

* ವಿಧಾನಸಭಾ ಚುನಾವಣೆಗಳಲ್ಲಿ ನೀವು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದವರು. ಈಗ ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ನಾಮನಿರ್ದೇಶನ ಅನಿರೀಕ್ಷಿತವಾಗಿತ್ತೆ?
ಹೌದು ನನಗೆ ಅಚ್ಚರಿಯಾದದ್ದು ನಿಜ. ಆದರೆ ಅದು ಆಹ್ಲಾದಕರ ಅಚ್ಚರಿ. ನಾನು ನನ್ನ ಇಡೀ ರಾಜಕೀಯ ಜೀವನದಲ್ಲಿ ಎಂದಿಗೂ ಸ್ವತಂತ್ರವಾಗಿ ನಿರ್ಧಾರ ಕೈಗೊಂಡವನಲ್ಲ. ಪಕ್ಷದ ನಿರ್ಧಾರವನ್ನೇ ಒಪ್ಪಿಕೊಂಡು ನಡೆದವನು.
* ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಯದಲ್ಲಿ ಬಿಜೆಪಿಗೆ ಪ್ರಸಕ್ತ ಶಾಸಕರನ್ನು ಸ್ಪರ್ಧೆಗಿಳಿಸುವಂತೆ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ನಿಮ್ಮನ್ನೂ ಒಳಗೊಂಡಂತೆ ಒಟ್ಟು ಮೂವರು ಶಾಸಕರಿಗೆ ಟಿಕೆಟ್ ಕೊಡಲಾಗಿದೆ. ಹಾಗಿದ್ದರೆ ದೆಹಲಿಯಲ್ಲಿ ಮರುಚುನಾವಣೆ ನಡೆದೇ ತೀರುತ್ತದೆ ಎಂದಂತಾಯಿತು....
ಮರುಚುನಾವಣೆ ನಡೆಯಬೇಕೋ ಇಲ್ಲವೋ ಎನ್ನುವುದನ್ನು ಸುಪ್ರೀಂಕೋರ್ಟ್, ಚುನಾವಣಾ ಆಯೋಗ, ರಾಷ್ಟ್ರಪತಿಗಳು ಅಥವಾ ಲೆಫ್ಟಿನೆಂಟ್ ಗವರ್ನರ್ ನಿರ್ಧರಿಸಲಿದ್ದಾರೆ. ನಾವೀಗ ಲೋಕಸಭೆ ಚುನಾವಣೆಗಳತ್ತ ಮಾತ್ರ ಗಮನಹರಿಸುತ್ತಿದ್ದೇವೆ.
* ಕಾಂಗ್ರೆಸ್‌ನ ಕಪಿಲ್ ಸಿಬಲ್ ಮತ್ತು ಆಪ್‌ನ ಅಶುತೋಷ್ ಅವರನ್ನು ಎದುರಿಸಲಿದ್ದೀರಿ. ಹೋರಾಟ ಕಠಿಣವಾಗಿರಲಿದೆಯೇ?
ಅವರಿಬ್ಬರ ಹೆಸರು ಪ್ರಖ್ಯಾತವಿರಬಹುದು. ಆದರೆ ಅದಕ್ಕೆ ನಾನು ಮಹತ್ವಕೊಡುವುದಿಲ್ಲ.
* ನಿಮ್ಮ ಪ್ರಚಾರದ ಪ್ಲಾನ್ ಹೇಗಿದೆ?
ನನ್ನ ಹೆಸರು ಹೊರಬಿದ್ದ 24 ಗಂಟೆಯೊಳಗೇ ಈ ಸಂಸತ್ ಕ್ಷೇತ್ರದ ಸುಮಾರು 7 ವಿಧಾನಸಭಾ ಭಾಗಗಳಿಗೆ ಭೇಟಿ ಕೊಟ್ಟಿದ್ದೇನೆ. ನನ್ನ ನಾಮನಿರ್ದೇಶನವನ್ನು ಮಾರ್ಚ್ 21ರಂದು ಸಲ್ಲಿಸಲಿದ್ದೇನೆ ಮತ್ತು ಅಧಿಕೃತ ಪ್ರಚಾರವನ್ನು ನನ್ನ ಜನ್ಮ ಕ್ಷೇತ್ರವಾದ ಮಾತಿಯಾ ಮಹಲ್‌ನಿಂದ ಶುರುಮಾಡಲಿದ್ದೇನೆ.
* ಮನೆ ಮನೆಗೆ ತೆರಳಿ ಪ್ರಚಾರ ಮಾಡಲಿದ್ದೀರಾ?
ಲೋಕಸಭಾ ಚುನಾವಣೆಗಳಲ್ಲಿ ನಾವೇ ಪ್ರತಿಯೊಂದು ಮನೆಯ ಬಾಗಿಲನ್ನು ಬಡಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗೇ ಜನತೆಯನ್ನು ತಲುಪುವ ಕೆಲಸಕ್ಕೆ ಕಾರ್ಯಕರ್ತರು ಸಹಾಯ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಆಗಲೇ ಪ್ರಚಾರಕಾರ್ಯಕ್ಕಿಳಿದಿದ್ದಾರೆ.
* ಕಾಂಗ್ರೆಸ್ ಮತ್ತು ಆಪ್ ಒಡ್ಡಿರುವ ಸವಾಲುಗಳನ್ನು ಹೇಗೆ ಎದುರಿಸುತ್ತೀರಿ?
ಆಮ್ ಆದ್ಮಿ ಪಕ್ಷವನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೀಗ ಅವರ ಅರಾಜಕತೆ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳು ಬೆತ್ತಲಾಗಿವೆ. ಆಡಳಿತದಿಂದ ಓಡಿಹೋದ ಅವರಿಗೆ ಜನತೆ ಎರಡನೇ ಅವಕಾಶವನ್ನು ಕೊಡುವುದಿಲ್ಲ. ಇನ್ನು ಕಾಂಗ್ರೆಸ್ ವಿಷಯಕ್ಕೆ ಬಂದರೆ ಅದರ ಕಥೆ ಎಂದೋ ಮುಗಿದಿದೆ.
* ನಿಮಗಾಗಿ ಪ್ರಚಾರ ಮಾಡಲು ರಾಷ್ಟ್ರೀಯ ನಾಯಕರನ್ನು ಕೇಳುತ್ತೀರಾ?
ನರೇಂದ್ರ ಮೋದಿಯವರು ಸಹಾಯ ಮಾಡಿದರೆ ನನಗೆ ಸಂತೋಷವಾಗುತ್ತದೆ. ಆದರೆ ಮೋದೀಜಿ ಬಹಳ ಬ್ಯುಸಿ ಇದ್ದಾರೆ, ಹಾಗಾಗಿ ಅದು ಸಾಧ್ಯವಿಲ್ಲವೆನಿಸುತ್ತದೆ.
Advertisement