ಅಪ್ಪನೊಂದಿಗೆ ಆಶಾ ರೈ
ಅಪ್ಪನೊಂದಿಗೆ ಆಶಾ ರೈ

ಅಪ್ಪಯ್ಯನೇ ನನ್ನ ಹೀರೋ

ಹೇನಿಲ್ಲದ ಅಪ್ಪನ ತಲೆಯಲ್ಲಿ ಸುಮ್ಮನೆ ಹೇನು ಹುಡುಕುತ್ತ ಅಪ್ಪನಿಗೆ ನಿದ್ದೆ ಬಂದರೆ ನನಗೆ ಒಂದು ರೂಪಾಯಿ ಬಹುಮಾನ...
Published on

ಎಲ್ಲ ಹೆಣ್ಣು ಮಕ್ಕಳ ಮೊದಲ ಹೀರೊ ಅಪ್ಪ ಅಂತಾರೆ. ನನ್ನ ಪಾಲಿಗೆ ಅಂದಿಗೂ ಇಂದಿಗೂ ನನ್ನ ಅಪ್ಪಯ್ಯನೇ ನನ್ನ ಹೀರೊ. ಮನೆಯಲ್ಲಿ ನಾಲ್ಕು ಮಕ್ಕಳಲ್ಲಿ ಕೊನೆಯವಳಾಗಿ ಹುಟ್ಟಿದ ನನಗೆ ಚಿಕ್ಕಂದಿನಿಂದಲೂ ಅಪ್ಪನ ಜೊತೆ ಹೆಚ್ಚಿನ ಸಲುಗೆ, ಗೆಳೆತನ. ಅಣ್ಣ, ಅಕ್ಕಂದಿರು ಅಪ್ಪನಿಗೆ ಹೆದರಿಕೊಂಡರೆ ಸಂಜೆ ಮನೆಗೆ ಬಂದೊಡನೆ ಗದರಿ ನನ್ನ ಪಾಲಿನ ಚಾಕ್ಲೇಟ್ ಇಲ್ಲವೇ ಹಣ್ಣು ಅಪ್ಪನಲ್ಲಿ ಕೇಳುವ ಧೈರ್ಯ ನನಗೆ ಮಾತ್ರ ಇದ್ದಿದ್ದು. ಹೇನಿಲ್ಲದ ಅಪ್ಪನ ತಲೆಯಲ್ಲಿ ಸುಮ್ಮನೆ ಹೇನು ಹುಡುಕುತ್ತ ಅಪ್ಪನಿಗೆ ನಿದ್ದೆ ಬಂದರೆ ನನಗೆ ಒಂದು ರೂಪಾಯಿ ಬಹುಮಾನ ಸಿಗುತ್ತಿತ್ತು. ಅಣ್ಣ, ಅಕ್ಕಂದಿರಿಗೆ ಏನೇ ಬೇಕಿದ್ದರೂ ಅವರ ಪರವಾಗಿ ಅಪ್ಪನ ಬಳಿ ಅಪ್ಲಿಕೇಶನ್ ಒಯ್ಯುವ ಸ್ವಾತಂತ್ರ್ಯವೂ ನನಗೇ ಇದ್ದಿದ್ದು. ಅಪ್ಪಯ್ಯ ಒಬ್ಬ ಶ್ರಮಜೀವಿ. ತಾವು ಮಾಡುವ ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ನಿಷ್ಟೆಯಿಂದ ಮಾಡಬೇಕು ಅನ್ನುವ ನೀತಿ ಅವರದ್ದು. ಮನೆ ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು, ಹೂವು ಕೊಯ್ಯುವುದು, ಟಾಯ್ಲೆಟ್ ತೊಳೆಯುವುದು ಹೀಗೆ ಯಾವ ಕೆಲಸವೂ ಕೀಳಲ್ಲ, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವ ಸ್ವಾವಲಂಬಿತನಕ್ಕಿಂತ ದೊಡ್ಡ ಆದರ್ಶವಿಲ್ಲ ಎಂದು ನಂಬಿ, ಅದನ್ನೇ ಮಕ್ಕಳೆಲ್ಲರಲ್ಲಿ ಬಿತ್ತಿದ್ದು ನಮ್ಮಪ್ಪ. ಕುಂದಾಪುರದ ಬಳಿಯ ಹಾಲಾಡಿ ಅನ್ನುವ ಊರಿನಲ್ಲಿ ಬಡತನದಲ್ಲೇ ಬಾಲ್ಯ ಕಳೆದ ನಮ್ಮಪ್ಪನ ಚಿಕ್ಕಂದಿನ ಅತಿ ದೊಡ್ಡ ಆಸೆ ಎರಡಾಣೆ ಕೊಟ್ಟು ಕೆಂಪಗಿದ್ದ ಟೋಮ್ಯಾಟೊ ಅನ್ನುವ ಹಣ್ಣು ತಿನ್ನುವುದಾಗಿತ್ತಂತೆ! ಎಷ್ಟೋ ದಿನಗಳ ಶ್ರಮದ ನಂತರ ಎರಡಾಣೆ ಒಟ್ಟು ಮಾಡಿಕೊಂಡು ಟೋಮ್ಯಾಟೊ ಕೊಂಡು ತಿಂದರೆ ಅದು ಹುಳಿಯಾಗಿತ್ತಂತೆ. ಈ ಹುಳಿ ಹಣ್ಣಿಗಾಗಿ ಇಷ್ಟು ಕಷ್ಟಪಟ್ಟೆನಲ್ಲ ಅನ್ನುವ ದುಃಖ ಅವರನ್ನು ಬಾಲ್ಯದಲ್ಲಿ ಬಹಳ ದಿನ ಕಾಡಿತ್ತಂತೆ. ಅಂತಹ ಬಡತನದ ಬೇಗೆ ತಪ್ಪಿಸಿಕೊಳ್ಳಲು ಹುಬ್ಬಳ್ಳಿಯತ್ತ ಬಂದು ಅಲ್ಲಿನ ಹೋಟೆಲುಗಳಲ್ಲಿ ದುಡಿದು, ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ ಸ್ವಂತ ಹೋಟೆಲ್ ಮಾಡುವ ಪ್ರಯತ್ನ ಪಟ್ಟು ಕೊನೆಯಲ್ಲಿ ಕಲಘಟಗಿ ಅನ್ನುವ ಊರಿನಲ್ಲಿ ಮೂವತ್ತು ವರ್ಷಗಳ ಕಾಲ “ವೈಶಾಲಿ (ಅಪ್ಪನ ಹೋಟೆಲ್ ಹೆಸರು) ಸೌಕಾರರು” ಎಂದು ಖ್ಯಾತಿ ಗಳಿಸಿ ರಿಟೈರ್ ಆದವರು. ಸಣ್ಣ ಊರಿನ ಚಿಕ್ಕ ವ್ಯಾಪಾರದಲ್ಲೇ ಮಕ್ಕಳನ್ನು ಡಾಕ್ಟರು, ಇಂಜಿನಿಯರು ಅಂತೆಲ್ಲ ಓದಿಸಿ, ವಿದ್ಯೆಗಿಂತ ದೊಡ್ಡ ಆಸ್ತಿಯಿಲ್ಲ ಅನ್ನುವ ತಮ್ಮ ಗಟ್ಟಿ ನಂಬಿಕೆಯನ್ನು ಅಕ್ಷರಶಃ ಆಚರಣೆಗೆ ತಂದವರು ನನ್ನಪ್ಪ. ಮಕ್ಕಳ ಹಟಕ್ಕೆ ಕಟ್ಟು ಬಿದ್ದು ಹೋಟೆಲ್ ವ್ಯಾಪಾರದಿಂದ ನಿವೃತ್ತಿಯಾದರೂ ಸುಮ್ಮನೆ ಕೂಡಲಾಗದವರು ಇವತ್ತಿಗೂ ಮನೆಯ ಪಕ್ಕದ ಜಾಗದಲ್ಲಿ ಅಡಿಕೆ, ಬಾಳೆ ಬೆಳೆಸುತ್ತ, ಇಳಿ ವಯಸ್ಸಿನಲ್ಲೂ ಅದೇ ಜೀವನೋತ್ಸಾಹದಿಂದ ಬಾಳಿ ಬದುಕುತ್ತಿರುವ ಅಪ್ಪ ನೂರು ಕಾಲ ಸಂತಸದಿಂದ ಬಾಳಲಿ. ನನ್ನ ಬದುಕು ರೂಪಿಸಿದ ಅಪ್ಪನನ್ನು ಈಗ ನಾನಿರುವ ಸಿಂಗಾಪುರಿಗೆ ಕರೆದು ಸಿಂಗಾಪುರ ತೋರಿಸಿದ್ದು ಜೀವನದಲ್ಲಿ ಮರೆಯಲಾಗದ ಅನುಭವಗಳಲ್ಲೊಂದು. ಐ ಲವ್ ಯೂ ಅಪ್ಪ.

ಆಶಾ ರೈ
08-305
ಬ್ಲಾಕ್ 191, ಪುಂಗೋಲ್ ಸೆಂಟ್ರಲ್
ಸಿಂಗಾಪುರ - 820191

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com