

ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧಿಸಿರುವವರು ಆಪ್‌ನ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಕುಮಾರ್ ಬಿಶ್ವಾಸ್. ಅದು ಲಾಗಾಯ್ತಿನಿಂದಲೂ ನೆಹರು-ಗಾಂಧಿ ಕುಟುಂಬದ ಭದ್ರಕೋಟೆ. ಈ ಬಾರಿ ತಾವು ಗೆದ್ದೇ ಗೆಲ್ಲುವುದಾಗಿ ಹೇಳುತ್ತಿರುವ ಬಿಶ್ವಾಸ್, ಐಎಎನ್‌ಎಸ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದು...
- ರಾಹುಲ್ ಗಾಂಧಿ ಈ ಬಾರಿ ಅಮೇಠಿಯಲ್ಲಿ ಕೇವಲ ಸೋಲುವುದಲ್ಲ, ಬಹುದೊಡ್ಡ ಮಾರ್ಜಿನ್‌ನಿಂದ ಸೋಲುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಇದುವರೆಗೆ ಅವರಿಗೆ ಸವಾಲು ಹಾಕುವವರೇ ಯಾರೂ ಇದ್ದಿರಲಿಲ್ಲ. ಆಪ್ ಈಗ ಅಂತಹ ಪರ್ಯಾಯ ಶಕ್ತಿಯಾಗಿ ಲಭ್ಯವಿದೆ. ಅಮೇಠಿಯಲ್ಲಿ ಐತಿಹಾಸಿಕ ಪ್ರಚಾರವೊಂದು ನಡೆಯುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಮತದಾರರೊಂದಿಗೆ ಸಂವಾದ ನಡೆಸಿದಾಗ ರಾಹುಲ್ ಸೋಲು ಮತ್ತು ನನ್ನ ಗೆಲವು ಖಾತ್ರಿಯಾಗಿದೆ.
- ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ತಾನು ಹೊಂದಿರುವ ಸ್ಥಾನಗಳನ್ನೆಲ್ಲ ಕಳೆದುಕೊಳ್ಳಲಿದೆ. ಇಡೀ ರಾಜ್ಯದಿಂದ ಒಂದೆರಡು ಸ್ಥಾನಗಳನ್ನು ಗೆಲ್ಲುವುದೂ ಅದಕ್ಕೆ ಕಷ್ಟವಿದೆ. ಕಾಂಗ್ರೆಸ್‌ನ ನಂತರ ದಯನೀಯ ಸೋಲನ್ನು ಅನುಭವಿಸುವ ಪಕ್ಷಗಳೆಂದರೆ ಬಿಎಸ್‌ಪಿ ಮತ್ತು ಆಡಳಿತಾರೂಢ ಸಮಾಜವಾದಿ ಪಕ್ಷ.
- ಅಮೇಠಿಯಲ್ಲಿ ಅಭಿವೃದ್ಧಿಯೇ ಮುಖ್ಯ ವಿಷಯ. ದಶಕಗಳ ಕಾಲ ರಾಹುಲ್ ಗಾಂಧಿಯವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಬಡತನ ಹಾಗೆಯೇ ಇದೆ. ಅಭಿವೃದ್ಧಿಯ ವಿಷಯದಲ್ಲಿ ಬಹಳ ಹಿಂದಿದೆ. ನಾನು ಅಮೇಠಿಯುದ್ದಕ್ಕೂ ಓಡಾಡಿದ್ದೇನೆ. ಬೇರೆ ಬೇರೆ ಹಳ್ಳಿಗಳಲ್ಲಿ ರಾತ್ರಿ ಕಳೆದಿದ್ದೇನೆ. ಬೆಳಗಾಗುತ್ತಲೇ ಇನ್ನೊಂದು ಹಳ್ಳಿಯತ್ತ ಪ್ರಯಾಣಿಸುತ್ತಿದ್ದೆ. ಹಳ್ಳಿಗರೇ ನನಗೆ ದಾರಿ ಹೇಳಿದವರು. ಅವರೊಂದಿಗೆ ಸ್ಥಳೀಯ ಔಧ್ ಭಾಷೆಯಲ್ಲೇ ಮಾತನಾಡುತ್ತೇನಾದ್ದರಿಂದ ಜನರೊಂದಿಗೆ ಅದ್ಭುತವಾಗಿ ಬೆರೆಯುತ್ತಿದ್ದೇನೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ.
-ಉತ್ತರ ಪ್ರದೇಶದಲ್ಲಿ ಆಪ್‌ಗೆ ಎಷ್ಟು ಸ್ಥಾನ ಬರಬಹುದೆಂದು ನಿಖರವಾಗಿ ಹೇಳಲಾರೆ. ಆದರೆ ನಾವು ಭಾರೀ ಸಂಖ್ಯೆಯಲ್ಲಿ ಗೆಲ್ಲಲಿದ್ದೇವೆ.
- ಮೋದಿ ಅಲೆ ಇದೆ ಎಂದೇನೂ ಇಲ್ಲ. ಅವರು ಪ್ರಚಾರ ಮಾಡುತ್ತಿರುವ ರೀತಿ, ಅದಕ್ಕಾಗಿ ಚೆಲ್ಲುತ್ತಿರುವ ಬೃಹತ್ ಪ್ರಮಾಣದ ಹಣದಿಂದಾಗಿ ಬಿಜೆಪಿ ಉಪಸ್ಥಿತಿ ವೈಭವಕ್ಕೊಳಗಾಗಿ ಕಾಣುತ್ತಿದೆ.
Advertisement