್ದೇ ಗೆಲ್ಲುತ್ತಾರೆ ಮತ್ತು ಮುಂದಿನ ಸರ್ಕಾರ ರಚಿಸುವಷ್ಟು ಜನಾದೇಶ ನಮಗೆ ದೊರಕಿಯೇ ತೀರುತ್ತದೆಂಬ ಭರವಸೆಯಿದೆ. ನಾವು ಬಲಿಷ್ಠವಾಗಿ ಹೊರಹೊಮ್ಮಿದಾಗ ಮಿತ್ರಪಕ್ಷಗಳ ಬೆಂಬಲ ಪಡೆಯುವಲ್ಲಿ ಯಾವುದೇ ಸಮಸ್ಯೆಯಿರದು. ಭಾರತೀಯ ರಾಜಕಾರಣದ ಗುಣವೇ ಇದು.
-ಎಲ್.ಕೆ. ಆಡ್ವಾಣಿಯವರು, ಪ್ರಧಾನಮಂತ್ರಿಯನ್ನು ಲೋಕಸಭೆಯಿಂದ ಆಯ್ಕೆ ಮಾಡಬೇಕು ಎಂದು ಹಿಂದೊಮ್ಮೆ ಹೇಳಿದ ಮಾತನ್ನು ನೀವು ಒಪ್ಪುತ್ತೀರಾ?
ಪ್ರಧಾನಮಂತ್ರಿ ಲೋಕಸಭೆಯಿಂದ ಬಂದಿರಬೇಕು ಎನ್ನುವುದು ಪ್ರಜಾಪ್ರಭುತ್ವದ ವಾಡಿಕೆ. ಆದರೆ ಅದನ್ನು ಸಂವಿಧಾನದಲ್ಲಿ ಹೇಳಲಾಗಿಲ್ಲ. ಸಹಜವಾಗಿಯೇ ಪ್ರತಿಯೊಂದು ರಾಜಕೀಯ ಪಕ್ಷಗಳೂ ಲೋಕಸಭೆಯ ಈ ವಾಡಿಕೆಗೆ ಪ್ರಾಮುಖ್ಯ ಕೊಡಬೇಕು ಎಂಬ ಅಜೆಂಡಾ ಹೊಂದಿರುತ್ತವೆ. ಆದರೆ ಸಚಿವನಾಗಿ ನಾನು ಎರಡೂ ಮನೆಗಳನ್ನೂ ಉದ್ದೇಶಿಸಿ ಮಾತನಾಡಿದ್ದೇನೆ. ವಕ್ತಾರ, ಸಚಿವ, ಪಕ್ಷದ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ ನಾಯಕನಂಥ ನಾಲ್ಕು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಪ್ರತಿಯೊಂದು ಹುದ್ದೆಯಿಂದಲೂ ಬಹಳಷ್ಟು ಕಲಿತಿದ್ದೇನೆ. ಒಂದಂತೂ ಸತ್ಯ, ಮುಂದಿನ ಸ್ಥಾನವೂ(ಲೋಕಸಭೆಯ ಸದಸ್ಯನಾಗಿ) ನನ್ನ ಕಲಿಕೆಯ ಭಾಗವಾಗಿರಲಿದೆ.
-ಇತ್ತೀಚಿನ ಬ್ಲಾಗ್ ಬರಹದಲ್ಲಿ, ಪಕ್ಷದ ಕಾರ್ಯಕರ್ತರು 'ನಿಜವಾದ ಸಮಸ್ಯೆಗಳತ್ತ' ಗಮನಹರಿಸಬೇಕು ಎಂದು ಹೇಳಿದ್ದೀರಿ. ಕೆಸರೆರಚಾಟದಲ್ಲಿ ತೊಡಗಿರುವ ನಾಯಕರಿಗೆ ಎಚ್ಚರಿಸಲೆಂದು ಹೀಗೆ ಬರೆದಿದ್ದೀರಾ?
ಹಾಗೆ ಹೇಳುವುದು ಸರಿಯಲ್ಲ. ನಾನು ಬಿಜೆಪಿಯ ನೀತಿ ನಿರೂಪಣಾ ಪ್ರಕ್ರಿಯೆಯ ಭಾಗವಾಗಿದ್ದೇನೆ. ಅಭ್ಯರ್ಥಿಗಳ ಆಯ್ಕೆ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಬಿಜೆಪಿ ತೆಗೆದುಕೊಳ್ಳುವ ನಿರ್ಧಾರಗಳು ಅನುಕರಣೀಯವಾಗಿವೆ. ಕೊನೆಯ ಹಂತದಲ್ಲಿ ಹೆಚ್ಚುವರಿ 2 ಪ್ರತಿಶತ ಮತಗಳಿಗಾಗಿ ಗಮನಹರಿಸಬೇಕು ಎನ್ನುವುದನ್ನು ಹೇಳುವುದಕ್ಕಾಗೇ ನಾನು ಆ ಲೇಖನ ಬರೆದದ್ದು. ಬೇರ್ಯಾವ ಕಾರಣಕ್ಕೂ ಅಲ್ಲ.
- ಅಮೃತಸರದ ಬಗ್ಗೆ ವಿಶೇಷವಾಗಿ ಏನಾದರೂ ಹೇಳಲು ಬಯಸುತ್ತೀರಾ?
ಅಮೃತಸರ ಸಿಖ್ ಗುರುಗಳ ನೆಲೆ. ಮೂಲತಃ ವ್ಯಾಪಾರಿ ಸ್ಥಳವಾಗಿದ್ದ ಇದು, ಈಗ ನಗರ ಕೇಂದ್ರವಾಗಿ ಬದಲಾಗಿದೆ. ಅಲ್ಲಿ ಅತ್ಯಂತ ರುಚಿಕರವಾದ ಖಾದ್ಯಗಳು ಸಿಗುತ್ತವೆ. ಈ ಕಾರಣಕ್ಕೂ ಭೋಜನಪ್ರಿಯನಾದ ನನಗೆ ಅಮೃತಸರದೊಂದಿಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು. ಅದು ಭಾರತದ ಆಹಾರ ರಾಜಧಾನಿ. ಆದರೆ ಅದಕ್ಕಿಂತಲೂ ಹೆಚ್ಚಿನ ವೈಭವಕ್ಕೆ ಅರ್ಹವಾದ ನಗರವದು.
Advertisement