

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಪರ ಅಲೆ ಬೀಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಘಟಕದ ಸಂತಸ ಸಂಪೂರ್ಣ ಮುಕ್ಕಾಗಿತ್ತು.
ಪಕ್ಷ ನಿರೀಕ್ಷೆಗಿಂತ ಕಳಪೆ ಸಾಧನೆ ಮಾಡುವುದು ಖಚಿತವಾಗುತ್ತಿದ್ದಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎದೆಗುಂದಿದ್ದರು. ಅಷ್ಟು ಮಾತ್ರವಲ್ಲ 10.30ರ ಸುಮಾರಿಗೆ ಚುನಾವಣೆ ಟ್ರೆಂಡ್ ಏನೆಂಬುದನ್ನು ಅರ್ಥ ಮಾಡಿಕೊಂಡ ಅವರು ಅಧಿಕೃತ ನಿವಾಸ ಕಾವೇರಿಯಿಂದ ಹೊರ ನಡೆದರು. ತಮ್ಮ ಬೆಂಗಾವಲು ಪಡೆಗೂ ತಮ್ಮ ತಾಣ ಎತ್ತ ಎಂಬುದನ್ನು ಅವರು ತಿಳಿಸಿರಲಿಲ್ಲ. ತಮ್ಮ ಆಪ್ತ ಶಾಸಕರೊಬ್ಬರ ಮನೆಯಲ್ಲಿ ಬೆಂಬಲಿಗರ ಜತೆ ಚರ್ಚೆ ನಡೆಸಿದ ಅವರು ಮುಂದಿನ ಕಾರ್ಯತಂತ್ರ ಹಾಗೂ ಮಾಧ್ಯಮಗಳ ಪ್ರಶ್ನೆಯನ್ನು ಎದುರಿಸಿವ ಬಗ್ಗೆ ಚರ್ಚೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಬಿಳಿ ಬಣ್ಣದ ಆಡಿ ಕಾರಿನಲ್ಲಿ ಕಾವೇರಿಗೆ ವಾಪಸ್ ಆದ ಅವರು ಸಂಜೆಯವರೆಗೆ ಹೊರ ಬರಲಿಲ್ಲ.
ತಾವೇ ಶಿಫಾರಸು ಮಾಡಿ ಸಚಿವ ಸ್ಥಾನ ಕೊಟ್ಟವರಾಗಲಿ, ತಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಬೆನ್ನು ಬಿದ್ದವರಾಗಲಿ ಮುಖ್ಯಮಂತ್ರಿಗಳನ್ನು ಎದುರಿಸುವ ಧೈರ್ಯ ತೋರಲಿಲ್ಲ. ಗೃಹ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಆಪ್ತ ಸಿ.ಎಂ.ಇಬ್ರಾಹಿಂ ಮಾತ್ರ ಜತೆಗಿದ್ದರು.
ಇನ್ನು ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಂತೂ ಸಂಭ್ರಮವಿರಲಿಲ್ಲ. ಆದರೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಕಚೇರಿಗೆ ಆಗಮಿಸಿ ಜಿಲ್ಲಾ ಕೇಂದ್ರಗಳಿಂದ ಮಾಹಿತಿ ತರಿಸಿಕೊಂಡರು. ನಂತರ ಮುಖಂಡರ ಜತೆ ಚರ್ಚಿಸಿ ಸೋಲಿನ ಆತ್ಮಾವಲೋಕನದ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಇನ್ನು ಸಿದ್ದರಾಮಯ್ಯ ಸಂಪುಟದ ಸಚಿವರು ಟಿವಿ ವಾಹಿನಿಗಳ ಚರ್ಚೆಯಿಂದ ತಪ್ಪಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಟ್ಟರು. ಕೃಷಿ ಸಚಿವ ಕೃಷ್ಣಭೈರೇಗೌಡ ಟಿವಿ ವಾಹಿನಿಗಳ ಕರೆಯಿಂದ ತಪ್ಪಿಸಿಕೊಳ್ಳಲು ತಮ್ಮ ಮೊಬೈಲ್ ಫೋನ್ ಸ್ಥಗಿತಗೊಳಿಸಿದ್ದರು.
ಆದರೆ ಕಾಂಗ್ರೆಸ್‌ನ ಕೈ ನಿಜವಾಗಿ ಹಿಡಿದವರು, ಪಕ್ಷದಿಂದ ಸರಿಯಾದ ಗೌರವ ಸಂದಾಯವಾಗದ ವಕ್ತಾರರು. ಡಾ.ಬಿ.ಎಲ್.ಶಂಕರ್, ಡಾ.ಎಲ್.ಹನುಮಂತಯ್ಯ, ಎನ್.ಎ.ಹ್ಯಾರೀಸ್ ಸೇರಿದಂತೆ ಕೆಲವರು ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಪರವಾಗಿ ಟಿವಿ ವಾಹಿನಿಗಳಲ್ಲಿ ಧ್ವನಿ ಎತ್ತಿದರು. ಇನ್ನು ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಸೋಲು ಅಲ್ಪಸಂಖ್ಯಾತ ಸಮುದಾಯದವರನ್ನು ಮಾತ್ರವಲ್ಲ ಯುವ ಮುಖಂಡರಲ್ಲೇ ಕೋಪ ತರಿಸಿತ್ತು. ಸಂಘಟನೆಯಲ್ಲಿ ಭಾಗಿಯಾಗದೇ ನಾಲ್ಕು ಗೋಡೆ ಮಧ್ಯದಲ್ಲಿ ಕುಳಿತು ಮಾತನಾಡುವವರಿಗೆ ಟಿಕೆಟ್ ನೀಡಿದರೆ ಆಗುವುದು ಹೀಗೆ ಎಂಬ ಅಸಹನೆ ಎಲ್ಲರಲ್ಲು ಮನೆ ಮಾಡಿತ್ತು.
-ರಾಘವೇಂದ್ರ ಭಟ್
Advertisement