ಅಪ್ಪನೊಡನೆ ಹೇಳದೆ ಉಳಿದ ಮಾತುಗಳು….

ಬದುಕನ್ನು ನೀಡಿದ ಊರನ್ನು, ಅಲ್ಲಿಯ ಜನರನ್ನೂ ನೀವೆಷ್ಟು ಪ್ರೀತಿಸುತ್ತಿದ್ದಿರಿ ಎಂದು ನನಗೆ ಗೊತ್ತು. ಇತ್ತೀಚೆಗೆ ಸಮಾರಂಭವೊಂದರಲ್ಲಿ ಸಿಕ್ಕಿದ...
ಅಪ್ಪ- ಮಗಳು (ಸಾಂರ್ಭಿಕ ಚಿತ್ರ)
ಅಪ್ಪ- ಮಗಳು (ಸಾಂರ್ಭಿಕ ಚಿತ್ರ)
Updated on

ಪ್ರೀತಿಯ ಅಪ್ಪಾ...
ಬದುಕನ್ನು ನೀಡಿದ ಊರನ್ನು, ಅಲ್ಲಿಯ ಜನರನ್ನೂ ನೀವೆಷ್ಟು ಪ್ರೀತಿಸುತ್ತಿದ್ದಿರಿ ಎಂದು ನನಗೆ ಗೊತ್ತು. ಇತ್ತೀಚೆಗೆ ಸಮಾರಂಭವೊಂದರಲ್ಲಿ ಸಿಕ್ಕಿದ ಗೆಳತಿಯೊಬ್ಬರು ನನ್ನ ಹುಟ್ಟಿದ ಊರನ್ನು ಕೇಳಿ  “ ಓಹ್..ನೀವು ಕೊಡಗಿನವರಾ. ನಿಮ್ಮ ಊರು ಚಂದ, ನಾವು ಅಲ್ಲಿ ಮೊದಲಿದ್ದವರು .ಅಲ್ಲಿನ ಜನರಂಥ ಪ್ರೀತಿಯನ್ನು ಇನ್ನೆಲ್ಲೂ ಕಂಡಿಲ್ಲ  ಎಂದಾಗ ನನಗೆಷ್ಟು ಹೆಮ್ಮೆ !   ಪ್ರಕೃತಿಯ ಮಡಿಲಲ್ಲಿ ಬಾಲ್ಯ ಜೀವನದ ಸುಂದರ ಸೋಪಾನಗಳನ್ನು ಹಾಕಿ ಕೊಟ್ಟಿದ್ದು ನೀವಲ್ಲವೇ? ಎಲ್ಲಾ ಮಕ್ಕಳನ್ನೂ ಸಮಾನವಾಗಿ  ಸಲಹಿದ್ದು, ಸಂತಸದ ಜೀವನಾನುಭವ ನೀಡಿದ್ದು… ನೀವಿತ್ತ ಅಮೂಲ್ಯ ಉಡುಗೊರೆ. ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳಲ್ಲಿ ಮೂರನೆಯ ಮಗುವಾಗಿ ತುಂಬ ಪ್ರೀತಿ ಪಡೆದ ಹೆಮ್ಮೆ ಇದೆ.

ನಿಮ್ಮ  ಕಷ್ಟದ ದಿನಗಳೂ ನನಗೆ ಚೆನ್ನಾಗಿ ನೆನಪಿದೆ. ಸ್ವಾಭಿಮಾನದ ಬದುಕು ನಿಮ್ಮದು. ನೀವು ಜಾತಿ ಭೇದವಿಲ್ಲದೆ, ಬಡವ- ಬಲ್ಲಿದರೆನ್ನದೆ   ಕಷ್ಟದಲ್ಲಿರುವವರಿಗೆ  ಸಹಕರಿಸುತ್ತಿದ್ದಿರಿ.  ನೀವು ಹಾಡುತ್ತಿದ್ದ ಯಕ್ಷಗಾನದ ಪದ್ಯಗಳು, ಕುಮಾರವ್ಯಾಸ ವಿರಚಿತ ಮಹಾ ಭಾರತ, ಕಾವ್ಯವಾಚನ, ಇಂದಿಗೂ ನನ್ನ ಸ್ಮೃತಿಪಟಲದಲ್ಲಿದೆ.   ವಿವಿಧ ದಪ್ಪನೆಯ ಪುಸ್ತಕಗಳು..ಕುಮಾರವ್ಯಾಸನ  ಭಾರತ,  ರಾಮಾಯಣ, ಭಾಗವತ, ಮತ್ತು ನಿತ್ಯವೂ  ಪುಸ್ತಕ, ದಿನಪತ್ರಿಕೆ. ವಾರಪತ್ರಿಕೆಗಳನ್ನು ಓದುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಮನೆಯಲ್ಲಿ   ಮಕ್ಕಳ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರೂ ,ಯಶಸ್ಸು ಗಳಿಸಿದಾಗ, ಎಂದೂ ಅತಿಯಾಗಿ ಹೊಗಳದೇ ನಕ್ಕು ಸಂತೋಷ ವ್ಯಕ್ತ ಪಡಿಸುತ್ತಿದ್ದುದು ಮಾತ್ರ.  ನಿಮ್ಮ ಶಿಸ್ತು,ಉದಾರತೆ, ವೇದ- ಮಂತ್ರ, ವಿವಿಧ ವೃತ್ತಿ ಅನುಭವ, ಉಚಿತ ಗಿಡಮೂಲಿಕಾ ಚಿಕಿತ್ಸೆ, ಭಾಷಾ ಜ್ಞಾನ, ಭಾಗವತಿಕೆ, ಹಾಸ್ಯ, ನೇರ ನುಡಿ,…ಎಲ್ಲವೂ ನನಗಿಷ್ಟವಾಗಿತ್ತು ಎಂಬ ವಿಷಯ ನಿಮಗೆ ಹೇಳದೇ ನನ್ನಲ್ಲೇ ಉಳಿದಿದೆ. ಆರ್ಥಿಕ ಅಡಚಣೆ ಇದ್ದರೂ ದೂರದೂರಿಗೆ ಕಳಿಸಿ ಉತ್ತಮ ಶಿಕ್ಷಣ ಪಡೆಯಲು ಕಾರಣವಾಗಿದ್ದೀರಿ. ನಿಮಗೆ ಅದೆಷ್ಟು ವಿಶ್ವಾಸ ಮಕ್ಕಳ ಮೇಲಿತ್ತು ಎಂದು ನನಗೆ ಗೊತ್ತು. ಅಪ್ಪಾ! ನಿಮ್ಮಂತೆ ವಿಶ್ವಾಸವಿರಿಸಿ ಮಕ್ಕಳಿಗೆ ಸ್ವಾತಂತ್ರ್ಯ ನೀಡಲು ಸಾಧ್ಯವೇ ?

ಸ್ವತ: ಸತ್ಯನಿಷ್ಠರಾಗಿದ್ದು ಮಾನವೀಯ ಮೌಲ್ಯಗಳನ್ನು ಪರಿಚಯಿಸಿದ್ದೀರಿ.  ಯಾವುದೇ ಮುನ್ಸೂಚನೆಯಿಲ್ಲದೆ ನೀವು ನಮ್ಮಿಂದ ಭೌತಿಕವಾಗಿ ದೂರಾಗಿ ಇಪ್ಪತ್ತಮೂರು ವರ್ಷಗಳೇ ಕಳೆಯಿತು. ‘ಕಣ್ಣರಿಯದ್ದನ್ನು ಕರುಳರಿಯಿತೋ ‘ಏನೋ ! ನಿಮ್ಮನ್ನು ಜೀವಂತವಾಗಿ  ಕೊನೆಯ  ಬಾರಿಗೆ ನೋಡಿ ಬೀಳ್ಕೊಡುವಾಗ ನಮಸ್ಕರಿಸಿ, ಆಲಿಂಗಿಸಿ ಅಪಾರವಾದ ಅಗಲುವಿಕೆಯ ನೋವು ಅನುಭವಿಸಿದ್ದು ನಿಜ. ಅದೇನಿಮ್ಮೊಂದಿಗೆ ಕೊನೆಯ ಹಗ್. ನೀವು ಅಮ್ಮನಲ್ಲಿ ನಾನು ಯಾಕೆ ಅಷ್ಟು ದು:ಖಿಸಿದೆ ಎಂದು ಪ್ರಶ್ನಿಸಿದ್ದಿರಂತೆ. ಮೊನ್ನೆ ನಿಮ್ಮ ಫೊಟೋದ ಧೂಳನ್ನು ಒರೆಸುವಾಗ , ಅಯ್ಯೋ ! ನಾನು ನಿನ್ನಲ್ಲೇ ಇದ್ದೇನಲ್ಲಾ ಎಂದಂತಾಯಿತು.  ಇತ್ತೀಚೆಗೆ ಆಗಸದೆಡೆಗೆ ನೋಡಿ ನಕ್ಷತ್ರವನ್ನು ಹುಡುಕುವುದನ್ನು ಬಿಟ್ಟು ಬದುಕಿನಾಗಸದಲ್ಲಿ ಮಿಂಚಿಹೋದ ತಾರೆಯನ್ನು ನೆನೆದು ನೆನಪುಗಳ ಸರಮಾಲೆಯ ಬೆಳಕನ್ನೇ ಕಣ್ತುಂಬಿಕೊಳ್ಳುತ್ತಿದ್ದೇನೆ. ಸಾಧ್ಯವಾದಷ್ಟು ನಿಮ್ಮ ಆದರ್ಶಗಳನ್ನು ಪಾಲಿಸುತ್ತೇನೆ.

ಪ್ರೀತಿ ಗೌರವಗಳೊಡನೆ,
ಮಮತಾ ದೇವ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com