ಸ್ನೇಹವೆನ್ನುವ ವಿಸ್ಮಯ

ಫೇಸ್‌ಬುಕ್ಕಿನ ಫ್ರೆಂಡ್‌ಲಿಸ್ಟಿನ ಸಾವಿರ ಚಿಲ್ಲರೆ ಪರಿಚಿತರ ನಡುವೆ ಒಂದಿಷ್ಟು ಜನ ನಮ್ಮ ಭಾವಗಳಿಗೆ ಮಿಡಿಯುತ್ತಾ, ಅವರದ್ದೇನೋ ಸಮಸ್ಯೆಯಿಂದರೆ ನಮಗಿಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಘಟನೆ ೧ :
ಅವನು ಮೂರರ ಹರೆಯದ ಪುಟಾಣಿ. ಶಾಲೆಗೆ ಹೋಗುವಷ್ಟಾಗಿದ್ದಾನೆ ಈಗ. ಆದರೆ ಅಮ್ಮನನ್ನು ಬಿಟ್ಟು ಹೋಗಲೊಲ್ಲ. ಅಮ್ಮನೋ ಮುದ್ದುಗರೆದು, ಪ್ರೀತಿಯ ಹೊಳೆಯನ್ನೇ ಹರಿಸಿ ಶಾಲೆಗೆ ಕರೆದುಕೊಂಡು ಹೋಗುತ್ತಾಳಾದರೂ ಅಲ್ಲಿ ಮತ್ತದೇ ಹಠ. ಬೈಯುತ್ತಾಳೆ, ತಾಳಲಾರದೇ ಅಪ್ಪನಿಗೆ ಹೇಳುತ್ತೇನೆ' ಅನ್ನುವಂತಹ ಬೆದರಿಕೆಯನ್ನೂ ಹಾಕುತ್ತಾಳೆ. ಇವ ಜಗ್ಗುವುದಿಲ್ಲ. ಅವನ ಟೀಚರ್‍ "ನೀವು ಬಿಟ್ಟು ಹೋಗಿ, ನಾವು ನೋಡಿಕೊಳ್ಳುತ್ತೇವೆ" ಎಂದ ಕೂಡಲೇ ಅಳುವ ಇವನನ್ನು ಬಿಟ್ಟು ಅಮ್ಮ ಹೊರಡುತ್ತಾಳೆ. ಶಾಲೆಗೆ ಸೇರಿದ ಆರಂಭದ ದಿನಗಳೆಲ್ಲಾ ಹೀಗೇ ಕಳೆದವು. ಹೀಗಾಗಿ ಒಂದಿಷ್ಟು ದಿನ ಆದ ಮೇಲೆ ಇವ ಚಿಗಿದುಕೊಂಡ. ಬೆಳಿಗ್ಗೆ ಎದ್ದು ಅವನೇ ಸ್ನಾನ ಮಾಡಿಸು ಅನ್ನುತ್ತಾನೆ, ಸ್ಕೂಲೆಂದರೆ ಲಘುಬಗೆಯಿಂದ ತಯಾರಾಗುತ್ತಾನೆ, ಸ್ಕೂಲ್ ಹತ್ತಿರ ಅಮ್ಮನಿಗೆ ಪ್ರೀತಿಯಿಂದ ಪಪ್ಪಿ ಕೊಟ್ಟು ಟಾಟಾ ಮಾಡುತ್ತಾನೆ, ತನ್ನದೇ ವಯಸ್ಸಿನ ಮಕ್ಕಳ ಜೊತೆ ಸೇರಿಕೊಂಡು ಸಂಭ್ರಮದಿಂದ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಾನೆ. ಶಾಲೆಯ ದಿನನಿತ್ಯದ ಒಡನಾಟ ಆ ಪುಟ್ಟ ಮಕ್ಕಳ ಮನದಲ್ಲಿ ಗೆಳೆತನ ಚಿಗುರಿಸಿದೆ ಮತ್ತು ಅವು ಅಮ್ಮನ ಮಡಿಲಾಚೆಯೂ ಖುಷಿಯಾಗಿರುವುದ ಕಲಿತಿದ್ದಾವೆ. ಈಗ ಇವ ಮನೆಯಲ್ಲಿ ಬೇಡಬೇಡವಂದರೂ ತನ್ನ ಗೆಳೆಯರು, ಟೀಚರ್‌ಗಳ ಬಗ್ಗೆ ಖುಷಿಯಿಂದ ಅಮ್ಮನಿಗೆ ಅಪ್ಪನಿಗೆ ಹೇಳುತ್ತಾನೆ.

ಘಟನೆ ೨:

ಇವನು ಮತ್ತು ಅವಳು ಬಾಲ್ಯ ಸ್ನೇಹಿತರು. ಇದೀಗ ಕಾಲೇಜು ಮೆಟ್ಟಿಲೇರಿದ್ದಾರೆ. "ಸೈನ್ಸೇ ತಗೋ" ಎಂದು ಅವಳು ಇವನಿಗೆ ದಂಬಾಲು ಬಿದ್ದರೂ, ಇವ "ಹೋಗೇಲೇ..!” ಅಂತ ಮೂಗು ಮುರಿದು ಕಾಮರ್ಸ್ ಸೇರಿಕೊಂಡಿದ್ದಾನೆ.  ಒಂದು ದಿನ ಕಂಪ್ಯೂಟರ್‌ ಲ್ಯಾಬ್‌ನಾಚೆಗೆ ಬರುವಾಗ ಇವನಿಗೆ "ಇವಳು" ಕಣ್ಣಿಗೆ ಬಿದ್ದಿದ್ದಾಳೆ. ಇದೀಗ ಹದಿಹರೆಯದ ಮನಸ್ಸಿಗೆ "ಲವ್‌ ಅಟ್ ಫಸ್ಟ್‌ ಸೈಟಿ"ನ ಭ್ರಮೆ ತಗುಲಿದೆ. ಅದನ್ನು ತನ್ನ ಗೆಳತಿಗೆ ಬಂದು "ನಿನ್ನ ಕ್ಲಾಸೇ ಕಣೇ.. ಅವಳನ್ನ ಫ್ರೇಂಡ್‌ ಮಾಡ್ಕೋಳೇss..” ಅಂತೆಲ್ಲಾ ದಂಬಾಲು ಬಿದ್ದು, ಅವರಿಬ್ಬರಿಗೂ ಫ್ರೆಂಡ್‌ಶಿಫ್ ಮಾಡಿಸಿ, ಗೆಳತಿಯ ಮೂಲಕ ತಾನೂ ಅವಳಿಗೆ ಹತ್ತಿರವಾಗಿದ್ದಾನೆ. ನೋಡ್ತಾ ನೋಡ್ತಾ ಈ ಹುಡುಗಿಗೂ ಲವ್ವಾಗಿ ವರ್ಷದೊಳಗೆ ಬ್ರೇಕಪ್‌ ಕೂಡಾ ಆಗಿದೆ. ಗೆಳತಿ ಒಂದಿಷ್ಟು ಸೂಜಿ ದಾರ ಹಿಡಿದು ಹೊಲಿಯುವ ಕೆಲಸ ಮಾಡಿದ್ದರ ಪರಿಣಾಮ ಅವಳಿಂದಲೂ ಆ ಹುಡುಗಿ ದೂರವಾಗಿದ್ದಾಳೆ. ಮತ್ತೆ ಒಳಿದ್ದದ್ದು ಅವರಿಬ್ಬರೇ ಗೆಳೆಯರು. ಜಗತ್ತೇ ತಲೆ ಕೆಳಗಾದಂತೆ ತಲೆ ಮೇಲೆ ಕೈಹೊತ್ತು ಕೂತ ಇವನನ್ನು ಗೆಳತಿ ಸಂತೈಸಿದ್ದಾಳೆ, ಹುರುಪು ತುಂಬಿದ್ದಾಳೆ, "ಮುಂದಿನ ವರ್ಷ ಜೂನಿಯರ್ಸ್ ಬರ್ತಾರೆ ಬಿಡೋ" ಅಂತೆಲ್ಲಾ ನಗೆಯುಕ್ಕಿಸಿದ್ದಾಳೆ, ಓದಿನ ಬಗ್ಗೆ ಸೀರಿಯಸ್‌ ಆಗಿಸಿದ್ದಾಳೆ. ಇವನಲ್ಲೀಗ ಸಿ.ಎ ಆಗುವ ಕನಸು ಮೊಳೆತಿದೆ.

ಘಟನೆ ೩ :
ಅಂದೊಂದು ವೃದ್ಧಾಶ್ರಮ. ಅಲ್ಲಿರುವ ಒಬ್ಬೊಬ್ಬರದೂ ಒಂದೊಂದು ನೋವಿನ ಕತೆ. ತಮ್ಮವರಿಂದಲೇ ನೊಂದ ಜೀವಗಳವು. ವಯಸ್ಸಾಗುವಿಕೆ ಅನ್ನುವುದು ಕೆಲವೊಮ್ಮೆ ಅಸಹಾಯಕತೆಗಳ ಕೂಪವಿರಬೇಕು. ಇಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿ ಯಾರಿಗೂ ಯಾರೂ ಪರಿಚಯವಿಲ್ಲ, ಸಂಬಂಧವಿಲ್ಲ. ಸ್ನೇಹದ ಬೆಸುಗೆಯಲ್ಲಿ ಅವರೆಲ್ಲರೂ ಅಲ್ಲಿ ಕೂಡಿ ಬಾಳುತ್ತಿದ್ದಾರೆ. ತಮ್ಮ ತಮ್ಮ ಕೆಲಸಗಳನ್ನು ತಾವು ತಾವೇ ಮಾಡಿಕೊಳ್ಳುತ್ತಾರೆ, ಸಂಸ್ಥೆಗೂ ಆರ್ಥಿಕವಾಗಿ ಸಹಾಯವಾಗುವಂತಹ ಸಣ್ಣಪುಟ್ಟ ಕೆಲಸಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುತ್ತಾರೆ, ಹರಟೆ ಹೊಡೆಯುತ್ತಾರೆ, ನಗುತ್ತಾರೆ, ನಗಿಸುತ್ತಾರೆ. ಒಬ್ಬರ ನೋವಿಗೆ ಇನ್ನೊಬ್ಬರು ಕಿವಿಯಾಗುತ್ತಾರೆ,ಸಾಂತ್ವನವಾಗುತ್ತಾರೆ. ಸ್ನೇಹವೆಂಬುದು ನೋವ ಮರೆಸಿ ನಗು ಕಲಿಸಿದೆ, ಕೊರಗು ನೀಗಿಸಿ ಸೊರಗುವಿಕೆಯಿಂದ ಪಾರು ಮಾಡಿದೆ ಆ ಹಿರಿಯ ಜೀವಗಳನ್ನು.

ಮೇಲ್ಕಾಣಿಸಿದ ಮೂರೂ ಉದಾಹರಣೆಗಳನ್ನು ನೋಡಿದರೆ ಬದುಕಿನ ವಿವಿಧ ಮಜಲುಗಳಲ್ಲಿ ಸ್ನೇಹವೆಂಬುದು ಹೇಗೆ ತನ್ನ ತೆಕ್ಕೆಗೆ ತೆಗೆದಕೊಂಡು ಬದುಕಿಗೆ ಖುಷಿಗಳನ್ನು ಜಮೆ ಮಾಡಿದೆ ಅನ್ನುವುದನ್ನು ಗಮನಿಸಬಹುದು. ಎಳೆ ಕಂದಮ್ಮನಿಂದ ಹಿಡಿದು ಹಿರಿಯ ನಾಗರೀಕರವರೆಗೆ ಎಲ್ಲರೂ ಗೆಳೆತನದ ಸೊಬಗ ಕಂಡವರೇ, ಉಂಡವರೇ. ಖುಷಿಯನ್ನು ದುಪಟ್ಟಾಗಿಸುವುದು, ನೋವನ್ನೂ ನಲಿವಾಗಿಸುವುದು ಸ್ನೇಹದಿಂದ ಮಾತ್ರ ಸಾಧ್ಯ. ಪುಟ್ಟ ಹುಡುಗ, ಹರೆಯದ ಹುಡುಗ, ಮತ್ತು ಜೀವನದ ಸಂಧ್ಯೆಯಲ್ಲಿರುವವರೂ ನಗು ಕಂಡಿದ್ದು, ಕಂಫರ್ಟ್ ಹೊಂದಿದ್ದು ಗೆಳೆತನದ ಬಾಹುಬಂಧದಲ್ಲಿ.

ಸ್ನೇಹವೆಂದರೆ ಹಾಗೇ!

ಫೇಸ್‌ಬುಕ್ಕಿನ ಫ್ರೆಂಡ್‌ಲಿಸ್ಟಿನ ಸಾವಿರ ಚಿಲ್ಲರೆ ಪರಿಚಿತರ ನಡುವೆ ಒಂದಿಷ್ಟು ಜನ ನಮ್ಮ ಭಾವಗಳಿಗೆ ಮಿಡಿಯುತ್ತಾ, ಅವರದ್ದೇನೋ ಸಮಸ್ಯೆಯಿಂದರೆ ನಮಗಿಲ್ಲಿ ತಳಮಳ ಶುರುವಾಗುತ್ತಲ್ಲ ಅದು. ಯಾರ ಮಧ್ಯೆಯಾದರೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಘಟಿಸಬಹುದಾಗಿದ್ದು. ಹುಡುಗ-ಹುಡುಗಿ, ಹುಡುಗ-ಹುಡುಗ, ಹುಡುಗಿ-ಹುಡುಗಿ, ಅಜ್ಜ-ಮೊಮ್ಮಗು, ತಾಯಿ-ಮಗಳು,ತಂದೆ-ಮಗ.. ಹೀಗೆ ಪರಿಚಿತ ಮತ್ತು ಅಪರಿಚಿತರ ನಡುವೆ  ಮೊಳೆಯಬಹುದಾಗಿರುತವಂತದ್ದು. ಭಾಷೆ,ನಾಡು, ಸಂಸ್ಕೃತಿಗಳ ಗಡಿ ಮೀರಿರುವಂತದ್ದು.  ಪರಿಚಯಕ್ಕೆ ಕಾರಣವಿರುತ್ತದೆ, ಪರಿಚಯ ಸ್ನೇಹವಾಗುವುದಕ್ಕೆ ಕಾರಣಳಿಲ್ಲ. ಕಾರಣ ಹುಡುಕಲೂ ಬಾರದು. ಗೆಳೆತನಕ್ಕೆ ನಿರ್ದಿಷ್ಟ ವ್ಯಾಖ್ಯೆಯನ್ನು ಕೊಟ್ಟು ಬಂಧಿಸಲಾಗದು. ಪರಿಧಿಯೊಳಗಿನ ಪದಪುಂಜದ ಚಮತ್ಕಾರಕ್ಕೆ ದಕ್ಕದು ಸ್ನೇಹ. ಹೌದು! ಸ್ನೇಹವೆಂದರೆ ಹಾಗೇ!

ಸ್ನೇಹದ ಕಡಲಲ್ಲಿ
ಸ್ನೇಹದ ನೆನಪುಗಳು ಮತ್ತು ಸಂಗ ಚೇತೋಹಾರಿ. ಅವುಗಳನ್ನು ಮೆಲುಕು ಹಾಕುವಾಗ ನಮ್ಮ ತುಟಿಯಂಚಿನಲ್ಲಿ ನಗು ಬಿರಿಯದೇ ಇರದು. ಸ್ನೇಹವೇ ಇಲ್ಲದ ನೆನಪುಗಳನ್ನು ನೆನಪಿಸಿಕೊಳ್ಳಿ. ಹೇಗಿದ್ದೀತು ಜೀವನ? ಉಪ್ಪಿಲ್ಲದ ಊಟ ಯಾವತ್ತೂ ಸಪ್ಪೆಯೇ. "ಸ್ನೇಹದ ಕಡಲ.. ನೆನಪಿನ ದೋಣಿಯ ಪಯಣಿಗರು ನಾವು" ಟ್ಯೂಷನ್ನಿಗೆಂದು ಮನೆಯಿಂದ ಹೊರಟು ಪಿಚ್ಚರಿಗೆ ಹೋಗಿ ಬಂದು ಬೈಸಿಕೊಂಡದ್ದು,  ಪ್ರಾಧ್ಯಾಪಕರಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದು, ಗೆಳೆಯನ ಪ್ರೇಮಕ್ಕೆ ಸೇತುವಾಗಿದ್ದು, ಸಹಪಾಠಿಯ ಆಪರೇಷನ್‌ಗೆ ಚಂದಾ ಎತ್ತಿದ್ದು, ಟ್ರೆಕ್ಕಿಂಗ್‌ಗಳ ನೆಪದಲ್ಲಿ ಕಾಡಲೆದಿದ್ದು, ಪ್ರವಾಸಕ್ಕೆ ಹೋಗಿ ಕಾಲು ಮುರಿದುಕೊಂಡು ಬಂದದ್ದು, ಗೆಳೆಯನ ಅಮ್ಮನಿಂದ ಹಿಗ್ಗಾಮುಗ್ಗಾ ಉಗಿಸಿಕೊಂಡಿದ್ದು, ರಾತ್ರಿಗಳ ಲಾಂಗ್‌ರೈಡ್‌ಗಳು, ಡೈಲಾಗ್‌ಗಳು... ಒಂದೇ ಎರಡೇ? ಪ್ರತಿಯೊಬ್ಬನ ಜೀವನದಲ್ಲೂ ನಡೆದಿರಬಹುದಾದ ಸಾಮಾನ್ಯ ಘಟನೆಗಳಿವು. ಆದರೆ ಇವುಗಳು ಕೊಟ್ಟ ಖುಷಿ ಅಪರಿಮಿತ.

ಈ ಅಪರಿಮಿತ ಖುಷಿಯ ಸಾಗರದ ಅಲೆಗಳು ಒಂದೊಂದು ಒಂದೊಂದು ರೀತಿ. ಸಾಗರದ ನಂಟು ಒಂದೇ ಬಗೆಯದ್ದಾದರೂ ಭಾವಗಳು ಬೇರೆಬೇರೆಯದೇ. ಸ್ನೇಹದಲ್ಲೇ ಒಂದಿಷ್ಟು ವಿಧಗಳನ್ನು ಮಾಡಿಕೊಂಡು ಬಿಟ್ಟಿದ್ದೇವೆ ನಾವು. ಎಲ್ಲರಲ್ಲೂ ಒಂದೇ ಥರ ಇರಲಾಗುವುದಿಲ್ಲ. ಬೆಸ್ಟು ಫ್ರೆಂಡ್‌, ಕ್ಲೋಸ್‌ ಫ್ರೆಂಡ್‌, ಜಸ್ಟ್‌ ಫ್ರೆಂಡ್‌, ಹಾಯ್‌ಬಾಯ್ ಫ್ರೆಂಡ್ಸ್.. ಹೀಗೇ ಹತ್ತು ಹಲವು. ನೋವನ್ನು ಬೆಸ್ಟ್ ಫ್ರೆಂಡ್ ಎಂಬ ಆತ್ಮೀಯರಲ್ಲಿ ತೋಡಿಕೊಂಡ ಹಾಗೆ ಜಸ್ಟ್‌ಫ್ರೆಂಡಿನ ಜೊತೆ ಹೇಳಿಕೊಳ್ಳಲು ಬರುವುದಿಲ್ಲ. ಹಾಗೇ ಅದೇನೋ ಮೂಡ್‌ಆಫ್‌ ಅಂತ ಕೂತಿದ್ದಾಗ ಅಚಾನಕ್ ಆಗಿ ಹಾಯ್‌ಬಾಯ್‌ ಫ್ರೆಂಡ್ಸ್ ಸಿಕ್ಕರೆ ಅವರಲ್ಲಿ ಎಲ್ಲವನ್ನೂ ಮರೆತಂತೆ ಬಾಯ್ತುಂಬಾ ನಕ್ಕಷ್ಟು ಚೆನ್ನಾಗಿ ಕ್ಲೋಸ್‌ಫ್ರೆಂಡ್‌ನ ಜೊತೆ ನಗಲು ಆಗುವುದಿಲ್ಲ. ಆ ಮೂಡ್‌ಆಫ್‌ ಆಗಿದ್ದ ಕ್ಷಣ ಆತ್ಮೀ ಯರೆಂದು ಇದ್ದವರಲ್ಲಿ ಹೇಳಿಕೊಳ್ಳುವ ತುಡಿತ ಇರುತ್ತದೆಯೇ ಹೊರತು ಮರೆತು ನಗುವ ಮನಸ್ಸು ಇರುವುದಿಲ್ಲ. ಹೇಳಿಕೊಂಡಾದ ಮೇಲೆ ಹಗುರಾಗುತ್ತೇವೆ ಅನ್ನುವುದ ನಿಜವಾದರೂ, ನಮ್ಮ ವರ್ತನೆಗಳಲ್ಲಿ ವಿವಿಧತೆ ಇರುತ್ತದೆ. ಸಾಗರದ ಅಲೆಗಳಂತೆ.

ಜ್ವಾಲಾಮುಖಿಯ ಮುಖಾಮುಖಿ
ಪ್ರತಿದಿನವೂ ಒಂದೇ ರೀತಿಯ ತರಂಗಗಳು ಎದ್ದೀತಾ ಸ್ನೇಹದ ಕಡಲಲ್ಲಿ..? ಶಾಂತ, ಪ್ರಶಾಂತವೆಂದೆಲ್ಲಾ ಮೇಲ್ನೋಟಕ್ಕೆ ಕಾಣುವ ಸಾಗರನೊಳಗೂ ಒಂದು ಜ್ವಾಲಾಮುಖಿಯ ಕೊತಕೊತವಿರುತ್ತದೆ.ಕಡಲೆಂದರೆ ಸಾವಿರ ನದಿಗಳ ಸಮಾಗಮ, ಸಾವಿರ ನದಿಗಳು ಸಾವಿರ ಥರ. ಒಳಗೆ ಇನ್ನೊಂದಿಷ್ಟು ಕುದಿಗಳು ಇದ್ದೇ ಇರುತ್ತವೆ. ಕೋಪ, ಅವಮಾನ, ಸಿಟ್ಟು ಎಲ್ಲವೂ ಅದರೊಳಗಿದ್ದಾವೆ. ಬರೀಯೇ ಖುಷಿಯೇ ಬದುಕಲ್ಲವಲ್ಲಾ, ಅಂತೇಯೇ ಸ್ನೇಹ ಬರೀ ನಗುವಲ್ಲ! ಖುಷಿಯಗಳೂ ನಿರಾಸವೆನಿಸುತ್ತವೆ, ದುಃಖಗಳ ಬಾಧೆ ಇಲ್ಲದೇ ಹೋದರೆ. ಗಟ್ಟಿ ಸ್ನೇಹಕ್ಕೂ ಇಂತಹ ಜಗಳಗಳು ಬೇಕು.

ಸ್ನೇಹದ ಜೀವಿಗಳ ನಡುವಿನ ಹೊಂದಾಣಿಕೆ, ಪ್ರೀತಿ, ಅರ್ಥೈಸಿಕೊಳ್ಳುವಿಕೆಗಳು ಅದೆಷ್ಟೇ ಚೆನ್ನಾಗಿದ್ದರೂ ಯಾವುದಾದರೂ ಒಂದು ಚಿಕ್ಕ-ಪುಟ್ಟ ವಿಷಯಕ್ಕೆ ಜಗಳಗಳು, ಮನಸ್ತಾಪಗಳು ಬರುತ್ತವೆ. ಈಗೋಗಳು ಸ್ನೇಹದ ನಡುವೆ ನಸುಳುತ್ತವೆ. ಪ್ರೀತಿ ವಿಶ್ವಾಸಗಳನ್ನು ಸ್ಫುರಿಸುತ್ತಿದ್ದ ಗೆಳೆತನ ಸಿಟ್ಟು, ಅವಮಾನಗಳ ಕೆಂಡದ ಮಳೆ ಸುರಿಸತೊಡಗುತ್ತದೆ. ಇಲ್ಲಿ ಒಂದಿಷ್ಟು ಜಾಣ್ಮೆಯಿಂದ ವ್ಯವಹರಿಸಬೇಕಾಗಿರುತ್ತದೆ. ಎಲ್ಲಿ ತಪ್ಪಾಗಿದೆ, ಕೋಪದ ಹಿಂದಿನ ನಿಜವಾದ ಕಾರಣಗಳನ್ನು ಹುಡುಕಿ, ತಪ್ಪು ನಿಜವಾಗಿಯೂ ನಿಮ್ಮ ಕಡೆಯಿದ್ದರೆ, ತಿದ್ದಿಕೊಳ್ಳುವಿರೆಂದು ಮನವರಿಕೆ ಮಾಡಿ. ತಪ್ಪಾಗಿ ಗ್ರಹಿಸಿಕೊಂಡು ಮಾತುಬಿಟ್ಟಿದ್ದರೆ, ನಿಜವಾದ ವಿಷಯವೆನೆಂದು ಸಮಾಧಾನವಾಗಿ ತಿಳಿಸಿಕೊಡಿ. ಇಲ್ಲ ಯಾರದ್ದೋ ಕೋಪ ನಿಮ್ಮ ಮೇಲೆ ತೀರಿಸಿಕೊಳ್ಳುತ್ತಿದ್ದಾರಾ? ಇಂತಹ ಸಿಟ್ಟು ಬಹಳ ಕಾಲವಿರುವುದಿಲ್ಲ ಬಿಡಿ. ಅವರ ಬೇಸರಗಳು ಕಳೆಯುವವರೆಗೆ ಕೊಂಚ ತಾಳ್ಮೆಯಿಂದ ಇರಿ.

ಕಡಲೊಡಲಿನ ಈ ಜ್ವಾಲಾಮುಖಿಯನ್ನು ಮತ್ತದೇ ಪ್ರೀತಿ - ವಿಶ್ವಾಸದಿಂದಲೇ ಗೆದ್ದುಕೊಳ್ಳಬೇಕು. ಸ್ನೇಹ ಮೊದಲಿಗಿನಂತಲೂ ಹೆಚ್ಚು ಗಟ್ಟಿಗೊಳ್ಳುವ ಹಾಗೆ ನೋಡಿಕೊಳ್ಳಬೇಕು. ವ್ಯಕ್ತಿ -ವ್ಯಕ್ತಿತ್ವಗಳ ಭಿನ್ನತೆಯೇ ವ್ಯಕ್ತಿಗತ ಸ್ವಂತಿಕೆಯ ರೂವಾರಿ. ಹಾಗಾಗಿ ನಾವು ಮತ್ತು ನಮ್ಮ ಗೆಳೆಯರ ಕೂಟ ಒಂದೇ ರುಚಿ-ಅಭಿರುಚಿಯವು ಎಂದರೆ ತಪ್ಪಾದೀತು. ಕೆಲವು ಸಾಮಾನ್ಯ ಹವ್ಯಾಸಗಳು, ಆಸಕ್ತಿಗಳು ಒಂದೇ ಆಗಿರಬಹುದು ಅಷ್ಟೇ. ಆದ್ದರಿಂದ ಸ್ನೇಹವೆನ್ನುವುದನ್ನು ನಮ್ಮ ಸ್ವಂತಿಕೆಯ ಜೊತೆಜೊತೆಯಲ್ಲೇ ಅಪ್ಯಾಯಮಾನವಾಗಿ ಇರುವಂತೆಯೇ ಪೊರೆಯಬೇಕು. ಭಿನ್ನತೆಯನ್ನು ಮೀರಿ ಸ್ನೇಹಸೌಧ ನಿಲ್ಲಿಸಬೇಕು. ಇಂತಹ ಹೊತ್ತಿನಲ್ಲೇ ಹೈಸ್ಕೂಲಿನ ಪಠ್ಯದ ಸಾಲುಗಳ ನೆನಪಾಗುತ್ತಿದೆ. ಅಲ್ಲಿ ಹೀಗೆಂದು ಬರೆದಿತ್ತು -“ಬೇಧವರಿತು ನಡೆಯದಂಥಹ ಸ್ನೇಹವಿದ್ದೇತಕೆ?”

ಪ್ರತಿ ಬಂಧದ ಮೂಲವೂ ಸ್ನೇಹವಾಗಿರಲಿ
ಬದುಕಿಗೆ ಜಮೆಯಾಗುವ ಯಾವುದೇ ಬಂಧಗಳೂ,ಸಂಬಂಧಗಳೂ ಹೇಳಿ-ಕೇಳಿ ಬರುವುದಿಲ್ಲ, ತಂತಾನೇ ಭಾವಗಳ ವಿಲೀನವಾಗುವಂತಹ ಅಥವಾ ಹುಟ್ಟಿನಿಂದ ಬರುಂವತಹ ಪ್ರಕ್ರಿಯೆಗಳು ಅವು. ಹುಟ್ಟಿನಿಂದ ಬರುವಂಥದಕ್ಕೆ ನಿರ್ದಿಷ್ಟ ರೂಪುರೇಷೆಗಳಿರುತ್ತವೆ, ಅದಕ್ಕೊಂದು ಹೆಸರಿರುತ್ತದೆ, ಚೌಕಟ್ಟಿರುತ್ತದೆ, ಹೀಗೇ ಇರಬೇಕು ಅನ್ನುವ ರೀತಿ-ರಿವಾಜುಗಳಿರುತ್ತವೆ. ಸ್ನೇಹಕ್ಕೆ ಹುಟ್ಟಿನ ಹಂಗಿಲ್ಲ, ಚೌಕಟ್ಟಿಲ್ಲ ಮೊದಲಾಗಿ ಸ್ನೇಹಕ್ಕೆ ಸ್ನೇಹ ಅನ್ನುವುದನ್ನು ಹೊರತಾತ ಡಿಸಿಗ್ನೇಷನ್‌ ಇಲ್ಲ. ಸ್ನೇಹ ಗಟ್ಟಿಗೊಳ್ಳುತ್ತಾ ಅದಕ್ಕೊಂದು ನಾವು ನಾವೇ ಸಂಬಂಧಗಳ ಹೆಸರುನ್ನು ಕೊಟ್ಟುಕೊಳ್ಳಬಹುದು (ಅಣ್ಣ,ತಂಗಿ ಇತ್ಯಾದಿ) ಅಥವಾ ಶಾಶ್ವತ ಸಂಬಂಧವೇ ಮಾಡಿಕೊಳ್ಳಬಹುದು. ಆದರೆ ಇದೆಲ್ಲದರ ಮೂಲದಲ್ಲಿ ಇರಬೇಕಾದ್ದು ಮತ್ತದೇ ಸ್ನೇಹ.  ಒಂದೊಳ್ಳೆ ಸ್ನೇಹವಷ್ಟೇ ಒಂದೊಳ್ಳೆಯ ಸಂಬಂಧವನ್ನು ಕಾಪಿಡಬಹುದು.

"ಯಾರನ್ನೋ ಪ್ರೀತಿಸಿದ್ದೇನೆ ಅಪ್ಪಾ, ಮದುವೆ ಮಾಡಿಕೊಡು.” ಎಂದು ಇದ್ದಕ್ಕಿದ್ದ ಹಾಗೆ ಮಗಳು ಬಂದು ಹೇಳಿದರೆ, ಅಪ್ಪನಾದವ ಕೆಂಡಾಮಂಡಲವಾಗಿ "ಹುಟ್ಲಿಲ್ಲಾ ಅನಿಸಿಬಿಡ್ತೀನಿ" ಅಂತ ಹೊರಟುಬಿಡುತ್ತಾನೆ. ಅದೇ ಅಪ್ಪ-ಮಗಳ ನಡುವೆ, ಅಪ್ಪ-ಮಗಳು ಅನ್ನುವ ರಕ್ತ ಸಂಬಂಧಕ್ಕಿಂತ ಹೆಚ್ಚಿನ ಸ್ನೇಹ, ಸಲುಗೆಯ ಬಂಧವಿದ್ದಿದ್ದರೆ, ಮಗಳು ಹಾಗೇ ಹೇಳುವಾಗ ತುಸು ತಡೆದು ಧನತ್ಮಾಕ ಮತ್ತು ಋಣತ್ಮಾಕಗಳನ್ನು ತರ್ಕಿಸಿ ಅಪ್ಪನಾದವ ಗೆಳೆಯನ ರೀತಿ ಯೋಚಿಸಿ ನಿರ್ಧಾರಕ್ಕೆ ಬರುತ್ತಾನೆ. ಮಗಳು ಸಹ ತನ್ನ ಪ್ರೀತಿಯ ಕುರಿತು ಈ ಮೊದಲೇ ಅಪ್ಪನಾದವನಿಗೆ ಯಾರೋ ತನ್ನ ಗೆಳೆನಿಗೆ ಹೇಳುವಂತೆ ಆಪ್ತತೆಯಿಂದ ಹೇಳಿಕೊಂಡಿರಬಹುದಾದ ಸಾಧ್ಯತೆ ಹೆಚ್ಚು. ಅದಕ್ಕೇ ಪ್ರತಿಯೊಂದು ಬಂಧದ ಮೂಲದಲ್ಲಿಯೂ ಗೆಳೆತನದ ನೆರಳಿರಬೇಕು. ಚೌಕಟ್ಟಿನಾಚೆಗೆಯ ಸಾಧ್ಯತೆಗಳ ಬಗ್ಗೆ ಮುಕ್ತ ಚರ್ಚೆಗೆ, ಯೋಚನೆಗೆ ಅವಕಾಶವಿದೆ ಅಲ್ಲಿ. ತನ್ನ ಸುಪರ್ದಿಯಲ್ಲೇ ಇರಬೇಕಾದ್ದು ಅನ್ನುವಂಥಹ ಸ್ವಾರ್ಥದ ನೆರಳಿರುವುದಿಲ್ಲ ನಿಜವಾದ ಸ್ನೇಹದಲ್ಲಿ. ಅದರ ಶಕ್ತಿಯೇ ಅದು. ಹಕ್ಕು ಚಲಾಯಿಸುವುದಿಲ್ಲ, ಪ್ರೀತಿಯಿಂದಲೇ ಹೇಳಬೇಕಾದನ್ನು ಹೇಳುತ್ತದೆ ಅದು. ಹೇಳಿದ ಮೇಲೂ ಸ್ವೀಕರಿಸುವ, ತಿರಸ್ಕರಿಸುವ ಆಯ್ಕೆ ಸ್ನೇಹಕ್ಕೇ ಉಳಿದಿರುತ್ತದೆ. ಅದಕ್ಕೇ ಪ್ರತಿ ಬಂಧದ ಮೂಲವೂ ಸ್ನೇಹವಾಗಿರಲಿ.

ಗಳಿಸುವುದು, ಉಳಿಸುವುದು, ನಿಭಾಯಿಸುವುದು ಎಲ್ಲವೂ ನಮ್ಮನಮ್ಮಲ್ಲೇ ಇದೆ. ನಮ್ಮ ಪ್ರೀತಿಯ ಕಲಾಂ ಹೇಳುತ್ತಾರೆ ಒಬ್ಬ ಒಳ್ಳೆಯ ಗೆಳೆಯ ಒಂದು ದೊಡ್ಡ ಗ್ರಂಥಾಲಯಕ್ಕೆ ಸಮವಂತೆ ಅಂತಹ ಗ್ರಂಥಾಲಯಗಳ ಗಳಿಸೊಣ, ಉಳಿಸೋಣ. ಉಳಿಸುವ ಪ್ರಕ್ರಿಯೆಯಲ್ಲಿ ಒಂದಿಷ್ಟು ತಡೆಗಳಿದ್ದಾವು ಅದನ್ನು ನಿಭಾಯಿಸೋಣ. ಸಮಸ್ಯೆಗಳು ಸಾವಿರ. ಅದನ್ನು ಎದುರಿಸುವ ಛಲ ತುಂಬಲು, ಗಳಿಸಿದ ಸಂತಸವ ದುಪ್ಪಟಾಗಿಸಲು ಸ್ನೇಹಹಸ್ತಗಳು ಬೇಕು. ಈ ನಿಟ್ಟಿನಲ್ಲಿ ನಮ್ಮೆದೆ ಕವಾಟಗಳು ಸದಾ ತೆರೆದಿರಲಿ. ಸ್ನೇಹವೆಂಬ ವಿಸ್ಮಯ ಎಲ್ಲರನ್ನೂ ಬೆರಗುಗೊಳಿಸುತ್ತಿರಲಿ. ಎಲ್ಲರಿಗೂ ವಿಶ್ವ ಗೆಳೆತನ ದಿನದ ಶುಭಾಶಯಗಳು.  

-ಸುಷ್ಮಾ ಮೂಡುಬಿದರೆ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com