ನನ್ನ ಅಪ್ಪ...ನನ್ನ ಪ್ರಪಂಚ

ನಾನು ಅನ್ನೋದು ನನ್ನ ಪಾಲಿನ ಅತ್ಯದ್ಭುತ ಸುಳ್ಳು... ನಾನು ಎಂಬ ನಾನು ಇವರಿಲ್ಲದಿದ್ರೆ ಸಾಧ್ಯವಾಗುತ್ತಿತ್ತೆ ?... ಖಂಡಿತ ಇಲ್ಲ...
ಅಪ್ಪನೊಂದಿಗೆ ಯಶಸ್ವಿನಿ
ಅಪ್ಪನೊಂದಿಗೆ ಯಶಸ್ವಿನಿ

ನಾನು ಅನ್ನೋದು ನನ್ನ ಪಾಲಿನ ಅತ್ಯದ್ಭುತ ಸುಳ್ಳು...  ನಾನು ಎಂಬ ನಾನು ಇವರಿಲ್ಲದಿದ್ರೆ ಸಾಧ್ಯವಾಗುತ್ತಿತ್ತೆ ?... ಖಂಡಿತ ಇಲ್ಲ... ಇವರು ಎಂದರೆ ನನ್ನ 'ಅಪ್ಪ' ...
ನನ್ನ ಸಾಧನೆಯ ಹಾದಿಯಲ್ಲಿ ಪ್ರತಿ ಕ್ಷಣ,ಪ್ರತಿ ನಿಮಿಷ,ಪ್ರತಿ ದಿನ ನನ್ನೊಂದಿಗೆ ನಡೆಯುತ್ತಾ ,ನಡೆಸುತ್ತಾ ಇರುವ ನನ್ನ ಬದುಕು... ನನ್ನ ಪ್ರಪಂಚ ನನ್ನ ಅಪ್ಪ
ನಾನು ನನ್ನ ಅಪ್ಪನ ಪಡಿ ಅಚ್ಚು, ನಗು ಹಾವ-ಭಾವ ಎಲ್ಲವು ಅವರ ಹಾಗೆಯೇ... ನನ್ನ ಪಾಲಿಗೆ ನನ್ನ ಅಪ್ಪ ಒಬ್ಬ ಒಳ್ಳೆಯ ಸ್ನೇಹಿತ, ಅನುಭವಿ ಸಲಹೆಗಾರ. ಒಮ್ಮೊಮ್ಮೆ ಎಳೆಯ ಮಗು, ಮತ್ತೊಮ್ಮೆ ಹುಡುಗಾಟದ ಪೋರ, ಮಗದೊಮ್ಮೆ ಉತ್ಸಾಹಿ ಯುವಕ.
ನನ್ನ ಬದುಕಿನ ಮುಖ್ಯ ಅಧ್ಯಯ ಅಂದರೆ ನನ್ನ ವೃತಿ ಜೀವನ, ನಾನು ಕಾಣುವ ಕನಸಿಗಿಂತಲೂ ಹೆಚ್ಚು ನನ್ನ ವೃತ್ತಿ ಜೀವನದ ಬಗ್ಗೆ ಕನಸು ಕಾಣುವ ಒಂದು ಜೀವ ಇದೆ ಅಂದರೆ ಅದು ನನ್ನ  ಅಪ್ಪ. ಕೆಲ ವರ್ಷಗಳ ಹಿಂದೆ, ಮೊದಲ ಬಾರಿಗೆ ಹೊರದೇಶಕ್ಕೆ ಹೋಗಿ ಅಲ್ಲಿಯ ಪ್ರತಿ ಪ್ರತಿಷ್ಠಿತ ಸಂಸ್ಥೆಯೊಂದರ ಮ್ಯಾನೇಜರ್ ಗಳಿಗೆ ಪಾಠ ಮಾಡಲು ಕರೆ ಬಂದಿತ್ತು, 'ಇಲ್ಲ,ನಾನು ಹೊರದೇಶಕ್ಕೆ ಹೋಗಲಾರೆ ಎಂದು ಹೇಳಿಬಿಟ್ಟೆ' ಇದನ್ನು ಅಪ್ಪನಿಗೆ ತಿಳಿಸಿದೆ. ಅವರಿಗೆ ಕರೆ ಮಾಡಿ 'ನಾನು ಆ assignment ಮಾಡಿಕೊಡುತ್ತೇನೆ' ಎಂದು ಹೇಳು ಎಂದರು ಅಪ್ಪ.... ' ಡ್ಯಾಡಿ  ಅದು ಬೇರೆ ದೇಶ!.... understand!....' ಅಂತ ಗಾಬರಿಯಿಂದಲೇ ಹೇಳಿದೆ.. 'ಇದು ನಿನ್ನ ವೃತ್ತಿ ಜೀವನದಲಿ ಸಿಗುತ್ತಿರುವ ಮೊದಲ 'ದೊಡ್ಡ' ಅವಕಾಶ ನೀನು ಹೋಗುವುದೇ ಸೂಕ್ತ' ಎಂದರು ಅಪ್ಪ. ಅಪ್ಪನ ಮಾತಿಗೆ ಮರು ಮಾತಾಡದೆ ಒಪ್ಪಿಕೊಂಡೆ. ಮಧ್ಯಾಹ್ನ ಕಾಲೇಜ್ ಮುಗಿಸಿಕೊಂಡು ಸಂಜೆ flight ಹತ್ತಿದೆ , packing ಸಹಾ ಅಪ್ಪನೇ ಮಾಡಿದ್ದು. ಎರಡು ವಾರಕ್ಕೆ ಬೇಕಾಗುವಷ್ಟು ಸೀರೆಗಳನ್ನು ಜೋಡಿಸಿ laptopಅನ್ನು ಕೂಡ ರೆಡಿ ಮಾಡಿ ಕೊಟ್ಟರು (ಇದೇನು ಹೊಸದಲ್ಲ, ದಿನ ಬೆಳಗ್ಗೆ ನನ್ನ ಬಟ್ಟೆ ಅವರು,ಅವರ ಬಟ್ಟೆಯನ್ನು ನಾನು select ಮಾಡುತ್ತಿದೆವು) . ನನ್ನ ಅವಶ್ಯಕತೆಗಳ ಅರಿವು ನನಗಿಂತ ಅಪ್ಪನಿಗೆ ಜಾಸ್ತಿ ಇದೆ. ನಾನು ಹೋಗುವ ವಿಷಯ ಅಪ್ಪನಿಗೆ ಎಷ್ಟು ಖುಷಿ ತಂದಿತ್ತು ಅಂದ್ರೆ, ಪ್ರಾಯಶಃ ಅಪ್ಪ ಅಷ್ಟು ಸಂತೋಷವಾಗಿದ್ದು ನೋಡಿಯೇ ಇರಲಿಲ್ಲ... ಕೊನೆಗೂ ಏರ್ಪೋರ್ಟ್ ಒಳಗೆ ನನ್ನ ಪ್ರವೇಶವಾಯಿತು.   ಮೊದಲ ಬಾರಿಗೆ ಒಂಟಿಯಾಗಿ ಹೊರಟಿದ್ದೆ, ಅಪ್ಪನನ್ನು ಬಿಟ್ಟು... ಎಂದು ಅಪ್ಪನನ್ನು ಬಿಟ್ಟವಳಲ್ಲ ನಾನು. ವಿಮಾನ ನಿಲ್ದಾಣದ ಒಳಗೆ ನಾ ನಿಂತೆ. ಅಪ್ಪ ಹೊರಗೆ.
ನಮ್ಮಿಬ್ಬರ ಕೈಯಲ್ಲಿ ಫೋನ್ ಕೂಡಾ ಇತ್ತು ಆದರೆ ಸಿಗ್ನಲ್ ಮಾತ್ರ ಇರಲಿಲ್ಲ.  ಜೊತೆಗೆ ನಮ್ಮಿಬ್ಬರ ಮಧ್ಯೆ ಗಾಜಿನ ಗೋಡೆ,  ಇಬ್ಬರ ಕಣ್ಣಲ್ಲೂ  ಹೇಳಲಾರದ ಭಾವನೆಗಳು... ಉಸಿರೇ ಹೋದಂತೆ, ಎಲ್ಲವೂ  ಇಲ್ಲವಾದ ಭಾವ, ಎಂದೂ ಇಲ್ಲದ ಆತಂಕ... ಎಂಜಿ ರೋಡ್ ಗೆ ಶಾಪಿಂಗ್ ಹೋದರೂ ಅಪ್ಪನ  ಹೆಜ್ಜೆಯನ್ನೇ ಹಿಂಬಾಲಿಸುವ ನನಗೆ, ಅವರಿಲ್ಲದೇ ಕೈ ಕಾಲುಗಳೇ ಓಡುತ್ತಿರಲಿಲ್ಲ... check in ಆಗಿ boarding pass ತೆಗಿದುಕೊಂಡಾಗ ಗೊತ್ತಾಯ್ತು  flight delay ಆಗಿದ್ದು. ನನ್ನ ತಲೆ ಕೆಟ್ಟಿತು,ನಾನು ಆ ದೇಶ ತಲುಪುವಷ್ಟರಲ್ಲಿ  ಮಧ್ಯ  ರಾತ್ರಿ ೧೨:೩೦ (ಅಲ್ಲಿ)ಆಗಿಯೇ ಹೋಗಿತ್ತು, ವಿಮಾನ ನಿಲ್ದಾಣದಿಂದ ಸರ್ವಿಸ್ ಅಪಾರ್ಟ್ ಮೆಂಟ್  ತಲುಪುವಷ್ಟರಲ್ಲಿ ೨:೦೦ ಗಂಟೆ (ಅಲ್ಲಿ) ಆಗಿಯೇ ಹೋಗಿತ್ತು.  ಅಲ್ಲಿಯವರೆಗೂ  ಅಂದರೆ ಬೆಳಗಿನ ಜಾವಾ ೫:೦೦ ಗಂಟೆ (ಇಲ್ಲಿ) ವರೆಗೂ ಅಪ್ಪ ಕೂಡ  ನಿದ್ದೆ ಮಾಡಿರಲಿಲ್ಲ.

 ಆ ಭೂತ ಬಂಗಲೆಯಲ್ಲಿ ನಾ ಒಂದು ರಾತ್ರಿ ಕಳೆದಿದು ನಿಜಕ್ಕೂ  ಆಶ್ಚರ್ಯ,  ಆದರೂ ಸತ್ಯ.  ಮರುದಿನದಿಂದ ನನ್ನೊಂದಿಗೆ ನನ್ನ ಅಸಿಸ್ಟೆಂಟ್ ಬಂದಳು . ಅಂದಿನಿಂದ ನಾ   ಮರಳಿ ಬರುವ ವರೆಗೂ ಅಪ್ಪ ಸರಿಯಾಗೆ ನಿದ್ದೆ ಮಾಡಿರಲಿಲ್ಲ..ಅಂತು ಇಂತೂ ಹೋಗಿ ಪಾಠ ಮಾಡಿ ಬಂದೆ... ಎರಡು ವಾರ ಅಪ್ಪನಿಲ್ಲದ ಬದುಕು ಕಲ್ಪನೆಗೂ ಮೀರಿದ್ದು. ಆದರೆ ಅವರು ಕೊಟ್ಟ ಧೈರ್ಯದಿಂದಲೇ ಇಂದು ನಾನು ನಾನಗಿದ್ದೇನೆ ಅನ್ನುವುದೇ ನನ್ನ ಪಾಲಿನ ನಿತ್ಯ ಸತ್ಯ...

ನನ್ನ ಸ್ಫೂರ್ತಿ
ನನ್ನ ಬೆಳಕು
ನನ್ನ ಶಕ್ತಿ
ನನ್ನ ಯುಕ್ತಿ
ನನ್ನ ಬದುಕು
ನನ್ನ ಪ್ರಪಂಚ
ನನ್ನ ಅಪ್ಪ

-ಯಶಸ್ವಿನಿ ಶ್ರೀನಿವಾಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com