ನಾ ತಂದೆ ನೀ ಕಂದ

ಪೆಟ್ಟಿಗೆ ಅಂಗಡಿ ಶೆಟ್ಟರು ಕೂತಲ್ಲಿಂದ ಅಲ್ಲಾಡದೇ ತಿಜೋರಿ ಮುಂದೆ ಕೂಡೋ ಹಾಗೆ, ಕಂಪ್ಯೂಟರ್ ಮುಂದೆಯೇ ಕೂಡುವ ಟೆಕ್ಕಿ, ಅರ್ಥಾತ್ ನಾನು...
ಮಗನೊಂದಿಗೆ ಶ್ರೀನಾಥ್ ಭಲ್ಲೆ
ಮಗನೊಂದಿಗೆ ಶ್ರೀನಾಥ್ ಭಲ್ಲೆ

ಪೆಟ್ಟಿಗೆ ಅಂಗಡಿ ಶೆಟ್ಟರು ಕೂತಲ್ಲಿಂದ ಅಲ್ಲಾಡದೇ ತಿಜೋರಿ ಮುಂದೆ ಕೂಡೋ ಹಾಗೆ, ಕಂಪ್ಯೂಟರ್ ಮುಂದೆಯೇ ಕೂಡುವ ಟೆಕ್ಕಿ, ಅರ್ಥಾತ್ ನಾನು, ಅಂದು ಸಂಜೆ ಯದ್ವಾತದ್ವಾ ಆಯಾಸಗೊಂಡು ಕೆಲಸದಿಂದ ಮನೆಗೆ ಹಿಂದಿರುಗಿದ್ದೆ. ಊಟದ ಡಬ್ಬಿಯ ಬ್ಯಾಗ್ ಅನ್ನು ಹಿತ್ತಲಿಗೆ ಸಾಗಿಸಿ, ವಾಹನಗಳ ಕರಿ ಹೊಗೆ ಹೊತ್ತ ಮುಖವನ್ನು ತಕ್ಕ ಮಟ್ಟಿಗೆ ಉಜ್ಜಿ ತೊಳೆದು, ಶುಭ್ರ ಮೊಗವನ್ನು ಹೆಂಡತಿಗೆ ತೋರುವ ಸಲುವಾಗಿ ರೂಮಿಗೆ ಅಡಿಯಿಟ್ಟರೆ ಟೇಬಲ್ ಮೇಲೆ ಕಂಡಿದ್ದು ಅಸ್ಪತ್ರೆಯ ರಿಪೋರ್ಟ್.

ಸಿಹಿ ಸುದ್ದಿ ಬಿತ್ತರಿಸಿತ್ತು ಆ ರಿಪೋರ್ಟು. ಮನೆಗೆ ಸದಸ್ಯನೊಬ್ಬರ ಸೇರ್ಪಡೆಯ ಸುದ್ದಿ. ಆ ಕ್ಷಣದಲ್ಲಿ ಮನದಲ್ಲಿ ಏನೇನೊ ಆಲೋಚನೆಗಳು, ಕತ್ತರಿಸಿಟ್ಟ ಕಲ್ಲಂಗಡಿಯನ್ನು ಮುತ್ತುವ ನೊಣಗಳಂತೆ, ಮನವನ್ನು ಮುತ್ತಿತ್ತು.

ಈ ನವ ಸದಸ್ಯರನ್ನು ಸಾಕುವಷ್ಟು ಕೈಲಿ (ಜೇಬಲಿ) ಶಕ್ತಿ ಇದೆಯೇ ? ಹುಟ್ಟೋ ಕಂದ ಹೇಗಿರಬಹುದು? ಈವರೆಗಿನ ಚರಿತ್ರೆಯಲ್ಲಿ ಮಕ್ಕಳು ನನ್ನನ್ನು ನೋಡಿ ಹೆದರಿದ್ದು ಗೊತ್ತು. ನಮ್ಮ ಕೂಸೂ ನನ್ನನ್ನು ನೋಡಿ ಹೆದರಿ ಅತ್ತರೆ, ಜೀವನವೇ ವೇಸ್ಟು! ಅಂಗಾಂಗಗಳು ಯಾವುದೂ ಊನವಾಗಿರೋದಿಲ್ಲ ಅಲ್ಲವೇ? ನಾನೇನು ತಪ್ಪ ಮಾಡಿದ್ದರೂ ಹುಟ್ಟೋ ಕಂದನ ಅಂಗಾಂಗಗಳ ಮೇಲೆ ಅದರ ಪ್ರಭಾವ ಬೀರದಿರಲಿ ಎಂದು ಪ್ರಾರ್ಥಿಸಿಕೊಂಡೆ.

ಮಗು ಗಂಡೋ? ಹೆಣ್ಣೋ? ಯಾವುದಾದರೇನು ಆಯುಷ್ಯ ಆರೋಗ್ಯ ಹಾಕಿಕೊಂಡು ಹುಟ್ಟಿದರೆ ಸಾಕು. ಕೂಸು ನನ್ನ ಬಣ್ಣ ಇದ್ದರೇ? ಕಪ್ಪೇನು ಬಿಳುಪೇನು? ಇನ್ನೂ ಎಷ್ಟು ದಿನ ಕಾಯಬೇಕು? ಒಂದೇ ಎರಡೇ?

"ಏನು? ಹಂಗೇ ನಿಂತುಬಿಟ್ರಲ್ಲಾ? ರಿಪೋರ್ಟ್ ಅರ್ಥಾ ಆಯ್ತಾ? ಇಲ್ವಾ?" ಎಂದು ಪತ್ನಿ ಕೇಳಿದ ಮೇಲೇ ಪುನಃ ಈ ಲೋಕಕ್ಕೆ ಬಂದಿದ್ದು. ನನ್ನ ಮನವೆಂಬ ಬಕೀಟಿನಿಂದ ಅನಿಸಿಕೆಗಳೆಂಬ ನೀರನ್ನು ಸುರಿಯೋ ಮುನ್ನ ಮೊದಲು ಸಂತಸ ವ್ಯಕ್ತಪಡಿಸಿದೆ.

ಮೊದಲೇ ಹಾರರ್ ಚಿತ್ರಗಳೆಂದರೆ ಆಗದ ನನ್ನವಳನ್ನು ಅವುಗಳಿಂದ ದೂರವಿರಿಸಿದೆ. ಸುಪ್ರಭಾತ, ದೇವರನಾಮಗಳನ್ನು ಇಪ್ಪತ್ತನಾಲ್ಕು ಓಡಿಸಿದಿದ್ದರೂ ಆಯಾ ಸಮಯಕ್ಕೆ ಮಗುವಿಗೆ ಕೇಳಿಸುತ್ತಿದ್ದೆ. ಪುತ್ತೂರು ನರಸಿಂಹ ನಾಯಕರ ’ದಾಸನಾಗು ವಿಶೇಷನಾಗು’ ಕ್ಯಾಸೆಟ್ ಎಷ್ಟು ಬಾರಿ ಓಡುತ್ತಿತ್ತೋ ಲೆಕ್ಕವೇ ಇಲ್ಲ !

ಕಾಲ ಕಾಲಕ್ಕೆ ನಡೆಯೋ ಉಪಚಾರಗಳಲ್ಲಿ ದಿನಗಳು ಹೇಗೆ ಓಡಿದವೋ ಗೊತ್ತಿಲ್ಲ. ಆ ಶುಭದಿನ ಬಂದೇ ಬಿಟ್ಟಿತು. ಆಸ್ಪತ್ರೆಗೆ ದಾಖಲಾಗುವ ಸಂಜೆ, ಜಿಂಕೆಯನ್ನು ರಮಿಸಿ ಹೊರಟ ಶಕುಂತಳೆಯಂತೆ ಪಾನಿಪುರಿ, ಭೇಲ್ ಪುರಿ ಇತ್ಯಾಡಿ ಗಾಡಿಗಳಿಗೆ ಹೋಗಿ ಬರುವೆನೆಂದು ತಿಳಿಸಿ ಹೊರಟಿದ್ದಳವಳು !

ಹತ್ತು ಘಂಟೆಗೆ ಮೈಯ ನರ್ಸಿಂಗ್ ಹೋಮ್ ಗೆ ದಾಖಲಾಯಿತಿಯೂ ಆಯ್ತು. ನೀರಿನ ಕಣಗಳಾದ ಹೈಡ್ರೋಜನ್ ಮತ್ತು ಆಕ್ಸಿಜನ್ ಎರಡೂ ಬೇರೆ ಬೇರೆಯಾಗುವ ಸಮಯವೂ ಬಂತು ... ಅರ್ಥಾತ್ ವಾಟರ್ ಬ್ರೇಕ್ !!! ಏನೇನೋ ಆಲೋಚನೆಗಳಿಂದ ನಿದ್ದೆ ಹತ್ತಿರ ಸುಳಿಯಲಿಲ್ಲ !

ಗುರುವಾರದ ಶುಭ ಮುಂಜಾನೆ ನಾಲ್ಕು ಘಂಟೆ ಎರಡು ನಿಮಿಷಕ್ಕೆ ಕೂಸು ಅಳುವ ದನಿ ಕೇಳಿತ್ತು ... ಮನೆಯವಳ ಗಲಾಟೆ ನಿಂತಿತ್ತು ... ಮನ ನಿರಾಳವಾಗಿತ್ತು ... ಗಂಡು ಕೂಸು !!! ಇಬ್ಬರೂ ಕ್ಷೇಮ ಹಾಗಾಗಿ ನಾನು ಕ್ಷೇಮ !

ಕೆಲವು ಸಮಯದ ನಂತರ, ಮಗನನ್ನು ಮೊದಲ ಬಾರಿಗೆ ಕಂಡೆ ... ಮಸಾಲೆದೋಸೆಯೊಳಗಿನ ಪಲ್ಯದಂತಿದ್ದವನನ್ನು ಕಂಡಾಗ ಏನೋ ಅನಿರ್ವಚನೀಯ ಆನಂದ ... ಎತ್ತಿಕೊಳ್ಳಲು ಭಯವೋ ಭಯ. ಮೂರೇ ದಿನಗಳಲ್ಲಿ ಧೈರ್ಯ ಮಾಡಿ ಎತ್ತಿಕೊಂಡಿದ್ದೇ ಬಿಟ್ಟೆ !

ಪರ ಊರಲ್ಲಿದ್ದ ತಂಗಿಗೆ ಕರೆ ಮಾಡಿ ತಿಳಿಸಿದೆ. ಮಗ ಹುಟ್ಟಿದ ಎಂದ ಕೂಡಲೇ "ಯಾವ ಬಣ್ಣಾನೋ ?" ಅಂದ್ಲು ! ನಾನು "ಬೆಳ್ಳಗಿದ್ದಾನೆ ಕಣೇ" ಅಂದೆ .. ಅದಕ್ಕವಳು "ನಿಜವಾಗ್ಲೂ ? ಸದ್ಯ, ಆತಂಕ ಆಗಿತ್ತು" ಅನ್ನೋದೇ?

ಆಟಪಾಟ, ಅಳು-ನಗು, ಶಾಲೆ-ಓದು ಎಂದೆಲ್ಲ ಅಪ್ಪನಾಗಿ ಅನುಭವಿಸಿದ ನಾನು, ಇಂದು ಅವನಿಂದ ಕಲಿಯುವ ಸ್ನೇಹಿತನಾಗಿದ್ದೇನೆ, ಮಗನಾಗಿದ್ದೇನೆ. ಇಂದಿಗೂ ನಾ ಹೇಳುವ ಕಥೆ ಕೇಳುವುದಕ್ಕೆ ಖುಷಿ ಈ ಹದಿನಾರರ ಪೋರನಿಗೆ !!!


- ಶ್ರೀನಾಥ್ ಭಲ್ಲೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com