

ಮಹಾಯುದ್ಧದಲ್ಲಿ ಅತೃಪ್ತಿಯ ಘಾಟನ್ನು ಎದುರಿಸದ ಪಾಳಿಯಗಳೇ ಇಲ್ಲವೇನೋ. ಎಲ್ಲ ಅತೃಪ್ತಿಗಳನ್ನೂ ಒಂದೇರೀತಿ ತೂಗಲಾಗುವುದಿಲ್ಲ. ಟಿಕೆಟ್‌ವಂಚಿತರು, ಉಚ್ಚಾಟನೆಗೆ ಒಳಗಾದವರೆಲ್ಲ ಪಕ್ಷದ ವಿರುದ್ಧ ಏಕಾಏಕಿ ಬಂಡೆದ್ದು ನಿಲ್ಲುತ್ತಾರೆ ಎಂದೇನೂ ಇಲ್ಲ. ಅದೇವೇಳೆ, ತಮ್ಮ ಅಸಮಾಧಾನವನ್ನು ಮಾಧ್ಯಮದೆದುರು ಹೊರಹಾಕುವುದಕ್ಕೆ ಅಂಜುವವರೂ ಅವರಲ್ಲ. ಡಿಎಂಕೆಯಿಂದ ಉಚ್ಚಾಟಿತರಾಗಿರುವ ಕರುಣಾನಿಧಿಯವರ ಪುತ್ರ ಅಳಗಿರಿ ಹಾಗೂ ಗುಜರಾತ್‌ನಲ್ಲಿ ಮೋದಿ ಮಹಿಮೆಯಿಂದ ಟಿಕೆಟ್‌ವಂಚಿತರಾಗಿರುವ ಹರಿನ್ ಪಾಠಕ್ ಅವರ ಅಸಮಾಧಾನದ ಆಳ ಇಲ್ಲಿ ತೆರೆದುಕೊಂಡಿದೆ.
ಉಚ್ಚಾಟನೆ ನಿರ್ಧಾರ ತಂದೆಯದ್ದಲ್ಲ
ಎಂ. ಕೆ. ಅಳಗಿರಿ ಅವರನ್ನು ಡಿಎಂಕೆಯಿಂದ ಉಚ್ಚಾಟಿಸಲಾಗಿದೆ. ಸಹೋದರ ಎಂ. ಕೆ. ಸ್ಟ್ಯಾಲಿನ್ ಅವರೊಂದಿಗೆ ಹೊಂದಿದ್ದ ಭಿನ್ನಾಭಿಪ್ರಾಯಗಳು, ಬಹಿರಂಗವಾಗಿಯೇ ನರೇಂದ್ರ ಮೋದಿ ಅವರಿಗೆ ಪ್ರಶಂಸೆಯ ಮಳೆ ಸುರಿಸಿದ್ದು, ಎಂಡಿಎಂಕೆಯ ನಾಯಕ ವೈಕೋ ಸೇರಿದಂತೆ ಹಲವರು ತಮಗೆ ಬೆಂಬಲ ನೀಡುವಂತೆ ಅವರನ್ನು ಭೇಟಿಯಾದಾಗ ಯಾರಿಗೂ ಇಲ್ಲವೆನ್ನದೇ ತಮ್ಮ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಂಡಿದ್ದು.... ಇವೆಲ್ಲವೂ ಅಳಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸುವುದಕ್ಕೆ ಡಿಎಂಕೆಗೆ ಕಾರಣಗಳನ್ನು ಒದಗಿಸಿದವು. ಉಚ್ಛಾಟನೆಗೊಂಡ ನಂತರ 'ಹಿಂದುಸ್ತಾನ್ ಟೈಮ್ಸ್' ಪತ್ರಿಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿರುವುದಿಷ್ಟು..
- ಲೋಕಸಭೆ ಅಖಾಡದಲ್ಲಿ ಇದು ನಿಮ್ಮ ಪ್ರಥಮ ಸ್ಪರ್ಧೆ. ಈ ಬಗ್ಗೆ ಏನನಿಸುತ್ತಿದೆ?
ಹಿಂದುಗಡೆ ಸೀಟಿನಲ್ಲಿ ಕುಳಿತು ನಿರ್ದೇಶಿಸುತ್ತಿದ್ದವನು ಈಗ ಚಾಲಕನ ಸ್ಥಾನದಲ್ಲೇ ಕುಳಿತಿದ್ದೇನೆ. ಅದೇ ವ್ಯತ್ಯಾಸ. ಇಂಥದೊಂದು ಅವಕಾಶ ಸಿಕ್ಕಿದ್ದಕ್ಕೆ ನಾನು ಖುಷಿಯಾಗಿದ್ದೇನೆ.
- ಇಂಥದೊಂದು ನಿರ್ಧಾರವನ್ನು ಎದುರಿಸುವುದಕ್ಕೆ ನೀವು ಸಿದ್ಧರಾಗಿದ್ದಿರೇ?
ತನ್ನನ್ನು ತಾನು ಮುಂದಿನ ಮುಖ್ಯಮಂತ್ರಿ ಎಂದುಕೊಂಡಿರುವ ವ್ಯಕ್ತಿ (ಸ್ಟಾಲಿನ್) ಮಧುರೈಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಈ ವಿದ್ಯಮಾನ ನಡೆದಿದೆ. ನನ್ನ ತಂದೆ ಸ್ವತಂತ್ರವಾಗಿ ತೆಗೆದುಕೊಂಡಿರುವ ನಿರ್ಧಾರ ಇದಲ್ಲ. ಅವರು ಒತ್ತಡಕ್ಕೆ ತಲೆಬಾಗಬೇಕಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತು.
- ಅಂದರೆ ನೀವು ಸ್ಟಾಲಿನ್‌ರನ್ನು ದೂರುತ್ತಿದ್ದೀರಿ?
ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ನಾನು ಸುಮ್ಮನಿರುವುದಿಲ್ಲ. ಪ್ರಕರಣ ದಾಖಲಿಸುತ್ತೇನೆ. ಪಕ್ಷದ ನಿಯಮಾವಳಿಗಳ ಪ್ರಕಾರ ಅಮಾನತು ಮಾಡುವುದಕ್ಕೂ ಮುಂಚೆ ನೋಟೀಸ್ ಕೊಡಬೇಕು. ನನ್ನ ಪರವಾಗಿರುವ ವಿವರಣೆ ಏನೆಂಬುದನ್ನು ಸ್ಪಷ್ಟಪಡಿಸುವುದಕ್ಕೆ ನನಗೆ ಅವಕಾಶವನ್ನೇ ನೀಡಿಲ್ಲ. ಖಚಾಂಚಿಯಾಗಿದ್ದ ಸ್ಟಾಲಿನ್ ತಮಗೆ ತಾವೇ ಅಧಿಕಾರ ಕೊಟ್ಟುಕೊಂಡಿದ್ದಾರೆ. ಪಕ್ಷವನ್ನು ವಶಪಡಿಸಿಕೊಳ್ಳುವ ಸಂಚು ಇದು. ನಾನದನ್ನು ನೆರವೇರುವುದಕ್ಕೆ ಬಿಡುವುದಿಲ್ಲ.
- ಈಗ ನೀವೇನು ಮಾಡಲಿದ್ದೀರಿ?
ನನ್ನನ್ನು ಅಮಾನತು ಮಾಡಿದ್ದಾರೆ ಎಂದಾಕ್ಷಣ ನಾವು ಪಕ್ಷವನ್ನು ಬಿಟ್ಟುಬಿಡುತ್ತೇವೆ ಎಂದರ್ಥವಲ್ಲ. ನಾವು ಡಿಎಂಕೆ ಸದಸ್ಯರು ಎಂಬುದನ್ನು ಯಾರಿಂದಲೂ ಬದಲಿಸುವುದಕ್ಕೆ ಆಗದು. ನಮ್ಮ ಕಠಿಣ ಪರಿಶ್ರಮದಿಂದ ಪಕ್ಷ ಕಟ್ಟಿದ್ದೇವೆ. ಡಿಎಂಕೆ ಎಂಬುದು ನಾವೂ ಸಮಾನ ಹಕ್ಕನ್ನು ಹೊಂದಿರುವ ಆಸ್ತಿ.
- ನಿಮ್ಮ ತಂದೆಯ ಬಳಿ ನೀವು ಕ್ಷಮೆ ಕೇಳುವುದಕ್ಕೆ ಸಿದ್ಧರಾಗಿದ್ದಿರಲ್ಲ?
ಹೌದು. ನನ್ನ ವಿರುದ್ಧದ ನಿರ್ಧಾರವನ್ನು ಮರುಪರಿಶೀಲಿಸುವ ಬಗ್ಗೆ ತಂದೆ ಮನಸ್ಸು ಮಾಡಿದ ಸಂದರ್ಭದಲ್ಲಿ ಹಾಗೆಂದು ಸಾರ್ವಜನಿಕವಾಗಿಯೇ ಹೇಳಿದ್ದೆ. ನನಗೆ ಅಮಾನತಿನ ಕುರಿತು ಯಾವ ನೋಟೀಸೂ ಬಂದಿಲ್ಲ. ತಂದೆ ಅವರಾಗಿಯೇ ಈ ನಿರ್ಧಾರ ಕೈಗೊಂಡಿಲ್ಲ ಎಂಬುದು ಸ್ಪಷ್ಟ. ನನಗೆ ಅವರ ಸಂಪರ್ಕವೇ ಸಿಗುತ್ತಿಲ್ಲ. ನನ್ನ ಕಾರಣಕ್ಕಾಗಿ ವೃಥಾ ಶಿಕ್ಷೆಗೆ ಒಳಗಾಗುತ್ತಿರುವ ಡಿಎಂಕೆ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು ಎಂಬುದಷ್ಟೇ ನನ್ನ ಕಳಕಳಿ.
- ನೀವು ಪ್ರತ್ಯೇಕ ಪಕ್ಷವೊಂದನ್ನು ಕಟ್ಟುತ್ತೀರಿ ಎಂದೇ ಎಲ್ಲರೂ ನಿರೀಕ್ಷಿಸಿದ್ದರು...
ಡಿಎಂಕೆ ಕಾರ್ಯಕರ್ತರ ಅಭಿಲಾಷೆ ಏನಿದೆಯೋ ಅದರಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ಬಂಧನಕ್ಕೆ ಒಳಗಾಗಿರುವಂತಿರುವ ಕರುಣಾನಿಧಿ ಅವರ ಸಹಾಯಕ್ಕೆ ನಿಲ್ಲಬೇಕು ಹಾಗೂ ಡಿಎಂಕೆಯನ್ನು ಉಳಿಸಿಕೊಳ್ಳಬೇಕು ಎಂಬುದು ಅವರೆಲ್ಲರ ಆಶಯ.
- ಬೇರೆ ಪಕ್ಷಗಳ ನಾಯಕರೇಕೆ ನಿಮ್ಮ ಬಳಿ ಬೆಂಬಲ ಕೋರಿ ಬರುತ್ತಿದ್ದಾರೆ?
ಜನರ ನಿಷ್ಠೆಯನ್ನು ಹೊಂದಿರುವವರು ಯಾರು ಎಂಬುದು ಅವರಿಗೆಲ್ಲ ಚೆನ್ನಾಗಿ ತಿಳಿದಿದೆಯಾದ್ದರಿಂದ.
- ಡಿಎಂಕೆ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು?
ಈ ಪರಿಸ್ಥಿತಿಯಲ್ಲಿ ಅದು ಒಂದೆರಡು ಸ್ಥಾನಗಳನ್ನು ಗೆದ್ದರೆ ಅದೇ ದೊಡ್ಡ ಸಾಧನೆ!
---------
ಬಿಜೆಪಿ ಗೋತ್ರವನ್ನೇ ಬದಲಿಸುತ್ತಿದೆ
ಅಹಮದಾಬಾದ್ ಪೂರ್ವದಲ್ಲಿ ಹರಿನ್ ಪಾಠಕ್‌ಗೆ ಟಿಕೆಟ್ ಸಿಕ್ಕದಿರುವುದು, ಹಳೆ ತಲೆಮಾರನ್ನು ಬದಲಾಯಿಸುವ ಮೋದಿ ಯೋಜನೆಯ ಭಾಗವೆಂಬ ವ್ಯಾಖ್ಯಾನಕ್ಕೆ ಒಳಗಾಗಿದೆ. ಆಡ್ವಾಣಿಯವರಂಥ ಹಿರಿಯ ನಾಯಕರಿಗೆ ಆಪ್ತರಾಗಿದ್ದ ಹರಿನ್ ಅವರು 'ಮೋದಿಯುಗ'ಕ್ಕೂ ಮೊದಲು ಗುಜರಾತ್‌ನಲ್ಲಿ ಹಿಂದುತ್ವವನ್ನು ಪಸರಿಸಿದ ಪ್ರಮುಖ ನೇತಾರರಾಗಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಅವರ ಬದಲು ಬಾಲಿವುಡ್ ನಟ ಪರೇಶ್ ರಾವಲ್ ಅವರು ಅಹಮದಾಬಾದ್ ಪೂರ್ವದಿಂದ ಬಿಜೆಪಿ ಉಮೇದುವಾರರಾಗಿದ್ದಾರೆ. ರೀಡಿಫ್ ಡಾಟ್‌ಕಾಮ್‌ಗೆ ವಿಶೇಷ ಸಂದರ್ಶನ ನೀಡಿರುವ ಹರಿನ್, ಇತರ ಪತ್ರಿಕೆಗಳ ಜತೆ ಮಾತಾನಾಡಿರುವುದನ್ನೂ ಒಟ್ಟುಗೂಡಿಸಿ ಇಟ್ಟಾಗ...
- ಯಾರ್ರೀ ಪರೇಶ್ ರಾವಲ್? ಜನ ಈ ಫಿಲ್ಮ್‌ಸ್ಟಾರ್‌ಗಳ ಬಗ್ಗೆ ಏನಂತ ಯೋಚಿಸುತ್ತಾರೆ ಗೊತ್ತಾ? ಸಿನಿಮಾ ಜಗತ್ತಿನ ಮಂದಿ ಮದ್ಯಪಾನ ಮಾಡಿಕೊಂಡಿರುವವರು ಎಂಬ ಅಭಿಪ್ರಾಯ ನನ್ನ ಕ್ಷೇತ್ರದ ಮಧ್ಯಮವರ್ಗದ ಮತದಾರರಲ್ಲಿದೆ. ಬೆಳಗಾಗಿ ಎಷ್ಟೋ ಹೊತ್ತಿನ ನಂತರ ಏಳುವ ಇವರು, ಮೋರಿ ಸಮಸ್ಯೆಯ ದೂರನ್ನು ಸ್ವೀಕರಿಸುವಷ್ಟರಮಟ್ಟಿಗಿನ ವ್ಯವಧಾನವನ್ನಾದರೂ ಹೊಂದಿರುತ್ತಾರಾ? ಅಹಮದಾಬಾದ್‌ನ ಮತದಾರರನ್ನು ಸುಲಭಕ್ಕೆ ಸೆಳೆಯಲಾಗುವುದಿಲ್ಲ. ಅವರ ಕೊನೆಯಿಲ್ಲದ ಬೇಡಿಕೆಗಳನ್ನು ಪೂರೈಸಲು ನಾವೆಲ್ಲ ಎಷ್ಟು ಬೆವರು ಹರಿಸಿದ್ದೇವೆ ಎಂಬ ಅಂಶ ಪರೇಶ್ ರಾವಲ್ ಅವರಿಗೆ ದಿನಗಳೆದಂತೆ ತಿಳಿಯುತ್ತದೆ.
-ಮೋದಿ ಟಿಕೆಟ್ ನಿರಾಕರಿಸಿದ ಮೇಲೆ ಸುಮಾರು 15 ಸಾವಿರ ಮತದಾರರು ನನ್ನೊಂದಿಗೆ ತಾವೆಲ್ಲ ಇದ್ದೇವೆ ಎಂಬ ಸಂದೇಶವನ್ನು ನೀಡಿದ್ದಾರೆ. ಅಶೋಕ್ ಭಟ್ ಮತ್ತು ಹರಿನ್ ಪಾಠಕ್ ಅವರ ಯುಗಾಂತ್ಯವಾಗುತ್ತಿದೆಯಲ್ಲ ಅಂತ ಅಹಮದಾಬಾದ್‌ನ ಮಂದಿ ಕ್ಷೋಭೆಗೊಂಡಿದ್ದಾರೆ.
- ನರೇಂದ್ರ ಮೋದಿಯವರೊಂದಿಗೆ ನನ್ನದು ಮಧುರ ಸಂಬಂಧವೇ. ಮೋದಿಯವರು ನನ್ನ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ಬಂದಾಗ, ನಾನೇ ಅವರನ್ನು ಭೇಟಿಯಾಗಿ 'ತಾವು ಸ್ಪರ್ಧಿಸುವುದಾದರೆ ನನ್ನ ಕ್ಷೇತ್ರವನ್ನು ಸಂತೋಷದಿಂದ ಬಿಟ್ಟುಕೊಡುತ್ತೇನೆ' ಎಂದು ಹೇಳಿದ್ದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಎದುರು ನಾನು ಹೇಳಿದ್ದು ಇಷ್ಟು: ನನಗೀಗ 66 ವರ್ಷ. ನನಗಿಂತ ಹಿರಿಯರಾಗಿರುವ, ಹಲವು ಬಾರಿ ಆರಿಸಿ ಬಂದಿರುವ ಅನೇಕರು ಈ ಬಾರಿ ಸ್ಪರ್ಧಿಸಿದ್ದಾರೆ. ಹೀಗಾಗಿ ನರೇಂದ್ರ ಮೋದಿಯವರು ಅಹಮದಾಬಾದ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದಾದರೆ ಅಲ್ಲಿಂದ ನಾನೇ ನಿಲ್ಲುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದೆ. ಎಲ್. ಕೆ. ಆಡ್ವಾಣಿಯವರ ನಿಕಟವರ್ತಿ ನಾನಾಗಿರುವುದು ಟಿಕೆಟ್ ನಿರಾಕರಣೆಗೆ ಕಾರಣವಾಗಿರಲಾರದು.
- ಪಕ್ಷಕ್ಕಾಗಿ ಇಷ್ಟು ವರ್ಷ ಕೆಲಸ ಮಾಡಿದವನು ನಾನು. ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ. ಆದರೆ ನನಗೆ ಬಹಳ ನೋವುಂಟುಮಾಡುತ್ತಿರುವ ಸಂಗತಿ ಎಂದರೆ, ಎಂಥೆಂಥವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆಯಲ್ಲ ಎಂಬ ಬಗ್ಗೆ. ಉತ್ತಮ ವ್ಯಕ್ತಿ ಪಕ್ಷಕ್ಕೆ ಸೇರುವುದಾದರೆ ಸ್ವಾಗತಿಸೋಣ. ಬಿಜೆಪಿ ತನ್ನ ಗೋತ್ರವನ್ನೇ ಬದಲಿಸಿಕೊಳ್ಳುತ್ತಿದೆ. ಪಕ್ಷದಲ್ಲಿ ಬಹುಕಾಲ ಇರುವವರಿಗಿಂತ ಅವಕಾಶವಾದಿಗಳಿಗೇ ಮಣೆ ಹಾಕಲಾಗುತ್ತಿದೆ. ಬಹಳಷ್ಟು ಪ್ರಕರಣಗಳಲ್ಲಿ ಬಿಜೆಪಿ ಸೇರುತ್ತಿರುವವರೆಲ್ಲ ಕಾಂಗ್ರೆಸ್‌ನಲ್ಲಿದ್ದುಕೊಂಡು ಗೂಂಡಾಗಿರಿ ಮಾಡಿದವರು. ಬಿಜೆಪಿಯ ಮೇಲೆ ಆಕ್ರಮಣ ಮಾಡಿದವರು. ಇಂಥವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡರೆ ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಉಡುಗುವುದಿಲ್ಲವೇ? ಗುಜರಾತ್‌ನಲ್ಲಂತೂ ಈ ಹಿಂದೆ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ವೈರಿಗಳನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಯಾವ್ಯಾವುದೋ ಕ್ಷೇತ್ರದಲ್ಲಿದ್ದವರನ್ನೆಲ್ಲ ಬಿಜೆಪಿಗೆ ಕರೆಸಿಕೊಂಡರೆ ಪಕ್ಷಕ್ಕಿರುವ ಐಡೆಂಟಿಟಿಯೇ ಹೊರಟುಹೋಗುತ್ತದೆ.
Advertisement