

ಆಪ್‌ಗೆ ಪ್ರಮುಖ ಎದುರಾಳಿ ಕಾಂಗ್ರೆಸ್ಸಾ ಅಥವಾ ಬಿಜೆಪಿಯಾ ಎಂಬುದು ಬಹುತೇಕರು ಕೇಳುತ್ತಿರುವ ಪ್ರಶ್ನೆ. ಹತ್ತು ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್‌ಗಿಂತ ಬಿಜೆಪಿಯನ್ನೇ ಆಪ್ ಹೆಚ್ಚಾಗಿ ಗುರಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಎಸ್. ಎಲ್. ಭೈರಪ್ಪ, ಎಂ. ಜೆ. ಅಕ್ಬರ್ ಇತ್ಯಾದಿ ಗಣ್ಯರು ಕಿಡಿಕಾರಿದ್ದರು. 'ದಿ ಹಿಂದು' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಪ್ ನೇತಾರ ಯೋಗೇಂದ್ರ ಯಾದವ್, ಮೋದಿ ವಿರೋಧವೇ ತಮ್ಮ ಆದ್ಯತೆ ಎಂದಿದ್ದಾರೆ. ಸಂದರ್ಶನದ ಪ್ರಮುಖಾಂಶ ಇಲ್ಲಿದೆ.
-ದೇಶಾದ್ಯಂತ ಚುನಾವಣೆಗೆ ಇಳಿಯುವುದು ಆಪ್ ಪಾಲಿಗೆ ಸರ್ಕಸ್ಸೇ. ಆದರೆ ದೆಹಲಿ, ಹರ್ಯಾಣಗಳಂಥ ಕೆಲವೇ ಪ್ರದೇಶಗಳಿಗೆ ಸೀಮಿತವಾಗಬಾರದೆಂದು ಈ ನಿರ್ಧಾರಕ್ಕೆ ಬರಲಾಯಿತು. ದೆಹಲಿ ವಿಧಾನಸಭೆಯಲ್ಲಿ ಭಾರಿ ಸ್ಥಾನಗಳನ್ನು ಗೆಲ್ಲುವ ಮೂಲಕ ನಾವು ನೈತಿಕ ಛಾಪೊಂದನ್ನು ಮೂಡಿಸಿಯಾಗಿದೆ. ನಮ್ಮೆದುರಿಗೆ ಎರಡು ಆಯ್ಕೆಗಳಿದ್ದವು. ಆಪ್ ಅನ್ನು ದೆಹಲಿಗೆ ಇಲ್ಲವೇ ಕೆಲ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಿರಿಸಿ ನಮ್ಮ ಬಲವನ್ನು ಅಲ್ಲಿ ಮಾತ್ರವೇ ವೃದ್ಧಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು. ಇಲ್ಲವೇ ಆಪ್‌ಗೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಅಭೂತಪೂರ್ವ ಬೆಂಬಲವನ್ನು ಗಣನೆಗೆ ತೆಗೆದುಕೊಂಡು ವ್ಯಾಪಕವಾಗಿ ಸ್ಪರ್ಧೆಗೆ ಇಳಿಯುವುದು. ಈ ನಿಟ್ಟಿನಲ್ಲಿ ನಾವು ಸರಿದಾರಿಯನ್ನೇ ತುಳಿದಿದ್ದೇವೆ ಎಂದುಕೊಳ್ಳುತ್ತೇವೆ.
-ದೆಹಲಿ, ಹರ್ಯಾಣ, ಪಂಜಾಬ್, ಚಂಡೀಗಢಗಳಲ್ಲಿ ನಮ್ಮ ಪಕ್ಷದ ಗೆಲವಿನ ಸಾಧ್ಯತೆಗಳು ಹೆಚ್ಚಿವೆ. ಉಳಿದಂತೆ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಗರಕೇಂದ್ರಿತ ಕ್ಷೇತ್ರಗಳಲ್ಲಿ ಜಯದ ಸಾಧ್ಯತೆ ಇದೆ. ಇನ್ನುಳಿದ ಎರಡನೇ ಹಂತದ ಪ್ರದೇಶಗಳಲ್ಲಿ ಆಪ್ ಶೇ. 5-10ರಷ್ಟು ಮತಗಳನ್ನು ಪಡೆದು ರಾಜಕೀಯ ಉಪಸ್ಥಿತಿಯನ್ನು ಸಾರಲಿದೆ. ಆಗ ಆ ಎಲ್ಲ ಪ್ರದೇಶಗಳ ರಾಜಕೀಯ ಸಂವಾದದ ರೂಪುರೇಷೆ ಬದಲಾಗುವುದಕ್ಕೆ ಆಪ್ ಕಾರಣವಾಗುತ್ತದೆ. ಮೂರನೇ ಹಂತದಲ್ಲಿ ನಾಮ್‌ಕೆ ವಾಸ್ತೆ ಉಪಸ್ಥಿತಿಯನ್ನಾದರೂ ದೇಶದ ನಾನಾ ಭಾಗಗಳಲ್ಲಿ ಚುನಾವಣೆ ಮೂಲಕ ಪ್ರಚುರಪಡಿಸಬೇಕು. ಇದು ಪಕ್ಷಕ್ಕೆ ರಾಷ್ಟ್ರೀಯ ಚಹರೆಯೊಂದನ್ನು ನೀಡುತ್ತದೆ. ವಿಮರ್ಶಾತ್ಮಕ ವಿಷಯಗಳಲ್ಲಿ ನಮ್ಮ ಅಭಿಪ್ರಾಯ ಗಣನೆಗೆ ಬರುತ್ತದೆ.
- ಭಾರತದ ಪರಿಕಲ್ಪನೆಗೆ ಮೋದಿ ವಿರುದ್ಧವಾಗಿದ್ದಾರೆ. ಅವರನ್ನು ವಿರೋಧಿಸುವುದಕ್ಕೆ ಮತ್ತೇನೂ ಬೇಕಿಲ್ಲ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ್ತು ನಂತರದ ಸರ್ಕಾರದಲ್ಲಿ ದೈನಂದಿನದ ವಿಷಯಗಳಿಗೆ ಹೆಚ್ಚಿನ ಗಮನ ಕೊಡಬೇಕಾಯಿತು. ಆ ಸಂದರ್ಭದಲ್ಲೂ ನಾನು ಮತ್ತು ಪ್ರಶಾಂತ್ ಭೂಷಣ್, ಆಪ್‌ನ ಪ್ರಮುಖ ವಿರೋಧ ಮೋದಿಗೇ ಎಂಬುದನ್ನು ಸ್ಪಷ್ಟಪಡಿಸುತ್ತಲೇ ಬಂದಿದ್ದೇವೆ.
- ಈಗಿನ ಸೆಕ್ಯುಲರ್- ಕಮ್ಯುನಲ್ ಚರ್ಚೆಯ ಒಳಗೆ ನಾವು ಒದ್ದಾಡುವುದಿಲ್ಲ. ನಮ್ಮ ಸೆಕ್ಯುಲರಿಸಂ ಎಂದರೆ ಎಲ್ಲರನ್ನೂ ಒಳಗೊಳ್ಳುವ ಮತಗಳಿಕೆಯ ಮಾದರಿ. ಮುಸ್ಲಿಮರು, ದಲಿತರು ಬೆಂಬಲಿಸಿದ್ದರಿಂದಲೇ ದೆಹಲಿಯಲ್ಲಿ ನಾವು ಅಧಿಕಾರಕ್ಕೆ ಬರಲು ಸಹಾಯವಾಯಿತು.
- ಆಪ್ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬುದು ಮುಖ್ಯವಲ್ಲ. ಒಂದೂ ಸ್ಥಾನ ಗೆಲ್ಲದಿದ್ದರೂ ನಾವು ಬೀದಿಯಲ್ಲಿ ನಿಂತು ಮೋದಿ ವಿರುದ್ಧ ಹೋರಾಡುತ್ತೇವೆ. ಆ ಶಕ್ತಿ ರಾಹುಲ್‌ರಿಗಾಗಲೀ, ಕಾಂಗ್ರೆಸ್‌ಗಾಗಲೀ ಇಲ್ಲ.
Advertisement