ಅಪ್ಪನಾಗುತ್ತಿರುವ ಖುಷಿ, ಕಾತುರ

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಎಂಬ ಗಾದೆ ಮಾತು ಎಷ್ಟು ನಿಜ ಅಂತ ಈಗ ಅನಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ನವ ದಂಪತಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಎಂಬ ಗಾದೆ ಮಾತು ಎಷ್ಟು ನಿಜ ಅಂತ ಈಗ ಅನಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ನವ ದಂಪತಿಗಳು ಮಗು ಹುಟ್ಟುವ ಮೊದಲೇ, ಡೆಲಿವರಿ ಖರ್ಚು ಸೇರಿ, ಶಾಲೆಗೆ ಸೇರಿಸುವ ಖರ್ಚು ವೆಚ್ಚವನ್ನೆಲ್ಲ ಲೆಕ್ಕ ಹಾಕುತ್ತಾರೆ. ಅಲ್ಲದೆ ಯಾವ ಶಾಲೆಗೆ ಸೇರಿಸಬೇಕು ಮತ್ತು ಮಗು ಮುಂದೆ ಏನಾಗಬೇಕು ಎಂಬುದರ ಬಗ್ಗೆನೂ ವಿಚಾರ ಮಾಡುತ್ತಾರೆ. ಇದಕ್ಕೆ ನಾವೂ ಹೊರತಲ್ಲ. ಎಷ್ಟೋ ಬಾರಿ ಮಗುವಾದ ಮೇಲೆ ಅಪ್ಪ-ಅಮ್ಮನಾಗಿ ನಾವು ಹೇಗೆ ನಡೆದುಕೊಳ್ಳಬೇಕು ಎಂದು ಚರ್ಚಿಸಿದ್ದೇವೆ.

ಹೌದು. ಎಲ್ಲ ಅಪ್ಪ-ಅಮ್ಮಂದಿರು ಇದು ಚರ್ಚಿಸಬೇಕಾದ ವಿಷಯ. ಏಕೆಂದರೆ ನಮ್ಮ ಪ್ರತಿ ನಡೆ-ನುಡಿಯೂ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಪ್ರತಿ ಮಗುವೂ ತಂದೆ-ತಾಯಿಯನ್ನು ಅನುಕರಿಸಿ ಬೆಳೆಯುತ್ತದೆ. ಹೀಗಾಗಿ ನಾವು ಆಡುವ ಮಾತು, ನಡೆದುಕೊಳ್ಳುವ ರೀತಿಯ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದು ನಾನು ನನ್ನ ಅಪ್ಪನಿಂದ ಕಲಿತ ಪಾಠ ಈಗ ಪ್ರಯೋಜನಕ್ಕೆ ಬರಬಹುದು.

ಮದುವೆಯಾಗಿ ಮೂರು ವರ್ಷಗಳ ನಂತರ ನಮ್ಮ ಮನೆಗೆ ಹೊಸ ಅತಿಥಿ ಪುಟಾಣಿ ಪಾಪು ಬರುತ್ತಿರುವುದು ಸಹಜವಾಗಿಯೇ ನನ್ನಲ್ಲಿ ಹೊಸ ಉತ್ಸಾಹ, ಸಂತಸ ತಂದಿದೆ. ಕಳೆದ ಎರಡೂವರೆ ವರ್ಷಗಳಿಂದ ಮಗುವಿನ ನಿರೀಕ್ಷೆಯಲ್ಲಿದ್ದ ಭಾವಿ ತಾಯಿ, ನನ್ನ ಮುದ್ದಿನ ಮಡದಿಯ ಬಯಕೆ ತೀರಿಸುವುದೇ ಸದ್ಯದ ಕಾಯಕ.

ಆ ದಿನ ಬೆಳಗ್ಗೆ ಎಂದಿನಂತೆ ಬಾತ್‌ರೂಂಗೆ ಹೋಗಿದ್ದ ನನ್ನ ಪತ್ನಿ, ಬಾತ್‌ರೂಂನಿಂದಲೇ ಗುಡ್ ನ್ಯೂಸ್ ಎಂದು ಕೂಗಿದ್ದಳು. ಆ ಕ್ಷಣ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಗುತ್ತಲೇ ಹೊರ ಬಂದ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದೆ.

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಗರ್ಭಿಣಿಯ ಬಗ್ಗೆ ವಿಶಿಷ್ಟ ಕಾಳಜಿ ವಹಿಸಬೇಕಾಗುತ್ತದೆ ಎಂಬುದು ದೊಡ್ಡವರ ಮಾತು. ಹೀಗಾಗಿಯೇ ನಾನು ಸಹ ಪತ್ನಿ ಬಗ್ಗೆ ಸಾಕಷ್ಟು ಕಾಳಜಿ ಜತೆಗೆ ನಮ್ಮ ಮಗು ದಷ್ಟ ಪುಷ್ಟವಾಗಿ ಬಬ್ಲಿ ತರಾ ಇರಬೇಕು. ಇನ್ನು ಮುಂದೆ ನೀನು ಹಾಲು, ಮೊಟ್ಟೆ, ಕೇಸರಿ, ಹಣ್ಣು ಚೆನ್ನಾಗಿ ತಿನ್ನಬೇಕು ಅಂತ ಸದಾ ಪತ್ನಿಯ ಮೇಲೆ ರೇಗಾಡುತ್ತಿರುತ್ತೇನೆ. ಆದರೆ ಏನೇ ತಿಂದರೂ ವಾಂತಿ ಮಾಡಿಕೊಳ್ಳುವ ಆಕೆ ಪಾಡು ನೋಡಿ ಒಮ್ಮೊಮ್ಮೆ ಪಾಪ ಅನಿಸಿದ್ದು ಇದೆ.

ಗರ್ಭಿಣಿ ಹುಳಿ ಹೆಚ್ಚು ತಿನ್ನಲು ಬಯಸಿದರೆ ಅವಳಿಗೆ ಹುಟ್ಟುವ ಮಗು ಹೆಣ್ಣು ಎಂದೂ, ಸಿಹಿ ಹೆಚ್ಚು ತಿನ್ನಲು ಅಪೇಕ್ಷಿಸಿದರೆ ಗಂಡು ಮಗು ಹುಟ್ಟುತ್ತದೆ ಎಂದು ಕೆಲವರು ಅಂದಾಜು ಮಾಡುತ್ತಾರೆ. ಆದರೆ ನಾಲ್ಕು ತಿಂಗಳಾದರೂ ವಾಂತಿನೇ ಕಡಿಮೆ ಆಗುತ್ತಿಲ್ಲ ಎಂದಾಗ, ನನ್ನ ತಂಗಿ ಹಾಗೂ ತಾಯಿ, ವಾಂತಿ ಜಾಸ್ತಿ ಆದ್ರೆ ನಿನಗೆ ಹೆಣ್ಣು ಹುಟ್ಟೋದು ಗ್ಯಾರಂಟಿ ಅಂದಿದ್ರು. ಆದರೆ ಈ ವಾದವನ್ನು ಒಪ್ಪದ ನನ್ನ ಪತ್ನಿ, ಹೆಣ್ಮಕ್ಕಳು ಅಪ್ಪನನ್ನೇ ಇಷ್ಟಪಡುತ್ತವೆ. ಯಾವಾಗ್ಲೂ ಪಪ್ಪಾ... ಪಪ್ಪಾ... ಅಂತಾ ಅಪ್ಪನ ಸುತ್ತಾನೇ ಸುತ್ತುತ್ತವೆ. ಆಂದ್ರೆ ಗಂಡ್ಮಕ್ಕಳು ಹಾಗಲ್ಲ. ಅವು ಅಮ್ಮನನ್ನೇ ಇಷ್ಟಪಡುತ್ತವೆ. ಆಗ ಅಪ್ಪನ ಆಟ ಏನೂ ನಡೆಯಲ್ಲ. ಅದಕ್ಕೆ ನನಗೆ ಗಂಡು ಮಗು ಬೇಕು ಎಂದು ವಾದಿಸಿದ್ದಳು. ಹೀಗೆ ಒಬ್ಬರು ಗಂಡು ಮತ್ತೊಬ್ಬರು ಹೆಣ್ಣು ಬೇಕು ಎಂದು ಎಷ್ಟೋ ಬಾರಿ ಪ್ರೀತಿಯಿಂದ ಕೋಳಿ ಜಗಳ ಮಾಡಿದ್ದೇವೆ. ಆದರೆ ಕೊನೆಗೆ ಯಾವುದಾದರೂ ಓಕೆ ಎಂದು ಕೈ ಹೊಡೆಯುತ್ತೇವೆ.

ಒಮ್ಮೆ ಗಂಡು ಮಗು ಬೇಕು ಎನ್ನುವ ಪತ್ನಿ ಮತ್ತೊಮ್ಮೆ ಹೆಣ್ಣು ಮಗುವಾದ್ರೆ, ಅದಕ್ಕೆ ನೀಟಾಗಿ ಡ್ರೆಸ್ ಮಾಡಿ, ಮೇಕಪ್ ಮಾಡಬಹುದು. ಆದರೆ ಗಂಡು ಮಕ್ಕಳಿಗೆ ಇದೇಲ್ಲಾ ಮಾಡಕ್ಕಾಗಲ್ಲ ಎಂದು ಹೆಣ್ಣು ಮಗು ಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದು ಇದೆ. ಹೆಣ್ಣೇ ಆಗಲಿ ಗಂಡೇ ಆಗಲಿ ಅದನ್ನು ಅಪ್ಪಿ ಮುದ್ದಾಡಲು ಇಬ್ಬರೂ ತುದಿ ಗಾಲಲ್ಲಿ ನಿಂತಿದ್ದೇವೆ.

ನನ್ನ ಪತ್ನಿ ಹೇಳಿದ್ದು ನಿಜ, ಸಾಮಾನ್ಯವಾಗಿ ಗಂಡು ಮಕ್ಕಳು ಅಮ್ಮನನ್ನು ಅತಿಯಾಗಿ ಇಷ್ಟ ಪಡುತ್ತಾರೆ. ಆದ್ರೆ ನಾನು ಅಪ್ಪನನ್ನು ಹೆಚ್ಚು ಇಷ್ಟ ಪಡುತ್ತೇನೆ. ಕಾರಣ ಅವರಲ್ಲಿ ಅಮ್ಮನ ಹಾರೈಕೆ, ಅಪ್ಪನ ಪ್ರೀತಿ ಎರಡೂ ಇದೆ. ಹಾಗಂತ ಅಮ್ಮನ ಪ್ರೀತಿ ಕಮ್ಮಿ ಅಂತಲ್ಲ. ಅಪ್ಪನದ್ದೂ ಯಾವಾಗ್ಲೂ ಒಂದ್ ಕೈ ಮೇಲು. 'ಹ್ಯಾಪಿ ಫಾದರ್ಸ್ ಡೇ ಅಪ್ಪಾ... ಐ ಲವ್ ಯು... ಲವ್ ಯು ಪಾರ್ ಎವರ್...

-ಲಿಂಗರಾಜ್ ಬಡಿಗೇರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com