ಡಿ. 18ಕ್ಕೆ ರಂಗಶಂಕರದಲ್ಲಿ 'ಋಣವೆಂಬ ಸೂತಕವು' ನಾಟಕ

ಡಿಸೆಂಬರ್ 18, ಗುರುವಾರ ಸಂಜೆ 7.30ಕ್ಕೆ ರಂಗಶಂಕರದಲ್ಲಿ 'ಋಣವೆಂಬ ಸೂತಕವು' ನಾಟಕ ಪ್ರದರ್ಶನಗೊಳ್ಳಲಿದೆ...
'ಋಣವೆಂಬ ಸೂತಕವು' ನಾಟಕದ ಒಂದು ದೃಶ್ಯ
'ಋಣವೆಂಬ ಸೂತಕವು' ನಾಟಕದ ಒಂದು ದೃಶ್ಯ
ಬೆಂಗಳೂರು:  ಡಿಸೆಂಬರ್  18, ಗುರುವಾರ ಸಂಜೆ 7.30ಕ್ಕೆ ರಂಗಶಂಕರದಲ್ಲಿ 'ಋಣವೆಂಬ ಸೂತಕವು' ನಾಟಕ  ಪ್ರದರ್ಶನಗೊಳ್ಳಲಿದೆ.
ಋಣವೆಂಬ ಸೂತಕವು ನಾಟಕದ ಬಗ್ಗೆ...
ಹಸಿವು, ಬಡತನಗಳ ಬೇಗೆಯಿಂದ ತನ್ನನ್ನು, ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು, ತನ್ನ ಆದಾಯದ ಮಿತಿಯನ್ನರಿತು ಸಾಲ ಮಾಡುವುದು ಹಲವು ಬಾರಿ ಅನಿವಾರ್ಯವಾಗಬಹುದು. ಜಾಗರೂಕತೆಯಿಂದ ಇಂತಹ ಸಣ್ಣ ಪುಟ್ಟ ಋಣದಿಂದ ಹೊರ ಬರುವವನು ಜಾಣ. ವಿಲಾಸೀ ಜೀವನ, ವ್ಯಸನಗಳು, ತೋರಿಕೆಯ ಆಡಂಬರ, ಅರ್ಥಹೀನ ಡಂಬಾಚಾರಗಳು, ತನ್ನ ಯೋಗ್ಯತೆಗೆ ಮೀರಿದ ಐಷಾರಾಮವನ್ನು ದಕ್ಕಿಸಿಕೊಳ್ಳಲು, ಮುಂದಾಲೋಚನೆ ಇಲ್ಲದೆ ಮಾಡುವ ಸಾಲ ಸ್ವಯಂಕೃತ ಅಪರಾಧ. ಇಂತಹವರು ತಮ್ಮ ಹೀನ ಸ್ಥಿತಿಗೆ ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ಇವೆರಡಕ್ಕಿಂತ ಅಪಾಯಕಾರಿ ಎಂದರೆ, ತಮ್ಮ ಅಧಿಕಾರ ಲೋಲುಪತೆ, ಸ್ವಾರ್ಥ ಸಾಧನೆಗಳಿಗಾಗಿ ಇಡೀ ದೇಶದ ಜನತೆಯನ್ನು ಋಣದ ಕೂಪಕ್ಕೆ ತಳ್ಳಿ, ಅವರು ಪಡುವ ಸಂಕಟಗಳ ಬಗ್ಗೆ ಯಾವ ಪಾಪ ಪ್ರಜ್ಞೆಯೂ ಇಲ್ಲದೆ, ದರ್ಪದಿಂದ ಮೆರೆಯುವ ರಕ್ತ ಪಿಪಾಸಿಗಳದ್ದು. ಈ ಮೂರನೆಯ ಪ್ರಕಾರದ ಋಣದ ಮೇಲೆ ಜನ ಸಾಮಾನ್ಯರಿಗೆ ಯಾವ ಹಿಡಿತವಾಗಲೀ, ಆಯ್ಕೆಯಾಗಲೀ ಇರುವುದಿಲ್ಲ. ನೂರಾರು ವರ್ಷಗಳಿಂದ ಅತ್ಯಂತ ಸರಳವಾಗಿ, ಸಹಜವಾಗಿ, ಸುಲಭವಾಗಿ ದೊರೆಯುತ್ತಿದ್ದ ಆಹಾರ ಮತ್ತು ಇತರೇ ಅತ್ಯಾವಶ್ಯಕ ಪದಾರ್ಥಗಳು ಕೈಗೆಟುಕದಂತಾಗಿ, ಎಲ್ಲಿಂದಲೋ ಹೇರಲ್ಪಟ್ಟ, ನಮಗೆ ಒಗ್ಗದ, ಒಲ್ಲದ, ಬೇಕಿಲ್ಲದ ವಸ್ತುಗಳಿಗೆ ನುರಾರು ಪಟ್ಟು ಹಣ ತೆರಲೇಬೇಕಾಗುವ ಅನಿವಾರ್ಯತೆಯನ್ನು ಸೃಷ್ಟಿಸಿರುವ ಈ ವಿಷಜಂತುಗಳು ಯಾರೆಂದು ಭೂತ ಕನ್ನಡಿ ಹಿಡಿದು ನೋಡ ಬೇಕಿಲ್ಲ.
ಹಾಸ್ಯ, ವಿಡಂಬನೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಎಚ್ಚರಿಕೆಯ ಗಂಟೆಯನ್ನು ಬಾರಿಸುವ ನಾಟಕ ಋಣವೆಂಬ ಸೂತಕವು. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೆಲಸವನ್ನು ಕಳೆದುಕೊಂಡು, ಕ್ರೆಡಿಟ್ ಕಾರ್ಡಿನ ಜಾಲದಲ್ಲಿ ಸಿಲುಕಿ ಪರದಾಡುತ್ತಿರುವ ಸಮಯದಲ್ಲಿ ರಮ, ರಂಗಸ್ವಾಮಿ ದಂಪತಿಗಳ ನೆರವಿಗೆ ಬರುವವರೆಲ್ಲ ಅವರ ಋಣದ ಭಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚಿಸುವ ಸೂಚನೆಗಳೇ ಕಂಡುಬರುತ್ತದೆ. ಅವುಗಳನ್ನೆಲ್ಲ ತಿರಸ್ಕರಿಸಿ, ಸರಳ ಬದುಕಿಗೆ ತಮ್ಮದೇ ಆದ ಸೂತ್ರವನ್ನು ಕಂಡುಕೊಳ್ಳುವ ನಿರ್ಧಾರ ಮಾಡುತ್ತಾರೆ, ಈ ದಂಪತಿಗಳು.
ಎಂ.ಸಿ.ಆನಂದ್
ನಾಟಕಕಾರ, ವಿನ್ಯಾಸಕಾರ, ನಿರ್ದೇಶಕ
ವೃತ್ತಿಯಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಎಂ.ಸಿ ಆನಂದ್ ಸುಮಾರು 50 ವರ್ಷಗಳಿಂದ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ನಟ, ನಿರ್ದೇಶಕ, ವಿನ್ಯಾಸಕಾರ, ನಾಟಕಕಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಬಿ.ವಿ.ಕಾರಂತ, ಪ್ರಸನ್ನ, ಎಂ.ಎಸ್.ಸತ್ಯು, ಟಿ.ಎನ್.ನರಸಿಂಹನ್, ಸುರೇಶ್ ಆನಗಳ್ಳಿ, ಆರ್.ನಾಗೇಶ್ ಮುಂತಾದವರ ನಿರ್ದೇಶನದಲ್ಲಿ ನೂರಾರು ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ. ಕತ್ತಲೆ ದಾರಿ ದೂರ, ಕುರಿ, ದಂಗೆಯ ಮುಂಚಿನ ದಿನಗಳು, ಯಯಾತಿ, ಕೊನೆ ಇಲ್ಲ ಮುಂತಾದ ನಾಟಕಗಳಲ್ಲಿನ ಇವರ ಅಭಿನಯ ಇಂದಿಗೂ ಜನರ ಮನದಲ್ಲಿ ಉಳಿದಿವೆ. ಲಕ್ಷಾಪತಿರಾಜನ ಕತೆ, ಚಿತ್ರಪಟ ರಾಮಾಯಣ, ಭ್ರೂಣ, ವಾಸಂತಿ ಮುಂತಾದ ನಾಟಕಗಳ ರಂಗ ವಿನ್ಯಾಸ ಇವರದು. ಎಪ್ಪತ್ತು-ಎಂಭತ್ತರ ದಶಕದಲ್ಲಿ ಆನಂದ್ ನಾಟಕಗಳ ಪ್ರಚಾರ ವಿನ್ಯಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 1999ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಪುರಸ್ಕಾರ ದೊರೆತಿದೆ. ಇವರು ನಿರ್ಮಿಸಿದ ಹಲವಾರು ಹವ್ಯಾಸಿ  ಕಿರು ಚಲನ ಚಿತ್ರಗಳಿಗೆ ಪ್ರಶಸ್ತಿಗಳು ಸಂದಿವೆ. ಟೀ.ವಿ ಸರಣಿಗಳಲ್ಲಿಯೂ ಇವರ ಅಭಿನಯ ಗಮನ ಸೆಳೆದಿದೆ. ಇವರು ರಚನೆ, ವಿನ್ಯಾಸ, ನಿರ್ದೇಶನದ ಇತ್ತೀಚಿನ ನಾಟಕಗಳಾದ ಸಂತೆಯೊಳಗೊಂದು ಮನೆಯ ಮಾಡಿ ಹಾಗೂ ಮಂದಿಗಾಗದಿರು ಬಲಿ ವಿಮರ್ಶಕರ ಹಾಗೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಭೂಮಿಕೆಯಲ್ಲಿ :
ಎಂ.ಸಿ.ಆನಂದ್, ಸುಪ್ರಭ, ಅಭಿರುಚಿ ಚಂದ್ರು, ಶ್ವೇತ ಶ್ರೀನಿವಾಸ್, ರವಿ ಕುಮಾರ್, ರಂಗನಾಥ ಎನ್.ವಿ, ಸಂತೋಶ್.

ಹಿನ್ನೆಲೆಯಲ್ಲಿ : : ಬೆಳಕು : ಅರುಣ್ ಮೂರ್ತಿ, ಸಂಗೀತ : ಸತೀಶ್ ಕೆ.ಎಸ್.

ರಚನೆ, ವಿನ್ಯಾಸ, ನಿರ್ದೇಶನ: ಎಂ.ಸಿ.ಆನಂದ್
ಋಣವೆಂಬ ಸೂತಕವು
( ಹಾಸ್ಯ, ವಿಡಂಬನೆಗಳಿಂದ ಕೂಡಿದ ವಿಚಾರಾತ್ಮಕ ನಾಟಕ)
18ನೇ ಡಿಸೆಂಬರ್ 2014, ಗುರುವಾರ, ಸಂಜೆ 7.30ಕ್ಕೆ
ರಂಗಶಂಕರ
ಜೆ.ಪಿ.ನಗರ 2ನೇ ಹಂತ
ಪ್ರವೇಶ : ರೂ.100/-
On line booking : www.bookmyshow.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com