

'ರಾಷ್ಟ್ರೀಯ ಆಮ್ ಪಕ್ಷ' ಕಟ್ಟಿಕೊಂಡಿರುವ ರಾಖಿ ಸಾವಂತ್ ಕಳಂಕ ತರಲು ಮುಂದಾಗಿದ್ದು ರಾಹುಲ್ ಗಾಂಧಿಯ ಬ್ರಹ್ಮಚರ್ಯಕ್ಕೇ! ರಾಹುಲ್ ಮನಸ್ಸು ಮಾಡಿದರೆ ಮದುವೆಯಾಗುವುದಾಗಿ ಹೇಳಿಕೆ ನೀಡಿದ ರಾಖಿ ಇತ್ತ ಮೋದಿಯನ್ನು ಬೆಂಬಲಿಸಿದ್ದಳು. ಪಡ್ಡೆಗಳೆಲ್ಲ 'ಹಾಗಿದ್ದರೆ ರಾಹುಲ್ ನಾಮ್ ಕೇ ವಾಸ್ತೆ ಗಂಡ!' ಎಂದೇ ಕಿಚಾಯಿಸಿದ್ದರು. 'ಹಾಟ್' ಆಗಿರುವ ಹಸಿಮೆಣಸನ್ನೇ ಪಕ್ಷದ ಚಿಹ್ನೆಯಾಗಿಸಿಕೊಂಡಿರುವ ರಾಖಿ, ರಾಜಕಾರಣದಲ್ಲಿ ಅದ್ಯಾವ ರೀತಿಯ ಐಟಂ ಡ್ಯಾನ್ಸ್ ಮಾಡಬಹುದು? ಎಂಬ ಪ್ರಶ್ನೆ ಆಕೆಯ ಅಭಿಮಾನಿಗಳದ್ದು. ಶೃಂಗಾರ ಪ್ರಸಂಗದಲ್ಲಿ ಹೋದಲೆಲ್ಲಾ 'ಅ'ನಿರೀಕ್ಷಿತ ಕಿಸ್ ದಾಳಿಗೆ ಗುರಿಯಾಗುತ್ತಿರುವ ನಗ್ಮಾನ ಕೊಡುಗೆ ಅಪಾರ! ಒಂದು ರೀತಿಯಲ್ಲಿ ಚುನಾವಣಾ ಅಂಗಣದಲ್ಲಿ ಶೃಂಗಾರ ರಸ ಹರಿದಾಡಿಸಿಬಿಟ್ಟರಪ್ಪಾ ನಗ್ಮಾ.
ರಾಜಕೀಯ ವಿರೋಧಿಗಳಿಂದ 'ಪಪ್ಪು' ಎಂದೇ ಗುರುತಿಸಿಕೊಂಡಿರುವ ರಾಹುಲ್ ಗಾಂಧಿ ಹೋದಲ್ಲೆಲ್ಲ ಹಾಸ್ಯದ ಹರಿವನ್ನೇ ಹರಿಸಿಬರುತ್ತಾರೆ. 'ಝ್ಝಿಡ ಟ್ಟ್ಠಟ್ಝಿಟ್ಜಿ ಐ ಢ್ಟ್ಞಿಜ ್ಡಠ ಛಡಿ ಝ್ಝ್ಜಿಡಿ' ಎಂದೆಲ್ಲ ಅಸಂಬದ್ಧವಾಗಿ ಭಾಷಣ ಮಾಡುತ್ತ ಹಲ್ಲು ಕಿರಿಯುವ ರಾಹುಲ್, ಕಾಂಗ್ರೆಸ್ ವಿರೋಧಿಗಳ ಪಾಲಿನ ವಡಿವೇಲು! ರಾಹುಲ್ ಹಾಸ್ಯ ರಸದ ರಾಯಭಾರಿ.
ಒಂದೇ ವಾರದಲ್ಲಿ ಎರಡು ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡ ಕೇಜ್ರಿವಾಲ್‌ರನ್ನು ನೋಡಿದಾಗ ಯಾರಿಗಾದರೂ ಅಯ್ಯೋ ಅಂತ ಕರುಣೆ ಉಕ್ಕುತ್ತದೆ. ಹೋದಲ್ಲೆಲ್ಲ ತನಗೇ ಏಕೆ ಧರ್ಮದೇಟು? ಅಂತ ಗಳಗಳನೆ ಅಳುವ ಕೇಜ್ರಿ, 'ಕರುಣಾ' ರಸದ ಪ್ರತಿನಿಧಿ. ಆಮ್ ಆದ್ಮಿ ಅಭ್ಯರ್ಥಿ ಪ್ರಣವ್ ಪ್ರಕಾಶ್ ಮೇಲೆ ರಾಡಿನಿಂದ ಹಲ್ಲೆ ಮತ್ತು ಶಾಜಿಯಾ ಇಲ್ಮಿ ಮೇಲೆ ಕಲ್ಲು ತೂರಿದ ಘಟನೆ ನಿಜಕ್ಕೂ ಕರುಣಾಜನಕ. 'ನನ್ನ ಹೆಂಡತಿಯನ್ನು ಹಾಗೆ ಸೋಲಿಸುವುದಾ?' ಎಂದು ಕುಮಾರಸ್ವಾಮಿ ದುಃಖಿಸಿದಾಗ ಪ್ರಜೆಗಳ ಕಣ್ಣುಗಳೂ ಒದ್ದೆಯಾಗಿದ್ದವು. ಇವರೆಲ್ಲ ಕರುಣಾ ರಸದ ಕಾಣ್ಕೆ ಬಹಳ ದೊಡ್ಡದು.
ಇನ್ನು ರೌದ್ರ ರಸ. ಇದನ್ನು ಹರಿಸಿದವರು ನರೇಂದ್ರ ಮೋದಿ ಆಪ್ತ ಅಮಿತ್ ಶಾ. ಚುನಾವಣೆ ಎಂದ ಮೇಲೆ ರೋಷದ ಪಾಲುದಾರಿಕೆ ಇದ್ದೇ ಇರುತ್ತದೆ. ಅದು ಈ ಬಾರಿಯೂ ಪ್ರಕಟವಾಗಿದೆ. 'ಮುಜಾಫರ್ ನಗರದಲ್ಲಾದ ಕೋಮು ಗಲಭೆಗೆ ಕಾಂಗ್ರೆಸ್ ವಿರುದ್ಧ ಮತ ಹಾಕುವ ಮೂಲಕ ಸೇಡು ತೀರಿಸಿಕೊಳ್ಳಬೇಕು' ಎಂದೆಲ್ಲ ಅಮಿತ್ ಶಾ ಬೊಬ್ಬಿರಿದಿದ್ದರು.
ಈ ಚುನಾವಣೆಯಲ್ಲಿ ಭಯಾನಕ ರಸದ ಪಾಲೂ ಇದೆ. 'ನಮ್ಮ ಸುದ್ದಿಗೆ ಬಂದರೆ ಮೋದಿಯನ್ನು ಕತ್ತರಿಸಿ ಹಾಕುತ್ತೇವೆ' ಎಂದು ಅಜಂ ಖಾನ್ ಅಬ್ಬರಿಸಿದ್ದರು. ಯಾರಿಗಾದರೂ ಭಯಪಡಿಸುವ ಇಂಥ ಹೇಳಿಕೆಗಳು ರಾಜಕಾರಣಿಗಳ ಬಾಯಿಯಿಂದ ಬಂದಿವೆ. 'ಅತ್ಯಾಚಾರ ಮಾಡಿದವರಿಗೆಲ್ಲ ಗಲ್ಲು ಶಿಕ್ಷೆ ವಿಧಿಸೋದಾ? ಹುಡುಗರು ಎಂದ ಮೇಲೆ ಇಂಥ ತಪ್ಪುಗಳನ್ನು ಮಾಡುತ್ತಿರುತ್ತಾರೆ' ಎಂದು ಪರೋಕ್ಷವಾಗಿ ಮುಲಾಯಂ ಸಿಂಗ್ ಯಾದವ್ ಅತ್ಯಾಚಾರಿಗಳನ್ನು ರಕ್ಷಿಸುವ ಹೊಣೆಗೇಡಿತನ ಪ್ರದರ್ಶಿಸಿದ್ದರು. ಇದು ಪ್ರಜೆಗಳ ಪಾಲಿಗೆ ಭೀಬತ್ಸವಾಗಿ ಕಂಡುಬಂದಿತ್ತು.
ಈ ಬಾರಿಯ ಚುನಾವಣೆಯಲ್ಲಿ 'ಅದ್ಭುತ' ರಸದ ವಾರಸುದಾರರು ಮೋದಿ. ಅವರು ಸೃಷ್ಟಿಸಿದ ಮೋದಿ ಅಲೆ ಸಾಮಾನ್ಯದ್ದಾ? ಕಳೆದ ಲೋಕಸಭೆಯಲ್ಲಿ ಅನೇಕ ಸಾಮಾನ್ಯ ಮಂದಿಗೆ ಮೋದಿಯ ಹೆಸರೇ ತಿಳಿದಿರಲಿಲ್ಲ. ಈಗ ಮೋದಿ ಮನೆ ಮನೆಗೂ ಸುದ್ದಿಯ ಸರದಾರ. ಸುಮಾರು 1.50 ದಶ ಲಕ್ಷ ಹೊಸ ಮತದಾರರ ಸೇರ್ಪಡೆ ಮತ್ತೊಂದು 'ಅದ್ಭುತ'. ಮತಹಾಕುವವರ ಪ್ರಮಾಣ ಹೆಚ್ಚಾಗಿದ್ದೂ ಇನ್ನೊಂದು ಅದ್ಭುತ.
ಇನ್ನುಳಿದಿದ್ದು ಶಾಂತ ರಸ. ಅದರ ರಾಜ ಎಲ್.ಕೆ. ಅಡ್ವಾಣಿ. ಅದೇನೋ ಅವರ ಎದೆಯೊಳಗೆ ದಿವ್ಯ ಮೌನ. ಮನದಾಳದಲ್ಲೇನೋ ತೊಳಲಾಟ. ಇದನ್ನು ಒಬ್ಬ ಸಾಮಾನ್ಯ ಮನಃಶಾಸ್ತ್ರಜ್ಞನೂ ಗುರುತಿಸಬಲ್ಲ. ರಾಜ್ಯದಲ್ಲಿ ದೊಡ್ಡ ಧ್ವನಿಯಾಗಿದ್ದ ಯಡಿಯೂರಪ್ಪ ಕೂಡ ಶಾಂತ. ಸುಷ್ಮಾ ಸ್ವರಾಜ್ ಸ್ವರವೂ ಉಡುಗಿರುವುದೂ ಗೊತ್ತಾಗುತ್ತದೆ. ಮನಮೋಹನ ಸಿಂಗ್ ಶಾಶ್ವತ ಶಾಂತರಸದ ಮೂರ್ತಿ. ಹತ್ತು ವರ್ಷ ಭಾರತದ ಪ್ರಧಾನಿ ಆಗಿದ್ದು ವಾಸ್ತವವೇ ಅಥವಾ ಕನಸೇ ಎಂಬ ಗೊಂದಲವನ್ನು ಬಗೆಹರಿಸುವ ಬರದಲ್ಲಿ ಮಾತೇ ಹೊರಡುತ್ತಿಲ್ಲವೇನೋ! ಹೋದಲ್ಲೆಲ್ಲ ಏಟು ತಿಂದುಬಂದಿರುವ ಕೇಜ್ರಿವಾಲ್‌ರ ಆಗಾಗ್ಗಿನ ಮೌನವೂ ಶಾಂತರಸದ ಸಂಕೇತ. ಗಾಂಧಿ ಸಮಾಧಿ ಎದುರು ಧ್ಯಾನಕ್ಕೆ ಕುಳಿತ ಕೇಜ್ರಿವಾಲ್, ಕಪಾಳಕ್ಕೆ ಬಾರಿಸಿದವನನ್ನೂ ಕ್ಷಮಿಸಿ ದೊಡ್ಡವರಾದರು. ಅವರ ಸಂಯಮಕ್ಕೆ ಈ ಬಾರಿ 'ನೊಬೆಲ್ ಶಾಂತಿ ಪುರಸ್ಕಾರ' ದಕ್ಕಲಿ.
ಏನೇ ಅನ್ನಿ, ಈ ನವರಸಗಳಿಲ್ಲದೆ ರಾಜಕೀಯವಿಲ್ಲ.
-ಮಂಜುನಾಥ ಎಲ್.ಕೆ
Advertisement