

ಲೋಕಸಭೆಯಲ್ಲಿ ಆಂಧ್ರ ಪುನರ್‌ವಿಂಗಡನಾ ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ, ಮುಖ್ಯಮಂತ್ರಿ ಹುದ್ದೆಯಿಂದ ಮತ್ತು ಕಾಂಗ್ರೆಸ್‌ನಿಂದ ಹೊರಗೆದ್ದು ಬಂದಿರುವ ಕಿರಣ್ ಕುಮಾರ್ ರೆಡ್ಡಿ, 'ಜೈ ಸಮೈಕ್ಯ ಆಂಧ್ರ'(ಜೆಎಸ್‌ಪಿ) ಪಕ್ಷವನ್ನು ಸ್ಥಾಪಿಸಿದ್ದಾರೆ. ಇದೇ ವೇಳೆಯಲ್ಲೇ ನಟ ಪವನ್ ಕಲ್ಯಾಣ್ ಕೂಡ 'ಜನಸೇನಾ' ಪಕ್ಷವನ್ನು ಹುಟ್ಟುಹಾಕಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ್ದಾರೆ. ಆಂಧ್ರ ಪುನರ್‌ವಿಂಗಡಣೆಯ ವಿಷಯ ಅಲ್ಲಿನ ರಾಜಕೀಯ ವಿಂಗಡಣೆಗೂ ಕಾರಣವಾಗಿದ್ದು ಮಹಾಯುದ್ಧದಲ್ಲಿ ಆ ವಿಷಯವೇ ಪ್ರಧಾನವಾಗಬಹುದು. ಈ ಕುರಿತು 'ಔಟ್‌ಲುಕ್' ಪತ್ರಿಕೆಗೆ ಕಿರಣ್ ಕುಮಾರ್ ರೆಡ್ಡಿ ನೀಡಿದ ಸಂದರ್ಶನದ ಆಯ್ದ ಭಾಗ...
-ಆಂಧ್ರ ಪುನರ್‌ವಿಂಗಡಣೆ ಮಸೂದೆ ಅದಾಗಲೇ ಅಂಗೀಕೃತವಾಗಿರುವುದರಿಂದ, ನಿಮ್ಮ 'ಜೈ ಸಮೈಕ್ಯ ಆಂಧ್ರ' ಪಕ್ಷದ ಚುನಾವಣಾ ಉದ್ದೇಶ ಏನಾಗಿರಲಿದೆ?
ಎಲ್ಲವೂ ಮುಗಿದಿದೆ ಎಂದೇನೂ ಅಲ್ಲ. ಈ ವಿಷಯವನ್ನು ಸುಪ್ರೀಂಕೋರ್ಟ್‌ಗೆ ಒಯ್ದಿದ್ದೇನೆ. ವಿಧಾನಸಭೆಯಲ್ಲಿ ಪುನರ್‌ವಿಂಗಡಣೆಯ ಮಸೂದೆ ತಿರಸ್ಕೃತಗೊಂಡರೂ ಅದನ್ನು ಸಂಸತ್ತಿನಲ್ಲಿ ಸಾಗಿಸಿದ ರೀತಿ ಅವೈಜ್ಞಾನಿಕ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಇದು ತೆಲುಗರಿಗಾದ ಅವಮಾನ. ತೆಲುಗು ದೇಶಂ, ಕಾಂಗ್ರೆಸ್ ಮತ್ತು ವೈಎಸ್‌ಆರ್ ಕಾಂಗ್ರೆಸ್ ಈ ವಿಭಜನೆಯಲ್ಲಿ ಭಾಗಿಯಾಗಿವೆ. ಇದರಿಂದಾಗಿ ತೆಲುಗು ಭಾಷಿಕರ ಸ್ವಾಭಿಮಾನಕ್ಕೆ ಹೊಡೆತ ಬಿದ್ದಿದೆ.
-ನಿಮ್ಮ ರಾಜಿನಾಮೆ ಮತ್ತು ಹೊಸ ಪಕ್ಷದ ಘೋಷಣೆ ಬಹಳ ತಡವಾಗಿ ಬಂದವು ಎಂದು ಎಲ್ಲರೂ ಹೇಳುತ್ತಿದ್ದಾರೆ.
ನನ್ನ ರಾಜಿನಾಮೆ ಇಲ್ಲಿ ಚರ್ಚೆಯ ವಿಷಯವಲ್ಲ. ಪ್ರಗತಿಯುತ ರಾಜ್ಯವಾದ ಆಂಧ್ರವನ್ನು ತೆಲುಗರ ಆಸಕ್ತಿಗೆ ವಿರುದ್ಧವಾದ ನೆಲೆಯಲ್ಲಿ ವಿಭಜಿಸಲಾಗಿದೆ. ಇದರಿಂದಾಗಿ ಎಲ್ಲಾ ಕ್ಷೇತ್ರಗಳಿಗೂ ಪರೋಕ್ಷವಾಗಿ ಪೆಟ್ಟು ಬೀಳಲಿದೆ. ಎಲ್ಲದಕ್ಕಿಂತಲೂ ಹೆಚ್ಚು ಹಾನಿಯಾಗಲಿರುವುದು ತೆಲಂಗಾಣಕ್ಕೆ. ನಾನು ತೆಲಂಗಾಣ ವಿರೋಧಿ ಎಂಬ ತಪ್ಪು ಕಲ್ಪನೆಯಿದೆ. ಆದರೆ ನನಗೆ ತೆಲಂಗಾಣದ ಜನರಿಗೆ, ಅದರಲ್ಲೂ ಮುಖ್ಯವಾಗಿ ರೈತರಿಗೆ ಹಾನಿಯಾಗಲಿದೆ ಎಂಬ ಚಿಂತೆಯಿದೆ. ಇದನ್ನು ತಡೆಯಲು ಕೊನೆಯ ಕ್ಷಣದವರೆಗೂ ಹೋರಾಡಿದೆ. ಆದರೆ ರಾಜ್ಯ ವಿಧಾನಸಭೆ ತಿರಸ್ಕರಿಸಿದ್ದ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಾಗ ಬೇಸರದಿಂದ ಕಾಂಗ್ರೆಸ್‌ನಿಂದ ಹೊರಬಂದೆ. ಆದರೆ ಆಗಲೇ ಹೇಳಿದೆನಲ್ಲ ಸುಪ್ರೀಂ ಕೋರ್ಟ್‌ನ ಮುಂದೆ ಈ ವಿಚಾರ ಇರುವುದರಿಂದ ಎಲ್ಲವೂ ಮುಗಿದಿಲ್ಲ ಎಂದು.
-ಬಹುತೇಕ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಆದ್ಯತೆಗಳನ್ನು ವಿವರಿಸಿವೆ. ಮುಖ್ಯವಾಗಿ ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ಮೋಹನ್ ರೆಡ್ಡಿ ಸ್ಪಷ್ಟವಾಗಿ ಅವನ್ನೆಲ್ಲ ಪಟ್ಟಿಮಾಡಿದ್ದಾರೆ.
ವೈಎಸ್‌ಆರ್ 2 ರುಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುತ್ತಿದ್ದರು, ನಾನು ಮುಖ್ಯಮಂತ್ರಿಯಾದಾಗ ಆ ಬೆಲೆಯನ್ನು 1 ರುಪಾಯಿಗೆ ಇಳಿಸಿದೆ. ಎಸ್‌ಸಿ/ಎಸ್‌ಟಿ- ಸಬ್ ಪ್ಲಾನ್ ಮಸೂದೆಯನ್ನು ತಂದವನು ನಾನು. ಅಲ್ಲದೆ ಬಡ್ಡಿರಹಿತ ಕೃಷಿ ಸಾಲ ಯೋಜನೆ, ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪೂರೈಕೆ, ಅಮ್ಮ ಹಸ್ತಮ್, ಹೆಣ್ಣು ಮಕ್ಕಳಿಗಾಗಿ 'ಬಂಗಾರು ಥಾಲಿ', ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ನೀಡುವ 'ಸ್ತ್ರೀ ನಿಧಿ' ಸೇರಿದಂತೆ ಇನ್ನೂ ಅನೇಕ ಯೋಜನೆಗಳು ನನ್ನ ಅಧಿಕಾರಾವಧಿಯಲ್ಲಿ ಬಂದಿವೆ. ಜಗನ್ ವೈಎಸ್‌ಆರ್ ಕಾಲದಲ್ಲಿದ್ದಂತೆ ಮತ್ತೆ 2 ರುಪಾಯಿಗೆ ಕೆ.ಜಿ. ಅಕ್ಕಿ ಮತ್ತು ಅಧಿಕ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಗಳನ್ನು ಅಪ್ಪಿಕೊಳ್ಳಲಿದ್ದಾರಾ ಹೇಗೆ?
- ಹಾಗಿದ್ದರೆ ಈ ಎಲ್ಲಾ ಯೋಜನೆಗಳು ನಿಮ್ಮ ಪ್ರಣಾಳಿಕೆಯಲ್ಲಿ ಜಾಗ ಪಡೆಯಲಿವೆಯೇ?
ನಮ್ಮ ಪಕ್ಷದ ಸಮಿತಿ ಈ ಬಗ್ಗೆ ಚರ್ಚೆ ನಡೆಸಿದೆ. ನಮ್ಮ ಸದ್ಯದ ಉದ್ದೇಶವೇನಿದ್ದರೂ ತೆಲುಗರಿಗೆ ನ್ಯಾಯ ಒದಗಿಸುವುದು. ಅವರ ಆತ್ಮಾಭಿಮಾನವನ್ನು ಮರುಸ್ಥಾಪಿಸುವುದು.
- ದಿ. ಎನ್.ಟಿ. ರಾಮರಾವ್ ಅವರು ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದಾಗ, ಆ ಪಕ್ಷಕ್ಕೆ 'ತೆಲುಗು ಆತ್ಮಾಭಿಮಾನ' ಎನ್ನುವ ಘೋಷಣೆಯಿಂದ ಬಹಳ ಲಾಭವಾಯಿತು. ಈಗಿನ ಸನ್ನಿವೇಶದಲ್ಲಿ ಇದು ಯಾವ ರೀತಿ ಕೆಲಸ ಮಾಡಲಿದೆ?
ನೋಡಿ, ಎನ್‌ಟಿಆರ್ ಸಮಯದಲ್ಲಿನ ಪರಿಸ್ಥಿತಿ ಭಿನ್ನವಾಗಿತ್ತು. ಆದರೆ ಈಗ ಇಡೀ ರಾಜ್ಯ ಮತ್ತು ಅದರ ಜನರಿಗೆ ಗಾಯವಾಗಿದೆ. ತೆಲುಗರ ಸ್ವಾಭಿಮಾನಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಅಪಾಯ ಎದುರಾಗಿದೆ.
-ತೆಲುಗು ದೇಶಂ ಪಕ್ಷದ ಬೆನ್ನಿಗೆ ಗಣನೀಯ ಸಂಖ್ಯೆಯಲ್ಲಿ ಕಮ್ಮಾ ಮತ್ತು ಹಿಂದುಳಿದ ವರ್ಗದ ಜನರಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್‌ಗೆ ರೆಡ್ಡಿ ಮತ್ತು ಹಲವು ಅಲ್ಪಸಂಖ್ಯಾತ ಗುಂಪುಗಳ ಬೆಂಬಲವಿದೆ. ನಿಮ್ಮ ಪಕ್ಷಕ್ಕೆ?
ಯಾವುದೇ ಪಕ್ಷವಿರಲಿ, ಅದು ಕೇವಲ ನಿರ್ದಿಷ್ಟ ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ಭದ್ರವಾಗಿ ನಿಲ್ಲಲಾರದು. ಎಲ್ಲಾ ವರ್ಗಗಳ ಬೆಂಬಲವೂ ಇರಬೇಕು.
- ನೀವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಮುನ್ನ, ನಿಮ್ಮ ಕ್ಯಾಬಿನೆಟ್‌ನ ಅನೇಕ ಸಚಿವರು (ಸೀಮಾಂಧ್ರದವರೂ ಕೂಡ) ನಿಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು. ಉದಾಹರಣೆಗೆ, ಡೊಕ್ಕ ಮಾಣಿಕ್ಯ ವರಪ್ರಸಾದ್(ಗುಂಟೂರು ಜಿಲ್ಲೆ), 'ಕಿರಣ್‌ಕುಮಾರ್ ರೆಡ್ಡಿ ಸಾಮಾನು ಸರಂಜಾಮುಗಳನ್ನು ಪ್ಯಾಕಿಂಗ್ ಮಾಡುವುದಕ್ಕಾಗಿ ರಾಜಿನಾಮೆಗೆ ವಿಳಂಬ ಮಾಡಿದರು' ಎಂದು ಹೇಳಿದ್ದಾರೆ...
ಬಹುಕಾಲದಿಂದ ರಾಜಕೀಯದಲ್ಲಿರುವ ನನಗೆ, ಇಂಥ ಹೇಳಿಕೆಗಳಿಂದ ಯಾವ ಹಾನಿಯೂ ಆಗದು. ಆತ್ಮಸಾಕ್ಷಿಗೆ ಓಗೊಟ್ಟು, ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ. ನನಗೆ ಜನರ ಬಗ್ಗೆ ಕಾಳಜಿ ಇರುವ ಕಾರಣಕ್ಕಾಗಿಯೇ ಆಂಧ್ರವನ್ನು ಒಡೆಯುವ ಮಸೂದೆಯನ್ನು ಸಂಸತ್ತಿನ ಮುಂದಿಟ್ಟ ಕಾಂಗ್ರೆಸ್ ಹೈಕಮಾಂಡ್‌ನ ವಿರುದ್ಧ ಎದ್ದು ನಿಂತೆ.
- ನೀವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರೋ ಅಥವಾ ಅದಕ್ಕೆ ಮರಳುತ್ತೀರೋ?
ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು, ಬೇಡ ಎನ್ನುವುದು ಇಂದಿನ ಸಮಸ್ಯೆಯಲ್ಲ. ನನ್ನ ಕುಟುಂಬ 12 ಚುನಾವಣೆಗಳಲ್ಲಿ ಸ್ಪರ್ಧಿಸಿದೆ. ತೆಲಂಗಾಣದ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯುವಾಗ, ಪಕ್ಷ ಅಥವಾ ಪ್ರಜೆಗಳ ಹಿತಾಸಕ್ತಿಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂಥ ದಿನ ಎದುರಾಗದಿರಲಿ ಎಂದು ಹಿರಿಯ ನಾಯಕರಿಗೆ ಹೇಳಿದ್ದೆ. ನಾನು ಕಾಂಗ್ರೆಸ್‌ನ ಅಂಗವಾಗಿದ್ದೆ, ಆದರೆ ಸೀಮಾಂಧ್ರ ಮತ್ತು ತೆಲಂಗಾಣ ಜನರಿಗೆ ಪ್ರಾಣಾಘಾತವುಂಟುಮಾಡಬಲ್ಲ ನಿರ್ಧಾರ ಕೈಗೊಂಡರೆ ಹೊರ ನಡೆಯುವುದಾಗಿ ಎಚ್ಚರಿಸಿದ್ದೆ. ಜನ ಎತ್ತ ಸಾಗೆಂದು ಹೇಳುತ್ತಾರೋ, ಆ ಹಾದಿಯಲ್ಲೇ ನನ್ನ ಪ್ರಯಾಣ ಮುಂದುವರಿಯಲಿದೆ.
Advertisement