

ಬಾರ್ಮರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡದೇ ಇರುವುದರಿಂದ ಆಕ್ರೋಶಗೊಂಡು ಬಿಜೆಪಿ ತೊರೆದಿರುವ ಜಸ್ವಂತ್ ಸಿಂಗ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಪತ್ರಿಕೆಗಳು ಮತ್ತು ಸುದ್ದಿಸಂಸ್ಥೆಗಳಿಗೆ ನೀಡಿದ ಸಂದರ್ಶನಗಳಲ್ಲಿ ತಮ್ಮ ಅಂತರಾಳ ಹೊರಹಾಕಿದ್ದಾರೆ. ಅವುಗಳ ಪ್ರಮುಖಾಂಶಗಳನ್ನು ಇಲ್ಲಿ ಆಯ್ದಿಡಲಾಗಿದೆ.
-ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳು ಈಗ ಮುನ್ನೆಲೆಗೆ ಬಂದಿವೆ. ಇದರಿಂದ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮಗಳು ನಿಶ್ಚಿತ. ಇದನ್ನು ಪಕ್ಷ ಅನುಭವಿಸಬೇಕಾಗುತ್ತದೆ. ಇಂಥ ಸ್ಥಿತಿಗೆ ನಾವೇಕೆ ಬಂದಿದ್ದೇವೆ ಎಂದು ಬಿಜೆಪಿ ಮುಖಂಡರೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
- ಬಿಜೆಪಿಗೊಂದು ಬೌದ್ಧಿಕ ಆವರಣವಿದೆ. ಇದನ್ನು ಈಗ ಹೊರಗಿನಿಂದ ಬಂದವರೇ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇವರ್ಯಾರೂ ಇಲ್ಲಿಗೆ ಸಲ್ಲುವವರಲ್ಲ. ಬಾರ್ಮರ್‌ನಲ್ಲಿ ಸಹ ಈವರೆಗೆ ಬಿಜೆಪಿಯನ್ನು ವಾಚಾಮಗೋಚರ ಬಯ್ದುಕೊಂಡಿದ್ದ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಂಡು ಅಭ್ಯರ್ಥಿಯಾಗಿಸಿರುವುದರ ಬಗ್ಗೆ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶವಿದೆ.
- ರಾಜಸ್ಥಾನದ ಮುಖ್ಯಮಂತ್ರಿ ರಾಜ್ಯವನ್ನು ತಮ್ಮದೇ ಆದ ವಿಕ್ಷಿಪ್ತ ಶೈಲಿಯೊಂದರಲ್ಲಿ ಆಳಲು ಬಯಸಿರುವವರು. ನಾನಿದರ ಬಗ್ಗೆ ಹಲವು ಸಂದರ್ಭಗಳಲ್ಲಿ ತಿಳಿಹೇಳಿದ್ದೆ. ರಾಜಸ್ಥಾನಕ್ಕೆ ಏನಾದರೂ ಒಳ್ಳೆಯದಾಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಇಲ್ಲೇ ನಾನು ಹುಟ್ಟಿದ್ದು, ಇಲ್ಲಿಯೇ ಸೇವೆಯ ಬಯಕೆ ನನ್ನದು.
- ನಾನು ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬ. ಆದರೆ ಪಕ್ಷ ನನ್ನನ್ನು ಆ ದೃಷ್ಟಿಯಲ್ಲಿ ನೋಡುತ್ತಲೇ ಇಲ್ಲ. ಹೀಗಾಗಿ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಯೋಗ್ಯರೇ, ಅವರ ಜತೆ ನನ್ನ ಸಂಬಂಧವೇನು ಎಂಬುದನ್ನೆಲ್ಲ ನಾನು ಚರ್ಚಿಸಲಾರೆ. ಆ ಬಗ್ಗೆ ನಿರ್ಧರಿಸುವುದಕ್ಕೆ ಪಕ್ಷವಿದೆ.
- ಬಿಜೆಪಿ ನನ್ನನ್ನು ತೊರೆದಿರುವುದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಲ್ಲದೇ ಮತ್ಯಾವ ಆಯ್ಕೆಯೂ ನನ್ನ ಬಳಿ ಇಲ್ಲ. ಕಾಂಗ್ರೆಸ್‌ಗೆ ಸೇರುವ ವದಂತಿಯೆಲ್ಲ ಸುಳ್ಳು. ಆ ಬಯಕೆ ಇದ್ದಿದ್ದರೆ ಅದನ್ನು ಈವರೆಗೆ ಮುಚ್ಚಿಟ್ಟುಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ನನ್ನ ಪ್ರಥಮ ಚುನಾವಣೆಯನ್ನು ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿದ್ದೆ. ನನ್ನ ಕೊನೆಯ ಚುನಾವಣೆಯಾಗಿರುವ ಇದನ್ನು ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತಿದ್ದೇನೆ.
-ನಾನು ವೈಯಕ್ತಿಕ ಮಹಾತ್ತ್ವಾಕಾಂಕ್ಷೆ ಇಟ್ಟುಕೊಂಡು ಹೀಗೆ ಮಾಡುತ್ತಿದ್ದೇನೆ ಎಂಬ ಅರುಣ್ ಜೇಟ್ಲಿ ಮಾತಿಗೆ ಉತ್ತರಿಸುವ ಅವಶ್ಯವಿಲ್ಲ. ಅವರು ಆದರ್ಶ ಪುರುಷರೂ ಅಲ್ಲ, ಸ್ವತಃ ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿರುವ ವ್ಯಕ್ತಿಯೂ ಅವರೇನಲ್ಲ.
-ಪಕ್ಷದಲ್ಲಿ ಸರ್ವಾಧಿಕಾರಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ನನಗೆ ನೋವಾಗುತ್ತಿರುವುದು ಇದೇ ಮೊದಲೇನಲ್ಲ. 2009ರಲ್ಲಿ ದೂರವಾಣಿ ಕರೆಯ ಮೂಲಕ ರಾಜನಾಥ್ ಸಿಂಗ್ ನನ್ನನ್ನು ಪಕ್ಷದಿಂದ ಅಮಾನತು ಮಾಡುತ್ತಿರುವುದಾಗಿ ಹೇಳಿದ್ದರು. ಕಸ ಗುಡಿಸುವವನ ಜತೆಯೂ ನೀವು ಹಾಗೆ ನಡೆದುಕೊಳ್ಳಲಾರಿರಿ. ಈಗ ಬಾರ್ಮರ್‌ನಲ್ಲಿ ಟಿಕೆಟ್ ನಿರಾಕರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು ಯಾರು ಎಂಬುದೇ ತಿಳಿಯುತ್ತಿಲ್ಲ. ಈ ಆತಂಕವನ್ನು ಸುಷ್ಮಾ ಸ್ವರಾಜ್ ಅವರೂ ಧ್ವನಿಸಿದ್ದಾರೆ. ನಾನಂದುಕೊಂಡಿರುವ ಪ್ರಕಾರ ಆಡ್ವಾಣಿಯವರಿಗೂ ಈ ಕಸಿವಿಸಿ ಕಾಡಿದೆ.
- ಬಿಜೆಪಿ ಕಾಲದೊಂದಿಗೆ ಹೆಜ್ಜೆ ಹಾಕಬೇಕು ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಮೂಲ ಮೌಲ್ಯಗಳಿಗೆ ಬೆಲೆ ಕೊಡುವ, ಉತ್ತರದಾಯಿತ್ವವನ್ನು ತೊರೆಯದಿರುವ ಜವಾಬ್ದಾರಿಯೂ ಅದಕ್ಕಿರಬೇಕಾಗುತ್ತದೆ. ಈಗ ಪಕ್ಷದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ತುರ್ತು ಪರಿಸ್ಥಿತಿಯ ಕಾಲವನ್ನು ನೆನಪಿಸುತ್ತಿದೆ. ನಮೋ ನಮೋ ಎಂದೇ ಪಕ್ಷದೊಳಗೆ ಪಠಣ ಶುರುವಾಗಿದೆ. ದೇವರಿಗೆ ಮೀಸಲಾಗಿರುವ ಮಂತ್ರಪಠಣವನ್ನು ವ್ಯಕ್ತಿಗೆ ಬಳಸಿ ವೈಭವೀಕರಿಸುವ ಈ ನಮೋ ತಮಾಷೆ 1975ರ ತುರ್ತು ಪರಿಸ್ಥಿತಿಯೊಂದಿಗೆ ಹೋಲುತ್ತದೆ. ದರ್ಪವೇ ಮೇಲಾಗಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಧೋರಣೆಗೆ ಜಾಗವೇ ಇಲ್ಲದಂತಾಗಿದೆ.
-ರಾಜಕೀಯದಲ್ಲಿ ಸಹಾಯ ಎಂಬುದಕ್ಕೆ ಅರ್ಥವೇ ಇಲ್ಲದಂತಾಗಿದೆ. ನಾನೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್. ಕೆ. ಆಡ್ವಾಣಿ ಅವರೊಂದಿಗೆ ಪ್ರಯಾಣಿಸುತ್ತಿದ್ದೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬಹುದು ಎಂದು ಆಡ್ವಾಣಿಯವರು ಕೇಳಿದ್ದರು. ಆಗ ನಾನು ಉತ್ತರ ಪ್ರದೇಶಕ್ಕೆ ಉಮಾ ಭಾರತಿ ಅವರನ್ನೂ ರಾಜಸ್ಥಾನಕ್ಕೆ ವಸುಂಧರಾ ರಾಜೇ ಹೆಸರನ್ನೂ ಸೂಚಿಸಿದ್ದೆ. ಚುನಾವಣೆ ಸಂದರ್ಭದಲ್ಲೂ ರಾಜೇ ನನ್ನ ನಿವಾಸದಲ್ಲೇ ಕುಳಿತು ಕಾರ್ಯತಂತ್ರಗಳನ್ನು ಹೆಣೆದರು. ರಾಜನಾಥ್ ಸಿಂಗ್ ಅವರನ್ನೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿದವನು ನಾನು. ಹೀಗೆ ನನ್ನಿಂದ ಉಪಕೃತರಾದವರೆಲ್ಲ ಬೆನ್ನ ಹಿಂದೆ ಚೂರಿ ಹಾಕಿದರು.
- ಬಾರ್ಮರ್ ಕ್ಷೇತ್ರಕ್ಕೆ ಸೋನಾರಾಮ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿದೆ. ಮೊನ್ನೆಯವರೆಗೂ ಇವರು ಕಾಂಗ್ರೆಸ್ ಸದಸ್ಯರಾಗಿದ್ದರು. ಇತ್ತೀಚಿನ ವಿಧಾನಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತವರು ಅವರು. ಇವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವಾಗ ಆ ವಿಷಯಕ್ಕೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚೆ ಮಾಡುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ.
- ಪ್ರಣಬ್ ಮುಖರ್ಜಿ ಅವರನ್ನು ಹೊರತುಪಡಿಸಿದರೆ ರಕ್ಷಣೆ, ವಿದೇಶ ವ್ಯವಹಾರ, ವಿತ್ತಖಾತೆಯಂತ ಭಿನ್ನ ಮತ್ತು ಅತಿಮುಖ್ಯ ಖಾತೆಗಳನ್ನು ನಿಭಾಯಿಸಿದ ನಾಯಕನೆಂದರೆ ನಾನೊಬ್ಬನೇ. ಈ ಕೌಶಲಗಳೊಂದಿಗೆ ನಾನು ಬಿಜೆಪಿಗೆ ಸಹಾಯ ಮಾಡಬಲ್ಲವನಾಗಿದ್ದೆ.
Advertisement