ಮೋದಿ ಯಾವುದೇ ಕೋಮುವಾದಿ ಅಜೆಂಡಾವನ್ನು ಮುನ್ನಡೆಸುತ್ತಿಲ್ಲ, ಅಭಿವೃದ್ಧಿಗಾಗಿ ಕೈ ಜೋಡಿಸಿದ್ದೇವೆ

ಎಲ್‌ಜೆಪಿ ನಾಯಕ ರಾಮ್‌ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಚೊಚ್ಚಲ...
ಮೋದಿ ಯಾವುದೇ ಕೋಮುವಾದಿ ಅಜೆಂಡಾವನ್ನು ಮುನ್ನಡೆಸುತ್ತಿಲ್ಲ, ಅಭಿವೃದ್ಧಿಗಾಗಿ ಕೈ ಜೋಡಿಸಿದ್ದೇವೆ
Updated on

ಎಲ್‌ಜೆಪಿ ನಾಯಕ ರಾಮ್‌ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಚೊಚ್ಚಲ ಚುನಾವಣೆಯನ್ನು ಎದುರಿಸಲಿದ್ದಾರೆ. ಪಶ್ಚಿಮ ಬಿಹಾರದ ಜಮುಯ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅವರು, ಏಕೆ ತಮ್ಮ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಲು ಮುಂದಾಯಿತು ಎನ್ನುವ ಬಗ್ಗೆ 'ದಿ ಏಶಿಯನ್ ಏಜ್‌' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ...

ಗುಜರಾತ್ ಗಲಭೆಯ ನಂತರ ಎನ್‌ಡಿಎದಿಂದ ದೂರವಾಗಿದ್ದ ನಿಮ್ಮ ಪಕ್ಷವನ್ನು 12 ವರ್ಷಗಳ ನಂತರ ಮತ್ತೆ ಆ ಒಕ್ಕೂಟಕ್ಕೆ ಮರಳುವಂತೆ ಮಾಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ ಎನ್ನಲಾಗುತ್ತಿದೆ. ನಿಜವಾ?
ಬಹಳ ವರ್ಷಗಳಿಂದ ನಾನು ಭಾರತೀಯ ಜನತಾ ಪಾರ್ಟಿಯ ಬಗ್ಗೆ ಪೂರ್ವಾಗ್ರಹ ಪೀಡಿತನಾಗಿದ್ದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಎರಡು ವರ್ಷಗಳ ಹಿಂದೆ ದೇಶದ ಒಲವು ಬಿಜೆಪಿಯತ್ತ, ಅದರಲ್ಲೂ ಮುಖ್ಯವಾಗಿ ನರೇಂದ್ರ ಮೋದಿಯವರತ್ತ ತಿರುಗುತ್ತಿದೆ ಎನ್ನುವುದು ನನ್ನ ಗಮನಕ್ಕೂ ಬಂದಿತು. ಆ ಸಮಯದಲ್ಲಿ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ವಿಚಾರವಾಗಿ ತಂದೆಯೊಂದಿಗೆ ವಾದ ಮಾಡುತ್ತಿದ್ದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಭಾಗವಾಗೋಣ ಅಂತ ಅಪ್ಪ ಹೇಳಿದರೆ, ನನ್ನ ವಿಚಾರ ತದ್ವಿರುದ್ಧವಾಗಿತ್ತು. ಕೊನೆಗೆ ನನ್ನ ಯೋಚನೆಯನ್ನು ಒಪ್ಪಿ ಬಿಜೆಪಿಗೆ ಜೊತೆಯಾಗಲು ನಿರ್ಧರಿಸಿದರು.

ನಿಮ್ಮ ವಾದಗಳೇನಿದ್ದವು?
ಭಾರತದ ಜನಸಂಖ್ಯೆಯಲ್ಲಿ ಅರ್ಧ ಭಾಗ ಯುವಕರೇ ಇದ್ದಾರೆ ಎನ್ನುವುದು ಗೊತ್ತಿರುವಂಥದ್ದೆ. ಅವರು ಗುಣಮಟ್ಟದ ಜೀವನದ ಕನಸು ಕಾಣುತ್ತಿದ್ದಾರೆ. ಅವರಿಗೆ ಉದ್ಯೋಗ ಮತ್ತು ಇನ್ನಿತರ ಅವಕಾಶಗಳು ಬೇಕು. ಈ ಸಮಯದಲ್ಲೇ ಅಭಿವೃದ್ಧಿ ರಾಜಕೀಯದ ದಂಡ ಹಿಡಿದ ಮೋದಿಯವರ ಆಗಮನವಾಯಿತು ಮತ್ತು ಯುವಕರ ಮನಸ್ಸನ್ನು ಮುಟ್ಟಲು ಅವರು ಯಶಸ್ವಿಯಾದರು. ಎನ್‌ಡಿಎದ ಭಾಗವಾಗಬೇಕೆಂಬುದು ನಮ್ಮ ಪಕ್ಷದ ಒಮ್ಮತದ ನಿರ್ಧಾರ. ಈ ಹೊಸ ಮೈತ್ರಿಯನ್ನು ನೋಡಲು ಪಕ್ಷದ ಮುಸ್ಲಿಂ ಕಾರ್ಯಕರ್ತರೂ ಕೂಡ ಕಾತರದಿಂದಿದ್ದರು.

ನಿಮ್ಮ ಚೊಚ್ಚಲ ಚುನಾವಣೆಗೆ ಜಮುಯ್ ಲೋಕಸಭಾ ಕ್ಷೇತ್ರವನ್ನೇ ಆರಿಸಿಕೊಂಡಿದ್ದೇಕೆ?
ಬಿಹಾರದ ಅತ್ಯಂತ ಹಿಂದುಳಿದ ಜಿಲ್ಲೆ ಜಮುಯ್. ಯಾವುದೇ ಅಭಿವೃದ್ಧಿ ಮಾನದಂಡದಿಂದ ಅಳೆದು ನೋಡಿದರೂ ಬಿಹಾರದ 42 ಜಿಲ್ಲೆಗಳಲ್ಲಿ ಕೊನೆಯ ಸ್ಥಾನವನ್ನೇ ಅದು ಪಡೆಯುತ್ತದೆ. ಆ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಹಾಗಾಗೇ ಜಮುಯ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು. ನಾನು ಪ್ರಾಮಾಣಿಕ ಮನಸ್ಥಿತಿಯೊಂದಿಗೇ ರಾಜಕೀಯ ಪ್ರವೇಶ ಮಾಡಿದವನು.

2002ರ ಗೋಧ್ರೋತ್ತರ ಗಲಭೆಗಳನ್ನು ತಡೆಯುವಲ್ಲಿ ಮೋದಿ ಹೆಚ್ಚು ಪ್ರಯತ್ನ ಪಡಲಿಲ್ಲ ಎಂದು ಕೆಲವರು ದೂಷಿಸುತ್ತಾರೆ. ಈಗ ಬಿಜೆಪಿಯೊಂದಿಗೆ ನಿಮ್ಮ ಪಕ್ಷ ಕೈ ಜೋಡಿಸಿದೆ. ಹಾಗಿದ್ದರೆ ನಿಮ್ಮ ಪಕ್ಷದ ಜಾತ್ಯತೀತ ಧ್ಯೇಯಕ್ಕೇನಾಯಿತು?
ಜಾತ್ಯತೀತತೆ ಎನ್ನುವುದೊಂದು ಐಡಿಯಾಲಜಿ. ನಾವು ಎಂದಿಗೂ ಅದರ ಪರವಾಗೇ ನಿಲ್ಲುತ್ತೇವೆ. ಬಿಜೆಪಿಯೊಂದಿಗೆ ಕೈ ಜೋಡಿಸಿ ನಮ್ಮ ಜಾತ್ಯತೀತ ಸಿದ್ಧಾಂತದೊಂದಿಗೆ ರಾಜಿಯಂತೂ ಮಾಡಿಕೊಂಡಿಲ್ಲ. ನನ್ನ ತಂದೆಗೂ ಕೂಡ 2002ರಲ್ಲಿ ಗುಜರಾತ್‌ನಲ್ಲಿ ಮುಸಲ್ಮಾನರಿಗೆ ಅನ್ಯಾಯವಾಯಿತು ಎನಿಸಿತು. ಈ ಕಾರಣಕ್ಕಾಗೇ ಅವರು ಅಟಲ್ ಬಿಹಾರಿ ವಾಜಪೇಯಿಯವರ ಕ್ಯಾಬಿನೆಟ್‌ನಿಂದ ಹೊರಬಂದರು. ಬಿಜೆಪಿಯೊಂದಿಗಿನ ನಮ್ಮ ಮೈತ್ರಿ 'ವಿಚಾರ' ಆಧಾರಿತವಾದದ್ದು. ಆದರೆ ಯಾವುದೇ ಸಂದರ್ಭದಲ್ಲೂ ಜಾತ್ಯತೀತತೆಯ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ.
ಮಿ. ಮೋದಿ, ಯಾವುದೇ ಕೋಮುವಾದಿ ಅಜೆಂಡಾವನ್ನು ಮುನ್ನಡೆಸುತ್ತಿಲ್ಲ. ಅಭಿವೃದ್ಧಿಯ ವಿಷಯ ಹಿಡಿದುಕೊಂಡು ಜನರ ಮುಂದೆ ಹೋಗುತ್ತಿದ್ದಾರೆ.

ನಿಮ್ಮ ಪಕ್ಷವೇಕೆ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ದೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು?
ನಾವು ಸ್ಪರ್ಧಿಸುವ ಸ್ಥಾನಗಳ ಸಂಖ್ಯೆಯೂ ನೀವು ನೋಡಬೇಕಾಗುತ್ತದೆ. ನಮ್ಮ ಪಕ್ಷದಲ್ಲಿ ಚುನಾವಣೆ ಎದುರಿಸಬೇಕೆಂದು ಬಯಸುತ್ತಿರುವ ಅನೇಕ ಹಿರಿಯ ನಾಯಕರಿದ್ದಾರೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ನಮ್ಮ ಮುಂದಿಟ್ಟ ಪ್ರಸ್ತಾಪ ಸ್ವೀಕಾರಾರ್ಹವಾಗಿರಲಿಲ್ಲ.

ನಿಮ್ಮ ತಂದೆ ಹಾಜಿಪುರ ಲೋಕಸಭಾ ಕ್ಷೇತ್ರದಲ್ಲೂ ಸೋತಾಗ, ಅವರನ್ನು ರಾಜ್ಯಸಭೆಗೆ ಕರೆದೊಯ್ದದ್ದು ಲಾಲು ಪ್ರಸಾದ್ ಯಾದವ್. ಇನ್ನು ವಿಧಾನಸಭಾ ಚುನಾವಣೆಗಳಲ್ಲೂ ಕೂಡ ನಿಮ್ಮ ಪಕ್ಷಕ್ಕೆ ಆರ್‌ಜೆಡಿ ಅನೇಕ ಸ್ಥಾನಗಳನ್ನು ಬಿಟ್ಟುಕೊಟ್ಟಿತು. ಇದನ್ನೆಲ್ಲ ಗಮನಿಸಿದಾಗ, ನೀವು ಆರ್‌ಜೆಡೆಯಿಂದ ಹೊರಬಂದು ಅದಕ್ಕೆ ಮೋಸ ಮಾಡಿದ್ದೀರಿ ಎಂದೆನಿಸುತ್ತಿಲ್ಲವೇ?
ಆದರೆ ನೀವು ಹೇಳುತ್ತಿರುವ ಗುಣಾತ್ಮಕ ಅಂಶಗಳಿಗಿಂತ, 2009ರಲ್ಲಿ ಅವರು(ಆರ್‌ಜೆಡಿ) ನಮ್ಮ ಪಕ್ಷಕ್ಕೆ ಮಾಡಿದ ಹಾನಿ ಬಹಳ ದೊಡ್ಡದಾಗಿತ್ತು. ನನ್ನ ತಂದೆಯನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ಪರಿಹಾರ ಕೊಡಲು ಆರ್‌ಜೆಡಿ ಮುಂದಾಯಿತಷ್ಟೆ. 2009ರ ಚುನಾವಣೆಗಳಲ್ಲಿ ನಮ್ಮ ಪಕ್ಷ ಎದುರಿಸಿದ ಸೋಲಿಗೆ ಆರ್‌ಜೆಡಿಯ ವರ್ತನೆಯೇ ಕಾರಣ.

ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ದಲಿತ ಮತಗಳನ್ನೆಲ್ಲ ಬಾಚಿಕೊಂಡಿತು. ಆ ಪಕ್ಷವೀಗ ಬಿಹಾರಕ್ಕೆ ಪಾದಾರ್ಪಣೆ ಮಾಡಲಿದೆ ಮತ್ತು ಅದಾಗಲೇ ಅದಕ್ಕೆ ಮಾಜಿ ಸಚಿವ ಪ್ರವೀಣ್ ಅಮಾನುಲ್ಲಾಹ್ ಅವರ ಬೆಂಬಲವೂ ದೊರಕಿದೆ. ಆಪ್‌ನ ಆಗಮನದಿಂದ ನಿಮ್ಮ ಮತಗಳ ಮೇಲೆ ಪರಿಣಾಮವಾಗಲಿದೆ ಎಂದು ಭಾವಿಸುತ್ತೀರಾ?
ಆಪ್ ಒಂದು ಅಸಾಂಪ್ರದಾಯಿಕ ಪಕ್ಷ. ಕೆಲವೇ ದಿನಗಳು ಅಧಿಕಾರದಲ್ಲಿದ್ದರೂ, ಆ ಸಮಯದಲ್ಲೇ ಅದರ ನಾಯಕರು ತಮ್ಮ ಆರಾಜಕ ಗುಣವನ್ನು ಬಯಲು ಮಾಡಿಕೊಂಡರು. ಆರಾಜಕತೆ ತುಂಬಿದ ಆಡಳಿತದಡಿಯಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ. ಇದರಿಂದ ದೇಶಕ್ಕೇ ಹೆಚ್ಚು ಹಾನಿಯಾಗುತ್ತದೆ. ಯಾವುದೇ ಸಮಸ್ಯೆಯನ್ನು ಸಂವಹನದ ಮೂಲಕ ಬಗೆಹರಿಸಬಹುದು, ಆದರೆ ಈ ಪಕ್ಷ ಅದಕ್ಕೂ ಕೂಡ ವಿರುದ್ಧವಾದದ್ದು. ಆಪ್‌ಗೆ ಮತ ನೀಡುವ ಮುನ್ನ ಜನ ಎರಡೆರಡು ಬಾರಿ ಯೋಚಿಸುತ್ತಾರೆ ಎಂದು ಭಾವಿಸುತ್ತೇನೆ.

ಎನ್‌ಡಿಎದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದೀರಾ?

ಇಲ್ಲ. ಬಹುತೇಕ ಸಮಯವನ್ನು ಜಮುಯ್ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಕಳೆಯಲಿದ್ದೇನೆ. ಆದರೆ ನನ್ನ ತಂದೆ ಬಿಜೆಪಿ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಮುಖ್ಯಸ್ಥ ರಾಜನಾಥ್ ಸಿಂಗ್ ಅವರು ಅದಾಗಲೇ ಅಪ್ಪನೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೆ ಅವರು(ಪಾಸ್ವಾನ್) ಮೋದಿ ಭಾಗವಹಿಸಲಿರುವ ಕೆಲವು ರ್ಯಾಲಿಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಿಹಾರದ ಹೊರಗೂ ಕೂಡ ಪ್ರಚಾರಕ್ಕಾಗಿ ತೆರಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com