ನೆನಪುಗಳ ಮಾತು ಮಧುರ

ದಶಕದ ನಂತರ ನಮ್ಮ ಡಿಗ್ರಿ ಗೆಳೆಯರು ಹೀಗೊಮ್ಮೆ ಸೇರಿಕೊಂಡೆವು. ನಮ್ಮ ಹದಿನಾಲ್ಕು ವರ್ಷದ ಗೆಳೆತನ ಮತ್ತೊಮ್ಮೆ...
ಕೆ.ಪಿ ಸತ್ಯನಾರಾಯಣ ಮತ್ತು ಗೆಳೆಯರು
ಕೆ.ಪಿ ಸತ್ಯನಾರಾಯಣ ಮತ್ತು ಗೆಳೆಯರು
Updated on

ದಶಕದ ನಂತರ ನಮ್ಮ ಡಿಗ್ರಿ ಗೆಳೆಯರು  ಹೀಗೊಮ್ಮೆ ಸೇರಿಕೊಂಡೆವು. ನಮ್ಮ ಹದಿನಾಲ್ಕು ವರ್ಷದ ಗೆಳೆತನ ಮತ್ತೊಮ್ಮೆ  ನಮ್ಮ ಚಿಲ್ಟಾರಿ ದುರ್ಗದಲ್ಲಿ ಸೇರಿಕೊಂಡು ಈ ದಿನ ಕೇಕ ಹೊಡೆದಿದ್ದೇವೆ. ಆಕಸ್ಮಿಕ ಭೇಟಿ..! ಮದನಪಲ್ಲಿಯಿಂದ ಗೆಳೆಯ ಶಿವಕುಮಾರ ಬಂದಿದ್ದ ವಿಚಾರ ತಿಳಿದೇ ಇರಲಿಲ್ಲ. ಒಂದು ಕಾಲ್ ಗಳಿಗೆ ಮೊಳಕಾಲ್ಮೂರಿನ ನರೇಶ, ಏಕಾಂತರೆಡ್ಡಿ, ರಘು ಎಲ್ಲರೂ ಸಂಜೆಯ ವೇಳೆಗೆ ಪಕ್ಕಾ ಟೈಮಿಗೆ ಹಾಜರು..!

 ನಾವಷ್ಟೂ ಜನ ದುರ್ಗದ ಬಿ.ಸಿ.ಎಂ ಹಾಸ್ಟೆಲ್ಲಿನ ಹಾಗೂ ಆರ್ಟ್ಸ್ ಕಾಲೇಜಿನ (ಮಾದರಿ.!!!) ವಿದ್ಯಾರ್ಥಿಗಳು. ವೀರಣ್ಣ ಪ್ರೊಫೆಸರ್ರು ಮ್ಯಾಕ್ ಬೆತ್  ನಾಟಕದ ತರಗತಿಯಲ್ಲಿ ಜೋರಾಗಿ ಕೂಗುವಾಗ ಕಾಮೆಡಿಯ ಉತ್ತುಂಗ.  ಅವರ ಕ್ಲಾಸಿಗೆ ಬಂಕ್ ಹೊಡೆದಾಗ ನಮ್ಮ ಅಷ್ಟೂ ಜನಕ್ಕೆ ನಿಲ್ಲಿಸಿ "ಯಾಕ್ರೋ ಆಬ್ಸೆಂಟು" ಅಂದಾಗ "ಸಾರ್ ನಿಮ್ ವಾಯ್ಸು ಹೊರಗೆ ಹೈವೇ ವರೆಗೂ ಕೇಳಿಸ್ತಿತ್ತು..ಅಲ್ಲೇ ಕುತ್ಕಂಡು ಕೇಳಿದ್ವಿ..ಬೇಕಾದ್ರೆ ಕೇಳಿ.. "fair is foul and foul is fair" ಅಂದಾಗ ನಕ್ಕ ಮೇಷ್ಟ್ರು "ಅಯ್ಯೋ ನನ್ ಮಕ್ಳಾ.." ಅಂದು ಸುಮ್ಮನಾಗಿದ್ದರು. ವೀರಣ್ಣ ಮೇಷ್ಟ್ರು ನನ್ನ ಸಂಬಂಧಿಯೇ ಆಗಿದ್ದರಿಂದ ನಮ್ಮ ಮೂವರಿಗೆ ಭಯಾನಕ ಸಲುಗೆ. ಮೂರು ವರ್ಷದ ಡಿಗ್ರಿಯಲ್ಲಿ ಕಾಲೇಜಿನ ಹುಡುಗರ ಪೈಕಿ ನಾವುಗಳು ಹೆಚ್ಚು ಅಂಕಗಳನ್ನ ಪಡೆದ ನಂತರವೇ "ಉದ್ಧಾರ ಆಗ್ತೀರಾ ಹೋಗ್ರಿ ಹಾಳಾದವರಾ.." ಅಂತಾ ಆಶೀರ್ವದಿಸಿ ಕಳುಹಿಸಿದ್ದರು. ವಸಂತಲಕ್ಷ್ಮಿ ಗುರುಗಳಿಗೆ ನಾವು ಒಬಿಡಿಯಂಟೋ ಒಬಿಡಿಯಂಟು..! ಕಾಲೇಜಿನ ಸೆನೆಟ್ ಎಲೆಕ್ಷನ್ ನಿಂದ ಮೈಲಿ ದೂರ ನಾವು. ನಮ್ಮ ಸಪೋರ್ಟ್ ಪಡೆದ ತರಲೆ 'ಜಗ್ಗಿ' ಫುಲ್ ಲೀಡಿನಲ್ಲಿ ವಿನ್ನರ್.

 ಕಷ್ಟಗಳಲ್ಲೇ ಕಲಿತುಕೊಂಡೆವು. ಕಷ್ಟಗಳನ್ನ ಹಂಚಿಕೊಂಡೆವು. ಊರಿಗೆ ಹೋದರೆ ನಾಲ್ಕು ಊರಿನ ಮನೆಗಳು ನಮ್ಮವು. ರಘುವಿನ ಅಮ್ಮನಿಗೆ "ಸೊಸೆಯರ ಜತೆಗೆ ಕಿತ್ತಾಡಿಕೊಳ್ಳಬೇಡ..ಹೊಂದಿಕೊಂಡು ಹೋಗು"...ಎನ್ನವುದರಿಂದ ಪ್ರಾರಂಭಗೊಂಡು ನರೇಶ ಕಷ್ಟ ಪಟ್ಟು ಕಲಿಸಿದ ಅವನ ಸಾಫ್ಟ್ ವೇರ್ ತಮ್ಮ ಪ್ರವೀಣನಿಗೆ, ಇಂಗ್ಲೀಷ್ ಪಿ.ಜಿ ಕಲಿಯುತ್ತಿರುವ ಸಂತೋಷನಿಗೆ ನಾನು ಅಡ್ವೈಸರ್.  ಶಿವು ಅಮ್ಮಂದಿರು ಇಬ್ಬರು. ಅವರ ಮಕ್ಕಳಿಗಿಂತಲೂ ನಾನೆಂದರೆ ಅವರಿಗೆ ಅಕ್ಕರೆ. ನರೇಶನ ತಂದೆಗೆ ನಾನು ನಲ್ಮೆಯ 'ಸತ್ಯನ್ನ'. ಊರಿನ ಎಲ್ಲರೂ "ಸತ್ತೀ" ಅಂತಲೇ ಕರೆಯುತ್ತಾರೆ ನನ್ನ. ನನ್ನನ್ನು ಹೊರತುಪಡಿಸಿ ನನ್ನ ಅತಿ ದೊಡ್ಡ ಕುಟುಂಬದ ಎಲ್ಲರ ಮಾತೃ ಭಾಷೆಯೂ ತೆಲುಗು. ಇವರೆಲ್ಲರೊಂದಿಗೆ ನಾನು ನೋಡಿದ ಅಗಣಿತ ತೆಲುಗು ಸಿನೆಮಾಗಳ ಪಟ್ಟಿ ಈಗಲೂ ಮಾಡಬಲ್ಲೆ. ಚಳ್ಳಕೆರೆಗೆ ಚಿರಂಜೀವಿಯ ಸಿನೆಮಾ ರಿಲೀಸಿನ ದಿನವೇ ನಾವುಗಳು ಹಾಜರು. ನರೇಶನ ದುಡ್ಡು ಆ ಹೊತ್ತು ಖತಂ. ಕುರಿಗಳನ್ನ ಕಡಿದು ತಲೆಗಳನ್ನ ಹಾರವನ್ನಾಗಿ ಮಾಡಿ ಕಟೌಟಿಗೆ ನೇತು ಹಾಕುತ್ತಿದ್ದರು ಅಲ್ಲಿನ ಕಾಟಪ್ಪನಹಟ್ಟಿಯ ಹುಡುಗರು. ಆ ತಲೆಗಳ ಪೈಕಿ ಒಂದು ಮ್ಯಾಕೆಯ ತಲೆ ನರೇಶನ ಕಾಂಟ್ರಿಬ್ಯೂಷನ್ ಆಗಿರುತ್ತಿತ್ತು. ನರೇಶನ ಬಾಯಲ್ಲಿ 'ಸಮರ ಸಿಂಹ ರೆಡ್ಡಿ' ಯ " ನೀ ಊರಿಕಿ ವಚ್ಚಾ.. ಇಂಟಿಕಿ ವಚ್ಚಾ..ನೀ ಗಡಪಕಿ ವಚ್ಚಾ.." ಅಂತಾ ತೆಂಗಿನ ಕಾಯಿ ಸುಲಿಯುವ ಮಚ್ಚು ಹಿಡಕೊಂಡು ಹೊಡೆಯುತ್ತಿದ್ದ ರಾಯಲ ಸೀಮಾ ಡೈಲಾಗ್ ಗಳು ಇಂದಿಗೂ ಬಾಯಲ್ಲಿ ಹಂಗೇ ಬರುತ್ವೆ
  ಉಳಿದಂತೆ ಮುರುಘರಾಜೇಂದ್ರ ಮಠ, ದುರ್ಗದ ಬೆಟ್ಟಗಳು, ಕೋಟೆಗಳು, ದೊಡ್ಡಪೇಟೆಯ ಬೀದಿಗಳು, ಕೆಳಗೋಟೆಯ ಗಲ್ಲಿಗಳು ನಮ್ಮ ಸಾಂಸ್ಕೃತಿಕ ಜಗತ್ತುಗಳು. ಬೆಂಗಳೂರಿನ mnc ಕಲ್ಚರ್ ನಮಗೆ ಅಪರಿಚಿತವಾದ್ದರಿಂದ ( ನಮ್ ಯೋಗ್ಯತೆಗೆ ಕಲಿತದ್ದು ಆರ್ಟ್ಸ್ ಬಿಡಿ) ಎಲ್ಲರೂ ಸರ್ಕಾರಿ ನೌಕರಿ ಬೆನ್ನು ಹತ್ತಿ ಪುಗಸಟ್ಟೆ ಕೆಲಸ ಪಡಕೊಂಡು ಊರೂರು ಅಲೆಯುತ್ತಿದ್ದೇವೆ. ಇವತ್ತಿಗೂ ನಮ್ಮದು ಅಲ್ಟಿಮೇಟ್ ಗೆಳೆತನ . ನಮ್ಮ whatsapp ಗ್ರೂಪಿಗೆ ನಾವಿಟ್ಟ ಹೆಸರು 'ಅಪರೂಪದ ಗೆಳೆತನ' ಅಂತಾ    ಹದಿಮೂರು ವರ್ಷಗಳಲ್ಲಿ ನಮ್ಮ ನೌಕರಿಗಳು, ಲೈಫ್ ಸ್ಟೈಲುಗಳು, ಅನುಕೂಲಗಳು ಎಲ್ಲವೂ ಬದಲಾದವು. ನಾವು ನಾಲ್ಕೂ ಜನ ಹಾಗೆಯೇ ಉಳಿದಿದ್ದೇವೆ. ಉಳಿಯುತ್ತೇವೆ.
Friends forever...

-ಕೆ.ಪಿ ಸತ್ಯನಾರಾಯಣ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com