

ಕ.ಪ್ರ.ವಾರ್ತೆ , ಕೊಪ್ಪಳ , ಏ.22
ಲೋಕಸಭೆ ಚುನಾವಣೆ ಮತದಾನದ ಬಳಿಕ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಕ್ಷೇತ್ರದಲ್ಲಿ 15,34,826 ಮತದಾರರ ಪೈಕಿ 10,06,685 ಮತ (ಶೇ.65.59) ಚಲಾವಣೆಯಾಗಿದೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ಇದು ಶೇ.10 ಅಧಿಕ. ಇದು ಯಾರಿಗೆ ಮುಳುವು, ಯಾರಿಗೆ ಗೆಲವು ಎನ್ನುವ ಅಂಶವೇ ಕುತೂಹಲ ಮೂಡಿಸಿದೆ.
ಕಣದಲ್ಲಿ 16 ಅಭ್ಯರ್ಥಿಗಳು ಇದ್ದರೂ ಪೈಪೋಟಿ ಇದ್ದಿದ್ದು ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ ಅವರ ಮಧ್ಯೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರದಲ್ಲಿ 6 ಕಾಂಗ್ರೆಸ್ ಶಾಸಕರಿದ್ದಾರೆ. ಜೆಡಿಎಸ್ ಶಾಸಕ (ಇಕ್ಬಾಲ್ ಅನ್ಸಾರಿ) ಕಾಂಗ್ರೆಸ್‌ಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ. ಕುಷ್ಟಗಿಯಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಅಚ್ಚರಿ ಎಂದರೆ ಇವರೂ ಕಾಂಗ್ರೆಸ್ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ ಅವರ ಸಮುದಾಯಕ್ಕೆ(ಕುರುಬ) ಸೇರಿದವರೆ ಆಗಿದ್ದಾರೆ. ಈ ಎಲ್ಲ ಲೆಕ್ಕಾಚಾರದ ಜತೆಗೆ, ಹಣ ಬಲ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಇಡೀ ಲೋಕಸಭೆ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಪ್ರಕಾಶಿಸುತ್ತಿದೆ ಎನ್ನುವ ಅಭಿಪ್ರಾಯವಿದೆ. ಮತದಾನದ ಬಳಿಕ ಫಲಿತಾಂಶದ ಲೆಕ್ಕಾಚಾರ, ಬೆಟ್ಟಿಂಗ್ ಎಲ್ಲವೂ ಕಾಂಗ್ರೆಸ್ ಪರವಾಗಿಯೇ ಇತ್ತು. ಅದೆಷ್ಟೋ ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟರೂ ಇರಲಿಲ್ಲ!
ಗೆದ್ದರೆ ಪವಾಡ
ಆದರೆ, ಇದನ್ನು ಮೀರಿಯೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಗೆದ್ದರೆ ಅದು ಪವಾಡವೇ ಸರಿ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೊಪ್ಪಳದಲ್ಲಿ ಪ್ರಚಾರ ಮಾಡಿದ್ದು ಯುವಕರ ಮೇಲೆ ಪ್ರಭಾವ ಬೀರಿದೆ. ಅದೆಲ್ಲ ಮತಗಳಾಗಿ ಪರಿವರ್ತನೆ ಆಗಿದ್ದರೆ ಮಾತ್ರ ಬಿಜೆಪಿಗೆ ಗೆಲವಿನ ಅವಕಾಶ ಇದೆ. ಇದರ ಜತೆಗೆ ಯುಪಿಎ ಸರ್ಕಾರದ ಆಡಳಿತ ವಿರೋಧಿ ಅಲೆ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಹೋಳಾಗಿತ್ತು. ಆದರೆ, ಈ ಸಾರಿ ಬಿಎಸ್ಸಾರ್ ಮತ್ತು ಕೆಜೆಪಿಯೂ ಒಗ್ಗೂಡಿವೆ. ವಿಧಾನಸಭೆ ಚುನಾವಣೆಯಲ್ಲಿನ ಕೆಜೆಪಿ, ಬಿಎಸ್ಸಾರ್ ಮತಗಳು ಕಮಲಕ್ಕೆ ಬಿದ್ದಿದ್ದರೆ ಬಿಜೆಪಿಯೇ ಮೇಲುಗೈ ಸಾಧಿಸುತ್ತದೆ.
ಇದೆಲ್ಲಕ್ಕಿಂತ ಮಿಗಿಲಾಗಿ ಜಾತಿ ಆಧಾರದಲ್ಲಿ ಬೇರೊಂದು ಲೆಕ್ಕಾಚಾರ ನಡೆದಿದೆ. ಲಿಂಗಾಯತ ಮತಗಳು ಈ ಸಾರಿ ಸಮೀಕರಣವಾಗಿವೆ. ಅಹಿಂದದ ಸಣ್ಣಪುಟ್ಟ ಜಾತಿಗಳು ಬಿಜೆಪಿಯತ್ತ ವಾಲಿವೆ ಎನ್ನುವ ವಿಶ್ಲೇಷಣೆಯೂ ಇದೆ. ಇಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಅಲೆ ತೇಲಾಡುತ್ತಿದ್ದರೂ ಗೆಲವು ನಿಶ್ಚಿತ ಎಂದು ಹೇಳಲಾಗದು. ಬಿಜೆಪಿ ಪರವಾಗಿ ಮತ ಚಲಾಯಿಸಿದವರು ಬಾಯಿ ಬಿಡುತ್ತಿಲ್ಲ. ಬಹುತೇಕ ಕಡೆ ಕಾಂಗ್ರೆಸ್ ಶಾಸಕರೇ ಇರುವುದರಿಂದ ವಿನಾಕಾರಣ ಏಕೆ ಎದುರು ಹಾಕಿಕೊಳ್ಳಬೇಕು ಎಂದು ಗುಪ್ತವಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ತಂತಿ ಮೇಲಿನ ನಡಿಗೆಯಂತಿರುವ ಗೆಲವಿನ ಲೆಕ್ಕಾಚಾರದಲ್ಲಿ ಯಾರು ಬೇಕಾದರೂ ಗುರಿ ಮುಟ್ಟುವ ಸಾಧ್ಯತೆ ಇದೆ.
ಅಲೆ ಮಧ್ಯೆಯೂ ಸಿದ್ದು ಸೋತಿದ್ದುಂಟು
ಕ್ಷೇತ್ರದಲ್ಲಿ ಕುರುಬ ಸಮುದಾಯದವರೇ ಅಧಿಕವಾಗಿದ್ದಾರೆ ಎಂದು ಆಗ ಸಚಿವರಾಗಿದ್ದ ಸಿದ್ದರಾಮಯ್ಯ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ 1991ರಲ್ಲಿ ಜನತಾದಳದಿಂದ ಕಣಕ್ಕೆ ಇಳಿದಿದ್ದರು. ಆಗಲೂ ಇವರ ಪರವಾಗಿ ದೊಡ್ಡ ಅಲೆಯೇ ಸೃಷ್ಟಿಯಾಗಿತ್ತು. ಇವರೇ ಗೆಲ್ಲುತ್ತಾರೆ ಎಂದು ಮೊದಲೇ ವಿಜಯೋತ್ಸವ ಆಚರಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಪಾಟೀಲ ಅನ್ವರಿ ಜಯ ಸಾಧಿಸಿದರು. ಅನ್ವರಿ ಅವರ ಪರವಾಗಿ ಕ್ಷೇತ್ರದಲ್ಲಿ ಯಾವ ಅಲೆಯೂ ಇರಲಿಲ್ಲ. ಮತಗಟ್ಟೆಯಲ್ಲಿ ಏಜೆಂಟರೂ ಇರಲಿಲ್ಲ. ಅಂಥದ್ದೆ ವಾತಾವರಣ ಪುನಃ ಸೃಷ್ಟಿಯಾಗುತ್ತದೆಯೇ ಎಂಬುದು ಈಗ ಬಹುಚರ್ಚಿತ ವಿಷಯ. ಪ್ರಸಕ್ತ ಚುನಾವಣೆ ಹಾಗೂ 1991ರಲ್ಲಿ ನಡೆದ ಚುನಾವಣೆಯಲ್ಲಿ ಬಹುತೇಕ ಸಾಮ್ಯ ಇದೆ.
15,34,826 ಒಟ್ಟು ಮತದಾರರು
10,06685 ಚಲಾವಣೆಯಾದ ಮತಗಳು
2009ರ ಚುನಾವಣೆ
13,63,104 ಮತದಾರರು
75,5,027 ಮತದಾನ
55.38ರ್ ಮತದಾನ
-ಸೋಮರಡ್ಡಿ ಅಳವಂಡಿ
Advertisement