ಬಾಲು ಮತ್ತು ಅವರ ಅಪ್ಪ
ಬಾಲು ಮತ್ತು ಅವರ ಅಪ್ಪ

ಅಪ್ಪ ಅಂದ್ರೆ ನನ್ನ ಹೃದಯದಲ್ಲಿ ಸದಾ ಬೆಳಗುವ ಜ್ಞಾನದ ಬೆಳಕು

ನನ್ನ ಬಹಳಷ್ಟು ಬಯಕೆಗೆ ಅನುಮತಿ ಸಿಕ್ಕುತ್ತಿದ್ದುದು ಅಪ್ಪನ ಕಾಲು ಒತ್ತುವಾಗಲೇ , ನಿಜ ನನ್ನ ಅಪ್ಪ ಧಣಿದು ಸುಸ್ತಾಗಿ ಮನೆಗೆ ಬಂದಾಗ , ಅವರು ಕರೆಯುತ್ತಿದ್ದುದು...
Published on

ಜೂನ್ ೨೧ ಕ್ಕೆ  ಅಪ್ಪಂದಿರ ದಿನ  ಒಂದು ಲೇಖನ ಕಳುಹಿಸಿಕೊಡಿ ಅಂದಾಗ , ಸೋಜಿಗ ಆಯ್ತು . ಅಲ್ಲಾ  ನನ್ನ ಹುಟ್ಟಿಗೆ ಕಾರಣನಾಗಿ , ನನ್ನನ್ನು  ಪೋಷಿಸಿ, ನನ್ನನ್ನು  ತಿದ್ದಿ , ತೀಡಿ  ಹದಮಾಡಿ , ನನಗೆ ಜ್ಞಾನ ವಿತ್ತು, ನನ್ನ  ಬಾಳಿನ ದಾರಿಯಲ್ಲಿ  ಬೆಳಕಾಗಿ ನಿಂತು , ಮುಂದೆ ನಿನ್ನ ದಾರಿ ನಿನ್ನದು ಅಂತಾ ಹೇಳಿ  ತನ್ನ  ನೆನಪಿನ  ಗಂಟನ್ನು ಕೈಗಿತ್ತು , ನನ್ನನ್ನು ಅಗಲಿ ಹೋದರು  ಮನದಲ್ಲಿ ನಿಂತ  ನನ್ನ ಅಪ್ಪನ ಬಗ್ಗೆ  ಕೆಲವೇ ಕೆಲವು ಅಕ್ಷರಗಳ  ಮೂಲಕ  ಕೃತಜ್ಞತೆ  ಹೇಗೆ  ಅರ್ಪಿಸಲಿ ಎಂಬ ಜಿಜ್ಞಾಸೆ  ಶುರು ಆಯ್ತು.

ನಾನು ಮೊದಲು ಮೊದಲು ಕಂಡಿದ್ದು ಅಮ್ಮನ  ವಾತ್ಸಲ್ಯದ ಮಡಿಲು,  ನಂತರ  ಅಪ್ಪನ ಪ್ರೀತಿಯ  ಹೆಗಲು . ಇದು ಸತ್ಯ .   "ತಂದೆ ತಾಯಿ ದಾರಿತೋರೊ ಕಣ್ಣುಗಳೆರಡು ... ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು "  ಎಂಬ ಸಾಲನ್ನು   ನಾ ಮೆಚ್ಚಿದ ಹುಡುಗಿ ಚಿತ್ರದ  "ಮಂಗಳದ ಈ ಸುದಿನಾ  ಮಧುರವಾಗಲಿ" ಎಂಬ  ಹಾಡಿನಲ್ಲಿ   ಆರ್.ಎನ್. ಜಯಗೋಪಾಲ್  ಬರೆದಿದ್ದಾರೆ  ಇದು ಎಷ್ಟು ಸತ್ಯ ಆಲ್ವಾ,  ಆ ಎರಡು ಕಣ್ಣಿನ ಪೈಕಿ  ಒಂದು ಕಣ್ಣಿನ ಬಗ್ಗೆ ಬರೆಯುವ  ಪ್ರಯತ್ನ ಇದು.

ಅಂದಹಾಗೆ ನನ್ನ  ಪ್ರೀತಿಯ ಅಪ್ಪನ ಹೆಸರು ಏನು  ಅಂದ್ರಾ  ಕೆ.ವಿ. ಸೀತಾರಾಮಯ್ಯ  ಅಂತಾ  ಇಂದಿಗೆ ನನ್ನನ್ನು ಅಗಲಿ ೩೪ ವರ್ಷ ಆಗಿದೆ . ಆದರೆ  ಅವರ ನೆನಪುಗಳು ಇಂದಿಗೂ ಜೀವಂತವಾಗಿ, ಅವರು ನಮ್ಮ  ಕುಟುಂಬದ ಎಲ್ಲರ ಮನದಲ್ಲಿ ಜೀವಂತವಾಗಿ ನೆಲೆಸಿ , ನಮ್ಮನ್ನು ಕೈ ಹಿಡಿದು ನಡೆಸುತ್ತಿದ್ದಾರೆ .

ನನ್ನ ಅಪ್ಪ  ನನಗೆ ಖಂಡಿತಾ ಹೀರೋ ಕಣ್ರೀ,  ಕುಳ್ಳಗೆ  ಇದ್ದರೂ ಜ್ಞಾನ ಶಿಖರವೇ ಅವರು, ಸಾಮಾನ್ಯಜ್ಞಾನ  ದಿಂದ ತನ್ನದೇ ಆದ ವ್ಯಕ್ತಿತ್ವ  ಬೆಳಸಿಕೊಂಡಿದ್ದರು, ಪ್ರತಿನಿತ್ಯ  ತಮ್ಮ ಜ್ಞಾನ  ಅಭಿವೃದ್ಧಿ ಪಡಿಸಿಕೊಳ್ಳುವ  ಹಪಹಪಿ  ನಮ್ಮ ಅಪ್ಪನದು. ತನಗೆ ಸರಿ ಕಾಣದ್ದನ್ನು  ಯಾವುದೇ ಮುಲಾಜಿಲ್ಲದೆ ಖಂಡಿಸುವ, ಯಾವುದಾದರೂ ಒಳ್ಳೆಯ ಯೋಜನೆ ಮನಸಿಗೆ ಸರಿ ಬಂದರೆ  ಅದನ್ನು ಮಾಡೇ ತೀರುವ ,   ಎಲ್ಲರೊಂದಿಗೆ ಪ್ರೀತಿಯಿಂದ  ಬೆರೆತು ಸುತ್ತ ಮುತ್ತಲಿನ  ಹಳ್ಳಿಗರ ಪ್ರೀತಿ ಗಳಿಸಿ, ಬಂಧುಗಳಿಗೆ ಆಸರೆಯಾಗಿ,  ಮಕ್ಕಳ ಬದುಕಿಗೆ ಮಾದರಿಯಾಗಿ ನಿಂತವರು   ನನ್ನ ಅಪ್ಪ.   ಯಾರ ಹಂಗಿಗೂ ಒಳಗಾಗದೆ  ನಿಷ್ಠೂರ ವಾಗಿ  ವಿಚಾರ ವಿಮರ್ಶಿಸಿ  ನಮ್ಮ ಮನೆತನದಲ್ಲಿ ಬಹಳ ಎತ್ತರದ  ಸ್ಥಾನ  ಪದೆದಿದ್ದರು. ಯಾವುದೇ ಸಮಸ್ಯೆಗೂ ಇವರಲ್ಲಿ  ಪರಿಹಾರ  ಸಿಗುತ್ತಿತ್ತು,  ಹಾಗಾಗಿ ನಮ್ಮ ಮನೆ ಒಮ್ಮೊಮ್ಮೆ ನ್ಯಾಯಾಲಯ ಆಗುತ್ತಿತ್ತು.

 ನನಗೆ ಬದುಕಿನಲ್ಲಿ  ಅಪ್ಪನ ಹಲವು  ವಿಚಾರಗಳು ಇಂದಿಗೂ ದಾರಿ ದೀಪವಾಗಿವೆ,  ನನ್ನ ಬಹಳಷ್ಟು  ಬಯಕೆಗೆ  ಅನುಮತಿ ಸಿಕ್ಕುತ್ತಿದ್ದುದು  ಅಪ್ಪನ  ಕಾಲು ಒತ್ತುವಾಗಲೇ , ನಿಜ  ನನ್ನ ಅಪ್ಪ ಧಣಿದು  ಸುಸ್ತಾಗಿ  ಮನೆಗೆ ಬಂದಾಗ  , ಅವರು  ಕರೆಯುತ್ತಿದ್ದುದು  ನನ್ನನ್ನೇ  ಮಗು ಯಾಕೋ  ಸ್ವಲ್ಪ  ಮೈ ಕೈ ನೋವು  ಕಣೋ  ಸ್ವಲ್ಪ ಕಾಲು ಒತ್ತುತ್ತೀಯ  ಅಂತಾ  ಹೇಳಿದ್ರೆ ಸಾಕು  ತಕ್ಷಣ   ಆ ಕೆಲಸ ಮಾಡಲು  ಓಡುತ್ತಿದ್ದೆ , ಆಗ ಶುರು ಆಗ್ತಾ ಇತ್ತು ನಮ್ಮಿಬ್ಬರ ಮಾತು ಕಥೆ, ಮಗು ಹೇಗಿದೆ ಶಾಲೆ?  ಪಾಠ  ಚೆನ್ನಾಗಿ ಮಾಡ್ತಾ ಇದ್ದಾರ,?  ಚೆನ್ನಾಗಿ ಓದುತ್ತಾ ಇದ್ದೀಯ ..? ಯಾವುದಾದರೂ ಟೂರ್  ಇದ್ಯಾ  ಸ್ಕೂಲ್ ನಲ್ಲಿ ..?   ಬೇಸಿಗೆ / ದಸರಾ ರಜಕ್ಕೆ ಎಲ್ಲಿಗೆ  ಹೋಗ್ತೀಯ ..? ದಿನಾ  ಪೇಪರ್  ಓದುತ್ತ್ತಾ ಇದ್ದೀಯ  .? ಹೀಗೆ , ಇವೆಲ್ಲಕ್ಕೆ ಉತ್ತರ  ನೀಡಿದ ನಾನು  ನನ್ನ  ಬೇಡಿಕೆ ಇಡುತ್ತಿದ್ದೆ,   ಅಪ್ಪನನ್ನು ಅಣ್ಣಾ  ಅನ್ನುತ್ತಿದ್ದ ನಾನು ಅಣ್ಣಾ   ಹೊಸ ಶೂಸ್  ತೆಕ್ಕೊಡಿ,  ಶಾಲೆಗೆ ಫೀಸ್ ಕಟ್ಟಬೇಕು,  ಹೊಸ ಬಟ್ಟೆ ಬೇಕು,    ಆ ಊರಿಗೆ  ಹೋಗ್ಲಾ   ಅಜ್ಜಿ ಜೊತೆ ಊರಿಗೆ  ಹೋಗ್ಲಾ  ಇತ್ಯಾದಿ ಸಿಲ್ಲಿ  ಕೋರಿಕೆ ಇಡ್ತಾ ಇದ್ದೆ  ಅವುಗಳಿಗೆ ಅಪ್ಪಾ   ಒಪ್ಪಿ  ಆಯ್ತು ಎನ್ನುತ್ತಿದ್ದರು .
 

ಅಪ್ಪಾ ಒಳ್ಳೆಯ ಪ್ರವಾಸಿ ಕೂಡ  ಅಪ್ಪನ  ಜೊತೆ ಪ್ರವಾಸಕ್ಕೆ ನಮ್ಮ ಕುಟುಂಬ ಹೋದರೆ   ಅಲ್ಲಿನ ಹಣ ಕಾಸು ನಿರ್ವಹಣೆ ನನ್ನ ಪಾಲಿಗೆ  ಬರುತ್ತಿತ್ತು,  ದೇವಾಲಯಗಳಲ್ಲಿ ಸೇವಾ ರಸೀದಿ  ಪಡೆಯುವುದು,  ಉಳಿಯುವ ವಸತಿ ಗೃಹಗಳಲ್ಲಿ  ಬಿಲ್  ಪಾವತಿಸುವುದು, ಬಸ್ ಚಾರ್ಜ್  ಪಾವತಿ , ಹೋಟೆಲ್  ಬಿಲ್ಲು ಪಾವತಿ ಮುಂತಾದ  ಕಾರ್ಯ  ಅವರ ಜೊತೆ ನಾನು ಮಾಡ ಬೇಕಿತ್ತು,   ಪ್ರವಾಸ ಮಾಡುವಾಗ  ಪ್ರಯಾಣದ ಅವಧಿಯಲ್ಲಿ ನಾವು ಹೋಗುವ ಊರಿನ ಬಗ್ಗೆ ಸಂಕ್ಷಿಪ್ತ  ಮಾಹಿತಿ ಕೊಡ್ತಾ ಇದ್ದರು,  ಅಲ್ಲಿ ಹೇಗೆ ನಾವು ಇರಬೇಕು, ಹವಾಮಾನ  ಹೇಗೆ , ಅಲ್ಲಿ ಏನು ನೋಡಬೇಕು  ಇತ್ಯಾದಿ ವಿವರ  ನೀಡುತ್ತಿದ್ದರು . ಒಟ್ಟಿನಲ್ಲಿ  ಪ್ರವಾಸದಲ್ಲಿ ಪ್ರಯಾಸವಾಗದಂತೆ  ನೋಡಿಕೊಳ್ಳುತ್ತಿದ್ದರು , ನೋಡೋ  "ಟೂರ್  ಮಾಡೋದು ಮನಸಿಗೆ  ಖುಶಿಕೊಡಬೇಕೆ ಹೊರತು   ಹಿಂಸೆ ಆಗಬಾರದು "  ಹಾಗಾಗಿ ನೋಡುವ ಪ್ರದೇಶ  ಕಡಿಮೆ ಆದರೂ ಪರವಾಗಿಲ್ಲ  ಅಲ್ಲಿನ ಬಗ್ಗೆ ಪೂರ್ತಿ ತಿಳಿದು ಕೊಂಡು  ಮುಂದಿನ ಊರಿಗೆ ಹೋಗ್ಬೇಕು  ಅನ್ನುತ್ತಿದ್ದರು. ಅಲ್ಲಿನ ಸ್ಥಳೀಯರ ಜೊತೆ ಕುಳಿತು ಮಾತಾಡಿ  ಆ ಜಾಗದ ಪೂರ್ಣ ವಿವರ  ತಿಳಿದುಕೊಳ್ಳುವ ಅಪ್ಪನ  ಈ ಗುಣ  ಇಂದಿಗೂ ನನಗೆ ಬೆಳಕಾಗಿದೆ  ಅದನ್ನೇ ಪಾಲಿಸುತ್ತಿದ್ದೇನೆ, ಜೊತೆಗೆ ಮನೆಗೆ ತಿಂಗಳಿಗೆ ಬೇಕಾದ  ದಿನಸಿಯನ್ನು ಪಟ್ಟಣದಿಂದ ತರುವ  ಖರೀದಿಸಿ  ತರುವ  ಕಾರ್ಯವನ್ನು ನನಗೆ ಕಲಿಸಿಕೊಟ್ಟರು, ನಂತರ ನಾನೇ ಅದನ್ನು ನಿರ್ವಹಿಸುವಂತೆ  ಮಾಡಿದ್ದರು, ೭ ನೆ ತರಗತಿಯ ಹೊತ್ತಿಗೆ  ನಾನೇ ಮನೆಗೆ ಅಗತ್ಯವಿದ್ದ  ದಿನಸಿಯನ್ನು / ಸಾಮಗ್ರಿಗಳನ್ನು  ಪಟ್ಟಿ ಮಾಡಿ ತಂದು ಅಪ್ಪನಿಗೆ ಲೆಕ್ಕ ಕೊಡುತ್ತಿದ್ದೆ.

ಅಪ್ಪನಿಗೆ ದಿನ ಪತ್ರಿಕೆಗಳೆಂದರೆ  ಅಪಾರ ಪ್ರೀತಿ  ಹಾಗಾಗಿ ಹಳ್ಳಿಯಲ್ಲಿದ್ದರೂ ನಮ್ಮ ಮನೆಗೆ ದಿನ ಪತ್ರಿಕೆಗಳಾದ  ಕನ್ನಡ ಪ್ರಭ, ಪ್ರಜಾವಾಣಿ, ನಂತರ  ಪ್ರಜಾಮತ, ಸುಧಾ,  ವಾರ ಪತ್ರಿಕೆ, ಗಳನ್ನೂ ತಪ್ಪದೆ ತರಿಸುತ್ತಿದ್ದರು ಆದರೆ ನಮಗೆ ಸಿಗ್ತಾ ಇದ್ದದ್ದು ದಿನಪತ್ರಿಕೆಗಳು  ಹಾಗು ಸುಧಾ ಮಾತ್ರ  ಉಳಿದವು ಸಿಗುತ್ತಿರಲಿಲ್ಲ.  ಇನ್ನು ಮನೆಯ ಫಿಲಿಪ್ಸ್  ರೇಡಿಯೋ   ಅಪ್ಪನಿಗೆ ಅಚ್ಚು ಮೆಚ್ಚು , ಅಪ್ಪ ಬಂದರೆ   ಅದು ಕೇವಲ ಅಪ್ಪನ  ನಿಯಂತ್ರಣದಲ್ಲಿ ಇರುತ್ತಿತ್ತು,   ಚಿತ್ರಗೀತೆ ಬಂದರೆ  ಕೇಳುತ್ತಿದ್ದರು ಆದರೆ  ಕ್ಯಾಬರೆ ಹಾಡು  ಎಲ್ . ಆರ್. ಈಶ್ವರಿ ಹಾಡು ಬಂದರೆ  ಟಪ್  ಅಂತಾ  ಆಫ್  ಮಾಡಿಬಿಡುತ್ತಾ ಇದ್ದರು , ನಾನು ನನ್ನ ಅಕ್ಕ  ಇಂತಹ ಹಾಡುಗಳನ್ನು ಕೇಳದಂತೆ  ಕಾಳಜಿ ವಹಿಸುವ  ಅವರ ನಡೆ  ಅಂದಿನ ದಿನಗಳಲ್ಲಿ ನಮಗೆ ಕೋಪ ತರಿಸಿದ್ದು ನಿಜ,


ಅಪ್ಪನಿಗೆ ತಮ್ಮ ಮಕ್ಕಳು ಸಾಂಸ್ಕೃತಿಕವಾಗಿ ಬೆಳೆಯಲಿ ಎಂಬ  ಆಸೆ ಬಹಳ,  ಹಾಗಾಗಿ  ನನ್ನನ್ನು   ವಿವಿಧ  ಕಾರ್ಯಕ್ರಮಗಳಲ್ಲಿ  ಪಾಲ್ಗೊಳ್ಳಲು  ಉತ್ತೇಜಿಸುತ್ತಿದ್ದರು ಆದರೆ  ನನ್ನ ಪುಕ್ಕಲು ತನ  ಅವರ ಆಸೆಗೆ ತಣ್ಣೀರು ಎರಚಿತ್ತು, ಒಮ್ಮೆ ನಾನು ಓದುತ್ತಿದ್ದ ಶಾಲೆಯಲ್ಲಿ ನಾದ ಹಬ್ಬದ ಕಾರ್ಯಕ್ರಮಗಳು ನಡೆದಿದ್ದವು,  ನಾನು  ಅಲ್ಲಿ ಇರದೇ ಕಾರ್ಯಕ್ರಮಗಳನ್ನು ನೋಡದೆ  ಅರ್ಧದಲ್ಲಿಯೇ ಬಸ್ಸು ಹತ್ತಿನನ್ನ ಹಳ್ಳಿಗೆ ಬಂದು ಮನೆ ಸೇರಿದೆ. ಇದನ್ನು ಎಲ್ಲಿಯೋ ಗಮನಿಸಿದ ನನ್ನ ತಂದೆ  ನನ್ನ ಹಿಂದಿನ ಬಸ್ಸಿನಲ್ಲಿಯೇ ಮನೆಗೆ ಬಂದು ನನಗೆ  ಒಂದೆರಡು  ಏಟು ಕೊಟ್ಟು   ಅಲ್ಲಿ ಮಕ್ಕಳು ಎಷ್ಟೊಂದು ಚೆನ್ನಾಗಿ ಕಾರ್ಯಕ್ರಮ ಕೊಡ್ತಾ ಇದ್ದಾರೆ  ಅದನ್ನು ನೋಡುವುದು ಬಿಟ್ಟು   ಗೂಬೆ  ತರಹ  ಮನೆ ಸೇರಿಕೊಳ್ತೀಯ  ವಾಪಸ್ಸು ಹೋಗು   ಅಂತಾ ಬೈದು  ಮತ್ತೆ ಆ ಕಾರ್ಯಕ್ರಮ ನೋಡಲು ಪಟ್ಟಣಕ್ಕೆ ಕಳುಹಿಸಿದರು . ಅಂದಿನಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಭಾಗವಹಿಸಲು  ಮನಸು ಮಾಡಿದೆ. ಸರಿಯಾಗಿ ಡ್ರೆಸ್ ಮಾಡಿಕೊಳ್ಳಲು ಅಪ್ಪನೆ  ಕಾರಣ ಅವರೂ ಸಹ ಹಾಗೆ ಇದ್ದರು  ಯಾವಾಗಲು ಬಿಳಿಯ ಬಣ್ಣದ ಬಟ್ಟೆ ಬಿಟ್ಟರೆ ಬೇರೆ ಧರಿಸುತ್ತಿರಲಿಲ್ಲ  ಬಿಳಿಯ ಪಂಚೆ,  ಬಿಳಿಯ  ಅಂಗಿ  ಹಾಕಿಕೊಂಡು  ಅವರು ಬರುತ್ತಿದ್ದರೆ  ಎಂತಹವರಿಗೂ  ಗೌರವ ಮೂಡಬೇಕು  ಹಾಗೆ  ಇದ್ದರು ಬದುಕಿ ಬಾಳಿ   ನನ್ನ ಬಾಳಿನಿಂದ ಮರೆಯಾದರು.  ನನ್ನ ಪಾಲಿಗಂತೂ ನನ್ನ ಅಪ್ಪ  ಅಂದ್ರೆ  ನನ್ನ ಹೃದಯದಲ್ಲಿ  ಸದಾ ಬೆಳಗುವ  ಜ್ಞಾನದ ಬೆಳಕೇ ,  ನಿಜ.


ನೆನಪಿನ  ಅಕ್ಷಯ ಪಾತ್ರೆಯಲ್ಲಿ  ಅಪ್ಪನ ನೆನಪು ಸದಾ ಅಮರ , ನನ್ನ ಅಪ್ಪ  ಸನ್ನಡತೆ ಯಲ್ಲಿ ಹಿಮಾಲಯ , ಜ್ಞಾನದಲ್ಲಿ  ಮಹಾ ಸಾಗರ  . ಎಷ್ಟು ಬರೆದರೂ ತೃಪ್ತಿ ಇಲ್ಲಾ  ಅವರ ಬಗ್ಗೆ  , ಅಪ್ಪಾ  ನೀವು ನಿಜಕ್ಕೂ ಗ್ರೇಟ್  , ನಿಜಕ್ಕೂ ನಿಮ್ಮಂತಹ ಅಪ್ಪನನ್ನು ಪಡೆದ  ನನ್ನ ಬಾಳು  ಧನ್ಯ .   ನೀವು ಅಂದು  ನೀಡಿದ ಜ್ಞಾನದ ಬೆಳಕು ಇಂದಿಗೂ  ನನ್ನ ಬಾಳಿನಲ್ಲಿ ದಾರಿ ದೀಪ ಆಗಿದೆ . ಆದರೆ ನನ್ನ ಅಪ್ಪಾ  ಈ ಸಂಭ್ರಮದ  ದಿನಗಳಲ್ಲಿ ನಮ್ಮ ಜೋತೆಗಿಲ್ಲಾ ಎಂಬ ನೋವು ಬಹಳಷ್ಟಿದೆ .
 
-ಪ್ರೀತಿಯಿಂದ ನಿಮ್ಮವ                                                                                                     
ನಿಮ್ಮೊಳಗೊಬ್ಬಬಾಲು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com