ಅಪ್ಪಾ, ಒಂದೆರಡು ಪುಟ್ಟ ಪ್ರಶ್ನೆಗೆ ಉತ್ತರಿಸಿಬಿಡು ಪ್ಲೀಸ್...

ಅಪ್ಪಾ ... ಎಲ್ಲರೂ ಎಲ್ಲ ಅಪ್ಪನ ಬಗ್ಗೆ ಬರೆವಾಗ ನನಗೂ ಅಪ್ಪನ ಬಗ್ಗೆ ಬರೆಯೋ ಆಸೆ ನನ್ನ ಅಪ್ಪನ ನೋಡೋ ಆಸೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಪ್ಪಾ ......
ಎಲ್ಲರೂ ಎಲ್ಲ ಅಪ್ಪನ ಬಗ್ಗೆ ಬರೆವಾಗ  ನನಗೂ ಅಪ್ಪನ ಬಗ್ಗೆ ಬರೆಯೋ ಆಸೆ  
ನನ್ನ ಅಪ್ಪನ ನೋಡೋ ಆಸೆ..
ನನ್ನ ಹುಟ್ಟಿಗೆ ಕಾರಣನಾದ ಅಪ್ಪನ ನೋಡುವ ಆಸೆ ...
ಪುಟ್ಟಪುಟ್ಟ ಕೈಗಳಿಗೆ ಬಂಗಾರದ ಬಳೆಗಳ ತೊಡಿಸಿ
'ನನ್ನ ಮಹಾದೇವಿ ನೀನು' ಅಂದ ಅಪ್ಪನ ನೋಡೋ ಆಸೆ ...
ಚಿನ್ನದಂತ ಪುಟ್ಟ ಕೈ ಮಸಿಯಾಗುವುದೆಂದು
ಕಡಲೆಕಾಯಿಯ ಬಿಡಿಸಿ ಬೆಲ್ಲದೊಡನೆ ಮೆಲ್ಲಿಸಿದ ಅಪ್ಪನ ನೋಡುವ ಆಸೆ ...
ಶಾಲೆಗೆ  ಪುಸ್ತಕ ಹಿಡಿದ ಹೊರಟ  ಪುಟ್ಟ ಮಗಳ
ಮನೆಮನಗಳ ದುಃಖ ದೂರ ಮಾಡೋ ವ್ಯಕ್ತಿಯಾಗು ಎಂದು ಹರಸಿದ್ದ ಅಪ್ಪನ ನೋಡೋ ಆಸೆ
ಪ್ರತಿಷ್ಟೆಗೋ.. ಒತ್ತಡಕ್ಕೋ ..  
ಪರಿಸ್ಥಿತಿಗೋ ಕೋಪಕ್ಕೊ.. ಸಿಲುಕಿ
ಅಮ್ಮನ ವಿರುದ್ದ ದಿಕ್ಕಿಗೆ ತಿರುಗಿದ ಅಪ್ಪನ ನೋಡುವ ಆಸೆ ....
ಒಮ್ಮೆ ಹೋದ ಅವನು  ಮತ್ತೆ ಬರದೆ ಇದ್ದಾಗ ...
ಅಮ್ಮನ ಕಣ್ಣ ಹನಿಯ ಕಂಡಾಗ ...
ಎಲ್ಲೋ ತಪ್ಪಿದೆ ಅನಿಸಿದಾಗ ...
ಅವನ ನೋಡೋ ಉತ್ಕಟ ಆಸೆಯ ಹುದುಗಿಸಿ ಬಿಟ್ಟೆ .........
ಆದರೂ  ಅಂದೆಂದೋ ಪುಟ್ಟ ಕೈ ತುತ್ತು ತಿಂದು ಕೈಗೆ ಮುತ್ತು ಕೊಟ್ಟ....
ಅಂದೆಂದೋ ಒಂದು ಚೆಂದದ ಚಿತ್ರ ಬಿಡಿಸಿ 'ನನ್ನ ಮಗಳು' ಎಂದು ಹೇಳಿದ್ದ,
ಅವನ ಮುಂದೆ  'ನಾ ನೀ ಹೇಳಿದಂತೆ ಇದ್ದೇನೆ ಅಲ್ವಾ ಅಪ್ಪಾ' ಅನ್ನೋ ಆಸೆ ...
ನನ್ನ ಮಕ್ಕಳ ಅವನ  ಮುಂದೆ ನಿಲ್ಲಿಸಿ ಅವನ ಮೊಗದ ನಗುವ ನೋಡೋ  ಆಸೆ...
 'ತಾತ' ಎನ್ನುವ ಮಕ್ಕಳ ಹಿಡಿದು ನೀ ಸಂಭ್ರಮಿಸುವುದ ನೋಡೋ ಆಸೆ ......
ಆದರೂ
ಅಪ್ಪಾ, ಒಂದೆರಡು ಪುಟ್ಟ ಪ್ರಶ್ನೆಗೆ ಉತ್ತರಿಸಿಬಿಡು ಪ್ಲೀಸ್
ನೀ ಹೊರಟ ಮೇಲೆ ನಮ್ಮ  ನೆನಪೇ ಬರಲಿಲ್ಲವೇ ?
ಬಂದಿದ್ದರೆ ಒಮ್ಮೆ ಬರಬಾರದಿತ್ತೆ ?
ಕರುಳಿಗಿಂತ ಪ್ರತಿಷ್ಠೆ ಹಿರಿದೆ ಅಪ್ಪಾ........
ಎಲ್ಲಿಯಾದರೂ ಇದನ್ನು ಓದಿದರೆ ಒಮ್ಮೆ ಉತ್ತರಿಸಿ ಬಿಡು
 ನನ್ನಂತಹ ಎಷ್ಟೋ ಅಪ್ಪ ಇದ್ದರೂ ಇಲ್ಲದಂತೆ ಬದುಕ ಸಾಗಿಸೋ ಮಕ್ಕಳಿಗೆ ಉತ್ತರ ಸಿಕ್ಕೀತು...........
ಆದರೂ
ನಾ ನಿನ್ನ ದ್ವೇಷಿಸಲಾರೆ ಅಪ್ಪ ...
ನನ್ನ ಹುಟ್ಟಿಗೆ ಕಾರಣನಾದ ನಿನ್ನ ಪ್ರೀತಿಸುತ್ತಲೇ ಇರುತ್ತೇನೆ ...
ಮತ್ತೊಂದು ಜನ್ಮಕ್ಕೂ ನೀನೆ ಅಪ್ಪನಾಗಲಿ ಎಂದುಕೊಳ್ಳುತ್ತೇನೆ ...
ಯಾಕೆ ಗೊತ್ತ ಅಪ್ಪ ..
ನಿನ್ನ ಪೂರ್ತಿ ಪ್ರೀತಿಯ ಹಕ್ಕು ಪಡೆಯಲು ......
ನೀನೇ ಅಪ್ಪನಾಗುವೆಯ ಅಪ್ಪಾ .... ಪ್ಲೀಸ್ ...

-ಸುನಿತಾ ಎ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com