

"ಬಾಬರಿ ಮಸೀದಿ ಧ್ವಂಸದಲ್ಲಿ ನಮ್ಮದೇನೂ ಪಾತ್ರವಿಲ್ಲ, ಅದೊಂದು ಆಕಸ್ಮಿಕ ಘಟನೆ. ಮಸೀದಿಯನ್ನು ಉರುಳಿಸುವ ಪಿತೂರಿಯನ್ನು ನಾವು ಯಾವತ್ತೂ ಹೆಣೆದಿಲ್ಲ", "ಲಿಬರ್ಹಾನ್ ಆಯೋಗವೇ ನಮ್ಮ ನಾಯಕರಿಗೆ ಕ್ಲೀನ್ ಚಿಟ್ ನೀಡಿದೆ", "ನರೇಂದ್ರ ಮೋದಿಗೆ ಮುಸ್ಲಿಮರ ಬೆಂಬಲ ಸಿಗುತ್ತಿರುವುದು ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ", "ಇದು ಕೋಬ್ರಾ ಪೋಸ್ಟ್ ಅಲ್ಲ, ಕಾಂಗ್ರೆಸ್ ಪೋಸ್ಟ್", "ಕೋಬ್ರಾಪೋಸ್ಟ್ ವರದಿ ಪ್ರಸಾರವಾಗದಂತೆ ಚುನಾವಣಾ ಆಯೋಗ ತಡೆ ಹಾಕಬೇಕು"
2014ರ ಲೋಕಸಭಾ ಚುನಾವಣಾ ಕಣದಲ್ಲಿ ಕಳೆದ ಎರಡು ದಿನಗಳಿಂದ ಬಿಜೆಪಿ ನಾಯಕರು ಆಡುತ್ತಿರುವ ಮಾತುಗಳಿವು.
ಆದರೆ, 1989, 1991ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವೇದಿಕೆಗಳಲ್ಲಿ ಮೊಳಗಿದ ಘೋಷಣೆಗಳನ್ನು ನೋಡಿ:
-ಅಯೋಧ್ಯಾ ರಾಮನ ಮೇಲಾಣೆ, ಮಂದಿರವಲ್ಲೇ ಕಟ್ಟುವೆವು
-ಅಯೋಧ್ಯೆಯಲ್ಲಿ ರಾಮ ಮಂದಿರ, ದೇಶದಲ್ಲಿ ರಾಮರಾಜ್ಯ
-ಬಚ್ಚಾ ಬಚ್ಚಾ ರಾಮ್ಕಾ, ರಾಮ್ ಜನ್ಮ ಭೂಮಿ ಕಾಮ್ಕಾ
-ಕಲ್ಯಾಣ್ ಸಿಂಗ್ ಕಲ್ಯಾಣ್ ಕರೋ, ಮಂದಿರ್ ಕಾ ನಿರ್ಮಾಣ್ ಕರೋ
-ದೇಶ್ ಕಿ ವಾಣಿ, ಲಾಲ್ಕೃಷ್ಣ ಆಡ್ವಾಣಿ
ಆಗಿನ ಟಿವಿ ಚಾನಲ್ಗಳ ಪರದೆಯ ಮೇಲೆ ರೋಷಾವೇಷದ ಮಾತುಗಳನ್ನಾಡುತ್ತಿದ್ದ ಬಿಜೆಪಿ ನಾಯಕರು ಇವರೇನಾ? ಈ 25 ವರ್ಷಗಳಲ್ಲಾದ ಬದಲಾವಣೆಯಾದರೂ ಏನು? ಬಿಜೆಪಿ ತನ್ನ ಸ್ವರೂಪವನ್ನು ಬದಲಾಯಿಕೊಂಡಿತಾ?
ಬಿಜೆಪಿ ತನ್ನ ನಿಲುವನ್ನು ಸಡಿಲಿಸಿಕೊಂಡಿತಾ? ಇತರ ಪಕ್ಷಗಳಂತೆ ತಾನೂ ಚುನಾವಣಾ ರಾಜಕಾರಣದ ಸಿದ್ಧ ಹಾದಿ ಹಿಡಿಯಿತಾ? ಹೀಗೆ ಹತ್ತಾರು ಪ್ರಶ್ನೆಗಳು ಏಳುವುದು ಇಂಥ ಸಂದರ್ಭದಲ್ಲಿ ಸಹಜ.
25 ವರ್ಷಗಳ ಹಿಂದಿನ ಮಾತು. ವಿಶ್ವ ಹಿಂದು ಪರಿಷತ್ ಆರಂಭಿಸಿದ ರಾಮ ಜನ್ಮಭೂಮಿ ಆಂದೋಲನ ಅಷ್ಟೇನೂ ಕಾವು ಪಡೆದಿರಲಿಲ್ಲ. ಆದರೆ, ಪ್ರಧಾನಿ ವಿಪಿ ಸಿಂಗ್ ಅವರ ಮಂಡಲ್ ಮಂತ್ರ ಕೆಲ ರಾಜ್ಯಗಳಲ್ಲಿ ಕಿಡಿ ಹೊತ್ತಿಸಿತ್ತು. ಆಗಿನ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಜೆಪಿಗೆ ಮಂಡಲ್ ಮಂತ್ರದಿಂದ ತನಗೆದುರಾಗುವ ಅಪಾಯದ ಮುನ್ಸೂಚನೆ ಸಿಕ್ಕಿತ್ತು. ಆಗಿನ ಬಿಜೆಪಿ ಅಧ್ಯಕ್ಷ ಎಲ್.ಕೆ ಆಡ್ವಾಣಿ ಜಾಗೃತರಾದರು. ರಾಮಜನ್ಮಭೂಮಿ ನಿರ್ಮಾಣಕ್ಕೆ ಬಿಜೆಪಿಯ ಅಧಿಕೃತ ಬೆಂಬಲವನ್ನು ಸಾರಿದರು. ಸೋಮನಾಥದಿಂದ ಅಯೋಧ್ಯೆಯವರೆಗೆ ರಾಮ ರಥಯಾತ್ರೆ ಹೊರಟೇ ಬಿಟ್ಟರು. ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ಕಂಡ 'ಅತಿ ದೊಡ್ಡ ಜನಾಂದೋಲನ' ಅಂತಲೂ ಬಣ್ಣಿಸಿದರು. ವಾಜಪೇಯಿಯವರ 'ಗಾಂಧಿ ಸಮಾಜವಾದದ' ವೇದಿಕೆಯಿಂದ ಪಕ್ಷವನ್ನು 'ಹಿಂದೂ ರಾಷ್ಟ್ರವಾದದ' ವೇದಿಕೆಗೆ ಸ್ಥಳಾಂತರಿಸಿಬಿಟ್ಟರು. ನೋಡನೋಡುತ್ತಲೇ ಅದರಲ್ಲಿ ಯಶಸ್ವಿಯೂ ಆದರು. 1984ರಲ್ಲಿ ಕೇವಲ ಎರಡೇ ಸ್ಥಾನ ಗಳಿಸಿದ್ದ ಪಕ್ಷವನ್ನು 1998ರಲ್ಲಿ 181 ಸ್ಥಾನಗಳ ಅತಿ ದೊಡ್ಡ ಪಕ್ಷವಾಗಿ ಬೆಳೆಸಿಬಿಟ್ಟರು.
ಇಷ್ಟೆಲ್ಲಾ ಆಗುವ ಹೊತ್ತಿಗೆ ಪಕ್ಷದ ಕೆಲ ಘೋಷಣೆಗಳು ಭಾರತೀಯ ಯುವಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯೂ ಆದವು.
'ಕಾಂಗ್ರೆಸ್ನದ್ದು ಹುಸಿ ಜಾತ್ಯತೀತೆ', 'ಮುಸ್ಲಿಂ ತುಷ್ಟೀಕರಣ ದೇಶಕ್ಕೆ ಅಪಾಯ', 'ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿ', 'ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ಬೇಕಿಲ್ಲ' ಇಂಥ ಘೋಷಣೆಗಳು ದೇಶದ ಮೂಲೆಮೂಲೆಗಳಲ್ಲಿ ಪ್ರತಿಧ್ವನಿಸಿದವು. ಇದೇ ಅವಧಿಯಲ್ಲೇ 'ರಾಮ' ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಸ್ಥಾನಪಡೆದು ಬಿಟ್ಟ. 'ರಾಮ್, ರೋಟಿ ಔರ್ ಇನ್ಸಾಫ್' ಪಕ್ಷದ ಘೋಷವಾಕ್ಯವಾಯ್ತು.
ಅಲ್ಲಿಯವರೆಗೆ ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ಬಿಜೆಪಿ ಮೊದಲ ಬಾರಿಗೆ ಸೈದ್ಧಾಂತಿಕ ಸಂಕಟ ಎದುರಿಸಿದ್ದು 28 ಪಕ್ಷಗಳ ಎನ್ಡಿಎ ಸರ್ಕಾರ ರಚನೆಯಾದಾಗ. ವಾಜಪೇಯಿಯವರ ಮೈತ್ರಿ ರಾಜಕಾರಣದ ರಾಜಧರ್ಮ, ಬಿಜೆಪಿಯ ಸಿದ್ಧಾಂತವನ್ನು ಪಕ್ಕಕ್ಕೆ ಸರಿಸಿತ್ತು. ಮೂಲ ಘೋಷಣೆಗಳು ಧ್ವನಿಯಿಲ್ಲದೇ ಸೊರಗಿದವು. ಪಕ್ಷದ ಮೂಲ ಸಿದ್ಧಾಂತವಾದಿಗಳು ನಿರಾಶರಾದರು. ಪಕ್ಷಕ್ಕೆ ಇನ್ನು ಭವಿಷ್ಯವಿಲ್ಲ ಎಂದು ಒಳಗೊಳಗೇ ಕೊರಗಿಕೊಂಡರು. ಆಗ ಪಕ್ಷಕ್ಕೆ ನೆರವಾಗಿದ್ದು ಅಟಲ್ ಬಿಹಾರಿ ವಾಜಪೇಯಿ ಎಂಬ ಸೌಮ್ಯ ವ್ಯಕ್ತಿತ್ವ. ಅದು ದೇಶದ ಎಲ್ಲ ಸಮಾಜದ ವ್ಯಕ್ತಿಗಳು ಒಪ್ಪುವಂಥ ವಿಶಾಲ ವ್ಯಕ್ತಿತ್ವ.
ರಾಮ ನಾಮ ಜಪದಿಂದ ಬಿಜೆಪಿ ಮೆಲ್ಲಗೆ ವಾಜಪೇಯಿ ಜಪ ಮಾಡಲು ಆರಂಭಿಸಿತ್ತು. ಆದರೆ, 2004ರಲ್ಲಿ ಬಿಜೆಪಿ, 5 ವರ್ಷಗಳ ಆಡಳಿತದ ಸಾಧನೆಯನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತು. ಆಗಿನ ಚುನಾವಣೆಯಲ್ಲೂ ಅಷ್ಟೇ, ಮಿತ್ರ ಪಕ್ಷಗಳ ಒತ್ತಡಕ್ಕೆ ಬಿಜೆಪಿ ಮಣಿಯಿತು. ರಾಮ ಮಂದಿರ, ಸಮಾನ ನಾಗರಿಕ ಸಂಹಿತೆ, ಸಂವಿಧಾನದ 370ನೇ ವಿಧಿ ರದ್ದತಿ... ಈ ಎಲ್ಲ ಅಂಶಗಳನ್ನು ತನ್ನ ಚುನಾವಣಾ ಪ್ರಚಾರದಿಂದ ಕೈಬಿಟ್ಟಿತು. ಪಕ್ಷ ಎರಡನೇ ಬಾರಿ ಸೈದ್ಧಾಂತಿಕ ಸಂಕಟ ಎದುರಿಸಿದ್ದು ಇದೇ ಸಂದರ್ಭದಲ್ಲಿ.
ಪಾಕಿಸ್ತಾನದ ಜನಕ ಮೊಹಮ್ಮದ್ ಆಲಿ ಜಿನ್ನಾ ಅವರನ್ನು ಎಲ್.ಕೆ ಆಡ್ವಾಣಿ ಕೊಂಡಾಡಿದಾಲೂ ಸೈದ್ಧಾಂತಿಕ ಸಂಕಟ ಎದುರಾಗಿತ್ತು. ಆದರೆ ಆಗ ಸಂಕಟ ಎದುರಿಸಿದ್ದು ಇಡಿಯಾಗಿ ಪಕ್ಷವಲ್ಲ, ಬದಲಾಗಿ ಆಡ್ವಾಣಿ ಮತ್ತು ಅವರ ಸಮರ್ಥ್ಥನೆಗೆ ಇಳಿದ ಬೆಂಬಲಿಗರ ಪಡೆ. ಇದರಿಂದ ವೈಯಕ್ತಿಕವಾಗಿ ಆಡ್ವಾಣಿಗೂ ನಷ್ಟವಾಯಿತು. ಪಕ್ಷವೂ ಕವಲು ದಾರಿಯತ್ತ ಸಾಗಿತು. ಇಷ್ಟರಲ್ಲಾಗಲೇ ಗುಜರಾತ್ನಲ್ಲಿ ನರೇಂದ್ರ ಮೋದಿ ಪ್ರವರ್ಧಮಾನಕ್ಕೆ ಬಂದಿದ್ದರು. ಅಲ್ಲಿ ನಡೆದ ಕೋಮು ಹತ್ಯಾಕಾಂಡದ ಹಿನ್ನೆಲೆಯಲ್ಲಿ ಸೆಕ್ಯುಲರ್ವಾದಿಗಳ ವಿರೋಧವನ್ನೂ ಕಟ್ಟಿಕೊಂಡಿದ್ದರು. ಎರಡನೇ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಆರ್ಎಸ್ಎಸ್ ಕಣ್ಣಲ್ಲಿ ನಿಜವಾದ ಹೀರೊ ಆದರು. ಮೋದಿಗೆ ಪ್ರಖರ ಹಿಂದುತ್ವವಾದಿ ಎಂಬ ಹಣೆಪಟ್ಟಿ ಬಂದದ್ದು ಆಗಲೇ. ಹಿಂದೂ ರಾಷ್ಟ್ರವಾದಿಗಳ ಕಣ್ಣಿಗೆ ಈಗ್ಗೆ ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ಮೋದಿ ರಾಷ್ಟ್ರ ನಾಯಕರಾಗಿ ಗೋಚರಿಸಿದ್ದರು. ಪಕ್ಷದಲ್ಲಿ ಉಂಟಾಗಿದ್ದ ಸೈದ್ಧಾಂತಿಕ ನಾಯಕತ್ವದ ಕೊರತೆಯನ್ನು ಮೋದಿ ನೀಗಿಸಿದ್ದರು.
ಆದರೆ, ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿದ ನರೇಂದ್ರ ಮೋದಿ, ಬಿಜೆಪಿ ಸಿದ್ಧಾಂತಗಳ ಬಗ್ಗೆ ಚಕಾರ ಎತ್ತಲೇ ಇಲ್ಲ. ಅವರು ಎಲ್ಲೇ ಹೋದರೂ ಗುಜರಾತ್ ಅಭಿವೃದ್ಧಿಯ ಜಪ ಮಾಡುತ್ತಿದ್ದರೇ ಹೊರತು, ರಾಮನಾಮ ಜಪ ಮರೆತೇ ಹೋಯಿತು. ಯಾವ ಜಪ ಮಾಡಿದರೇನು.. ಒಟ್ಟಿನಲ್ಲಿ ಪಕ್ಷ ದೆಹಲಿ ಗದ್ದುಗೆ ಹಿಡಿಯಬೇಕು. ಈ ಚಿಂತನೆಗೆ ಪಕ್ಷದಲ್ಲಿ ಚಾಲನೆ ದೊರೆಯಿತು. ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿಯೂ ಆಗಿ ಬಿಟ್ಟರು.
ಅಂದಿನಿಂದ ಇಂದಿನವರೆಗೆ ನರೇಂದ್ರ ಮೋದಿ ಹಿಂದೂ ರಾಷ್ಟ್ರವಾದದ ಒಂದು ಮಾತನ್ನೂ ಆಡಿಲ್ಲ. ಅಭಿವೃದ್ಧಿ ಮಂತ್ರವನ್ನು ಬಿಟ್ಟಿಲ್ಲ. ಹೀಗಾಗಿ ನರೇಂದ್ರ ಮೋದಿಗೆ ಅಲ್ಪಸಂಖ್ಯಾತರ ಬೆಂಬಲವೂ ಸಿಗತೊಡಗಿದೆ.
ಇಂಥ ಸಂದರ್ಭದಲ್ಲೇ ಧುತ್ತೆಂದು ಬಂದು ಎದುರಿಗೆ ನಿಂತಿದೆ ಕೋಬ್ರಾ ಪೋಸ್ಟ್. ತನ್ನ ಕುಟುಕು ಕಾರ್ಯಾಚರಣೆಯ ಮೂಲಕ ಅದು ಹೊರಗೆಡಹಿರುವ ಸತ್ಯ ಏನೆಂದರೆ, 'ಬಾಬ್ರಿ ಮಸೀದಿ ಧ್ವಂಸಕ್ಕೆ ಬಿಜೆಪಿ ನಾಯಕರು ಪಿತೂರಿ ಮಾಡಿದ್ದರು' ಅನ್ನುವುದು. ಬಾಬರಿ ಮಸೀದಿ ಧ್ವಂಸವಾಗಿದ್ದು ಪಿತೂರಿಯ ಫಲವೋ, ಆಕಸ್ಮಿಕ ಆಕ್ರೋಶದ ಫಲವೋ ಗೊತ್ತಿಲ್ಲ. ಆದರೆ, ಧ್ವಂಸ ಮಾಡಿದವರು ಮಾತ್ರ ಬಿಜೆಪಿಯ ಬೆಂಬಲಿಗರು ಅನ್ನುವುದು ಮಾತ್ರ ಇಡೀ ಜಗತ್ತಿಗೇ ಗೊತ್ತಿರುವ ನಗ್ನ ಸತ್ಯ. ಈ ಸತ್ಯ ಸಂಗತಿಯೇ ಈಗ ಬಿಜೆಪಿಗೆ ಸೈದ್ಧಾಂತಿಕ ಸಂಕಟವನ್ನು ತಂದಿಟ್ಟಿದೆ.
ಹೌದು. ನಾವೇ ಬಾಬರಿ ಮಸೀದಿಯನ್ನು ಕೆಡವಿದ್ದು ಎಂದು ಧೈರ್ಯವಾಗಿ ಹೇಳಿಕೊಂಡರೆ, ಅಲ್ಪಸಂಖ್ಯಾತರ ಅಷ್ಟಿಷ್ಟು ಮತಗಳೂ ಬರದೇ ಹೋಗಬಹುದು. ಹೊಸ ಮಿತ್ರ ಪಕ್ಷಗಳು ಸಿಗದೆ 272 ಮ್ಯಾಜಿಕ್ ಸಂಖ್ಯೆ ಮುಟ್ಟಲು ಅಸಾಧ್ಯವಾಗಬಹುದು ಎಂಬ ಭಯ. ಒಂದು ವೇಳೆ, ಮಸೀದಿ ಧ್ವಂಸಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದರೆ ಉತ್ತರ ಪ್ರದೇಶದಲ್ಲಿನ ತನ್ನ ಹಿಂದೂ ವೋಟ್ ಬ್ಯಾಂಕ್ ಕೈಕೊಡಬಹುದು. ಇದರಿಂದ ಪಕ್ಷದ ಬುನಾದಿಯೇ ಕುಸಿಯಬಹುದು ಎನ್ನುವ ಆತಂಕ. ಹೇಗೋ ಇನ್ನೊಂದು ತಿಂಗಳು ರಾಮ ಮಂದಿರ ವಿಷಯ ಚರ್ಚೆಗೆ ಬರದಿದ್ದರೆ ಸಾಕಪ್ಪಾ ಅಂತ ಕೋಬ್ರಾ ಪೋಸ್ಟ್ಗೆ ಹಿಡಿ ಶಾಪ ಹಾಕುತ್ತಿದ್ದಾರೆ ಬಿಜೆಪಿ ನಾಯಕರು. 25 ವರ್ಷಗಳ ಹಿಂದೆ ಬೇಡಬೇಡವೆಂದರೂ ರಾಮ ನಾಮ ಜಪಿಸುತ್ತಿದ್ದ ಬಿಜೆಪಿ ನಾಯಕರು ಈಗ ರಾಮನ ಹೆಸರು ಕೇಳಿದರೇನೇ ಚಡಪಡಿಸತೊಡಗಿದ್ದಾರೆ. ಸೈದ್ಧಾಂತಿಕ ಸಂಕಟದಿಂದ ಪಾರಾಗಲೆಂದೇ ಜನತಾ ಪಕ್ಷದಿಂದ ಬೇರೆಯಾಗಿ ರಚನೆಯಾದ ಪಕ್ಷ ಬಿಜೆಪಿ. ಅಂಥದ್ದೇ ಸಂಕಟವನ್ನು ಈಗಲೂ ಎದುರಿಸುತ್ತಿದೆ. ವಿಪರ್ಯಾಸ ಅಂದರೆ ಇದೇ ಅಲ್ಲವೇ?
- ಕೆ.ವಿ.ಎನ್ ಸ್ವಾಮಿ,
ಕಾರ್ಯನಿರ್ವಾಹಕ ಸಂಪಾದಕರು, ಸುವರ್ಣ ನ್ಯೂಸ್
Advertisement